ಪ್ರೀತಿಯ ವಿಷ್ಣುವಿಗೆ,
ಸಣ್ಣದೊಂದು ಸುಳಿವನ್ನೂ ನೀಡದೆ, ಎಲ್ಲಾ ಸಾಲವನ್ನು ತೀರಿಸಿದವನಂತೆ ಸಾವಿನ ಹಿಂದೆ ಹೋದ ದಿನಕ್ಕೀಗ ವರ್ಷ ತುಂಬಿದೆ. ಅಂದು ಕೆಲವರು ಬಿಕ್ಕಿದರು, ದುಃಖಿಸಿದರು, ಅತ್ತರು, ಕೆಲವರು ಸತ್ತಂತೆ ನಟಿಸಿದರು, ಪ್ರಚಾರದ ಆಸೆಯಿಂದ ಇಲ್ಲದ ಕಣ್ಣೀರು ಸುರಿಸಿದರು, ನೋವುಂಡವರಂತೆ ನಾಟಕ ಮಾಡಿದರು, ಹಾಡಿ ಹೊಗಳಿದರು, ಇನ್ನು ಕೆಲವರು ಇವೆಲ್ಲದರ ಹೆಸರಿನಲ್ಲಿ ಸಂಭ್ರಮಿಸಿದರು.
ಅಂದು ತೀರಾ ಭಾವುಕರಾಗಿದ್ದ ನಿನ್ನ ಲಕ್ಷಾಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಬೆಳ್ಳಂಬೆಳಗ್ಗೆ ಯಾರೋ ಫೋನ್ ಮಾಡಿ ವಿಷ್ಣುವರ್ಧನ್ ಹೋಗಿ ಬಿಟ್ಟರು ಎಂದು ಹೇಳಿದ್ದರು. ನಂಬಿರಲಿಲ್ಲ. ಟಿವಿ ನೋಡಿದೆ. ‘ವಿಷ್ಣುವರ್ಧನ್ ಇನ್ನಿಲ್ಲ’ ಎಂಬ ಸುದ್ದಿ ಬರುತ್ತಿತ್ತು. ಒಂದು ಕ್ಷಣ ಅಸಹಾಯಕನಾಗಿ ಹೋದೆ. ಕಣ್ಣಿಂದ ಅಚಾನಕ್ ಆಗಿ ನೀರು ಹೊರ ಬಂತು.
ಹೋದೋರೆಲ್ಲ ಒಳ್ಳೆಯವರು, ಹರಸೋ ಹಿರಿಯರು
ಅವರ ಸವಿಯ ನೆನಪು ನಾವೇ, ಉಳಿದ ಕಿರಿಯರು
ನಿನ್ನ ಕೂಡ ನೆರಳ ಹಾಗೆ, ಇರುವೆ ನಾನು ಎಂದೂ ಹೀಗೆ…
ಒಂಟಿಯಲ್ಲ ನೀ..
ನಾಳೆ ನಮ್ಮ ಮುಂದೆ ಇಹುದು, ದಾರಿ ಕಾಯುತಾ
ದುಃಖ ನೋವು ಎಂದೂ ಜತೆಗೆ, ಇರದು ಶಾಶ್ವತಾ
ಭರವಸೆಯ ಬೆಳ್ಳಿ ಬೆಳಕು,
ಹುಡುಕಿ ಮುಂದೆ ಸಾಗಬೇಕು ಧೈರ್ಯ ತಾಳುತಾ…
ಮೇಲಿನ ಸಾಲುಗಳು ಬಿಟ್ಟೂ ಬಿಡದೆ ನೆನಪಾದವು, ಕಾಡಿದವು. ಅವೆಲ್ಲ ಈಗ ಕಾಲಗರ್ಭಕ್ಕೆ ಸೇರಿ ಹೋಗಿದೆ. ದುಃಖ, ನೋವುಗಳನ್ನು ಖಂಡಿತಕ್ಕೂ ನಾವು ಮರೆತಿದ್ದೇವೆ. ಆದರೆ ನಿನ್ನನ್ನು ಮರೆತಿಲ್ಲ. ಮರೆತವರ ಬಗ್ಗೆ ಬೇಸರಗಳಿವೆ. ಅವರನ್ನು ಕಂಡಾಗ ಅಸಹ್ಯವಾಗುತ್ತಿದೆ.
ಬಿಡು, ಹೇಗಿದ್ದೀಯಾ ರಾಮಾಚಾರಿ?
ಇಲ್ಲಿ ನಾನು ಮತ್ತು ನನ್ನಂತಹ ಲಕ್ಷಾಂತರ ಅಭಿಮಾನಿಗಳು ಕ್ಷೇಮವಾಗಿದ್ದೇವೆ, ನಿನ್ನಂತೆ — ನೀನು ಕಳೆದ ವರ್ಷದ ಡಿಸೆಂಬರ್ 29ರ ರಾತ್ರಿ ಮಲಗುವ ಹೊತ್ತಿನಲ್ಲಿ ಇದ್ದ ಹಾಗೆ. ಸದ್ಯಕ್ಕೆ ಬರುವ ಯೋಚನೆ ಖಂಡಿತಾ ಇಲ್ಲ, ಅಷ್ಟಕ್ಕೂ ಅದು ನನ್ನ/ನಮ್ಮ ಕೈಯಲ್ಲಿ ಇಲ್ಲ, ನಿನ್ನಂತೆ — ಯಾವಾಗ ಬೇಕಾದರೂ ಬರಬಹುದು.
ಬಿಡು, ನಮ್ಮ ವಿಚಾರ ಅಷ್ಟೊಂದು ತಲೆ ಕೆಡಿಸುವ ಮಹತ್ವ ಹೊಂದಿರಲಾರದು. ಯಾರೋ ಪತ್ರ ಬರೆದಿದ್ದಾರೆ ಅಂದ ಮೇಲೆ ಇಲ್ಲಿನ ಪರಿಸ್ಥಿತಿ ಬಗ್ಗೆ ಬರೆದೇ ಇರುತ್ತಾರೆ ಎಂದು ನಿರೀಕ್ಷಿಸಿರುತ್ತೀಯ.
ನಾನು ಕೆಲವೊಂದು ಹೇಳಲೇಬೇಕಾದ ವಿಚಾರಗಳಿವೆ. ನೀನು ನಿರ್ಲಿಪ್ತ ಎಂದು ನನಗೆ ಗೊತ್ತು. ನಾನು ಹೇಳುವ ಮಾತುಗಳು ನಿನಗೆ ನೋವು ತರುವ ಬದಲು ವಿಮರ್ಶೆಗೆ ಹಚ್ಚಲಿದೆ ಎನ್ನುವಷ್ಟು ಅಥವಾ ಅದು ನನಗೆ ಗೊತ್ತು ಎಂದು ನೀನು ಅಂದುಕೊಳ್ಳುವಷ್ಟು ನನಗೆ ನೀನು ಗೊತ್ತು.
ಹಾಗಿದ್ದರೆ ಕೇಳು, ಮೊದಲನೆಯದಾಗಿ ನಿನ್ನನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ನಿಜಕ್ಕೂ ಬಡವಾಗಿಲ್ಲ! ಎರಡನೆಯದಾಗಿ ನಿನ್ನ ಹೆಸರು ಹೇಳಿಕೊಂಡು ಅತ್ತೂ ಕರೆದವರು ಇಂದು ನಿನ್ನ ಹೆಸರಿನಲ್ಲಿ ಹಣ ಮಾಡಲು ಹೊರಟಿದ್ದಾರೆ. ಮೂರನೆಯದಾಗಿ ನೀನು ಯಾರಿಗೆ ಸೇರಿದವನು ಎಂಬ ಬಗ್ಗೆ ಭಾರೀ ಗೊಂದಲವಿದೆ.
ನಿನ್ನನ್ನು ಹೆತ್ತು-ಹೊತ್ತು ಸಲಹಿದ್ದು ನಿನ್ನ ತಂದೆ-ತಾಯಿ. ನಿನ್ನನ್ನು ಚಿತ್ರರಂಗದಲ್ಲಿ ನೆಲೆಗೊಳಿಸಿದ್ದು ಪುಟ್ಟಣ್ಣ ಕಣಗಾಲ್. ಸ್ನೇಹದಲ್ಲಿ ಹೆಗಲಿಗೆ ಹೆಗಲಾದದ್ದು ದ್ವಾರಕೀಶ್. ಕೈ ಹಿಡಿದದ್ದು ಭಾರತಿ. ಇವರಲ್ಲಿ ಮೊದಲ ಮೂರು ಮಂದಿ ನಿನಗಿಂತ ಮೊದಲೇ ಹೊರಟವರು. ಕೊನೆಯ ಎರಡು ಮಂದಿ ನಿನ್ನ ಜೀವನದ ವಿವಿಧ ಮಜಲುಗಳಲ್ಲಿ ಹತ್ತಿರವಾಗಿದ್ದವರು ಮತ್ತು ದೂರವಾದವರು.
ಆದರೆ ಈಗ ಮಾತ್ರ ಬೀದಿಯಲ್ಲಿ ನಿಂತು ಅವರಿಬ್ಬರು ನಿನ್ನ ವಿಚಾರದಲ್ಲೇ ಕಚ್ಚಾಡುತ್ತಿದ್ದಾರೆ. ನಿನ್ನ ಅಗಲಿಕೆಯ ದುಃಖಕ್ಕಿಂತ ಪ್ರತಿಷ್ಠೆಯೇ ದೊಡ್ಡದು ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಒಬ್ಬರು ಸ್ನೇಹದ ಸಬೂಬು ಕೊಟ್ಟು ಮಸಾಲೆ ಚಿತ್ರ ಮಾಡಿ ಹಣ ಮಾಡಲು ಹೊರಟರೆ, ಅವರಿಗೆ ಬೆಂಬಲ ನೀಡಲು ನಿನ್ನನ್ನು ‘ಅಪ್ಪಾಜಿ’ ಎಂದು ಕರೆಯುತ್ತಿದ್ದವರು ಪಣ ತೊಟ್ಟಿದ್ದಾರೆ.
ನಿನ್ನನ್ನೇ ಜೀವ ಎಂದು ಪರಿಗಣಿಸಿದ ಜೀವ ಅಂದಿನಿಂದ ಇಂದಿನವರೆಗೂ ಹೆಣಗಾಡುತ್ತಿದೆ. ಆ ಜೀವದ ನೋವುಗಳಿಗೆ ಸಾಂತ್ವನ ಹೇಳಬೇಕಾದ ಕೈಗಳು ಸುತ್ತ ಕೋಲು ಹಿಡಿದು ಹಳೆ ದ್ವೇಷ ಸಾಧಿಸಲು ಕಾದು ನಿಂತಿವೆ. ನೀನು ಬದುಕಿದ್ದಾಗ ಸುಮ್ಮನಿದ್ದ ಭೂತಗಳು ಈಗ ದಿಗ್ಗನೆದ್ದು ಬೆದರಿಸುತ್ತಿವೆ.
ಬದುಕಿದ್ದಾಗಲೇ ನಿನ್ನನ್ನು ಬೇರೆಯೇ ತಕ್ಕಡಿಯಲ್ಲಿ ತೂಗಿದ ಜನ, ಅಂದು ಇಂದ್ರ-ಚಂದ್ರ ಎಂದು ಹೊಗಳಿದ ಚಿತ್ರರಂಗದ ಮಂದಿ ನಿನ್ನದೇ ಧ್ಯಾನದಲ್ಲಿದ್ದಾರೆ ಎಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ಅಂತವರೆಲ್ಲ ಇಂದು ನಿನ್ನ ಹೆಸರಿನ ಬದಲಿಗೆ ಬೇರೆ ಹೆಸರನ್ನು ತಂದಿದ್ದಾರೆ. ಕನ್ನಡ ಚಿತ್ರರಂಗ ಬಡವಾಗಿದೆ ಎಂಬ ಯಾವೊಂದು ಅಂಶವೂ ಅಲ್ಲಿ ಕಾಣುತ್ತಿಲ್ಲ. ಎಲ್ಲರೂ ಸುಖವಾಗಿದ್ದಾರೆ, ನೆಮ್ಮದಿಯಿಂದಿದ್ದಾರೆ.
ಅತ್ತ ನಿನ್ನ ‘ಜಲೀಲ್’ ಇದ್ಯಾವುದರ ಉಸಾಬರಿಯೇ ಬೇಡ ಎಂದು ದೂರ ನಿಂತಿದ್ದಾನೆ. ಅವನಿಂದ ಯಾವ ಗುಟುರು ಕೂಡ ಈಗ ಹೊರಗೆ ಬರುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡು ಬದಿಗೆ ನಿಲ್ಲುತ್ತಾನೆ. ಈ ಜನರೇ ಇಷ್ಟು ಎನ್ನುವುದು ಅವನಿಗೂ ತಿಳಿದು ಹೋದಂತಿದೆ.
ಅಂದು ನಿನಗೆ ಎರಡೆರಡಡಿ ಎರವಲು ಮೀಸೆಯನ್ನು ಅಂಟಿಸಿದ ಮಂದಿಯಂತೂ ತಪ್ಪಿಯೂ ನಿನ್ನನ್ನು ನೆನಪಿಸಿಕೊಳ್ಳುತ್ತಿಲ್ಲ. ಪರಭಾಷೆಯ ಸಿಡಿಗಳನ್ನು ತಂದು ನಿನ್ನ ಮನೆಯಲ್ಲಿ ಗುಡ್ಡೆ ಹಾಕಿದ ಮಂದಿ ಬೇರೆ ಮನೆ ನೋಡಿಕೊಂಡಿದ್ದಾರೆ. ವಿಷ್ಣುವರ್ಧನ್ ಎಂಬ ವಿಷ್ಣುವರ್ಧನ್ ನಮ್ಮಲ್ಲಿ ಇದ್ದ ಎಂಬುದು ಮರೆತು ಹೋದಷ್ಟು, ನೀನು ಕಾಲವಾಗಿ ಎಷ್ಟೋ ವರುಷಗಳು ಸಂದಿವೆ ಎಂಬಂತೆ ಎಲ್ಲರೂ ಸಿನಿಮೀಯವಾಗಿ ಸುಮ್ಮನಿದ್ದಾರೆ.
ಇಲ್ಲದೇ ಇದ್ದರೆ ನಿನ್ನ ಸ್ಮಾರಕ ಆ ಅಭಿಮಾನ್ ಸ್ಟುಡಿಯೋದಲ್ಲಿ ಎದ್ದು ನಿಲ್ಲುತ್ತಿತ್ತು. ನಿನ್ನ ನೆನಪಾದಾಗಲೆಲ್ಲ ಬಂದು ಸುಮ್ಮನೆ ಕೂತು ಹೋಗಬಹುದಾದ ರಚನೆಯೊಂದು ಅಲ್ಲಿರುತ್ತಿತ್ತು. ಚೆನ್ನೈಯಲ್ಲಿರುವ ಎಂಜಿಆರ್ ಸಮಾಧಿಯಂತೆ ನಿನ್ನ ಉಸಿರಿನ ಸದ್ದು ಕೇಳಿಸುತ್ತಿದೆಯೋ ಎಂದು ನಾನೂ ಕೇಳುತ್ತಿದ್ದೆ. ಬಿಡು, ಅಂತಹ ಆಡಂಬರ, ಗೌರವಗಳನ್ನು ನೀನು ಬದುಕಿರುವಾಗಲೂ ನಿರೀಕ್ಷೆ ಮಾಡಿದವನಲ್ಲ. ಈ ತುಂಡು ರಾಜಕಾರಣಿಗಳ ಕೃಪಾಕಟಾಕ್ಷದಿಂದ ನಿರ್ಮಾಣವಾಗುವ ಸ್ಮಾರಕದಿಂದ ನಿನ್ನ ಗೌರವ ಹೆಚ್ಚಾಗಬೇಕೂ ಇಲ್ಲ.
ಆದರೆ ಒಂದು ಮಾತ್ರ ಸತ್ಯ. ನಿನ್ನನ್ನು ರಾಮಚಾರಿಯಿಂದ ಹಿಡಿದು ಡಾ. ವಿಜಯ್ ತನಕ ಅಷ್ಟೂ ವರ್ಷಗಳ ಕಾಲ ಪ್ರೀತಿಸಿದ, ಆರಾಧಿಸಿದ ನಿನ್ನನ್ನು ತಂದೆಯ, ಅಣ್ಣನ, ಮಗನ ಸ್ಥಾನದಲ್ಲಿಟ್ಟ ಅಭಿಮಾನಿಗಳು ಮರೆತಿಲ್ಲ. ನೀನು ಬಿಟ್ಟು ಹೋದ ಸಾವಿರ-ಸಾವಿರ ನೆನಪುಗಳು ಈಗಲೂ ನಮ್ಮನ್ನು ಬಾಧಿಸುತ್ತಿವೆ, ಕಾಡುತ್ತಿವೆ, ಏನನ್ನೋ ಬೇಡುತ್ತಿವೆ.
ನೀನು ಮತ್ತೆ ಹುಟ್ಟಿ ಬಾ. ನಾಗರಹಾವಿನ ರಾಮಚಾರಿಯಾಗಿ ಬಾ, ಕರ್ಣದ ತ್ಯಾಗಮಯಿ ಮಗನಾಗಿ ಬಾ, ಬಂಧನದ ಬೇಕು-ಬೇಡವೆನ್ನುವ ಪ್ರೇಮಿ ಡಾ. ಹರೀಶನಾಗಿ ಬಾ, ಸುಪ್ರಭಾತದ ಮೆಕ್ಯಾನಿಕ್ ವಿಜಯ ಕುಮಾರನಾಗಿ ಬಾ, ಮಲಯ ಮಾರುತದ ವಿಶ್ವನಾಥನಾಗಿ ಬಾ, ಮುತ್ತಿನಹಾರದ ತಂದೆಯಾಗಿ ಬಾ.
ಆದರೆ ಸಾಹಸಸಿಂಹನ ಹೆಸರಿನಲ್ಲಿ ಬರಬೇಡ. ನಿನಗೆ ಯಾವ ನಿಟ್ಟಿನಲ್ಲೂ ಹೊಂದಾಣಿಕೆಯಾಗದ ಬಿರುದು ಅದು. ನೀನು ಏನಿದ್ದರೂ ಅಭಿನಯ ಭಾರ್ಗವ, ಕನ್ನಡ ಕುಲಕೋಟಿಯ ಮೇರು ತಿಲಕ. ನಿನಗೆ ಯಾರೂ ಸಾಟಿಯಲ್ಲ, ನಿನಗೆ ನೀನೇ ಸಾಟಿ.
ಇಂತಿ ನಿನ್ನ ಅಭಿಮಾನಿ,
XXX
ಈ ಜೀವನವೇ ಹೀಗೆ, ತಿರುಗುವ ಮುಳ್ಳಿನ ಹಾಗೆ, ಕರುವ ಬೆಣ್ಣೆಯ ಹಾಗೆ. ತಿರುಗಬೇಕು, ಕರಗಬೇಕು, ಮೂಡಿದ್ದು ಮರೆಯಾಗಲೇ ಬೇಕು. ಆಟವನ್ನು ಸೋತು ಮುಗಿಸಲೇ ಬೇಕು. ಬೇಡವೆನ್ನುವುದು, ಒಲ್ಲೆಯೆನ್ನುವುದನ್ನು ಯಾರೂ ಕೇಳಲಾರರು.
ಸಂತಸದ ಹೊನಲು, ದುಃಖದ ಕಡಲು, ಆಸೆಗಳು, ನಿರಾಸೆಗಳು, ಮನದ ತಳಮಳಗಳು, ಮುಜುಗರಗಳು, ನಮ್ಮ ಪ್ರಣಯಗಳು, ತಿಳಿಯದೆ ಕಳೆದು ಹೋದ ವಯೋಮಾನಗಳು, ಉಸಿರು ಬಿಗಿ ಹಿಡಿದು ಗುಡ್ಡೆ ಹಾಕಿದ ಕನಸಿನ ಗೋಪುರಗಳು, ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳು — ಊಹುಂ, ಯಾವುದೂ ನಾವಂದುಕೊಂಡ ಅಂತ್ಯವನ್ನು ಕಾಣಲಾರವು.
ಹೇಳದೆ ಕೇಳದೆ ಅಪರಿಚಿತ ಆಗಂತುಕನಂತೆ, ಎಷ್ಟೋ ಕಾಲದಿಂದ ಹೊಂಚು ಹಾಕಿ ಕೂತವರಂತೆ ಗಬಕ್ಕನೆ ಆತ್ಮವನ್ನು ಸೆಳೆದುಕೊಂಡು ಶರೀರವನ್ನು ಉಳಿಸಿ ಕೊಳೆಸುವಂತೆ ಮಾಡುವ ‘ಸಾವು’ ಎಂಬ ಘನಘೋರ, ನಿರ್ಭಿಡೆಯ ಬೇಟೆಗಾರನನ್ನು ಸೋಲಿಸಿ ಚಿರಂಜೀವಿಯಾದವರು ಯಾರಿದ್ದಾರೆ? ನಾವು ಎಷ್ಟೆಂದರೂ ಹುಲು ಮಾನವರು. ಸಾವನ್ನು ಗೆಲ್ಲುವುದು ಸಾಧ್ಯವಾಗುತ್ತಿದ್ದರೆ ದೇವರೇ ಆಗಿ ಬಿಡುತ್ತಿದ್ದೆವು ಅಥವಾ ಮೀರಿಸಿ ಬಿಡುತ್ತಿದ್ದೆವು.
ದೇವರಂತಹ ದೇವರಿಗೂ ಮನುಷ್ಯ ಚಿರಾಯುವಾಗುವುದು ಹೆದರಿಕೆ, ಭೀತಿಯನ್ನು ಹುಟ್ಟಿಸಿರಬೇಕು. ಇಲ್ಲದೇ ಇದ್ದರೆ ಸಾವೇ ಇಲ್ಲದ ದೇವರು ಹುಟ್ಟಿದ ಚರಾಚರಗಳನ್ನೆಲ್ಲ ತನ್ನ ಭಕ್ತರು ಎಂದು ಹೇಳಿಸಿಕೊಂಡು ತನ್ನ ಸಾನಿಧ್ಯಕ್ಕೆ ಕರೆಸಿಕೊಳ್ಳುವ ನೆಪ ಹೇಳಿ ಇಷ್ಟ ಬಂದಾಗ ಪ್ರಾಣ ಕುಡಿದು ಬಿಡುವುದು ಯಾಕೋ?
ಊಹುಂ! ದೇವರೂ ಸರಿಯಿದ್ದಂತಿಲ್ಲ. ಆತನಲ್ಲೂ ಸಾಕಷ್ಟು ಗೊಂದಲಗಳಿರಬಹುದು. ಹುಲು ಮಾನವರ ಸುಂದರ ಜೀವನ ಕಂಡು ಕರುಬುತ್ತಿರಬೇಕು. ಹೊಟ್ಟೆಕಿಚ್ಚು ಆತನಿಗೂ ಬಾಧಿಸುತ್ತಿರಬೇಕು. ಇಲ್ಲದೇ ಇದ್ದರೆ ಹುಟ್ಟಿನಷ್ಟೇ ನಿಗೂಢವಾದ, ಆದರೆ ಅನಿರೀಕ್ಷಿತವಾದ, ಒಂದು ಬಾಲಿಶವಾದ ಸಾವೆನ್ನುವ ಆಘಾತವನ್ನು ನೀಡಿ ಆತ ಸಂಭ್ರಮಿಸುತ್ತಿರಲಿಲ್ಲ.
ಬಿಡಿ, ದೇವರ ಕಷ್ಟಗಳನ್ನೂ ಅರ್ಥ ಮಾಡಿಕೊಳ್ಳೋಣ. ಆತ ಭೂಮಂಡಲಕ್ಕೇ ದೇವರು. ಶಿವ ಎಂದಾಗಲೂ ಓಗೊಡಬೇಕು, ಕ್ರಿಸ್ತ ಎಂದಾಗಲೂ ಪ್ರತಿಕ್ರಿಯಿಸಬೇಕು, ಅಲ್ಲಾಹು ಎಂದಾಗಲೂ ಕಿವಿಯಾಗಬೇಕು, ಬುದ್ಧನೆಂದಾಗಲೂ ಮೌನ ಮುರಿಯಬೇಕು. ನಮ್ಮಂತೆ ಹತ್ತೋ, ಇಪ್ಪತ್ತೋ ಅಥವಾ ಸಾವಿರ ಮಂದಿಗಷ್ಟೇ ಬೇಕಾದ ಗಣ ಆತನಲ್ಲ. ಎಲ್ಲಾ ಜೀವರಾಶಿಗಳ ಉಸ್ತುವಾರಿ ಆತನದ್ದೇ ತಾನೇ?
ಆದರೂ ಆತ ಕಿತ್ತುಕೊಳ್ಳುವ ರೀತಿ ಯಾಕೋ ಸರಿಯೆಂದು ಕಂಡು ಬರುತ್ತಿಲ್ಲ. ಅದೊಂದು ಜೀವನದ ಮುಸ್ಸಂಜೆ ಹೊತ್ತಿನಲ್ಲೋ, ಬಿಡಿ — ಅಂತಹದ್ದೊಂದು ಆಸೆಯಿಲ್ಲದೇ ಇದ್ದರೂ, ನಿರೀಕ್ಷೆಗಿಂತ ದೂರವಾದ ಹತಾಶೆಯಾದರೂ ಮುರಿದ ಮನೆಯಲ್ಲಿ ಒಡೆದ ಬಾಗಿಲನ್ನು ಸರಿಸಿ ಎಡಗೈಯಿಂದಾದರೂ ಸ್ವಾಗತಿಸಬಹುದು. ಆದರೆ ಮಾತು ಹೊರಡಿಸುವ ಮುನ್ನ, ನಗು ಅರಳಿಸಲೂ ಕಾಯದೆ, ಹೆಜ್ಜೆಗಳು ಭೂಮಿಗೆ ಭಾರವೆಂಬ ಭಾವ ಕಾಡುವ ಮೊದಲೇ ಕರೆಸಿಕೊಳ್ಳುವ ಪರಿ ಇದೆಯಲ್ಲ, ಅದನ್ನು ಸಹಿಸಲಾಗದು.
ಸರ್ವಶಕ್ತ ಎಂದುಕೊಳ್ಳುವ ದೇವರಿಗೆ ಅಷ್ಟೊಂದು ಹಸಿವೆಯೇ? ಇಲ್ಲದೇ ಇದ್ದರೆ ಜಂಟಿಯಾಗುವ ಕನಸುಗಳಿಗೆ ತಳಿರು-ತೋರಣ ಕಟ್ಟಿ ಸಿಂಗರಿಸಿದ ಪ್ರಣಯ ಪಕ್ಷಿಗಳನ್ನು ಬೇರ್ಪಡಿಸಿ, ಯಾರಿಗೆ ಏನು ಬೇಕಾದರೂ ಆಗಲಿ, ಈ ಪ್ರಾಣ ಹೋಗಲಿ ಎಂಬ ಪಟ್ಟಾದರೂ ಯಾಕಾಗಿ?
ಇಲ್ಲದ ಕಾರಣಗಳನ್ನು ತೋರಿಸಿ ಕರೆಸಿಕೊಂಡದ್ದನ್ನು ಹಿರಿಮೆಯೆಂದು, ಅನಿವಾರ್ಯವೆಂದು, ಪವಿತ್ರವೆಂದು ಮತ್ತು ಅದು ನನಗಾಗಿ ಎಂಬುದನ್ನು ಬಿಂಬಿಸುವ ಯತ್ನಗಳು ಆತನಿಂದಲೇ ಆದ ಸಂಬಂಧಗಳ ಕುಡಿಗಳಿಗೆ ಮನವರಿಕೆಯಾಗದು, ಸರಿಯೆನಿಸದು. ಹಾಗೆ ಆತನದೇ ನಿರ್ಧಾರಗಳು ಸರಿಯೆನ್ನುವುದಿದ್ದರೆ ಮೊನ್ನೆ ಮೊನ್ನೆ ಗೆಳತಿಯ ಆಪ್ತೆಯ ಗಂಡನನ್ನು ಆಪೋಷನ ತೆಗೆದುಕೊಂಡಾಗ ಕಾಲವನ್ನು ದೂರುತ್ತಿರಲಿಲ್ಲ. ಪ್ರಣಯ ಮುಗಿಸಿ ಪರಿಣಯಕ್ಕೆ ವರ್ಷಗಳೆರಡು ಎಂಬುದನ್ನು ಸಂಭ್ರಮಿಸಲೂ ಅವಕಾಶ ನೀಡದೆ, ಹೇಳಬೇಕಾದ ಗುಟ್ಟನ್ನು ಗೋಳಾಗಿ ಪರಿವರ್ತನೆ ಮಾಡಿದ ಆತನನ್ನು ದೇವರೆಂದು ಕರೆಯಬೇಕೆಂಬ ನಿರೀಕ್ಷೆಯೇ ಸರಿಯಲ್ಲ ಎಂದಾಗಲೂ ಯಾರೊಬ್ಬರಿಂದ ಒಂದು ಸಣ್ಣದಾದ, ಅತಿರೇಕವೆನಿಸದ ಆಕ್ಷೇಪಗಳೂ ಬರದೇ ಇದ್ದಾಗ ಅಚ್ಚರಿಯನ್ನು ಹೇಗೆ ಹಣೆಯಲ್ಲಿ ಕಾಣಲು ಸಾಧ್ಯವಿದೆ?
ಸಾವಿನ ಮನೆಯ ಸೂತಕ ದೇವರಿಗಾದರೂ ಹೇಗೆ ತಿಳಿಯಬೇಕು? ಕರುಳ ಕುಡಿಯನ್ನು ಕಳೆದುಕೊಂಡ ತಾಯಿಯ ನೋವನ್ನು, ಮುಗಿದೇ ಹೋಯಿತೆನ್ನುವ ಭಾವವನ್ನು ಬದಲಿಸುವ ಪರ್ಯಾಯತೆ ಬೇಕೆಂದೂ, ಬದುಕು ಏನೆಂದು ತಿಳಿಯುವ ಮೊದಲೇ ಸಂಗಾತಿಯನ್ನು ಕಿತ್ತುಕೊಂಡು ಹೃನ್ಮನವನ್ನು ಹಿಂಡಿ ಹಿಪ್ಪೆ ಮಾಡಿದ ಬಳಿಕವಾದರೂ ಸಾಂತ್ವನ ನೀಡಬೇಕೆಂಬ ಗೊಡವೆಯೇ ದೇವರಿಗಿಲ್ಲ. ಸಾವಿನ ಮನೆಗಳ ಕದಗಳು ಕೂಡ ಸೋತು ಹೋದೆವೆಂಬ ಆಜನ್ಮ ನಿರಾಸಕ್ತಿಯನ್ನು ಅನುಭೂತಿಯೊಂದಿಗೆ ಸರಿಯಲು ನಿರಾಕರಿಸುವ ಪರಿಗಳು ದೇವರಿಗಾದರೂ ಯಾಕೆ ಅರ್ಥವಾಗುತ್ತಿಲ್ಲ?
ಒಮ್ಮೆ ಸಾಕೆನಿಸಿದ್ದು ಮಗದೊಮ್ಮೆ ಬೇಕೆನಿಸುವ ಮೊದಲೇ, ಬೇಕೆನಿಸಿದ್ದು ಸಾಕೆನಿಸಲೂ ಕಾಯದೇ, ಮುಂಜಾನೆಯೇ ಮುಸ್ಸಂಜೆಯೆಂಬ ಭಾವವನ್ನು ಹುಟ್ಟಿಸುವ, ಬದುಕಿನ ಬಗ್ಗೆ ನೀರವತೆಯನ್ನು ನಿರೀಕ್ಷಿಸುವ, ನಾಳೆಯೆನ್ನುವುದು ಎಲ್ಲರಿಗಲ್ಲ ಎಂದು ಸಾರದೆ ಕಿತ್ತುಕೊಳ್ಳುವ ದೇವರ ವಿಧಿಯೆಂಬ ನಡೆ ಇಷ್ಟವಾಗುತ್ತಿಲ್ಲ. ಬೇಕೇ ಬೇಕು ಎಂದು ಹೊರಟ ಹಾದಿಯನ್ನು ಕ್ರಮಿಸಿ ಮುಗಿಸುವ ಮೊದಲೇ ಕಂದಕ ಸೃಷ್ಟಿಸಿ ಪಾತಾಳಕ್ಕೆ ತಳ್ಳುವ ಅಪರಿಪೂರ್ಣತೆಯ ಬದುಕು ಎದುರಿಗಿದೆ ಎಂಬುದನ್ನು ಅರಗಿಸಿಕೊಳ್ಳುವುದು ದೇವರು ಹೇಳದೇ ಇರುವ ಕಲಿಯಬೇಕಾದ ಪಾಠ.
ಇವು ಉತ್ತರವಿಲ್ಲದ ಪ್ರಶ್ನೆಗಳು, ಔಷಧಿಯಿಲ್ಲದ ಖಾಯಿಲೆಗಳು. ಕೆಲವನ್ನು ನೆನೆದು, ಇನ್ನು ಕೆಲವನ್ನು ನೆನೆಯದೆ ಎಲ್ಲವನ್ನು ಮುಗಿಸಲೇಬೇಕು. ಅದೇ ಈ ಜೀವನ ಅಂದರೆ ಹೀಗೆ, ತಿರುಗುವ ಮುಳ್ಳಿನ ಹಾಗೆ.
ತಮ್ಮ ಹುಳುಕುಗಳನ್ನು ಮುಚ್ಚಿಡುತ್ತಾ ಮತ್ತೊಬ್ಬರ ಮಾತು-ಕೃತಿಗಳು ಸರಿಯಿಲ್ಲ ಎಂದು ದೂರುವವರ ಸಂಖ್ಯೆಯೇ ಹೆಚ್ಚಿರುವ ಕಾಲವಿದು. ಅದರಲ್ಲಿ ನಾನೂ ಸೇರಿದಂತೆ ನಾವೆಲ್ಲರೂ ಮುಂದು. ಯಾರೊಬ್ಬರೂ ಪರಿಪೂರ್ಣರಲ್ಲ ಎಂಬ ಸಾರ್ವಕಾಲಿಕ ಸತ್ಯವನ್ನು ಇಂತಹ ಸಂದರ್ಭಗಳಲ್ಲಿ ಬೇಕೆಂದೇ ಮರೆಯುತ್ತೇವೆ, ಅಲ್ಲವೇ?
ನಮ್ಮ ದುರ್ನಡತೆ, ದುರ್ಭಾಷೆ, ದುರಂಹಕಾರಗಳನ್ನು ಸಮರ್ಥಿಸಿಕೊಳ್ಳಲು ಹಲವು ಕಾರಣಗಳು ಮನಸ್ಸಿನ ಯಾವುದೋ ಮೂಲೆಯಿಂದ ಧಿಗ್ಗನೆ ಎದ್ದು ಬಿಡುತ್ತವೆ. ತಪ್ಪೇ ಮಾಡದ ಹುಡುಗಿಗೆ ಕೈಕೊಡುವಾಗ, ನೈತಿಕವಲ್ಲದ ಸಂಬಂಧ ಬೇಕೆನಿಸುವ ದೈಹಿಕ ತೃಷೆಗೆ ಸ್ಪಂದಿಸುವಾಗ, ನಾವಾಡಿದ ಕೆಟ್ಟ ಮಾತು ಕೆಟ್ಟದೆಂಬುದು ಸ್ವತಃ ನಮಗೆ ಗೊತ್ತಿರುವಾಗ, ಸಿರಿವಂತ ಹುಡುಗ ಎದುರಾದಾಗ ಹಲವು ವರ್ಷಗಳ ಅನುರಾಗವನ್ನು ತೊರೆಯುವಾಗ, ತೆಗೆದುಕೊಂಡ ಹಣವನ್ನು ವಾಪಸ್ ಕೊಡದೆ ಮೋಸ ಮಾಡಿದಾಗ — ಒಂದೇ, ಎರಡೇ. ನಾವು ನಮ್ಮನ್ನು ಹೆಜ್ಜೆ-ಹೆಜ್ಜೆಗೂ ಸಮರ್ಥಿಸಿಕೊಂಡದ್ದು ಸುಳ್ಳೇ ಸುಳ್ಳು ಎಂದು ಗೊತ್ತಿದ್ದರೂ ಮನಸ್ಸಿನಲ್ಲಿರಬೇಕಾಗಿದ್ದ ಅಪರಾಧಿ ಪ್ರಜ್ಞೆಯನ್ನು ಎಷ್ಟು ಬೇಗ ತೊಡೆದು ಹಾಕುತ್ತೇವೆ.
ಅದು ನಮ್ಮದೆಂಬ ಕಾರಣಕ್ಕಾಗಿ ನಾವು ಹಾಗೆ ಮಾಡುತ್ತೇವೆ. ಅಲ್ಲೂ ಸ್ವಾರ್ಥವೇ ನಮ್ಮನ್ನು ಗೆದ್ದು ಬಿಡುತ್ತದೆ. ಆ ತಪ್ಪಿಗೆ ನಿರ್ದಿಷ್ಟ ಕಾರಣವೊಂದು ಇರುತ್ತದೆ. ಪರಿಸ್ಥಿತಿ ಹಾಗಿತ್ತು ಎಂದು ಬಿಡುತ್ತೇವೆ.
ನಾವೇ ಮಾಡಿರುವ ತಪ್ಪುಗಳನ್ನು ನಮಗೆ ತಿಳಿದ ಮತ್ತೊಬ್ಬರು ಮಾಡಿದಾಗ ಅದು ಮಹಾಪರಾಧವಾಗಿ, ಸೋಜಿಗವಾಗಿ, ಎಲ್ಲೂ ಯಾರೂ ಮಾಡಿರದ ಕೃತ್ಯವಾಗಿ ಬಿಡುತ್ತದೆ. ಆತ/ಆಕೆಯನ್ನು ನಂಬುವುದಾದರೂ ಹೇಗೆ ಎಂಬ ಪ್ರಶ್ನೆಗಳು ಮುತ್ತಿಕೊಂಡು ಬಿಡುತ್ತವೆ. ನಾವು ಗುರುತಿಸುವ, ಮೂದಲಿಸುವ ಆತ/ಆಕೆ ನಾವೇ ಆಗಿದ್ದಲ್ಲಿ ಅದೊಂದು ಸಾಮಾನ್ಯ ವಿಚಾರವಾಗಿ ತೇಲಿ ಹೋಗಬೇಕೆಂದು ಬಯಸುತ್ತೇವೆ.
ಅಬ್ಬಾ! ಸ್ವಾರ್ಥ ಎನ್ನುವುದು ಎಷ್ಟೊಂದು ರಕ್ಷಣಾತ್ಮಕವಾಗಿದೆ ನೋಡಿ.
ಮತ್ತೊಬ್ಬರ ವಿಚಾರ ಬಂದಾಗ ನಾವು ಎಗ್ಗಿಲ್ಲದೆ ಅವರ ಪೂರ್ವಾಪರಗಳೆಲ್ಲ ಹಾಗೆಯೇ ಇತ್ತು ಎಂದು ಕಣ್ಣಾರೆ ನೋಡಿದವರಂತೆ ಹೇಳಿ ಬಿಡುತ್ತೇವೆ. ಆತನಿಗೆ ಮನುಷ್ಯತ್ವವೇ ಇಲ್ಲ, ಹೆಂಡತಿ-ಮಕ್ಕಳೆಂದರೆ ಅಷ್ಟಕಷ್ಟೇ, ಹುಡುಗಿಯರ ಹಿಂದೆಯೇ ಜೋತು ಬಿದ್ದಿರುತ್ತಾನೆ. ಅದೆಷ್ಟೋ ಮಂದಿಯನ್ನು ಈಗಾಗಲೇ ತನ್ನ ಖೆಡ್ಡಾಕ್ಕೆ ಕೆಡವಿದ್ದಾನೆ. ಬೆನ್ನಿಗೆ ಚೂರಿ ಹಾಕುವ ಮನುಷ್ಯ, ಒಂದು ಹೆಜ್ಜೆ ನಂಬಲು ಅರ್ಹನಾದ ವ್ಯಕ್ತಿಯಲ್ಲ. ಅಷ್ಟಕ್ಕೂ ಆತನಿಗೊಂದು ವ್ಯಕ್ತಿತ್ವವೇ ಇಲ್ಲ ಎಂಬ ರೀತಿಯ ಮಾತುಗಳು ನಮ್ಮ ಎಲುಬಿಲ್ಲದ ನಾಲಗೆಯಲ್ಲಿ ಜಾರಿ ಬಿಡುತ್ತವೆ.
ಮೇಲೆ ಹೇಳಿದ ಒಂದೇ ಒಂದು ಪದ ನಮ್ಮ ಬಗ್ಗೆ ಮತ್ತೊಬ್ಬರು ಆಡಿದಲ್ಲಿ ನಾವೆಷ್ಟು ಕುಪಿತರಾಗುತ್ತೇವೆ. ನಾನೇನು ತಪ್ಪು ಮಾಡಿದ್ದೇನೆ ಅಂತ ಹಾಗೆಲ್ಲ ಟೀಕಿಸುತ್ತಿದ್ದೀರಿ. ನಾನು ಹಾಗೆ ಮಾಡಿದ್ದನ್ನು ನೀವು ನೋಡಿದ್ದೀರಾ? ಅಷ್ಟಕ್ಕೂ ನಾನು ಹಾಗೆ ಮಾಡಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಲು ನೀವು ಯಾಕೆ ಯತ್ನಿಸುತ್ತಿಲ್ಲ. ಹೀಗೆ ನಾವೇ ಸರಿ, ನಾವು ಮಾಡಿದ್ದು ತಪ್ಪಾದರೂ ಅದು ತಪ್ಪೇ ಅಲ್ಲ ಎಂಬ ರೀತಿಯಲ್ಲಿ ವಾದಿಸುವ ಹಠಕ್ಕೆ ಬೀಳುತ್ತೇವೆ.
ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ನಮ್ಮತನವನ್ನು ಉಳಿಸಲು ಯತ್ನಿಸುತ್ತೇವೆ. ಯಾರನ್ನೋ ಮೆಚ್ಚಿಸಲು, ನಮ್ಮನ್ನು ದೊಡ್ಡ ಜನ ಎಂದು ಮತ್ತೊಬ್ಬರು ಕರೆಸುವಂತಾಗಲು ಇನ್ನಿಲ್ಲದ ಯತ್ನಗಳನ್ನು ಮಾಡುತ್ತೇವೆ. ಆದರೆ ನಮ್ಮ ಅಷ್ಟು ಪ್ರಯತ್ನದ ನಡುವೆ ಮತ್ತೊಬ್ಬರ ವ್ಯಕ್ತಿತ್ವವನ್ನು ದಮನಿಸುವುದು ಯಾಕೆ ಎಂದು ಯೋಚಿಸುವುದೇ ಇಲ್ಲ.
ಯಾವುದೋ ವಾದದಲ್ಲಿ ನಮ್ಮನ್ನು ಮೀರಿಸಿದಾತ ಕೆಟ್ಟ ವ್ಯಕ್ತಿ, ಸರಿಯಿಲ್ಲ ಎಂದು ಬಿಡುತ್ತೇವೆ. ಬಯಸಿದ ಹುಡುಗಿ ಕೈಗೆ ಸಿಗದೇ ಇದ್ದಾಗ ಆಕೆಯ ನಡತೆಯ ಬಗ್ಗೆಯೇ ಸಂಶಯದ ಮಾತುಗಳನ್ನು ಹುಟ್ಟು ಹಾಕುತ್ತೇವೆ. ನಮ್ಮ ಜತೆಗಿದ್ದವರು ಎತ್ತರದ ಸ್ಥಾನಕ್ಕೆ ಏರಿದರೆಂದರೆ, ಅವರು ಸಾಗಿದ್ದು ಅಡ್ಡದಾರಿಯಲ್ಲಿ ಎಂದು ನಿರ್ಧಾರ ಮಾಡಿ ಬಿಡುತ್ತೇವೆ. ನಮಗಾಗದ ವ್ಯಕ್ತಿಯೊಬ್ಬ ತಪ್ಪೇ ಮಾಡದೆ ಆರೋಪದ ಸುಳಿಗೆ ಬಿದ್ದರೆ ಮನಸ್ಸಿನಲ್ಲೇ ಸಂಭ್ರಮಿಸುತ್ತೇವೆ. ಇಂತಹ ಪರಿಸ್ಥಿತಿ ನಾಳೆ ನಮಗೂ ಬರಬಹುದು ಎಂಬ ವಿಚಾರವನ್ನು ಬೇಕೆಂದೇ ಮರೆಯುತ್ತೇವೆ.
ಈ ಮನಸ್ಸೇ ಹಾಗೆ. ಅದು ಸ್ವಾರ್ಥದ ಗೂಡು. ನಾವು ಮಾಡಿದ್ದೇ ಸರಿ ಎಂಬುದಕ್ಕೆ ಸಮರ್ಥನೆ ನೀಡಲು ತಲೆಯನ್ನು ದುರ್ಬಳಕೆ ಮಾಡಿಕೊಳ್ಳುವ ಪರಿಸ್ಥಿತಿಯನ್ನು ಸೃಷ್ಟಿಸಿ ಬಿಡುವಂತಹುದು.
ತಪ್ಪು ಮಾಡದವರು ಯಾರಿರುತ್ತಾರೆ? ಈ ಜಗತ್ತಿನಲ್ಲಿ ಪರಿಪೂರ್ಣ ವ್ಯಕ್ತಿತ್ವ ಹೊಂದಿದವರು ಯಾರಿದ್ದಾರೆ? ಪ್ರತಿಯೊಬ್ಬರೂ ಒಂದಲ್ಲಿ ಒಂದು ವಿಚಾರದಲ್ಲಿ ದುರ್ಬಲತೆ ಹೊಂದಿರುತ್ತಾರೆ. ಅದರ ಪ್ರಮಾಣ ಕೆಲವರಲ್ಲಿ ಹೆಚ್ಚಿರಬಹುದು, ಇನ್ನು ಕೆಲವರಲ್ಲಿ ಕಡಿಮೆ ಇರಬಹುದು. ಇಲ್ಲಿರುವುದು ವ್ಯತ್ಯಾಸವೇ ಹೊರತು ಶೂನ್ಯತೆಯಲ್ಲ.
ನಾವು ಇಂದು ಎಸಗುವ-ನಾವು ಮಾಡುವ ಕಾರ್ಯ ನಾಳೆಯ ದಿನ ನಮಗೇ ರೇಜಿಗೆ ಹುಟ್ಟಿಸಬಹುದು. ಛೆ! ಈ ಕೆಲಸವನ್ನು ಮಾಡಿದ್ದು ನಾನೇ ಎಂಬ ಭಾವ ಕಾಡಬಹುದು. ನಮ್ಮ ನಿರ್ಧಾರ ತಪ್ಪಾಗಿತ್ತು ಎಂದೆನಿಸಬಹುದು. ಅದರ ಬದಲು ಹೀಗೆ ಮಾಡಿದ್ದರೆ ಚೆನ್ನಾಗಿತ್ತು ಎಂದು ಅಂದುಕೊಳ್ಳಬಹುದು. ಈ ಬದಲಾವಣೆಯ, ಮಾರ್ಪಾಡಿನ ಯೋಚನೆ ನಿರಂತರ. ಇಲ್ಲಿ ಒಳ್ಳೆಯ ಅಥವಾ ಕೆಟ್ಟ ಕೆಲಸ ಎಂಬ ಬೇಧವಿಲ್ಲ. ಇನ್ನೂ ಸ್ವಲ್ಪ ಯತ್ನಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದೇ ನಮ್ಮ ಮನಸ್ಸು ಹೇಳುತ್ತದೆ.
ಇನ್ನೊಬ್ಬರ ಬಗ್ಗೆ ಮಾತನಾಡದೆ ಸುಮ್ಮನಿರುವುದು ಉತ್ತಮ. ಆದರೆ ಮನುಷ್ಯ ವಾಚಾಳಿ, ಮೌನವಾಗಿರಲಾರ. ಮಾತೇ ಪ್ರಮುಖ ಸಂವಹನ ಮಾಧ್ಯಮವಾಗಿರುವುದರಿಂದ ಬಹುತೇಕ ಹೊತ್ತಲ್ಲಿ ನಾಲಗೆಯ ತುರಿಕೆಯನ್ನು ನಿವಾರಿಸಲು ಯಾರ‌್ಯಾರದೋ ವಿಚಾರಗಳಿಗೆ ಮೂಗು ತೂರಿಸುತ್ತಾನೆ. ತಿಳಿದೋ, ತಿಳಿಯದೆಯೋ ನಾವು ಕೂಡ ಇದರಲ್ಲಿ ಭಾಗಿಗಳಾಗುತ್ತೇವೆ.
ನಾವು ನಮ್ಮ ವ್ಯಕ್ತಿತ್ವವನ್ನು ಬೆಳೆಸಲು ಕ್ಷಣಕ್ಷಣವೂ ಯತ್ನಿಸುತ್ತೇವೆ. ನಾವು ಸಮಾಜದಲ್ಲಿ ಒಳ್ಳೆಯವರೆನಿಸಿಕೊಳ್ಳಬೇಕೆಂದು ಎಲ್ಲಿಲ್ಲದ ಶ್ರಮ ವಹಿಸುತ್ತೇವೆ. ಅದೇ ರೀತಿ ಪ್ರತಿಯೊಬ್ಬರೂ ತಮ್ಮತನಕ್ಕಾಗಿ ಯತ್ನಿಸುತ್ತಾರೆ ಎಂಬುದನ್ನು ಮತ್ತೊಬ್ಬರನ್ನು ಮೂದಲಿಸುವಾಗ ಮರೆತು ಬಿಡುತ್ತೇವೆ. ನಾವು ಬದಲಾಗಬೇಕಾಗಿರುವುದು ಇಲ್ಲೇ. ಯಾರು ಕೂಡ ಈ ಸಮಾಜದಲ್ಲಿ ಕೆಟ್ಟವರಾಗಬೇಕು ಎಂದು ಬಯಸುವುದಿಲ್ಲ. ಅವರಿಗೊದಗಿದ ಪರಿಸ್ಥಿತಿಯಿಂದ ಹಾಗಾಗಿರುತ್ತದೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಂಡ ದಿನ ಜೀವನ ಸಾರ್ಥಕವೆನಿಸಬಹುದು.
ಅದೇ ಹೊತ್ತಿಗೆ ನಾವು ಮಾಡಿದ ಬಹುತೇಕ ಕೃತ್ಯಗಳನ್ನು ಸಮರ್ಥಿಸುತ್ತಾ, ಕಾಲಕಾಲಕ್ಕೆ ಸಬೂಬುಗಳನ್ನು ಕೊಡುತ್ತಾ ಸಾಗಿದರೂ, ನಮ್ಮ ನೈಜ ವ್ಯಕ್ತಿತ್ವ ಎಂತಹುದು ಎಂಬುದು ಸಮಾಜದಲ್ಲಿ ದಾಖಲಾಗಿ ಹೋಗಿರುತ್ತದೆ; ಅದನ್ನು ಬದಲಾವಣೆ ಮಾಡುವುದು ಸುಲಭವಲ್ಲ ಎಂಬುದನ್ನು ಯಾರೊಬ್ಬರೂ ಮರೆಯಬಾರದು.
ಒಂದು ಬಾರಿ ಮೋಸಗಾರ, ದಗಾಕೋರ, ಕಳ್ಳ, ಗೋಸುಂಬೆ, ಚಾಡಿಕೋರ, ಅತ್ಯಾಚಾರಿ, ಚಪಲ ಚೆನ್ನಿಗರಾಯ, ಆಷಾಢಭೂತಿ, ಭ್ರಷ್ಟಾಚಾರಿ, ಗೋಮುಖ ವ್ಯಾಘ್ರ, ತಲೆಕೆಟ್ಟವನು, ಖದೀಮ ಇಂತಹ ಪದಗಳು ತಪ್ಪು ಮಾಡಿ ಅಥವಾ ಮಾಡದೇ ವ್ಯಕ್ತಿಯೊಬ್ಬನ ವ್ಯಕ್ತಿತ್ವಕ್ಕೆ ನಾಲಗೆಯ ಚಪಲ ಅಥವಾ ವಾಸ್ತವತೆಯ ಕಾರಣದಿಂದ ಅಂಟಿಕೊಂಡಿದ್ದರೆ, ಅದಕ್ಕೆ ನಾವೆಲ್ಲರೂ ಕಾರಣರು.
ಪರರ ಜೀವನದ ಬಗ್ಗೆ ಕಾಮೆಂಟ್ ಮಾಡುವುದು ತುಂಬಾ ಸುಲಭ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮಾತ್ರ ಕಷ್ಟ. ಆದರೆ ಸಾಗಿ ಬಂದ ದಾರಿಯಲ್ಲಿ ಎಡವಿದ್ದನ್ನು ಕನಿಷ್ಠ ಆತ್ಮಾವಲೋಕನ ಮಾಡಿಕೊಂಡರೆ ಮುಂದಿನ ಹೆಜ್ಜೆಗಳು ಎಚ್ಚರಿಕೆಯಿಂದಿರಬಹುದು.
ಅನ್ಯರ ಬಗ್ಗೆ ಅವರ ಅನುಪಸ್ಥಿತಿಯಲ್ಲಿ ಲಘುವಾಗಿ ಮಾತಿಗಿಳಿಯುವ ಮೊದಲು ನಾವೇನು ಎಂಬುದನ್ನು ಪ್ರಾಮಾಣಿಕವಾಗಿ ನೋಡಿಕೊಳ್ಳುವ ಅಗತ್ಯ ಇದೆಯಲ್ಲವೇ?
ಛೇ! ನನ್ನ ಜೀವನವೇ ವ್ಯರ್ಥವಾಗಿ ಹೋಯಿತು. ಏನೋ ಮಾಡಬೇಕೆಂದಿದ್ದೆ. ಯಾವುದೂ ಸಾಧ್ಯವಾಗಲಿಲ್ಲ. ನನ್ನ ಜತೆಗಿದ್ದವರು ಏನೇನೋ ಆಗಿಬಿಟ್ಟರು. ಅದು ಹಾಗಾಗುತ್ತಿದ್ದರೆ, ಇದು ಹೀಗಾಗುತ್ತಿದ್ದರೆ, ನಾನು ಕೂಡ ಇಂದು ಹೇಗೇಗೋ ಆಗುತ್ತಿದ್ದೆ. ಎಲ್ಲಾ ನನ್ನ ಹಣೆಬರಹ.
ಇಂತಹ ಯೋಚನೆ ಒಂದಲ್ಲ ಒಂದು ಸಲ ಪ್ರತಿಯೊಬ್ಬರಿಗೂ ಬಂದಿರುತ್ತದೆ. ತಮ್ಮ ಜತೆಗಿದ್ದ ಕೆಲವರಲ್ಲಿ ಕೆಲವರು ಅದಮ್ಯ ಸಾಧನೆಗಳನ್ನು ಮಾಡಿದಾಗಲೆಲ್ಲ ಸಾಮಾನ್ಯವಾಗಿ ಹುಟ್ಟಿಕೊಳ್ಳುವ ಪ್ರಶ್ನೆಯಿದು.
ಹಾಗೆ ನೋಡಿದರೆ ಹೆಚ್ಚಿನ ಸಾಧನೆ ಮಾಡಿದವರ ಜತೆಗೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳುವುದೇ ತಪ್ಪು. ಅವರ ಸಾಧನೆಗೆ, ಇಂದು ನಮಗಿಂತ ಎತ್ತರದ ಸ್ಥಾನಕ್ಕೆ ತಲುಪಲು ಸಾಧ್ಯವಾಗಿರುವುದರ ಹಿಂದಿನ ಕಾರಣಗಳು ಮತ್ತು ನಮ್ಮ ವಾಸ್ತವ ಸ್ಥಿತಿಯನ್ನು ತಾಳೆ ಮಾಡಿದಾಗ ನಾವು ಮಾಡಿರುವುದು ಸಾಧನೆಯಲ್ಲ ಎಂದು ಹೇಳುವುದು ನಮ್ಮನ್ನು ಬಿಟ್ಟು ಇನ್ಯಾರು ತಾನೇ ಹೇಳಲು ಸಾಧ್ಯ?
ಅಷ್ಟಕ್ಕೂ ಜತೆಗಾರರೆಲ್ಲ ಮುಂದಿದ್ದಾರೆ ಎಂದು ಹೇಳಲಾಗದು. ಓರಗೆಯ ಕೆಲವರು ಹಲವಾರು ಕಾರಣಗಳಿಂದ ಮುಂದಿದ್ದಾರೆ. ಅಂದರೆ ನಾವು ಹಿಂದಿದ್ದೀವೆಂದು ಅರ್ಥೈಸಿಕೊಳ್ಳಬೇಕಾಗಿಲ್ಲ. ಹಿಂದೆ ತಿರುಗಿ ನೋಡಿದರೆ ನಮ್ಮ ಹಿಂದಿರುವ ಸಾಲು ಮುಂದಿರುವುದಕ್ಕಿಂತ ದೊಡ್ಡದಿದೆ ಎಂಬುದನ್ನೇ ಗಂಭೀರವಾಗಿ ಪರಿಗಣಿಸಿದರೆ?
ನಿಮ್ಮ ಸಾಧನೆಯೇನು ಚಿಕ್ಕದೇ? ನೀವಾದರೂ ಈ ಹಂತಕ್ಕೆ ಸುಖಾಸುಮ್ಮನೆ ಹಾರಿ ಬಂದವರಲ್ಲ. ಯಾರೋ ಮಾಡಿದ ಪುಣ್ಯದಿಂದಲೂ ನೀವು ಈ ಹಂತಕ್ಕೆ ಬಂದವರಲ್ಲ. ಇದರ ಹಿಂದೆ ನಿಮ್ಮದೇ ಕಥೆ-ವ್ಯಥೆಗಳಿವೆ. ಅದೆಷ್ಟೋ ಅಪಮಾನ-ನಿಂದೆಗಳನ್ನು ಸಹಿಸಿಕೊಂಡಿರುತ್ತೀರಿ. ಕೆಲವರಂತೂ ತಪಸ್ಸಿಗಿಂತಲೂ ಗಂಭೀರವಾಗಿ ಸಾಧನೆ ಮಾಡಿದವರಿರುತ್ತಾರೆ.
ಅಷ್ಟೇ ಸಾಕು, ಉಳಿದ ವಿಚಾರ ಬಿಟ್ಟುಬಿಡಿ. ನಿಮ್ಮ ಜೀವನಕ್ಕೆ ಸ್ಫೂರ್ತಿ ತುಂಬಲು ಎರವಲು ವಿಚಾರಗಳೇ ಬೇಕಿಲ್ಲ. ನೀವೀಗ ನಡೆಸುತ್ತಿರುವುದು ದುರ್ಬರ ಜೀವನವಲ್ಲ ಎಂದುಕೊಳ್ಳಿ.
ನಿಮ್ಮ ಸುತ್ತ-ಮುತ್ತ ನಿಮ್ಮಷ್ಟು ಸಾಧನೆ ಮಾಡಿದವರು ತುಂಬಾ ಇರಲಿಕ್ಕಿಲ್ಲ. ನಿಮ್ಮ ಹಿಂದಿರುವವರ ಸ್ಥಿತಿಗಿಂತ ನೀವು ಅದೆಷ್ಟೋ ಪಾಲು ಉತ್ತಮರಿದ್ದೀರಿ. ದಿಗಂತ ದಿಟ್ಟಿಸಬೇಡಿ. ಅದು ಅಪರಿಮಿತ. ಮೇಲೆ ನೋಡಿದಷ್ಟೂ ಸಾಧನೆಗಳು ಬಾಕಿ ಉಳಿದಿರುತ್ತವೆ. ಕೆಳಗೆ ನೋಡಿ. ನೀವು ಸುರಕ್ಷಿತವಾಗಿದ್ದೀರಿ. ಕಮರಿಗಳನ್ನು ದಾಟಿ ಬಂದಿದ್ದೀರಿ.
ಅಲ್ಲೇ ಕೆಳಗೆ ಇನ್ನೂ ಶ್ರಮವಹಿಸುತ್ತಿರುವವರನ್ನು ಗಮನಿಸಿ. ನೀವೂ ಅವಕಾಶದ ಕಾರಣದಿಂದ ಈ ಹಂತಕ್ಕೆ ತಲುಪಿರಬಹುದು. ಕೆಳ ಹಂತದಲ್ಲಿರುವವರಿಗೆ ನಿಮ್ಮಷ್ಟು ಅವಕಾಶಗಳು ಸಿಗದೇ ಇದ್ದಿರಲೂ ಬಹುದು. ಹಾಗೆಂದು ನೀವು ಮೇಲೇರುವ ನಿಮ್ಮ ಆರೋಗ್ಯಕರ ಯತ್ನವನ್ನು ಬಿಡಬೇಕಾಗಿಲ್ಲ. ಬಿಟ್ಟರೆ, ದುಡಿದೂ ದುಡಿದೂ ಯಾರೂ ಸತ್ತಿಲ್ಲ ಎಂಬಂತೆ ದಡ್ಡರಾಗಬಹುದು. ಆದರೆ ಅದಕ್ಕೊಂದು ಮಿತಿಯಿರಲಿ.
ಕೇವಲ ಸಾಧನೆಯೇ ಜೀವನವಾದರೆ, ಆ ಜೀವಕ್ಕೊಂದು ನೆಮ್ಮದಿಯ ಕ್ಷಣ ಎಲ್ಲಿದೆ? ಗುರಿಗಳು ಎದುರಿಗಿರಲಿ — ಆದರೆ ಗುರಿಗಳೇ ಜೀವನವಾಗದಿರಲಿ. ಒಂದು ವೈಯಕ್ತಿಕ ಜೀವನ ಎಂಬುದಿದೆ ಎಂಬುದನ್ನು ಮರೆಸುವ ಸಾಧನೆಯಲ್ಲಿ ಮುಳುಗಿರುವವರ ಜೀವನವೂ ಒಂದು ಜೀವವನವೇ? ಅವರದೂ ಒಂದು ಬದುಕೇ? ಒಂದು ಕ್ಷಣ ಯೋಚಿಸಿ.
ನಾವು ಕಳೆದುಕೊಂಡ ಯಾವ ಕ್ಷಣಗಳೂ ನಮಗೆ ಮರಳಿ ಸಿಗಲಾರವು. ಅದು ಕಾಲೇಜು ಜೀವನವಾಗಿರಬಹುದು ಅಥವಾ ನಂತರದ ಬ್ಯಾಚುಲರ್ ಬದುಕಾಗಿರಬಹುದು. ಅದ್ಧೂರಿಯಾಗಿರಬೇಕು, ಜಗ ಮೆಚ್ಚಿಸಬೇಕೆಂದು ವರದಕ್ಷಿಣೆ ತೆಗೆದುಕೊಂಡೋ, ಸಾಲ-ಸೋಲ ಮಾಡಿಯೋ ಗಟ್ಟಿಮೇಳ ಊದಿಸಿದವರ ಬದುಕಿನ ಮಧುರ ಕ್ಷಣಗಳಿಗೆ ವ್ರತಭಂಗವಾಗುವ ಪರಿಣಾಮಗಳನ್ನು ಆಹ್ವಾನಿಸಿಕೊಂಡವರು ಮಾಡಿಕೊಂಡ ಮದುವೆಗೆ ಸಾರ್ಥಕವೆಂಬುದಿದೆಯೇ? ಇಂತಹ ಹಲವು ವಿಚಾರಗಳನ್ನು ನಾವು ಕ್ಷುಲ್ಲಕ ಎಂದು ಪರಿಗಣಿಸುವುದು ಎಷ್ಟು ಸರಿ?
ಎತ್ತರೆತ್ತರಕ್ಕೆ ಸಾಗುವುದೇ ಜೀವನ, ಶ್ರೀಮಂತಿಕೆಯೇ ಬೇಕೆನ್ನುವ ಹಪಾಹಪಿ, ಸಮಾಜದಲ್ಲಿ ದೊಡ್ಡವರೆನಿಸಿಕೊಳ್ಳಬೇಕೆಂಬ ಚಪಲಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಮನೆ-ಮನಗಳಿಗೆ ಕೊಳ್ಳಿ ಇಡುತ್ತಿರುತ್ತದೆ. ನಮ್ಮ ಬದುಕಿನ ಒಂದೊಂದೇ ಅಂಗಗಳನ್ನು ಅದು ನಮ್ಮೆದುರೇ ಅನುಭವಕ್ಕೆ ಬಾರದಂತೆ ನುಂಗುತ್ತಿರುತ್ತದೆ. ಮಹತ್ವವಾದ ಯಾವುದನ್ನೋ ನಾವು ಆ ಹೊತ್ತಿನಲ್ಲಿ ನಮಗೇ ಗೊತ್ತಾಗದಂತೆ ಕಳೆದುಕೊಳ್ಳುತ್ತಾ ಇರುತ್ತೇವೆ. ಅದು ಯಾವುದು ಎಂಬುದು ಅರ್ಥವಾಗುವ ಹೊತ್ತಿಗೆ ಜೀವನದ ರಸ ನಿಮಿಷಗಳು ನೀರಸವಾಗಿರುತ್ತವೆ.
ಬದುಕು ಕಟ್ಟಿ ಪೂರ್ತಿಗೊಳಿಸಿದ್ದೇವೆ ಎಂಬ ಭಾವ ಯಾರೊಬ್ಬರಿಗೂ ಬರುವುದು ಕ್ರಿಯಾಶೀಲತೆಯ ಚಕ್ರ ಹುದುಗಿದಾಗ ಮಾತ್ರ. ಆದರೆ ಬದುಕೇ ಹೀಗೆ, ಕನಿಷ್ಠ ಇದ್ದ ಹಾಗಾದರೂ ಸಾಗಿದರೆ ಸಾಕೆಂಬ ಭಾವ ಜೀವನದ ಸೆಳೆ ಏನೆಂಬುದನ್ನು ಮನದಟ್ಟು ಮಾಡಿಸಬಹುದು. ಈ ರೀತಿ ಇದ್ದುದರಲ್ಲಿ ತೃಪ್ತವಾಗುವ ಜೀವಕ್ಕೆ ಏಗದೆ ಮೇಲೇರಿ ಹಿಂತಿರುಗಿ ನೋಡದ ಜೀವದ ಭಾವ ಸಾಟಿಯೇ?
ನಾನು ನನ್ನದೆಂಬ ಅಹಂ ತೊರೆದು, ನಮ್ಮದೆಂಬ ಭಾವ ಮುಚ್ಚುಮರೆಯಿಲ್ಲದೆ ಆವಿರ್ಭವಿಸಲಿ. ಗೆಲುವನ್ನೇ ಉಂಡವರು ಸೋಲಿನಲ್ಲಿರುವ ಹಿತವಾದ ಕಹಿಯನ್ನೂ ಅನುಭವಿಸಿ. ಒಂದು ಏಕಾಗ್ರತೆಯಿಲ್ಲದ, ಶಾಂತಿ-ಸುಖ-ನೆಮ್ಮದಿಯಿಲ್ಲದ ಬದುಕನ್ನು ಬದುಕುವ ಹಠಕ್ಕೆ ಬೀಳಲು ಪೈಪೋಟಿ ನಡೆಸಬೇಡಿ.
ನಾವು ಮೇಲೇರಿದಂತೆಲ್ಲ ನಮ್ಮ ಥೈಲಿಯ ಭಾರ ಹೆಚ್ಚಿದಂತೆಲ್ಲ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ ಎಂಬ ವಾಸ್ತವತೆ ಜತೆಗಿರಲಿ. ನಾವು ಸಿರಿವಂತರಾಗುತ್ತಾ ಹೋದಂತೆ ಖಾಸಗಿತನವನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ ಎಂಬ ನಿಜಸ್ಥಿತಿಯನ್ನು ನೆನಪಿಸಿಕೊಳ್ಳಿ. ಬದುಕನ್ನು ಪ್ರೀತಿಯಿಂದ ಸಂಭಾಳಿಸಲು ಬೇಕಾದಷ್ಟು ಇದ್ದರೆ ಸಾಕೆಂಬ ತೃಪ್ತಭಾವ ಕೊಡುವ ಆನಂದವನ್ನು ಅನುಭವಿಸಿ.
ಕೆಲಸದ ಚಿಂತೆ ಮಾಡುವುದನ್ನು ಹೆಂಡತಿಗೆ ಮುತ್ತು ಕೊಡುವಾಗಲಾದರೂ ಬಿಡಿ. ಮಕ್ಕಳೊಂದಿಗೆ ಮಕ್ಕಳಾಗಿರಿ. ಹೆತ್ತವರೊಂದಿಗೆ, ಹಿರಿಯರೊಂದಿಗೆ ವಿಧೇಯರಾಗಿರಿ. ನೀವೇ ಬುದ್ಧಿವಂತರೆಂಬ ನಿಮ್ಮೊಳಗಿನ ಭಾವನೆ ನಿಮ್ಮ ಮಕ್ಕಳೆದುರು ಸುಳ್ಳಾಗುತ್ತಿದೆ ಎಂಬುದನ್ನು ಮನಸಾರೆ ಒಪ್ಪಿಕೊಳ್ಳಿ.
ವೆಚ್ಚಕ್ಕೆ ಹೊನ್ನು, ಬೆಚ್ಚನಾ ಮನೆಯು, ಇಚ್ಛೆಯನರಿತು ನಡೆವ ಸತಿ ಇದ್ದೊಡೆ, ಸ್ವರ್ಗಕ್ಕೆ ಕಿಚ್ಚು ಹಚ್ಚೆ೦ದ ಸರ್ವಜ್ಞ — ಈ ಸಾಲುಗಳನ್ನು ಈಗಿನ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಂಡರೆ ಜೀವನ ಪಾವನವಾಗುವುದರಲ್ಲಿ ಸಂಶಯವಿಲ್ಲ. ಯಾವ ಸಮಯದಲ್ಲಿ ಯಾವ ಕೆಲಸವನ್ನು ಮಾಡಬೇಕು ಎಂದು ನೀವಂದುಕೊಳ್ಳುತ್ತೀರೋ, ಅದನ್ನೇ ಮಾಡಿ. ಯಾರೋ ಹೇರುವ ಒತ್ತಡಗಳಿಗಾಗಿ ಬದುಕಿನ ಬಂಡಿಯನ್ನು ಸವೆಸಬೇಡಿ.
ಓಟಕಿತ್ತ ಓರಗೆಯವರನ್ನು ಮರೆತು ಜತೆಗಿರುವ ಜೀವಗಳನ್ನು ಸಂತಸವಾಗಿಡಿ. ಮುಂದೆ ಹೋದವರ ಜತೆ ಮಾತ್ಸರ್ಯ ಮೆರೆದು ಸಣ್ಣವರಾಗಬೇಡಿ. ಅವರನ್ನು ಮೆಚ್ಚಿ ದೊಡ್ಡವರಾಗಿ. ನಿನ್ನಂತೆ ನಾನಾಗಲಾರೆ, ನಾನಿರುವುದೇ ಹೀಗೆ, ನನ್ನ ಜೀವನವೇ ಹೀಗೆ. ನಾನು ನಿನ್ನಂತಾದರೆ ಏನಿದೆ ವ್ಯತ್ಯಾಸ ಎಂದುಕೊಳ್ಳಿ.
ಪ್ರೀತಿಗೊಂದು ನೀತಿ, ಬಾಳಿಗೊಂದು ಬೇಲಿ, ಗುರಿಗೊಂದು ಗೆರೆ, ಕನಸುಗಳಿಗೊಂದು ಮಿತಿಯಿರಲಿ. ಜೀವನವನ್ನು ಪ್ರೀತಿಸಿ, ಅನುಭವಿಸಿ.
ಅಜಯ್ ಮತ್ತು ಸುಮಾಳದ್ದು ಮೊದಲ ನೋಟದ ಪ್ರೀತಿ. ಕಾಲೇಜಿನಲ್ಲಾದ ಪ್ರೇಮ ಪರಸ್ಪರರು ತೊರೆಯಲಾಗದೆ ಮದುವೆಯೂ ಆದರು. ಆ ಮದುವೆಯ ಆಯಸ್ಸು ಪ್ರೀತಿಯಷ್ಟೂ ಇರಲಿಲ್ಲ. ಗಂಡನ ಹಿಂಸೆ ತಾಳಲಾರದೆ ಸುಮಾ ವಿಚ್ಛೇದನ ಪಡೆದುಕೊಂಡು ಒಂಟಿ ಜೀವನಕ್ಕೆ ಶರಣಾಗಿದ್ದಾಳೆ.
ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವರು ರಮೇಶ್-ಭಾವನಾ. ಹೊತ್ತಲ್ಲದ ಹೊತ್ತಿನಲ್ಲಿ ಹುಟ್ಟಿದ್ದ ಪ್ರೀತಿಗೆ ಮನೆಯವರ ವಿರೋಧವಿತ್ತು. ಯಾರ ಹಂಗೂ ಬೇಡವೆಂದು ಮದುವೆಯಾಗಿ ಸುಖ ಸಂಸಾರ ಸಾಗಿಸುತ್ತಿದ್ದರು. ಅದ್ಯಾವುದೋ ಕೆಟ್ಟ ಘಳಿಗೆಯಲ್ಲಿ ಒದರಿದ ಬುದ್ಧಿಯಿಂದ ಗಂಡನನ್ನು ಕೊಲೆ ಮಾಡಿ ಬಿಡುವ ಕಠಿಣ ನಿರ್ಧಾರಕ್ಕೆ ಪತ್ನಿ ಬಂದಿದ್ದಳು. ಇದಕ್ಕೆ ಸಾಥ್ ನೀಡಿದ್ದು ಆಕೆಯ ಎರಡನೇ ಪ್ರೇಮಿ.
** ** **
ಮೇಲೆ ನೀಡಲಾದ ಉದಾಹರಣೆಗಳು ಪ್ರೇಮ ವಿವಾಹದ ಎರಡು ಬರ್ಬರ ಫಲಿತಾಂಶಗಳು. ಹಾಗೆಂದು ಪ್ರೇಮ ವಿವಾಹಗಳೆಲ್ಲ ಹಾಗೆ ಎಂದು ಏಕರೂಪಿಯಾಗಿ ತಿಳಿದುಕೊಳ್ಳಬೇಕಾಗಿಲ್ಲ.
ಯಾವುದೋ ಇಂಜಿನಿಯರ್ ತನ್ನ ಪತ್ನಿಯನ್ನು ಬರ್ಬರವಾಗಿ ಕತ್ತು ಸೀಳಿ ಕೊಂದು ಹಾಕುತ್ತಾನೆ, ಹತ್ತಾರು ವರ್ಷಗಳ ಕಾಲ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ್ದವರು ಮದುವೆಯಾದ ಎರಡೇ ವರ್ಷಗಳಲ್ಲಿ ದುಷ್ಮನ್‌ಗಳಾಗಿ ಬದಲಾಗುತ್ತಾರೆ. ಅವರು ಕಂಡ ಕನಸಿನ ಜೀವನ ಮದುವೆಯ ನಂತರ ಅವರದ್ದಾಗುತ್ತಿಲ್ಲ. ಈ ರೀತಿ ಲವ್ ಮ್ಯಾರೇಜುಗಳು ಇತ್ತೀಚಿನ ದಿನಗಳಲ್ಲಿ ದುರಂತ ಅಂತ್ಯ ಕಾಣುತ್ತಿರುವುದು ಹೆಚ್ಚಾಗುತ್ತಿರುವುದು ಸುತ್ತ-ಮುತ್ತ ನಡೆಯುತ್ತಾ ಬಂದಿದೆ.
ಪ್ರೇಮ ವಿವಾಹ ಮತ್ತು ಗುರು-ಹಿರಿಯರು ನಿಶ್ಚಯಿಸಿ ಮಾಡಿದ ವಿವಾಹ — ಎರಡರಲ್ಲೂ ನ್ಯೂನತೆಗಳಿವೆ. ವಿಫಲತೆಯೆನ್ನುವುದು ಮದುವೆಯ ಪ್ರಕಾರದಲ್ಲಿಲ್ಲ, ಅದು ಬದುಕುವ ರೀತಿಯಲ್ಲಿರುತ್ತದೆ; ಇಬ್ಬರ ಮನಸ್ಸೂ ಪರಿಪೂರ್ಣವಾಗಿದ್ದರೆ, ಹೊಂದಾಣಿಕೆಯಿದ್ದರೆ ಸಂಬಂಧಗಳು ಸ್ಥಿರವಾಗಿ ಉಳಿಯುತ್ತದೆ — ಪ್ರೀತಿಸಿ ಮದುವೆಯಾಗಿ ಯಶಸ್ವಿಯಾದವರು ಅಥವಾ ಈ ಬಗ್ಗೆ ದೂರದಿಂದ ನೋಡಿದವರು ಹೇಳುವ ಮಾತಿದು. ಇದು ವಾಸ್ತವತೆಗೆ ಹತ್ತಿರವಾದಂತೆ ಭಾಸವಾದರೂ ಹಲವು ಅಂಶಗಳು ಮದುವೆಯ ಪ್ರಕಾರಗಳ ಮೇಲೆ ನಿಂತಿದೆ ಎನ್ನುವುದನ್ನು ಅಲ್ಲಗಳೆಯಲಾಗದು.
ಪ್ರೀತಿಯೆಂದರೆ ಹಾಗೆ, ಅದರ ಆಳ-ಅಗಲವನ್ನು ಅಳೆದು ತೂಗುವುದು ಕಷ್ಟ. ಪ್ರೀತಿಯಲ್ಲಿ ಬಿದ್ದವರಿಗೆ ತಮ್ಮ ಪ್ರೀತಿಯೇ ಶ್ರೇಷ್ಠ, ನಮ್ಮಷ್ಟು ತೀವ್ರವಾಗಿ ಇನ್ಯಾರೂ ಪ್ರೀತಿ ಮಾಡಿರಲು ಸಾಧ್ಯವೇ ಇಲ್ಲ ಮತ್ತು ಪ್ರೀತಿಸುತ್ತಿರುವಾಗ ತಾವು ಮಾಡಿದ್ದೆಲ್ಲ ಸರಿ ಎಂಬ ಭಾವನೆ ತಲೆಗೆ ಅಡರುವುದು ಸಾಮಾನ್ಯ. ತಮ್ಮ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ಮರೆಸುವ ಭಾವ ತೀವ್ರತೆಯನ್ನು ಒದಗಿಸುವ ಶಕ್ತಿ ಪ್ರೀತಿಗೆ ಬಿಟ್ಟರೆ ಬೇರೆ ಇನ್ಯಾವುದಕ್ಕೂ ಇರಲಾರದು.
ಈ ಪ್ರೀತಿಗೆ ಪ್ರೇರಕವಾಗಿರುವ ಕಾಮವು ಕೆಲವರಲ್ಲಿ ಸುಪ್ತವಾಗಿದ್ದರೆ, ಹೆಚ್ಚಿನವರಲ್ಲಿ ವ್ಯಕ್ತ ರೀತಿಯಲ್ಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಂತೂ ಪ್ರೀತಿಗಾಗಿ ಕಾಮ ಎನ್ನುವುದರ ಬದಲು, ಕಾಮಕ್ಕಾಗಿ ಪ್ರೀತಿ ಎನ್ನುವ ಸ್ಥಿತಿ ಉಂಟಾಗಿರುವುದನ್ನು ಎಲ್ಲರೂ ನೋಡಿರುತ್ತೇವೆ.
ಇಂತಹ ಹಲವು ಕ್ಲಿಷ್ಟತೆಗಳ ನಡುವೆ ಕೆಲವು ಹರಕು-ಮುರುಕು ಪ್ರೀತಿಗಳು ನಾನಾ ಕಾರಣಗಳಿಂದಾಗಿ ಬಿದ್ದು ಹೋಗುತ್ತಿರುವುದಕ್ಕೆ ವಿಶೇಷ ಕಾರಣಗಳನ್ನು ಹುಡುಕಲಾಗದು. ಇವನ್ನೆಲ್ಲ ಯಶಸ್ವಿಯಾಗಿ ದಾಟಿದ ಪ್ರೀತಿಯಿದ್ದರೆ ಮದುವೆಯಲ್ಲಿ ಲೀನವಾಗುತ್ತದೆ. ಆ ಮೂಲಕ ಅಷ್ಟರತನಕ ಪ್ರೀತಿಯಲ್ಲಿ ವಿಹರಿಸುತ್ತಿದ್ದವರು ವಾಸ್ತವ ಜೀವನಕ್ಕೆ ಮರಳುತ್ತಾರೆ.
ಇಲ್ಲಿ ಕೆಲವರು ತಮ್ಮ ಮನೆ-ಮಂದಿಯ ಒಪ್ಪಿಗೆ ಪಡೆದೇ ವಿವಾಹವಾದರೆ, ಹೆಚ್ಚಿನವರಿಗೆ ಅದು ಸಾಧ್ಯವಾಗುವುದಿಲ್ಲ. ಹೀಗೆ ಮನೆಯವರನ್ನು ಧಿಕ್ಕರಿಸಿ ದಾಂಪತ್ಯ ಆರಂಭಿಸಿದವರಿಗೆ, ಗುರು-ಹಿರಿಯರ ಒಪ್ಪಿಗೆಯಿಂದ ಮದುವೆಯಾದವರು ಅನುಭವಿಸುವ ಎಲ್ಲಾ ಸುಖ-ಸಂತೋಷಗಳು ಒಲಿಯುವುದು ಕಷ್ಟ.
ಮದುವೆಯಾದ ದಂಪತಿಗಳಲ್ಲಿರುವ ಸಾಮಿಪ್ಯತೆಯ ದುಗುಡ-ದುಮ್ಮಾನಗಳು ಪ್ರೀತಿಸಿ ಮದುವೆಯಾದವರಲ್ಲಿ ಇರುವುದು ಅಪರೂಪ. ಅವರದ್ದು ಆಗಲೇ ಪರಿಚಯವಾಗಿ ಮೇಲ್ಮುಖವನ್ನು ತಿಳಿದುಕೊಂಡಿರುವ ಹಂತ. ಅವರು ಪ್ರೇಮಿಗಳಾಗಿದ್ದಾಗಲೇ ಒಂದಲ್ಲ ಒಂದು ರೀತಿಯಲ್ಲಿ ಹತ್ತಿರವಾಗಿ ವ್ಯಕ್ತಿತ್ವವನ್ನು ಅರಿತುಕೊಂಡಿರುತ್ತಾರೆ. ಹಾಗಾಗಿ ಅವರಿಗಿರುವ ನಂತರ ಹಂತ ವಾಸ್ತವತೆಯ ದರ್ಶನ.
ಅದು ತಾವು ಪ್ರೀತಿಯಲ್ಲಿ ಕಂಡ ಮುಗ್ಧ ಪ್ರೇಮದ ಲೇಪನವಿದ್ದ ಮುಖದ ತದ್ವಿರುದ್ಧ ಮುಖವೂ ಆಗಿರಬಹುದು. ಕಂಡ ತುಂಟತನಗಳು ನಂತರ ಪಥ್ಯವಾಗದೇ ಇರಬಹುದು. ಬದಲಾವಣೆ ಬೇಕೆನಿಸಬಹುದು.
ಬದಲಾವಣೆ ಜಗನಿಯಮ. ಇದರಿಂದ ಕಲ್ಲೂ ಹೊರತಲ್ಲ. ಹೊಂದಾಣಿಕೆ ಮಾಡಿಕೊಳ್ಳಬೇಕು ಎನ್ನುವುದು ಉಪದೇಶ, ಆದರೆ ಇದನ್ನು ವಾಸ್ತವದಲ್ಲಿ ಅಳವಡಿಸಿಕೊಳ್ಳುವುದು ಪ್ರಾಯೋಗಿಕವಾಗುತ್ತದೆ. ಹೇಳಿದಷ್ಟು ಸುಲಭದಲ್ಲಿ ಮಾಡಿ ಮುಗಿಸುವ ಕೆಲಸ ಇದಾಗಿರುವುದಿಲ್ಲ. ಬ್ಯಾಚುಲರ್ ಜೀವನದಲ್ಲಿದ್ದ ಆತುರದ ನಿರ್ಧಾರಗಳು, ಜವಾಬ್ದಾರಿಯಿರದ ಜೀವನಕ್ಕೆ ಅಪಾರ ತಾಳ್ಮೆ ಮತ್ತು ಹೊಣೆಗಾರಿಕೆಯನ್ನು ಹೊರಿಸಿಕೊಂಡು ಸಂಸಾರ ನೌಕೆಗೆ ಹುಟ್ಟು ಹಾಕುವುದು ಇಬ್ಬರ ಕರ್ತವ್ಯವೂ ಆಗಿರುತ್ತದೆ.
ಅದು ನಡೆಯದೇ ಹೋದಾಗ ಎಲ್ಲವೂ ಮತ್ತು ಯಾವುದೂ ಸರಿಯಿಲ್ಲ ಎಂಬ ಸ್ಥಿತಿಗೆ ಬದುಕು ಒರಗಬಹುದು. ಶಾಶ್ವತ ಅಂಗಿಯನ್ನು ತೊಟ್ಟುಕೊಂಡ ನಂತರ ನಮ್ಮ ಆಯ್ಕೆ ತಪ್ಪಾಯಿತೇನೋ, ದುಡುಕಿ ಬಿಟ್ಟೆ ಎಂಬ ಭಾವಗಳು ಕಾಡಬಹುದು.
ಹಾಗಿದ್ದರೆ ಈ ಪ್ರೇಮಿಗಳು ಹೆತ್ತವರ ಅನುಮತಿಯಿಲ್ಲದೆ ಮದುವೆಯಾದರೆ ಯಾವ ರೀತಿಯ ತೊಂದರೆಗಳನ್ನು ಎದುರಿಸುತ್ತಾರೆ ಮತ್ತು ಯಾಕಾಗಿ ಇಂತಹ ವಿವಾಹಗಳಲ್ಲಿ ಆಜನ್ಮಕ್ಕಾಗುವಷ್ಟಿದ್ದ ಪ್ರೀತಿಯ ಒರತೆಗಳು ಕೆಲವೇ ದಿನಗಳಲ್ಲಿ, ಕೆಲವರಿಗೆ ವರ್ಷಗಳಲ್ಲಿ ಬತ್ತಿ ಹೋಗುತ್ತವೆ ಎಂಬುದನ್ನು ನೋಡೋಣ.
** ಪುರುಷರು, ಬಹುತೇಕ ಮಹಿಳೆಯರು ಕೂಡ ಅತಿಯಾದ ಪೊಸೆಸಿವ್‌ನೆಸ್‌ನಿಂದ ಬಳಲುವುದು ಪ್ರೇಮ ವಿವಾಹಗಳಲ್ಲಿ ಸಾಮಾನ್ಯ. ಹೇಳಿಕೇಳಿ ಇದು ಪ್ರೇಮದ ಮೂಲಾಂಶಗಳಲ್ಲಿ ಒಂದಾಗಿರುವ ವಿಚಾರ. ಒಂದು ಹಂತದ ಈ ಪ್ರವೃತ್ತಿ ಒಳ್ಳೆಯದಾದರೂ, ಅತಿಯಾದರೆ ಅದೇ ಜೀವನಕ್ಕೆ ಮುಳುವಾಗುತ್ತದೆ. ಇದರ ಫಲಿತಾಂಶವೇ ಸಂಶಯ. ಸಂಸಾರದ ನೌಕೆ ನೀರು ಪಾಲಾಗಲು ಕಾರಣವಾಗುವ ವಿಚಾರವಿದು. ಆಕೆ/ಆತ ಯಾರ ಜತೆ ಮಾತನಾಡಿದರೂ ಅದಕ್ಕೊಂದು ಸಂಬಂಧ ಕಲ್ಪಿಸುವ ಹುಚ್ಚಾಟ ಹೆಚ್ಚಿದಂತೆ ಬಿರುಕು ಕೂಡ ದೊಡ್ಡದಾಗುತ್ತಾ ಹೋಗುತ್ತದೆ. ಅಂತಿಮವಾಗಿ ಎಲ್ಲಾ ಆಯ್ಕೆಗಳೂ ಮುಗಿದಿರುತ್ತವೆ.
** ಮದುವೆಯ ಮೊದಲೆಲ್ಲ ಕರೆದಲ್ಲಿಗೆಲ್ಲ ಗಂಟೆಗೂ ಮೊದಲು ಹಾಜರಾಗುತ್ತಿದ್ದವ ಮನೆಗೇ ಲೇಟಾಗಿ ಬರುತ್ತಿದ್ದಾನೆ. ಎಲ್ಲೆಲ್ಲೋ ಕರೆದುಕೊಂಡು ಹೋಗುತ್ತಿದ್ದಾತ ಕನಿಷ್ಠ ಸಿನಿಮಾಕ್ಕೂ ಹೋಗೋಣ ಎಂದು ಹೇಳುತ್ತಿಲ್ಲ. ಈತ ಬದಲಾಗುತ್ತಿದ್ದಾನೆ, ದೂರವಾಗುತ್ತಿದ್ದಾನೆ ಎಂಬ ಭೀತಿ ಪತ್ನಿಗೆ ಕಾಡಬಹುದು.
** ಇಬ್ಬರೇ ಇದ್ದರೆ ಜೀವನ ಸುಖವಾಗಿರುತ್ತದೆ. ನಮ್ಮನ್ನು ಕೇಳುವವರೇ ಇರುವುದಿಲ್ಲ ಎನ್ನುವ ಭಾವನೆ ಕೆಲವೇ ದಿನಗಳಲ್ಲಿ ಸುಳ್ಳಾಗಬಹುದು. ಹಿರಿಯರ ಜತೆಗಿಲ್ಲದ/ ಪ್ರತ್ಯೇಕವಾಗಿ ವಾಸಿಸುತ್ತಿರುವ ಗಂಡ/ ಹೆಂಡತಿಯ ಪ್ರಪಂಚ ತೀರಾ ಪುಟ್ಟದೆನಿಸಿ ಒಂಟಿತನ ಬಾಧಿಸಬಹುದು.
** ನಮ್ಮದು ಅಘೋಷಿತ ಪುರುಷ ಪ್ರಧಾನ ಸಮಾಜ. ಅದೆಷ್ಟೇ ರಸಿಕ ಶಿಖಾಮಣಿಯಾದರೂ ಬಹುತೇಕ ಪುರುಷರು ತಮ್ಮ ಪತ್ನಿ ಸಾವಿತ್ರಿಯಾಗಿರಬೇಕು ಮತ್ತು ನನ್ನನ್ನು ಗೌರವಿಸಬೇಕು ಎಂಬ ಆದಿ ನಿರೀಕ್ಷೆಯನ್ನು ಬಿಟ್ಟುಕೊಡಲಾರರು. ಆದರೆ ಪ್ರೀತಿಸಿ ಮಾಡಿಕೊಂಡ ಮದುವೆಯಲ್ಲಿ ಇದರ ನಿರೀಕ್ಷೆಗೆ ಸೂಕ್ತ ಪ್ರತಿಕ್ರಿಯೆ ಲಭಿಸುವುದು ಕಷ್ಟ. ಪ್ರಣಯ ಪಕ್ಷಿಗಳಾಗಿದ್ದ ಸಂದರ್ಭದಲ್ಲಿ ಗೌರವದ ಎಲ್ಲೆಯನ್ನು ದಾಟಿದವರು ವೈವಾಹಿಕ ಜೀವನದಲ್ಲಿ ಅದನ್ನು ನಿರೀಕ್ಷಿಸುವುದು ಸರಿಯಲ್ಲವಾದರೂ, ವಾಸ್ತವದಲ್ಲಿ ನಿರೀಕ್ಷಿಸುವುದು ಸಹಜ.
** ಪ್ರೀತಿಸಿ ಮದುವೆಯಾಗುವವರ ಮಾನಸಿಕ ಮದುವೆ ಮೊದಲೇ ನಡೆದಿರುತ್ತದೆ. ಅಧಿಕೃತ ಮದುವೆಯಷ್ಟೇ ಬಾಕಿ ಉಳಿದಿರುತ್ತದೆ. ಎಲ್ಲರ ಒಪ್ಪಿಗೆಯೊಂದಿಗೆ ನಡೆದ ಮದುವೆಯಲ್ಲಿರುವ ಅರ್ಧದಷ್ಟು ಕುತೂಹಲ ಆಗಲೇ ತಣಿದಿರುತ್ತದೆ. ಹಾಗಾಗಿ ಇವರದ್ದು ನೇರವಾಗಿ ವಾಸ್ತವತೆಗೆ ಮರಳುವ ಜೀವನವಾಗಿ ಬಿಡುವ ಸಾಧ್ಯತೆಗಳೇ ಹೆಚ್ಚು. ಮದುವೆಗೂ ಮೊದಲು ದೈಹಿಕ ಸಂಬಂಧವನ್ನೂ ಬೆಳೆಸಿಕೊಂಡಿದ್ದರೆ ನಿರೀಕ್ಷೆಗಳಿಗೆ ಅವಕಾಶವೇ ಇರುವುದಿಲ್ಲ.
** ಮನೆಯವರನ್ನು ಧಿಕ್ಕರಿಸಿ ಮದುವೆಯಾದವರಾದರೆ ಸಾಮಾನ್ಯವಾಗಿ ಇಬ್ಬರೇ ಪ್ರತ್ಯೇಕವಾಗಿ ವಾಸಿಸಬೇಕಾಗುತ್ತದೆ. ಇಬ್ಬರೇ ಎಂದರೆ ತಾವು ಬಾನಾಡಿ ಹಕ್ಕಿಗಳು ಎಂಬ ಕಲ್ಪನೆ ಕೆಲ ದಿನಗಳಲ್ಲೇ ಹುಸಿಯಾಗಬಹುದು. ಆರ್ಥಿಕ ಸಮಸ್ಯೆಗಳು ಎದುರಾದಾಗ, ಪತಿ-ಪತ್ನಿಯರ ನಡುವೆ ಕ್ಷುಲ್ಲಕ ಜಗಳಗಳು ಕಾಣಿಸಿಕೊಂಡಾಗ ಇತರರು ಇಲ್ಲದ ಮನೆಯಲ್ಲಿ ಸಮಸ್ಯೆ ಪರಿಹಾರ ಕಷ್ಟ. ಸಣ್ಣ ವಿಚಾರಗಳೂ ಅಹಂಗೆ ಬಿದ್ದು ಹೆಚ್ಚು ನೋವನ್ನು ತರುವ ಗಾಯಗಳಾಗಬಹುದು.
** ವೈವಾಹಿಕ ವಯಸ್ಸಿಗೆ ಬಂದ ಮಾತ್ರಕ್ಕೆ ತಾವು ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ತಿಳಿಯುವ ಜೋಡಿಯಲ್ಲಿ ಪ್ರೌಢತೆಯ ಸಮಸ್ಯೆಯೂ ಕಾಣಿಸಬಹುದು. ಹಿರಿಯರ ಸಲಹೆಗಳಿಲ್ಲದೆ ಮಕ್ಕಳಂತೆ ವರ್ತಿಸಲು ಹೋಗಿ ಪರಿಸ್ಥಿತಿ ಕೆಟ್ಟು ಹೋಗಬಹುದು.
** ಪ್ರೀತಿಯ ಮತ್ತೊಂದು ಮುಖವಾಗಿರುವ ದೈಹಿಕ ಆಕರ್ಷಣೆ ಕೆಲವೇ ದಿನಗಳಲ್ಲಿ ಮುಗಿದು ಹೋದಾಗ, ಪ್ರೀತಿ ಎಂದರೆ ಇಷ್ಟೇನಾ ಎಂಬ ಭಾವನೆ ಮೂಡುವ ಸಾಧ್ಯತೆಗಳಿವೆ. ಕೌಟುಂಬಿಕ ವಾತಾವರಣದಲ್ಲಿದ್ದರೆ ಇಂತಹ ಅಧ್ವಾನಕ್ಕೆ ಅವಕಾಶ ಕಡಿಮೆ. ತಮ್ಮದೇ ಆದ ಕರ್ತವ್ಯಗಳನ್ನು ನಿಭಾಯಿಸುವ ಹೊಣೆಗಾರಿಕೆಗಳು ಬೀಡುಬೀಸಾದ ವರ್ತನೆಗಳಿಗೆ ಕಡಿವಾಣ ಹಾಕುವುದರಿಂದ ಸಮತೋಲಿತ ರೀತಿಯಲ್ಲಿ ಸಂಸಾರ ಸಾಗಬಹುದು.
** ಒಂದು ಮನೆಯಲ್ಲಿ ಇಬ್ಬರೇ ಇರುವುದೆಂದರೆ ಸ್ವಾತಂತ್ರ್ಯವೆನ್ನುವುದು ಸಂತೋಷಕ್ಕೆ ಎಂದು ಭಾವಿಸಿದ್ದವರಿಗೆ ಅದು ಕೋಪ ಮತ್ತು ಮಾತು ನಿಯಂತ್ರಣ ತಪ್ಪುವುದಕ್ಕೂ ಅನ್ವಯವಾಗುತ್ತದೆ ಎಂದು ತಿಳಿದಾಗ ತಡವಾಗಿರುತ್ತದೆ. ಪರಿಪೂರ್ಣ ವ್ಯಕ್ತಿಯಿರದ ಜಗತ್ತಿನಲ್ಲಿ ಹುಳುಕುಗಳು ಕಂಡಾಗ ವ್ಯಂಗ್ಯ-ಲೇವಡಿಗಳೇ ಹೆಚ್ಚಾಗಿ ಮುಳುವಾಗಲೂ ಬಹುದು.
** ಪ್ರೇಮ ವಿವಾಹದಲ್ಲಿ ಜಾತಿ, ಅಂತಸ್ತು, ವಿದ್ಯೆ, ಅರ್ಹತೆ ಪ್ರಶ್ನೆಗಳು ಕೆಲವು ಬಾರಿ ನಗಣ್ಯವಾಗಿ ಬಿಡುತ್ತವೆ. ಆದರೆ ಮದುವೆಯ ಬಳಿಕ ಅಭಿರುಚಿ, ಆಸಕ್ತಿಗಳು ವಾಕರಿಕೆ ಹುಟ್ಟಿಸಿದರೆ ಅಂತಸ್ತು, ವಿದ್ಯೆ, ಅರ್ಹತೆಗಳು ದಂಪತಿಗಳಲ್ಲಿ ಪರಸ್ಪರ ಚುಚ್ಚುವಂತೆ ಮಾಡಬಹುದು. ಭಾವನೆಗಳಿಗೆ ಗೌರವ ಸಿಗುತ್ತಿಲ್ಲ ಎಂಬ ಭಾವವೂ ಕೊರೆಯಬಹುದು.
** ಸಾಮಾಜಿಕ ಮೌಲ್ಯಗಳ ಕೊರತೆ, ಕೌಟುಂಬಿಕ ಕಟ್ಟುಪಾಡುಗಳು ಇಲ್ಲದೇ ಇರುವುದು ಪ್ರೇಮ ವಿವಾಹದ ಮತ್ತೊಂದು ಮೈನಸ್ ಪಾಯಿಂಟ್. ಹಬ್ಬ-ಹರಿದಿನಗಳ ಆಚರಣೆ-ಸಂಭ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು ಅಥವಾ ಇತರ ಸಮಾರಂಭಗಳು ಇಬ್ಬರೇ ಇರುವ ಮನೆಯಲ್ಲಿ ಕಳೆಗಟ್ಟುವುದು ಕಷ್ಟ. ಏಕರಾಗದಲ್ಲಿ ಸಾಗುತ್ತಿರುವ ಸಂಸಾರಕ್ಕೆ ಈ ಅಂಶಗಳ ಕೊರತೆ ಮಾರಕವೆನಿಸಬಹುದು.
** ಹುಡುಗ ಅಥವಾ ಹುಡುಗಿಯನ್ನು ಪ್ರೀತಿಸಲು ಕಾರಣಗಳು ಇಲ್ಲ ಎಂದೇ ಹೇಳಲಾಗುತ್ತದೆ. ಆದರೂ ಬಹುತೇಕರ ಜೀವನದ ಪ್ರೀತಿಯ ಬಿರುಗಾಳಿಗೆ ಆಕರ್ಷಣೆಯೇ ಮೊದಲ ಅಂಶ. ಇಲ್ಲಿ ಹುಡುಗಿಯ ಚೆಲ್ಲುಚೆಲ್ಲು ನಡೆ-ನುಡಿಗಳು, ರೂಪ ಮತ್ತಿತರ ವಿಚಾರಗಳು, ಹುಡುಗನ ತುಂಟತನ, ಭಾವನೆಗಳಿಗೆ ಸ್ಪಂದಿಸುವ ರೀತಿಗಳು ಬೇಕೆನಿಸಬಹುದು. ಮದುವೆಯಾದ ನಂತರದ ವಾತಾವರಣದಲ್ಲಿ ಇದು ಮುಂದುವರಿಯುವುದು ಕಷ್ಟ.
** ಪ್ರೀತಿಸಿ ಮದುವೆಯಾದವರಿಗೆ ಮದುವೆಯ ನಂತರ ನಿರೀಕ್ಷಿಸಿದ ಪ್ರೀತಿ ಕಾಣದೇ ಇದ್ದಾಗ ಮತ್ತೆ ಪ್ರೀತಿಗಾಗಿ ಹಾತೊರೆಯುವ ಸಾಧ್ಯತೆಗಳು ಹೆಚ್ಚು. ಇದರ ಪರಿಣಾಮ ಮತ್ತೊಂದು ಪ್ರೇಮಕ್ಕೆ ಬೇಲಿ ಹಾರುವ ಅವಕಾಶ ಸೃಷ್ಟಿಯಾಗಬಹುದು ಅರ್ಥಾತ್ ಅಕ್ರಮ ಸಂಬಂಧಕ್ಕೆ ಹೇತುವಾಗಬಹುದು.
** ಕುಟುಂಬವನ್ನು ಎದುರು ಹಾಕಿಕೊಂಡು ಮಾಡಿಕೊಳ್ಳುವ ಮದುವೆಯಲ್ಲಿ ಇಬ್ಬರೂ ತಾವು ಸರ್ವಾಧಿಕಾರಿಗಳಂತೆ ವರ್ತಿಸುವ ಸಾಧ್ಯತೆಗಳು ಗರಿಷ್ಠ. ಪತ್ನಿಯಾದವಳು ತಾನು ಸ್ವತಂತ್ರಳೆಂಬ ವಾದಕ್ಕೆ ಪುಷ್ಠಿ ನೀಡುತ್ತಾ ಹೋದಂತೆಲ್ಲ ಪತಿಯಾದವನ ಪುರುಷ ಸಹಜ ಅಹಂಗೆ ಏಟು ಬಿದ್ದಂತಾಗಬಹುದು. ಆತ ವಿಧಿಸುವ ಕಟ್ಟುಪಾಡುಗಳು ಪತ್ನಿಯಾದವಳಿಗೆ ಇಷ್ಟವಾಗದೇ ಹೋಗಬಹುದು.
** ಅತ್ತೆಯಿಲ್ಲದ ಮನೆ, ಗಂಡ-ಹೆಂಡತಿ ಇಬ್ಬರೇ ಎಂಬುವುದು ಕಲ್ಪನೆಗೆ ಮಾತ್ರ ತುಂಬಾ ಹಿತವನ್ನು ನೀಡಬಹುದು. ವಾಸ್ತವದಲ್ಲಿ ಇಂತಹ ವಿಚಾರಗಳು ಕೂಡ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೂ ಪರಸ್ಪರ ಸಹಕಾರ ಮನೋಭಾವ ಇದ್ದಲ್ಲಿ ಸಮಸ್ಯೆಗಳಿರದು. ಅಡುಗೆ ಮನೆಯೆಂದರೆ ಪತ್ನಿಗೆ ಮಾತ್ರ ಮೀಸಲು ಎಂಬಂತಹ ವಿಚಾರ ಬಂದಾಗಲೆಲ್ಲ ಮನಸ್ಸುಗಳು ಮುನಿದುಕೊಳ್ಳಬಹುದು. ತುಂಬಿದ ಮನೆಯಲ್ಲಾದರೆ ಇಂತಹ ಪ್ರಶ್ನೆಗಳಿಗೆ ಅವಕಾಶ ಕಡಿಮೆ.
(ಇಲ್ಲಿ ಆರೆಂಜ್ಡ್ ಮ್ಯಾರೇಜ್ ಅಥವಾ ಹಿರಿಯರ ಒಪ್ಪಿಗೆಯಿಂದಾದ ಲವ್ ಮ್ಯಾರೇಜ್‌ಗಳಲ್ಲಿ ಉಂಟಾಗುವ ವೈಫಲ್ಯತೆಗಳನ್ನು ಚರ್ಚಿಸಲು ಹೋಗಿಲ್ಲ. ಕೇವಲ ಹೆತ್ತವರ ಒಪ್ಪಿಗೆಯಿಲ್ಲದೆ ಮದುವೆಯಾಗುವ ಪ್ರೇಮಿಗಳ ವಿಚಾರವನ್ನಷ್ಟೇ ತೆಗೆದುಕೊಳ್ಳಲಾಗಿದೆ)
ರಕ್ತಸಂಬಂಧಕ್ಕೆ ಬೆಲೆ ಕಟ್ಟಲಾದೀತೇ? ಅದರಲ್ಲೂ ಅಪ್ಪ-ಅಮ್ಮ, ಗಂಡ-ಹೆಂಡತಿ, ಅಣ್ಣ-ತಮ್ಮ, ಅಕ್ಕ-ತಂಗಿ, ಅಜ್ಜ-ಅಜ್ಜಿ ಮುಂತಾದ ಸಂಬಂಧಗಳಂತೂ ಒಂದೇ ಮನೆಯಲ್ಲಿ ಕಷ್ಟಗಳನ್ನು ಮರೆತು ಬೆರೆಯುವ ಜೀವಗಳು. ಕಾಲದ ಜತೆ ಸಂಬಂಧಗಳ ಆತ್ಮೀಯತೆಗಳು, ಬಗೆಗಳು ಬದಲಾಗುತ್ತಿರುವುದನ್ನು ಒಪ್ಪಿಕೊಳ್ಳುತ್ತಾ, ಸಂಬಂಧಗಳ ವಿಚಾರದಲ್ಲಿ ನಾಡು ನುಡಿ ಹೇಗೆ ಭಿನ್ನ ಎಂದು ತಿಳಿದುಕೊಳ್ಳುವ ಯತ್ನವಿದು.
ನಾವು ಕನ್ನಡಿಗರಂತೂ ಮೊದಲೇ ಪರಭಾಷಾಭಿಮಾನಿಗಳು. ಇತರ ಭಾಷೆಗಳ ಎಲ್ಲವೂ ನಮಗೆ ನಮ್ಮಲ್ಲಿರುವುದಕ್ಕಿಂತ ಇಷ್ಟ. ಇದಕ್ಕೆ ಆಧುನಿಕೀಕರಣದ ಲೇಪ ಮತ್ತಷ್ಟು ಬಳಿದು ಕನ್ನಡಿಗ ಎಂದು ಹೇಳಿಕೊಳ್ಳುವುದು ಅಥವಾ ಕನ್ನಡ ಮಾತನಾಡುವುದು ಅಪಮಾನ, ಅವಿದ್ಯಾವಂತರ ಲಕ್ಷಣ ಎಂದು ಬಹುತೇಕರು ನಿರ್ಧರಿಸಿಯಾಗಿದೆ.
ಇದೇ ನಿಟ್ಟಿನಲ್ಲಿ ಕನ್ನಡದ ಕಂಪು ಮಾಸುತ್ತಿರುವುದನ್ನು ಕಾಣುತ್ತಿದ್ದೇವೆ. ಅಪ್ಪನ ಜಾಗದಲ್ಲಿ ಡ್ಯಾಡಿ, ಅಮ್ಮನ ಜಾಗದಲ್ಲಿ ಮಮ್ಮಿ ಪದಗಳು ನಮ್ಮ ನಡುವೆ ಜಾಗ ಪಡೆದಿವೆ. ಅಮ್ಮ ಎಂಬ ಎರಡೂವರೆ ಅಕ್ಷರಗಳ ಶಬ್ದ ಉಂಟು ಮಾಡುವ ಮಮಕಾರವನ್ನು ಮಮ್ಮಿ ಎಂಬ ಮುರುಕು ಆಂಗ್ಲ ಪದ ಖಂಡಿತ ನೀಡದು. ಅಪ್ಪ ಎಂಬ ಪದಕ್ಕೆ ಡ್ಯಾಡಿ ಎನ್ನುವುದು ಸಮಾನ ಭಾವನೆಯನ್ನು ಉಕ್ಕಿಸುವುದೂ ಸಾಧ್ಯವಿಲ್ಲ.
ಅದು ಅಷ್ಟು ಪರಿಣಾಮಕಾರಿ ಸಂಬಂಧವನ್ನು ಬಿಂಬಿಸುವುದಿಲ್ಲ ಎಂದು ಅಪ್ಪ-ಅಮ್ಮ ಎಂದು ಕರೆಯುವ ನನ್ನಂತವರಷ್ಟೇ ವಾದಿಸಬಹುದು. ಯಾಕೆಂದರೆ ಮಕ್ಕಳು ಡ್ಯಾಡಿ-ಮಮ್ಮಿ ಎಂದು ಕರೆಯುವುದನ್ನು ಹೇಳಿಕೊಡುವವರು ಹೆತ್ತವರು ತಾನೇ? ನನ್ನ ಗಂಡ ಎನ್ನುವುದಕ್ಕಿಂತ My hubby ಎಂದೋ, ಪತ್ನಿ – ಹೆಂಡತಿಗಿಂತ Wife ಅಥವಾ Mrs ಎನ್ನುವುದೇ ಹೆಚ್ಚು ಘನತೆ – ಕಾರ್ಪೊರೇಟ್ ಲುಕ್ ಕೊಡುತ್ತದೆ ಎಂಬ ಭಾವವೂ ಜತೆಗಿರುವಾಗ ಕನ್ನಡ ಮತ್ತು ಭಾವನೆಗಳಿಗೆ ಮಹತ್ವ ಕಡಿಮೆಯಾಗುವುದು ಕೂಡ ಅಸಹಜವೇನಲ್ಲ.
ಸಂಬಂಧವೆಂದ ಕೂಡಲೇ ಅಲ್ಲಿ ಹತ್ತು ಹಲವಾರು ಮಗ್ಗುಲುಗಳು, ಕವಲುಗಳು. ಇಂಗ್ಲೀಷ್ ಪ್ರಭಾವದಿಂದ ಸಂಬಂಧಗಳನ್ನು ಗುರುತಿಸಿಕೊಳ್ಳುವಲ್ಲಿ ಮಾತ್ರ ನಾವು ವಿಫಲರಾಗುತ್ತಿರುವುದು ಮಾತ್ರವಲ್ಲ, ಸಂಬಂಧಗಳನ್ನು ನಿರ್ಲಕ್ಷಿಸುವುದನ್ನೂ ಆರಂಭಿಸಿ ಹಲವು ಕಾಲಗಳೇ ಕಳೆದಿವೆ.
ಸಂಬಂಧಿಗಳೆಂದರೆ ಊಟಕ್ಕೆಂದೇ ಮನೆಗೆ ಬಂದವರು ಎಂಬ ರೀತಿಯ ಭಾವನೆ, ಕಾಲದ ಜಂಜಾಟದಲ್ಲಿ ಸಮಯದ ಅಭಾವ ಎಂಬ ಲೇಪನ ಮುಂತಾದ ಹತ್ತು ಹಲವು ಕಾರಣಗಳಿಂದ ಸರಿಯಾಗಿ ಮುಖವನ್ನೂ ನೋಡದೆ ಯಾವುದೋ ಒಂದು ಅಂಕಲ್, ಆಂಟಿ ಅಥವಾ ಕಸಿನ್ ಎಂಬ ಪದಗಳನ್ನು ಎಸೆದು ನಿರಾಳವಾಗುವವರು ಈಗ ಅಪರೂಪವಲ್ಲ.
ಆದರೆ ಕನ್ನಡ ಹಾಗಲ್ಲ, ಸಂಬಂಧಗಳ ವಿಚಾರದಲ್ಲಿ ಆಂಗ್ಲ ಭಾಷೆಗಿಂತ ಹೆಚ್ಚಿನ ಸ್ಪಷ್ಟತೆಯನ್ನು ನಮ್ಮ ಮಾತೃಭಾಷೆ ಹೊಂದಿದೆ. ಇಲ್ಲಿ ಕೇವಲ ಕನ್ನಡವನ್ನಷ್ಟೇ ತೆಗೆದುಕೊಂಡರೇ ಪರಿಪೂರ್ಣವೆನಿಸದು. ಭಾರತೀಯ ಸಂಸ್ಕೃತಿಯಲ್ಲಿ ಗುರುತಿಸಲ್ಪಡುವ ಸಂಬಂಧಗಳಿಗೆ ಆಂಗ್ಲ ಭಾಷೆಯ ಪದಗಳು ಸೂಚಿಸುವ ಸಂಬಂಧಗಳು, ವ್ಯಾಖ್ಯಾನಗಳು ಆತ್ಮೀಯತೆಯನ್ನು ತಂದು ಕೊಡಲಾರವು.
ಇಲ್ಲಿ ನೆನಪಿಡಬೇಕಾದ ಮತ್ತೊಂದು ಅಂಶವೆಂದರೆ ಅಣ್ಣ, ತಮ್ಮ, ತಂಗಿ ಅಥವಾ ಅಕ್ಕ ಮುಂತಾದ ಪದಗಳಿಗೆ ಸಮಾನಾರ್ಥಕ ಪದಗಳು ಇಂಗ್ಲೀಷಿನಲ್ಲಿದ್ದರೂ, ಅವುಗಳನ್ನು ಬಳಸುವ ಬದಲು ಹೆಸರು ಹಿಡಿದೇ ಕರೆಯುವ ವಿಶೇಷತೆಯನ್ನು ಆ ಭಾಷೆ ಹೊಂದಿರುವುದು. ನಮ್ಮ ನಾಡು ನುಡಿ ಹಾಗಲ್ಲ, ನಮಗಿಂತ ಹಿರಿಯ ಸಂಬಂಧಿಕರಿದ್ದಲ್ಲಿ ಅವರ ಹೆಸರು ಕರೆಯುವ ಬದಲು ಸಂಬಂಧದಿಂದಲೇ ಕರೆಯುತ್ತೇವೆ. ಉದಾಹರಣೆಗೆ ಅಣ್ಣ, ಅಕ್ಕ, ಅತ್ತಿಗೆ ಮುಂತಾದುವು.
ಸಹೋದರಿ – sister, ಅಕ್ಕ – elder sister, ತಂಗಿ – younger sister, ಸಹೋದರ – brother, ಅಣ್ಣ – elder brother, ತಮ್ಮ – younger brother — ಇಲ್ಲಿ ಅಕ್ಕ ಮತ್ತು ಅಣ್ಣ ಎಂಬುದನ್ನು ನಾವು ಅವರನ್ನು ಕರೆಯಲು ಬಯಸುತ್ತೇವೆ. ಉಳಿದ ಪದಗಳು ಸಂಬಂಧಗಳನ್ನು ಗುರುತಿಸಲು ಮಾತ್ರ ಬಳಕೆಯಾಗುತ್ತವೆ. ಆದರೆ ಆಂಗ್ಲ ಭಾಷೆಯಲ್ಲಿ ಈ ಎಲ್ಲಾ ಪದಗಳು ಬಹುತೇಕ ಸಂದರ್ಭಗಳಲ್ಲಿ ಸಂಬಂಧ ಗುರುತಿಸಲು ಮಾತ್ರ ಬಳಕೆಯಾಗುತ್ತವೆ.
ಇದೇ ರೀತಿ ಅತ್ತೆ – ಮಾವ (father in law – mother in law) ಎಂಬ ಶಬ್ದಗಳು. ಇದು ಸಂಬಂಧವನ್ನು ಗುರುತಿಸುವುದು ಮತ್ತು ಕರೆಯುವುದಕ್ಕೂ ಬಳಕೆಯಾಗುತ್ತವೆ. ಆಂಗ್ಲ ಭಾಷೆಯಲ್ಲಿ ಇವುಗಳು ಕೂಡ ಗುರುತಿಸುವುದಕ್ಕಷ್ಟೇ ಬಹುತೇಕ ಸೀಮಿತವಾಗುತ್ತದೆ.
ಇನ್ನು ಗಂಡ – husband, ಹೆಂಡತಿ – wife, ಮಗ – son, ಮಗಳು – daughter, ಮಗಳ ಗಂಡ ಅಳಿಯ – son in law, ಮಗನ ಹೆಂಡತಿ ಸೊಸೆ – daughter in law ಕಥೆಯೂ ಭಿನ್ನವಲ್ಲ.
ಮಕ್ಕಳ ಮನಸ್ಸನ್ನು ಹೆತ್ತವರಿಂತ ಹೆಚ್ಚಾಗಿ ಅಜ್ಜ-ಅಜ್ಜಿಯವರು ಸರಿಯಾಗಿ ಅರ್ಥ ಮಾಡಿಕೊಂಡಿರುತ್ತಾರೆ, ಮಕ್ಕಳಿಗೆ ಬೇಕಾದ ತಾಳ್ಮೆ ಅವರಲ್ಲಿರುತ್ತದೆ ಎಂಬ ಮಾತಿಗೆ ಅವೇ ಪದಗಳು ಸೂಕ್ತ. ಮನೆಯಲ್ಲೇ ಸಿಗುವ ಈ ಹಿರಿ ಜೀವಗಳನ್ನು grand father ಮತ್ತು grand mother ಎನ್ನಲಾಗುತ್ತದೆ. ಇದಕ್ಕೂ ಮಿಕ್ಕಿದ ಪೀಳಿಗೆಯೊಂದು ಉಳಿದಿದ್ದರೆ (ಮುತ್ತಜ್ಜ – ಮುತ್ತಜ್ಜಿ) ಅವರನ್ನು great grandfather, great grandmother ಎಂದು ಇಂಗ್ಲೀಷರ ಭಾಷೆಯಲ್ಲಿ ಗುರುತಿಸಲಾಗುತ್ತದೆ.
ಸೋದರ ಸೊಸೆ, ಸಹೋದರ ಅಥವಾ ಸಹೋದರಿ ಮಗಳು Niece. ಸೋದರಳಿಯ, ಸಹೋದರ ಅಥವಾ ಸಹೋದರಿಯ ಮಗನನ್ನು Nephew ಎನ್ನಲಾಗುತ್ತದೆ.
ಗೊಂದಲದ ಸಂಬಂಧಗಳು…
ಸಂಬಂಧಗಳೆಂದರೆ ಇಷ್ಟಕ್ಕೆ ಮುಗಿಯುವುದಿಲ್ಲ. ಮನೆಯೊಳಗೆ ಅಥವಾ ಮನೆಯ ಹೊರಗೂ ಹತ್ತಾರು ಸಂಬಂಧಗಳ ಕವಲುಗಳು ನಮ್ಮ ಸುತ್ತ ಸುತ್ತಿಕೊಂಡಿರುತ್ತದೆ. ಕೆಲವರಿಗೆ ಅಪಥ್ಯವಾದರೆ, ಇನ್ನು ಕೆಲವರಿಗೆ ಆತ್ಮೀಯ.
ನಮ್ಮ ನೆಲದ ಸೊಗಡಿನ ಸಂಬಂಧಗಳಿಗೂ, ವಿದೇಶಗಳ ಸಂಬಂಧಗಳಿಗೂ ಅಜಗಜಾಂತರ ವ್ಯತ್ಯಾಸ. ಹಾಗಾಗಿ ಅದೇ ಪದಗಳನ್ನು ನಾವು ಬಳಸಿದರೆ ಗೊಂದಲವಷ್ಟೇ ನಮಗೆ ಕಾಣ ಸಿಗುತ್ತವೆ. ಅವುಗಳನ್ನು ಈ ಕೆಳಗಿನವುಗಳಲ್ಲಿ ಕಾಣಬಹುದು.
ಗಂಡನ ಅಕ್ಕ, ಅಣ್ಣನ ಹೆಂಡತಿ (ಅತ್ತಿಗೆ) sister in law. ತಮ್ಮನ ಹೆಂಡತಿ, ಗಂಡನ ತಂಗಿ, ಹೆಂಡತಿಯ ತಂಗಿಯೂ (ನಾದಿನಿ) sister in law. ಅಕ್ಕನ ಗಂಡ, ಗಂಡನ ಅಣ್ಣ, ಹೆಂಡತಿಯ ಅಣ್ಣ (ಭಾವ) brother in law. ತಂಗಿಯ ಗಂಡ, ಗಂಡನ ತಮ್ಮ, ಹೆಂಡತಿಯ ತಮ್ಮನೂ (ಮೈದುನ, ಷಡ್ದಕ) ಅದೇ.
ಇದೆಲ್ಲಕ್ಕಿಂತಲೂ ಹೆಚ್ಚು ಗೊಂದಲ ತಂದಿರುವುದು cousin ಎಂಬುದು. ಮಾವನ ಮಗಳೂ ಕಸಿನ್, ದೊಡ್ಡಪ್ಪನ ಮಗಳೂ ಕಸಿನ್. ನಮ್ಮ ಸಂಸ್ಕೃತಿಯ ಪ್ರಕಾರ ಇವೆರಡೂ ಸಂಬಂಧಗಳು ಭಿನ್ನ. ಮಾವನ ಮಗಳನ್ನು ಮದುವೆಯಾಗಬಹುದಾದ ಸಂಬಂಧ ಎಂದು ಗುರುತಿಸಬಹುದಾದರೆ, ದೊಡ್ಡಪ್ಪನ ಅಥವಾ ಚಿಕ್ಕಪ್ಪನ ಮಗಳನ್ನು ಸಹೋದರಿ ಎಂದೇ ಹೇಳಲಾಗುತ್ತದೆ.
ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮನ, ಸೋದರ ಮಾವ- ಸೋದರತ್ತೆಯ ಮಗ-ಮಗಳು ಅಥವಾ ರಕ್ತಸಂಬಂಧಿಗಳಿಗೂ ಆಂಗ್ಲ ಭಾಷೆಯಲ್ಲಿ ಕಸಿನ್ ಎಂಬ ಸಂಬೋಧನೆಯನ್ನು ಬಳಸಬಹುದಾಗಿದೆ.
ಈ Aunt ಎಂಬ ಆಂಗ್ಲ ಪದ ಬಹುಪಯೋಗಿ. ಬಹುತೇಕ ಎಲ್ಲರ ಬಾಯಿಯಲ್ಲೂ ನಲಿದಾಡುವ ಪದದಲ್ಲಿ ಇದರದ್ದು ಮೊದಲ ಸ್ಥಾನ. ವಾಸ್ತವದಲ್ಲಿ ತಾಯಿಯ ಸಹೋದರನ ಪತ್ನಿ – ತಂದೆಯ ಸಹೋದರಿ (ಸೋದರತ್ತೆ), ತಂದೆಯ ತಮ್ಮನ ಹೆಂಡತಿ – ತಾಯಿಯ ತಂಗಿ (ಚಿಕ್ಕಮ್ಮ), ತಂದೆಯ ಅಣ್ಣನ ಹೆಂಡತಿ – ತಾಯಿಯ ಅಕ್ಕನನ್ನು (ದೊಡ್ಡಮ್ಮ) ಆಂಟಿ ಎಂದು ಇಂಗ್ಲೀಷಿನಲ್ಲಿ ಕರೆಯಲಾಗುತ್ತದೆ. ಎಲ್ಲಾ ಸಂಬಂಧಗಳನ್ನೂ ಒಂದೇ ಕುಣಿಕೆಯಲ್ಲಿ ಎಸೆದು ಬಿಡುವ ಅಸ್ತ್ರವಿದು.
ನಂತರದ ಸ್ಥಾನದಲ್ಲಿರುವ Uncle ಕೂಡ ಇದೇ ಬೆಟ್ಟದಿಂದ ಅಗೆದದ್ದು. ತಾಯಿಯ ಸಹೋದರ (ಸೋದರ ಮಾವ), ತಂದೆಯ ಸಹೋದರಿಯ ಗಂಡ (ಮಾವ), ಚಿಕ್ಕಮ್ಮ ಅಥವಾ ತಾಯಿಯ ತಂಗಿಯ ಗಂಡ, ತಂದೆಯ ತಮ್ಮ (ಚಿಕ್ಕಪ್ಪ), ತಂದೆಯ ಅಣ್ಣ, ದೊಡ್ಡಮ್ಮ ಅಥವಾ ತಾಯಿಯ ಅಕ್ಕನ ಗಂಡನನ್ನು (ದೊಡ್ಡಪ್ಪ) ಅಂಕಲ್ ಎಂದೇ ಕರೆಯಲಾಗುತ್ತದೆ.
ಮಲ ಸಂಬಂಧಗಳು:
ತಂದೆ ಅಥವಾ ತಾಯಿ ಎರಡನೇ ಅಥವಾ ಹೆಚ್ಚಿನ ಮದುವೆ ಮಾಡಿಕೊಂಡಾಗ ಇಂತಹ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಈ ರೀತಿಯ ಸಂಬಂಧದಿಂದಾದ ತಂದೆಯನ್ನು ಮಲತಂದೆ step father ಎಂದೂ, ಮಲತಾಯಿಯನ್ನು step mother ಎಂದೂ ಸಂಬೋಧಿಸಲಾಗುತ್ತದೆ.
ಅದೇ ರೀತಿ ಮಲಮಗನನ್ನು step son (ಸವತಿಯ ಮಗ), ಮಲಮಗಳನ್ನು step daughter ಎಂದರೆ, ಮಲಸಹೋದರಿಯನ್ನು half-sister, ಮಲಸಹೋದರನನ್ನು half-brother ಎನ್ನುತ್ತೇವೆ.
ಸವತಿ ಅಥವಾ ಗಂಡನ ಇನ್ನೊಂದು ಪತ್ನಿಯನ್ನು co-wife ಎಂದರೆ, ಪತ್ನಿಯ ಇನ್ನೊಬ್ಬ ಗಂಡನನ್ನು co-husband ಎಂದು ಕರೆಯಲಾಗುತ್ತದೆ.
ನಾವು ಗುರುತಿಸುವ ಸಂಬಂಧಗಳ ರೀತಿಗೂ, ಆಂಗ್ಲ ಭಾಷೆಯಲ್ಲಿರುವ ಸಂಬಂಧಗಳ ವ್ಯಾಖ್ಯಾನಕ್ಕೂ ಇಷ್ಟೊಂದು ಅಂತರಗಳು ಮತ್ತು ಗೊಂದಲಗಳಿರುವಾಗ ನಮ್ಮ ಭಾಷೆಯೇ ನಮಗೆ ಚೆಂದ, ಏನಂತೀರಿ?
ಬಹುಶಃ ಆಕೆಗೆ ಕನಸುಗಳೇ ಇಲ್ಲವೇನೋ? ಅಥವಾ ಕನಸೆಂಬುದೇ ಆಕೆಗೆ ಕನಸಿರಬಹುದು. ಯಾರ ಪಾಪದ ಕೂಸೋ ಏನೋ, ಎಲ್ಲಾ ತಾಯಂದಿರಂತೆ ಚಂದ್ರನನ್ನು ತೋರಿಸುವುದು ಆಕೆಗೆ ಗೊತ್ತಿರಲಿಕ್ಕಿಲ್ಲ ಅಥವಾ ಮರೆತು ಹೋಗಿರಬಹುದು. ಆದರೆ ತಾನೇ ಆ ಮಗುವಿನ ತಾಯಿ ಮತ್ತು ಅದನ್ನು ಸಲಹಬೇಕಾದವಳು ನಾನೇ ಎಂಬುದರ ಅರಿವಿದೆ. ಮುದ್ದು ಮಾಡುತ್ತಾಳೆ, ತೊಡೆಯ ಮೇಲೆ ಮಲಗಿಸಿ ತನ್ನ ಭಾಷೆಯಲ್ಲೇ ಲಾಲಿ ಹಾಡುತ್ತಾಳೆ, ಯಾರೋ ಕೊಟ್ಟ ಚಿಂದಿ ಬಟ್ಟೆ, ಗೋಣಿ ಚೀಲವನ್ನು ಮರಕ್ಕೆ ತೂಗು ಹಾಕಿ ಜೋ.. ಜೋ… ಮಾಡಿ ಮಲಗಿಸುತ್ತಾಳೆ.
ಹೊರ ಪ್ರಪಂಚಕ್ಕೋ ಆಕೆ ತಲೆಕೆಟ್ಟು ಹೋದ ಮತಿವಿಕಲೆ, ಹುಚ್ಚಿ. ಹಾಗೆಂದು ಆ ಮಗು ಯಾವತ್ತೂ ಅಂದುಕೊಂಡಿರಲಿಕ್ಕಿಲ್ಲ. ಮಗುವಿಗೆ ಹಸಿವಾದಾಗ, ನೋವಾದಾಗ ‘ಅಮ್ಮಾ’ ಎಂದೇ ಅರಚುತ್ತದೆ. ಬಹುಃಶ ಅದನ್ನು ಮಗುವಿಗೆ ಕಲಿಸಿಕೊಟ್ಟದ್ದು ತಾಯಿಯ ಪಾಲಿಗೆ ಇಲ್ಲದ ದೇವರಿರಬಹುದು.
ಗಂಡೋ, ಹೆಣ್ಣೋ — ಸುಮಾರು ಎರಡು ಡಜನ್ ಮಾಸಗಳನ್ನು ಕಳೆದಿರಬಹುದಾದ ಆ ಮಗು ಕನಿಷ್ಠ ಬಣ್ಣ ಮಾಸಿದ ಅಥವಾ ತೇಪೆ ಹಾಕಿದ ಬಟ್ಟೆಯನ್ನು ಹಾಕಿದ್ದನ್ನೂ ನಾನು ನೋಡಿಲ್ಲ. ಆ ಮಗುವಿಗೆ ಪೋಲಿಯೋ ಹನಿ ಬಿಡಿ, ನಳ್ಳಿಯ ನೀರೂ ಗೊತ್ತಿಲ್ಲ. ಚೆನ್ನೈಯ ಸುಡುವ ಬಿಸಿಲು, ಧಗೆಯಲ್ಲಿ ಈ ರೀತಿಯೂ ಬದುಕಲು ಸಾಧ್ಯವೇ ಎಂಬುದನ್ನು ಆ ಮಗು ಬೀದಿಯಲ್ಲಿ ಬಿದ್ದುಕೊಂಡಾಗ ನೋಡಿದರೆ ಯಾರಿಗಾದರೂ ಅನ್ನಿಸದಿರದು.
ಇವೆಲ್ಲವೂ ನಿಮಿಷಕ್ಕೆ ಸಾವಿರಾರು ಚಕ್ರಗಳು ಉರುಳುವ ಚೆನ್ನೈಯ ಅತ್ಯಂತ ಬ್ಯುಸಿ ಪ್ರದೇಶದ ರಸ್ತೆಯಲ್ಲಿ ಪ್ರತಿ ನಿತ್ಯ ಕಾಣಬಹುದಾದ ದೃಶ್ಯ. ನೀನ್ಯಾರು ಎಂದು ಇದುವರೆಗೆ ಅವಳನ್ನು ನೋಡಿದವರು ಯಾರೂ ಕೇಳಿರಲಿಕ್ಕಿಲ್ಲ. ಹಸಿವಾದಾಗ ಹೊಟೇಲುಗಳ ಮುಂದೆ ನಿಲ್ಲುತ್ತಾಳೆ. ಮತ್ತೆ ತನ್ನ ತಾಣ ಮರದಡಿಯಲ್ಲಿ ಬಂದು ಮಗುವನ್ನು ಕಾಲಿನಲ್ಲಿ ಮಲಗಿಸಿಕೊಂಡು ಆಕಾಶದತ್ತ ದೃಷ್ಟಿ ನೆಟ್ಟು ಯಾರನ್ನೋ ಶಪಿಸುತ್ತಾಳೆ.
ಬಾಯ್ತುಂಬ ಮಾತನಾಡುವ ಎಲ್ಲಾ ಅಗತ್ಯತೆಗಳನ್ನು ಹೊಂದಿರುವ ಆಕೆ ಮಾತೇ ಆಡಲ್ಲ. ಬಾಯ್ತೆರೆಯುವುದು ಯಾರೋ ಅನಾಮಿಕರನ್ನು ಬೈಯಲು ಮಾತ್ರ. ಹಾಗೆಂದು ದಾರಿ ಹೋಕರಿಗೆ ಯಾವುದೇ ತೊಂದರೆ ಮಾಡಿದವಳಲ್ಲ. ಸಾವಿರಾರು ಮಂದಿ ಕಣ್ಣೆದುರು ಓಡಾಡಿದರೂ ಸಹ ತಪ್ಪಿಯೂ ಕೈ ಚಾಚಿ ಹಣ ಕೇಳಿದ್ದನ್ನು ನಾನು ನೋಡಿಲ್ಲ.
ತನಗೊಂದು ಹೆಸರೆಂಬುದು ಇದೆ ಎಂದು ಅವಳಿಗೆ ಗೊತ್ತಿದೆಯೋ ಎಂಬುದು ಹೊರ ಸಮಾಜಕ್ಕೆ ತಿಳಿದಷ್ಟೇ ನನಗೂ ತಿಳಿದಿದೆ. ಆಕೆ ಮಗುವಾಗಿದ್ದಾಗ ಹುಚ್ಚಿಯಾಗಿದ್ದಿರಲಿಕ್ಕಿಲ್ಲ, ಆಕೆಯೂ ಒಂದು ಬಾಲ್ಯ, ಒಂದು ಯೌವನವನ್ನು ಕಳೆದು ಬಂದಿರಬಹುದು ಮತ್ತು ಅಷ್ಟೇ ಮುದ್ದಾಗಿ ಆಕೆಯನ್ನು ಹೆತ್ತವರು ಸಾಕಿರಬಹುದು. ಹಾಗಾಗಿ ಆಕೆಗೊಂದು ಪುಟಗೋಸಿ ಹೆಸರನ್ನೂ ಇಟ್ಟಿರಬಹುದು.
ಅಥವಾ ಹುಟ್ಟಿನಿಂದಲೇ ಮತಿವಿಕಲೆಯಾಗಿದ್ದಳೋ ಏನೋ? ಹೆತ್ತವರಿಗೂ ಬೇಡದ ಕೂಸಾಗಿ ಬೀದಿಗೆ ಬಂದು ಕಂಡಲ್ಲಿ ಉಂಡು, ಸಿಕ್ಕಲ್ಲಿ ಮಲಗಿದ್ದಾಗ ಕೀಚಕರ ಕಣ್ಣಿಗೆ ಬಿದ್ದು ಆಹಾರವಾದಳೋ? ಅಥವಾ ಗಂಡನೆಂಬ ಪ್ರಾಣಿಯಿಂದ ಚಿತ್ರಹಿಂಸೆಗೊಳಗಾಗಿ ಬೀದಿಗೆ ಬಿದ್ದವಳೋ? ಅವಳದೆಂಬ ಮನೆ ಎಲ್ಲೋ ಮರುಭೂಮಿಯಲ್ಲದ ಜಾಗದಲ್ಲಿ ಇರಲೂ ಬಹುದು.
ಗರ್ಭವತಿ ಎಂದು ತಿಳಿದಂದಿನಿಂದ ಮಗುವಿಗೆ ಒಂದೆರಡು ವರ್ಷವಾಗುವವರೆಗೆ ಒಂದು ಮದುವೆಯಷ್ಟೇ ಹಣವನ್ನು ಸ್ಕೆತಸ್ಕೋಪು ಸಿಕ್ಕಿಸಿಕೊಂಡವರಿಗೆ ಸುರಿಯುವ ನಾವೆಲ್ಲಿ, ಏನೂ ಇಲ್ಲದೆ ಎಲ್ಲೋ ಹೆತ್ತಿರಬಹುದಾದ ನಿಜವಾಗಿಯೂ ನಾಯಿ ಪಾಡಾಗಿರುವ ಆಕೆಯ ಬದುಕೆಲ್ಲಿ?
ಆಕೆಯ ಮಗುವೂ ಬದುಕಿದೆ, ಅದಕ್ಕೂ ಕಣ್ಣಿದೆ, ಹಸಿವಾಗುತ್ತದೆ, ಕೂಗುತ್ತದೆ. ನಮ್ಮ ಪಾಪುವಿಗಿಂತ ಯಾವ ರೀತಿಯಿಂದಲೂ ಅದು ಭಿನ್ನವಲ್ಲ. ಹಾಗೆಂದು ನಮ್ಮ ಪುಟ್ಟ-ಪುಟ್ಟಿಯರಂತೆ ತುತ್ತೂರಿ, ಪುಟ್ಟ ಸೈಕಲ್ಲಿಗಾಗಿ ರಂಪ ಮಾಡಬೇಕೆಂದು ಆ ಮಗುವಿಗೆ ಗೊತ್ತಿಲ್ಲ. ಕತ್ತಲೆನ್ನುವುದು ಹೆದರಿಸುತ್ತದೆ ಮತ್ತು ಹೆದರಬೇಕು ಎಂಬುದೂ ಆ ಮಗುವಿಗೆ ಅರಿವಿಲ್ಲ ಮತ್ತು ಅದನ್ನು ಆ ತಾಯಿ ಮಗುವಿಗೆ ಹೇಳಿ ಕೊಟ್ಟಿರಲಿಕ್ಕಿಲ್ಲ.
ಹೀಗೆ ಬಟಾಬಯಲಿನಂತಿರುವ ಬೀದಿಯಲ್ಲಿರುವ ಈ ಒಂಟಿ ಹೆಂಗಸಿನ ಸುಪರ್ದಿಯನ್ನು ಯಾರೂ ತೆಗೆದುಕೊಂಡಿಲ್ಲ ಯಾಕೆ ಎನ್ನುವ ಪ್ರಶ್ನೆ ನನಗೆ ಕಾಡಿದಾಗಲೆಲ್ಲಾ ಗೆಳೆಯ ನಾಗೇಂದ್ರ ತ್ರಾಸಿ, ರಾಜೇಶ್ ಪಾಟೀಲರ ತಲೆ ತಿಂದಿದ್ದೇನೆ.
ಚೆನ್ನೈಯೆಂಬ ಭಿಕ್ಷುಕರೇ ತುಂಬಿರುವ ನಗರದಲ್ಲಿ ಒಂದೆರಡು ಸುತ್ತು ಹೊಡೆದವರಿಗೆ ಇಂತಹ ಪ್ರಶ್ನೆಗಳಿಗೆ ಉತ್ತರ ಕೊಡಲು ಕಪ್ಪು ಕನ್ನಡಕ ಹಾಕಿಕೊಂಡಿರುವ ಮುಖ್ಯಮಂತ್ರಿ ಕರುಣಾನಿಧಿಯೆದುರು ಹೇಗೆ ಸಾಧ್ಯ?
ಕರುಣೆ ತೋರಿಸುವವನೂ ಕಳೆದು ಹೋಗಿದ್ದಾನೆ. ನಿನಗೆ ಕೊಟ್ಟಿಲ್ಲ ಅಂದುಕೊಂಡಿದ್ದ ಮನಸ್ಸನ್ನು ಮತ್ತು ಪ್ರೀತಿಯನ್ನು ಪರಭಾರೆ ಮಾಡಲಾಗದೆ ಒದ್ದಾಡುತ್ತಿದ್ದಾಗಲೆಲ್ಲ ದೇಹದ ಮೇಲೆ ಹಸಿವಿಲ್ಲದೆ ದಿನರಾತ್ರಿ ಸವಾರಿ ಮಾಡಿ ಸೇಡು ತೀರಿಸಿಕೊಳ್ಳುವ ವಿಫಲಯತ್ನ ನಡೆಸುತ್ತಿದ್ದವನಿಗೆ, ನಿನ್ನ ಪ್ರೀತಿಯಷ್ಟು ನನಗೆ ನೋವು ಕೊಡಲು ಕೊನೆಗೂ ಸಾಧ್ಯವಾಗದೆ ವಿಷಾದದಿಂದ ನಿರ್ಗಮಿಸಿದ್ದಾನೆ.
ಈ ನಿರ್ಲಜ್ಜ ವೈಧವ್ಯದಲ್ಲಿ ನಿನ್ನನ್ನು ಏನೆಂದು ಕರೆಯಲಿ? ಹೃದಯದ ಮೇಲಿದ್ದ ಪ್ರೇಮದ ನೆರಿಗೆಗಳನ್ನು ಪ್ರೀತಿಯಿಂದಲೇ ನಿವಾರಿಸಿದ್ದ ನೀನು ಮತ್ತೆ ಗೆಳೆಯನಾಗಿ ನನ್ನೊಳಗೆ ಇಳಿಯುವ ನಿರೀಕ್ಷೆ ಕ್ಷೀಣಿಸುತ್ತಿರುವ ಉಸಿರಿನ ರಭಸಕ್ಕೂ ದೂರಕ್ಕೆ ಹಾರಿ ಹೋಗುತ್ತಿದೆ. ಇಲ್ಲ, ನೀನು ನನ್ನಿಂದ ಇಳಿದು ಹೋಗೇ ಇಲ್ಲ, ಹೋದದ್ದು ನಾನು ಮಾತ್ರ ಎಂದು ಮತ್ತೊಮ್ಮೆ ಹೇಳು, ಮಗದೊಮ್ಮೆ ಹೇಳು, ಹೇಳುತ್ತಲೇ ಇರು. ಅದೆಷ್ಟೇ ದೂರದಲ್ಲಿದ್ದರೂ ನಾನು ಕಿವಿಯಾಗಲು ಸಿದ್ಧಳಿದ್ದೇನೆ.
ಮತ್ತೊಂದು ತಪ್ಪನ್ನು ಮಾಡಿಯಾದರೂ ನನ್ನ ದಿಕ್ಕು ತಪ್ಪಿರುವ ಬಾಳ ದೋಣಿಯನ್ನು ಸರಿಪಡಿಸುವ ಹುಚ್ಚು ಹಂಬಲದ ಬೇಡಿಕೆಯಿದು. ನಿನ್ನನ್ನೇ ನಂಬಿದವಳಿಗೆ ಮಾನಸಿಕ ಸವತಿಯಾಗುವಷ್ಟು ಕನಸುಗಳಿವು. ಪ್ಲೀಸ್, ಇಲ್ಲವೆನ್ನಬೇಡ.
ನಾನೇನು ಮಾಡಲಿ ಗೆಳೆಯ, ಮಾತು-ಮಾತಿಗೆ ಕರುಣೆಯ ಮಾತುಗಳು ಬಾಡಿ ಹೋಗಿರುವ ನನಗೆ ಮಂಜುಗಡ್ಡೆಯಂತೆ ಭಾರವಾಗುತ್ತಿದೆ. ತಪ್ಪು ನನ್ನದೇ ಎನ್ನುವ ಭಾವ ನನಗೆ ಮುಳ್ಳಾಗುತ್ತಿದೆ. ಅವನ ಯಾವುದಕ್ಕೂ ನಾನು ಕಾರಣಳಲ್ಲ. ನಿನ್ನನ್ನು ಮರೆತ ಬಳಿಕ ಮತ್ತೆ ನೆನಪಿಸಿದ ಒಂದು ತಪ್ಪು ಆತ ಮಾಡಿದ್ದು ಬಿಟ್ಟರೆ ಮಾಡಿದ ಕೊನೆಯ ತಪ್ಪು ನನ್ನನ್ನಗಲಿ ನಿನ್ನನ್ನೇ ನೆನಪಿಸಿಕೊಳ್ಳುವ ಅನಿವಾರ್ಯತೆಗೆ ತಳ್ಳಿ ಬಾರದ ಲೋಕಕ್ಕೆ ಹೊರಟು ಹೋಗಿದ್ದು ಮಾತ್ರ.
ಹೇಳು, ನಾನೇನು ಮಾಡಲಿ? ನಿನ್ನದಲ್ಲದ ಮಗುವಿನ ಬೆನ್ನು ತಟ್ಟುವಾಗಲೂ ನಿನ್ನದೇ ನೆನಪುಗಳು ಬಾಧಿಸುತ್ತಿವೆ. ನೀನು ಬೇಕು ಮತ್ತು ನೀನೇ ಬೇಕು ಎಂಬ ಕೊಳೆತ ಆಸೆಗಳು ನನ್ನಲ್ಲಿ ನಡುರಾತ್ರಿಯಲ್ಲೂ ಯಾರಿಗೂ ಅಂಜದೆ ಸುವಾಸನೆ ತರಿಸುತ್ತಿವೆ. ತಪ್ಪು-ಒಪ್ಪುಗಳ ಹಂಗು ನಡುನೀರು ದಾಟಿರುವ ನಿನಗೆ ಬೇಕಿಲ್ಲ ಎಂದು ನಾವಂದು ಲೋಕವನ್ನು ಮರೆತು ರೋಮಾಂಚನಗೊಂಡಿದ್ದ ಮಧುರ ಕ್ಷಣಗಳನ್ನು ಮನಸ್ಸಿಗೆ ಮರಳಿಸುತ್ತಾ ಸಮರ್ಥನೆ ನೀಡುತ್ತಿವೆ.
ಅದೇ ಋತು ನನ್ನ ಕೊನೆಯ ಸಂಭ್ರಮದ ಕುಣಿತವಾಗುತ್ತದೆ ಎಂಬುದನ್ನು ನಾನು ಊಹಿಸದೆ ನಿನ್ನ ಪ್ರೀತಿಯ ಬದುಕಿಗೆ ಕೊನೆಯ ಮೊಳೆ ಹೊಡೆದ ನನಗೆ ನನ್ನವರು ಎನ್ನಲು ಪೂರ್ತಿಯಾಗಿ ನನ್ನದಲ್ಲದ ಕರುಳ ಕುಡಿ ಬಿಟ್ಟರೆ ಕೆದಕುವಾಗ ಸಿಗುವವನು ಮತ್ತೆ ನೀನೊಬ್ಬನೇ. ಅಂತಹ ಒಂದು ಅನಿವಾರ್ಯತೆಯನ್ನು ನನಗೆ ಸೃಷ್ಟಿಸಿದ ದೇವರ ಜತೆ ನಿನ್ನ ಕೊಡುಗೆಯೂ ಇದೆ ಎಂದು ಹೇಳದೆ ನನಗೆ ವಿಧಿಯಿಲ್ಲ.
ಹದಿಹರೆಯ ಮರೆತಿದ್ದ ನನ್ನಲ್ಲಿ ಪ್ರೀತಿಯ ಅಮಲನ್ನು ಉಕ್ಕಿಸಿ ಹರಿಸಿದವನು, ಮಟ್ಟಸ ಮಧ್ಯಾಹ್ನದ ಕೊನೆಯ ದಿನ ಶನಿವಾರ ಖಾಲಿಯಾಗಿದ್ದ ಕಚೇರಿಯ ಗೋಡೆ ಹಿಡಿದು ಹೊರಟು ಹೋಗುತ್ತಿದ್ದವಳ ಹಿಂದೆ ಬಂದು ನಿಶ್ಫಲ ಪ್ರೇಮವನ್ನು ಮೊತ್ತ ಮೊದಲ ಬಾರಿ ಅರುಹಿ, ನನ್ನ ಬದುಕಿನ ಹಾಳೆಗೆ ಬಣ್ಣ ಕೊಟ್ಟ ನಿಧಾನವಿಷ ನೀನು. ಅಂದು ನಿನ್ನೊಳಗಿಂದ ನನ್ನನ್ನು ಸೇರಿದ ಪ್ರೀತಿ ಈಗಲೂ ಏಳೂವರೆ ವರ್ಷಗಳ ನಂತರವೂ ನನ್ನನ್ನು ಚೂರು-ಚೂರು ಮಾಡುತ್ತಿದೆ– ನಿನ್ನನ್ನು ಕೇಳದೆ.
ಬಿಡು ಗೆಳೆಯ, ಹೇಳು. ನಿನ್ನ ಬಾಳಲ್ಲಿ ಬೆಳದಿಂಗಳಿಲ್ಲದ, ಒಂದು ಶುಭ್ರವಾದ ಮತ್ತು ಅಷ್ಟೇ ಕಲ್ಮಶವಾದ ಕತ್ತಲಿದೆಯಾ? ಅಂತಹ ಒಂದು ನೀರವ ಮತ್ತು ನೀರಸವಾದ ಕಗ್ಗತ್ತಲೆಯಲ್ಲಿ ನನ್ನ ಒಡೆದು ಹೋದ ಕನ್ನಡಿಯೆದುರು ಬೆಳಕು ಚೆಲ್ಲಿ ಮತ್ತೆ ನನ್ನನ್ನು ನೋಡಬಲ್ಲೆಯಾ?
ಇದು ತಪ್ಪೆಂದು ನನ್ನಲ್ಲಿರುವಷ್ಟೇ ಗೊಂದಲಗಳು ನಿನ್ನಲ್ಲಿವೆ. ನಿನ್ನನ್ನು ನಾನು ಮರೆತಷ್ಟು ನೀನು ನನ್ನನ್ನು ಮರೆತಿಲ್ಲ ಎಂಬಷ್ಟು ನೀನು ನನಗೆ ಗೊತ್ತು. ಆ ದಿನಗಳ ಬಳಿಕ ನೀನು ಸುಡುವ ಬೇಸಗೆಯಲ್ಲಿ ಬತ್ತಿ ಹೋಗಿದ್ದ ನೇತ್ರಾವತಿ ದಡದಲ್ಲಿ ನಿಂತು ಗುಪ್ತಗಾಮಿನಿಯನ್ನು ನಿರೀಕ್ಷಿಸುತ್ತಿರುವಷ್ಟು ಭರವಸೆಗಳನ್ನು ನೆಟ್ಟಿದ್ದವನು ನೀನು ಎಂದು ಯಾರೋ ಹೇಳಿದ್ದು ಅಂದು ಪ್ರಿಯವಾಗಿರದಿದ್ದರೂ, ಇಂದು ಬೇಕೆನಿಸುತ್ತಿದೆ.
ಇವೆಲ್ಲ ಸೇರುಸೇರು ಸುಳ್ಳು, ಮೋಸಗಳನ್ನು ಕಾಣುವ ಈ ಪ್ರೀತಿಯೇ ಬಗೆಗಳು ಎಂದು ಸಮರ್ಥಿಸಿಕೊಳ್ಳುತ್ತಿದ್ದೇನೆ. ಹಾಳು ಪ್ರೀತಿಯೆನ್ನುವುದು ಮರೆತಷ್ಟು ನೆನಪಿಸುವ ಪರೀಕ್ಷೆಗೂ ಸಿಗದ ಫಲಿತಾಂಶವಾಗಿರದಿದ್ದರೆ ಸವಕಲಾಗಿ ಹೋಗಿರುವ, ಎಲ್ಲವನ್ನೂ ಕಳೆದುಕೊಂಡಿರುವ ನನ್ನಂತಹ ನನಗೆ ಪ್ರೀತಿಯೆಂಬುದು ಮತ್ತೆ ಒಂದು ಅಪಭ್ರಂಶ ಸಾರೋಟಿನಲ್ಲಿ ಸಾಗುವ ಮುರುಕು ಆಸೆ ಎಂಬುದನ್ನು ಮರೆತು ಚಿಗಿತು ಕುಳಿತಿದೆಯೆಂದರೆ. ಅದರಲ್ಲೂ ತಾಳ ತಪ್ಪಿಲ್ಲವೆಂದು ಭ್ರಮಿಸಿರುವ ನಿನ್ನ ಮತ್ತು ನಿನ್ನನ್ನು ನಂಬಿದವಳ ರಥದ ಮುಂದೆ ತುಂಬಿದಷ್ಟು ಇಂಗುವ ಗುಂಡಿಯನ್ನು ನಾನು ತೋಡಲು ಮುಂದಾಗಿದ್ದೇನೆ ಎಂದರೆ?
ನೀನು ಏನಾದರೂ ಕರೆದುಕೋ, ಆದರೆ ನನಗಿದು ಪ್ರೀತಿಯೇ ಮತ್ತು ನೀನಲ್ಲದ ಮತ್ತೊಬ್ಬರಿಂದ ಅದಕ್ಕೆ ಪರಿಹಾರ ಸಿಗದು ಎಂಬುದು ನನಗೆ ತಿಳಿದು ಹೋದ ನಂತರ ಹಲವು ಮಳೆಗಾಲಗಳು ನನ್ನ ಮನದ ಕೊಚ್ಚೆಯನ್ನು ನಿನ್ನ ಮೋಸದೊಂದಿಗೆ ಕೊಚ್ಚಿಕೊಂಡು ಹೋಗಿವೆ.
ಗಂಡನಲ್ಲದ, ಗೆಳೆಯನನ್ನು ದಾಟಿದ, ಅಕ್ರಮವಲ್ಲದ ಮತ್ತು ಹೆಸರಿಡಲಾಗದ ಸಂಬಂಧದ ನಿರೀಕ್ಷೆಯಲ್ಲಿ ಅದೇ ನೀನು ಆಡುತ್ತಿದ್ದ ಜಡೆಯಿದ್ದ, ಈಗ ಕುರುಚಲಾಗಿರುವ ಕೂದಲಿಗೆ ಚೌರಿ ಸೇರಿಸಿ ಹೆರಳು ಹಾಕುವ ಯತ್ನದಲ್ಲಿದ್ದೇನೆ, ಪ್ಲೀಸ್.. ನಿರಾಸೆ ಮಾಡಬೇಡ.
ಪ್ರೀತಿ ಮುಗಿಯುವ ಮೊದಲು ನಿನ್ನವಳಾಗಲು ಕಾಯುತ್ತಿರುವ,
– ಭುವನಾ
(ಈ ಲೇಖನ ‘ವೆಬ್‌ದುನಿಯಾ’ ವ್ಯಾಲೆಂಟೈನ್ಸ್ ಡೇ ವಿಶೇಷ ಪುಟದಲ್ಲಿ ಪ್ರಕಟವಾಗಿದೆ)
ಇಂದಿನ ಚಂದ್ರನನ್ನೇ ನೋಡುವ ಭರವಸೆ ಇಲ್ಲದ ಮೇಲೆ ನಾಳಿನ ಸೂರ್ಯನನ್ನು ನಿರೀಕ್ಷಿಸುವುದು ಎಷ್ಟು ಸರಿ ಎಂದೆಲ್ಲಾ ಚೆನ್ನೈ ಮಹಾನಗರಿಯ ಭೀತಿ ಹುಟ್ಟಿಸುವ ಕರ್ಮಠ ಒಳ ಬೀದಿಗಳಲ್ಲಿ ಸುತ್ತಾಡುತ್ತಿರುವಾಗ ಯೋಚನೆಗೆ ಬರುವುದು ಸಹಜವಿರಬಹುದು. ಆದರೂ ಅದು ವಾಸ್ತವದಿಂದ ಹೆಚ್ಚು ದೂರವಲ್ಲವೇನೋ?
ಮೊದಲಿನಿಂದಲೂ ಕಾಡುತ್ತಿದ್ದ ಇಂತಹ ಜೀವನದ ಕಡೆಗಿನ ಶೂನ್ಯತೆ, ಶಾಶ್ವತವಲ್ಲದ ಪ್ರಾಣದ ಕಡೆಗಿನ ತಾತ್ಸಾರಕ್ಕೆ ಹೆಚ್ಚು ಅರ್ಥ ಕಲ್ಪಿಸಿದ್ದು ವಿಷ್ಣು ಹಠಾತ್ ಸಾವು. ನಿನ್ನೆಯವರೆಗೆ ಕುಣಿಯುತ್ತಿದ್ದವರು ಇಂದಿಲ್ಲ. ಯಾರೂ ಯೋಚನೆ ಮಾಡಿರದ ಸಾವೊಂದು, ಕಚಗುಳಿ ಇಟ್ಟಾಗ ಹಿಂಡುವಂತಹುದೇ ನೋವನ್ನು ಅಳುವಿನಲ್ಲೂ ಹುಟ್ಟಿಸಿಬಿಡುತ್ತದೆ ಎಂಬಷ್ಟಕ್ಕೇ ಮತ್ತೊಬ್ಬರ ಜೀವನವು ಮುಗಿದು ಹೋಗಿರುತ್ತದೆ.
ನಾವು ನಾಳೆಗಳಿಗಾಗಿ ಎಷ್ಟೋ ಕಷ್ಟಪಡುತ್ತೇವೆ. ಮನೆ ಬೇಕು, ನಮ್ಮೊಂದಿಗೆ ಸಾಗುವ ಜೀವವೂ ಬೇಕು, ಒಳ್ಳೇ ಜಾಬ್ ಬೇಕೆಂದು ಬದುಕಿರುವವರೆಗೆ ಮಾತ್ರ ಸಿಗುವ ಸುಖ ನಿದ್ರೆಯನ್ನು ಬಿಡುತ್ತೇವೆ. ಸಂಪಾದನೆಗೋಸ್ಕರ ಹೆಂಡತಿ-ಮಕ್ಕಳು, ಅಪ್ಪ-ಅಮ್ಮ, ಸಹೋದರ-ಸಹೋದರಿಯರ ಪ್ರೀತಿಯಿಂದ ದೂರ ಉಳಿದು ಅದೆಷ್ಟೋ ದಿನಗಳ, ವರ್ಷಗಳ ಜೀವನವನ್ನು ವೃಥಾ ಕಳೆದು ಬಿಡುತ್ತೇವೆ. ಯಾವತ್ತು ಬೇಕಾದರೂ ನಿಂತು ಹೋಗುವ ಈ ಅತಂತ್ರ ಜೀವಕ್ಕೆ ಇದೆಲ್ಲಾ ಬೇಕಾ ಎಂಬ ಯೋಚನೆಗಳೆಲ್ಲ ಇಂಥ ಸಮಯದಲ್ಲಿ ಮುತ್ತಿಕೊಳ್ಳುತ್ತವೆ.
ದೇವರು ನಿರ್ಗತಿಕ ಎಂಬಂತೆ ಹೊತ್ತು ಗೊತ್ತಿಲ್ಲದೆ ಪ್ರಾಣ ಕುಡಿದು ಬಿಡುತ್ತಾನೆ. ಉಳಿದ ಅನುಪಯೋಗಿ ಶರೀರಕ್ಕೊಂದು ಅಂತ್ಯಸಂಸ್ಕಾರ. ಒಂದೆರಡು ದಿನ ಶೋಕ. ಅಲ್ಲಿಗೆ ಆತನ ನೆನಪುಗಳಿಗೂ ಸಮಾಧಿ. ಬದುಕಿರುವವರೆಗೆ ಎಷ್ಟು ಸಂಪಾದನೆ ಮಾಡಿದರೂ, ಹೇಗೆ ಬದುಕಿದ್ದರೂ ಲಾಭವೇನು? ಬದುಕಿರುವಾಗ ಭಾರೀ ಸಂಪಾದನೆ ಮಾಡಿದ್ದ, ಹೆಸರುವಾಸಿಯಾಗಿದ್ದ ಎಂಬ ಬಿರುದು-ಬಾವಳಿಗಳಿಗಿಂತ, ಆತ ಸುಂದರವಾಗಿ ಇದ್ದ ಬದುಕನ್ನು ಆನಂದಿಸಿದ್ದ ಎಂಬುದು ಮೇಲಲ್ಲವೇ?
ಇದ್ದ ಅಲ್ಪಾಯುಷಿ ದಿನಗಳನ್ನು ಸುಂದರವಾಗಿ ಮಾರ್ಪಡಿಸಿಕೊಳ್ಳುವುದನ್ನು ಬಿಟ್ಟು ರಾತ್ರಿ-ಹಗಲು ಪಾಳಿಯಲ್ಲಿ ಎಡೆಬಿಡದೆ ದುಡಿಯುವವರನ್ನು ನೋಡಿದಾಗಲೆಲ್ಲ ಈ ವಾಕ್ಯಗಳು ನನ್ನನ್ನು ಹೆಚ್ಚೇ ಬಾಧಿಸುತ್ತವೆ. ಅದಕ್ಕೊಂದು ಅತ್ಯುತ್ತಮ ದೃಷ್ಟಾಂತವನ್ನೂ ನೀಡುತ್ತೇನೆ.
ನನ್ನೊಬ್ಬ ಆತ್ಮೀಯ ಗೆಳೆಯ ಹಗಲು (ಬೆಳಿಗ್ಗೆ 8.30ರಿಂದ ಸಂಜೆ 5) ಕಂಪನಿಯೊಂದರಲ್ಲಿ, ರಾತ್ರಿ ಹೊತ್ತು (8ರಿಂದ 4ರ ನಸುಕಿನವರೆಗೆ) ಮತ್ತೊಂದು ಕಡೆ ಕೆಲಸಕ್ಕೆ (ಹಾರ್ಡ್ ವರ್ಕ್) ಹೋಗುತ್ತಿದ್ದ. ಕಳೆದ ವರ್ಷವಷ್ಟೇ ಮದುವೆಯಾಗಿ ತನ್ನದಲ್ಲದ ಬಾಡಿಗೆ ಮನೆಯಲ್ಲಿ ಸಂಸಾರವನ್ನೂ ಹೂಡಿದ್ದಾನೆ.
ಆದರೆ ಈಗಲೂ ಎರಡೂ ಕೆಲಸಗಳನ್ನು ಮಾಡುತ್ತಿದ್ದಾನೆ. ಕಾಂಕ್ರೀಟ್ ಗೋಡೆಗಳ ನಡುವೆ ಹಗಲು-ರಾತ್ರಿಯನ್ನು ಒಂಟಿಯಾಗಿ ಕಳೆಯುವ ಹೆಂಡತಿಗೆ ಯಾವುದೋ ಸುಳ್ಳನ್ನು ಲೇಪಿಸಿದ್ದಾನೆ. ಬೋರ್ ಆಗದಿರಲೆಂದು ಟೀವಿಯನ್ನೂ ಗೋಡೆಗೊರಗಿಸಿದ್ದಾನೆ.
ಒಂದನ್ನಾದರೂ ಬಿಟ್ಟು ಬಿಡು ಎಂದು ಎಷ್ಟೇ ಗೋಳು ಹೊಯ್ದುಕೊಂಡರೂ ಆತ ಬಿಡಲೊಪ್ಪ. ರೂಮ್ ಬಾಡಿಗೆ ನೀಡಲು ಕಷ್ಟವಾಗುತ್ತದೆ, ಎಲ್‌ಐಸಿ ಪಾಲಿಸಿ ಕಟ್ಟಬೇಕು ಎಂದೆಲ್ಲಾ ಹಲವು ಕಾರಣಗಳನ್ನು ನನ್ನೆದುರು ರಾಶಿ ಹಾಕುತ್ತಾನೆ. ಅವನದ್ದೆಲ್ಲವೂ ನಾಳೆಯ ಸುಂದರ ಜೀವನದ ಕನಸು.
ನನ್ನ ಪ್ರಶ್ನೆ, ಆತ ಬಿಡುವಿಲ್ಲದ ಕೆಲಸ ಮಾಡಿ ಸಂಪಾದಿಸಿದ ಹಣವನ್ನು ಏನು ಮಾಡಬೇಕಿದೆ? ಮದುವೆಯಾದ ಹೊಸದರಲ್ಲಿ ಸಿಗುವ ಸುಖ-ಸಂತೋಷಗಳನ್ನೆಲ್ಲ ಮಿಸ್ ಮಾಡಿಕೊಂಡಿರುವ ಆತನಿಗೆ ಅದು ಸಂಪಾದನೆ ಮುಗಿದ ಮೇಲೆ ಬೇಕೆಂದರೆ ಸಿಗುವುದೇ? ಆತ ಮಾಡಿದ ಸಂಪಾದನೆಯನ್ನು ಅನುಭವಿಸಲು ಅವಕಾಶ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಆಶಾಭಾವನೆ ಹೊರತುಪಡಿಸಿದ ಖಾತ್ರಿಯೇನಿದೆ?
ಇಂತಹ ಹತ್ತು-ಹಲವು ಪ್ರಕರಣಗಳು ನಿಮ್ಮ ಮುಂದೂ ಇರಬಹುದು ಅಥವಾ ನೀವೂ ಅವರಲ್ಲೊಬ್ಬರಾಗಿರಬಹುದು. ಸಿಹಿ-ತಿಂಡಿಗಳನ್ನು ನೋಡುವಾಗ ನಮಗೆ ಬಾಯಲ್ಲಿ ನಿರೂರುತ್ತದೆ ಎಂಬುದು ಸರಿ. ಅದನ್ನು ತಿಂದಾಗ ತೃಪ್ತಿಯಿಂದ ತೇಗುತ್ತೇವೆ. ಅದರ ಬದಲು ಅವುಗಳನ್ನು ಪುಡಿ ಮಾಡಿ ನೇರವಾಗಿ ಹೊಟ್ಟೆಗೆ ಸೇರಿಸಿದರೆ ಹೇಗಿರುತ್ತದೆ? ನಮ್ಮ ವಾಸ್ತವ ಉದ್ದೇಶವಾದ ಹೊಟ್ಟೆಯೇನೋ ತುಂಬುತ್ತದೆ, ಆದರೆ ನಾಲಗೆಯೆನ್ನುವ ಭಾವ?
ಇಂತಹ ಸಾಕಷ್ಟು ಗೊಂದಲಗಳು ನನ್ನಲ್ಲಿವೆ. ನಾನೂ ನಾಳೆಯ ಕನಸುಗಳ ಸರದಾರ. ಶ್ರೀಮಂತರನ್ನು, ಜನಪ್ರಿಯ ಮಂದಿಯನ್ನು ಕಂಡಾಗ ನನಗೂ ಹಾಗಾಗಬೇಕು ಎಂಬ ಆಸೆ ಮೊಳೆತದ್ದಿದೆ. ಆದರೆ ಖಂಡಿತಾ ಅದಕ್ಕಾಗಿ ದಿನದ 18 ಗಂಟೆಯನ್ನು ವ್ಯಯಿಸಲಾರೆ. ಅಂತಹ ಅದ್ಭುತ ಸಾಮ್ರಾಜ್ಯ ನನಗೆ ಬೇಕೇ ಬೇಕೆಂದು ಅನ್ನಿಸಿಲ್ಲ– ಮುಂದೆಯೂ ಬೇಕೆಂಬ ಭಾವ ಮೂಡದಿರಲಿ.
ಆದರೂ ಅಪ್ಪ-ಅಮ್ಮನ ಜತೆಗಿರುವ ಪ್ರೀತಿಯಿಂದ ನಾನೂ ವಂಚಿತನೆನ್ನುವುದು ವಾಸ್ತವ..!
ಮತ್ತೆ ಕಾಡುತ್ತೇನೆ ಗೆಳೆಯ… ಕಾಯಬೇಡ !
Posted January 1, 2010
on:ಅಲ್ಲಿ ಕುಳಿತಿದ್ದ ನನಗೆ ನಿನ್ನ ನೆನಪೇ ಇರಲಿಲ್ಲ. ನಿನ್ನಂಥ ಎಷ್ಟೋ ಹುಡುಗರು ನನ್ನ ಹಿಂದೆ ಬಿದ್ದವರಿದ್ದರು. ಯಾರಿಗೂ ಉತ್ತರ ಕೊಡದೆ ಮುಂದೆ ನಡೆಯುತ್ತಾ ಕಳೆದುಕೊಂಡವಳು. ವಯಸ್ಸು ನೆತ್ತಿಗೆ ಬಂದರೂ ಪರಿವೆಯಿರಲಿಲ್ಲ ನನಗೆ. ನನ್ನೊಳಗೆ ಅವಿತಿದ್ದವನ ಹುಡುಕಾಟದಲ್ಲಿ ಕೊನೆಗೂ ವರವಾದವನು ನೀನು. ಮರೆತೇ ಹೋಗಿದ್ದ ಕನಸುಗಳಿಗೆ ಬಣ್ಣ ಮೆತ್ತಿ ಸಿಂಗರಿಸಿದವನು, ರೆಕ್ಕೆ ಕಟ್ಟಿ ಹಾರಿಸಿದವನು, ನೀರೆರೆದು ಪೋಷಿಸಿದವನು ನೀನು. ಅದೇ ಕೊನೆ ಕಣೋ… ಮತ್ತೆಂದೂ ಅವು ಕಂಗೊಳಿಸಿಲ್ಲ.
ನನಗಿನ್ನೂ ವಯಸ್ಸಾಗಿಲ್ಲ ಎಂದೆಲ್ಲಾ ನನ್ನ ಕಿವಿ ತುಂಬಿದ್ದು ಸುಳ್ಳೆಂದು ನನಗೆ ತಿಳಿದರೂ ನೀನು ನನ್ನ ಮನಸ್ಸನ್ನು ಬೆಚ್ಚಗಿರಿಸಲು ಯತ್ನಿಸುತ್ತಿದ್ದುದು ನನಗೆ ಖುಷಿ ಕೊಡುತ್ತಿದ್ದ ದಿನಗಳವು. ಕನ್ನಡಿಯೆದುರು ನಿಂತು ಮುಖದಲ್ಲಿ ಗೆರೆಗಳು ಮೂಡಿವೆಯೋ ಎಂದು ಹುಡುಕುತ್ತಿದ್ದ ದಿನಗಳಲ್ಲಿ ಮರುಭೂಮಿಯಂತಿದ್ದ ನನ್ನಲ್ಲಿ ಹೂತು ಹೋದ ಪ್ರೀತಿ ನೀನು.. ಮತ್ತೆ ಗಾಳಿ ಬಂದಾಗ ಕಾಣಿಸಬಹುದು ಎಂದುಕೊಂಡಿದ್ದೆ.. ಸುಳ್ಳಾಯಿತು, ಇಂದಿಗೂ.. ಹುಡುಕಾಟದಲ್ಲಿ ಸೋತಿದ್ದೇನೆ. ಗಾಳಿಯೂ ನಿಂತಿದೆ. ಮತ್ತೆ ಮಳೆ ಬರುವ ನಿರೀಕ್ಷೆಗಳು ನನ್ನಲ್ಲೇ ಬತ್ತಿ ಹೋಗಿವೆ..
ಶಿಶಿರ, ವಸಂತ, ವರ್ಷ, ಹೇಮಂತ, ಶರದ್ ಋತುಗಳ ಹೆಸರುಗಳಷ್ಟೇ ನೆನಪಿವೆ… ನನ್ನಲ್ಲಿ ಎಲ್ಲವೂ ಬಂದು ಹೋದವುಗಳೇ.. ಉಳಿದಿರುವುದು ಗ್ರೀಷ್ಮ ಮಾತ್ರ. ನನ್ನ ಹಚ್ಚಹಸುರಿನ ಗೋಡೆಗಳಲ್ಲಿ ನೀನು ಬರೆದ ಚಿತ್ರಗಳು ಮಸುಕಾಗಿವೆ ಗೆಳೆಯ. ಹಿತ್ತಿಲ ಬಾಳೆತೋಟದಲ್ಲೇ ಬತ್ತಲಾಗುವ ಕನಸುಗಳು ಎಲ್ಲಿ ಹೋದವೋ ನಾ ಕಾಣೆ… ನಿನ್ನಂತೆ ನನ್ನಂತೆ ಅವು ದೂರವಾಗಿವೆ.
ಅಂದುಕೊಂಡಂತೆ ಎಲ್ಲವೂ ಸಾಗುತ್ತಿದ್ದರೆ ನಾನೀಗ ನಿನ್ನ ತಲೆಯನ್ನು ನೇವರಿಸುತ್ತಿದ್ದೆ. ಯಾವುದೂ ನಡೆಯಲಿಲ್ಲ.. ಬಹುಶಃ ನಡೆಯಲು ನಾನು ಬಿಡಲಿಲ್ಲ. ನನ್ನ ಬೆರಳುಗಳನ್ನು ನೀನು ತೀಡುತ್ತಿದ್ದಾಗಲೆಲ್ಲಾ ಷೋಡಶಿಯಾಗುತ್ತಿದ್ದವಳು ನಾನು.. ಈಗ ಮತ್ತೂ ವಯಸ್ಸಾಗಿದೆ ಕಣೋ.. ದೇಹಕ್ಕಿಂತಲೂ ಮನಸ್ಸಿಗೆ.. ತಿದ್ದುವವರಿಲ್ಲ.. ತೀಡುವವರಿಲ್ಲ, ಬೇಡುವವರಿಲ್ಲ. ಹಸಿವೆ ಮುಗಿದು ಹೋಗಿದೆ. ಬಾಯಾರಿಕೆ ಮರೆತು ಹೋಗಿದೆ.. ದಾಳಿ ಸಾಕಾಗಿದೆ..
ಬದುಕು ತುಕ್ಕು ಹಿಡಿಯುತ್ತಿದೆ. ಮಟ್ಟಸ ಮಧ್ಯಾಹ್ನ ಮುಸ್ಸಂಜೆಯಾದ ದಿನಗಳು ಕಣ್ಣುಗಳ ಬಳಿ ಸುಳಿದಾಡುತ್ತಿವೆ.. ನನ್ನ ಬದುಕೀಗ ಬೆಂಗಾಡು.. ಹೆಜ್ಜೆಗಳೂ ಕಾಣಿಸುತ್ತಿಲ್ಲ.. ಎಲ್ಲವೂ ಬರಡಾಗಿವೆ. ನಿನ್ನ ನೆನಪುಗಳು ಮಾತ್ರ ಅಪರಂಜಿ..
ಅದೇ ಬಟಾಬಯಲು ಕಪ್ಪುಕಲ್ಲಿನ ಗೋಡೆಗೊತ್ತಿ ಗಲ್ಲ ಹಿರಿದು ಉಸುರಿದ ಬೆಚ್ಚನೆ ಮಾತುಗಳಿನ್ನೂ ಗುಣಗುಣಿಸುತ್ತಿವೆ ಗೆಳೆಯಾ… ಏನು ಮಾಡಲಿ. ನನ್ನೊಲವು ನಿನ್ನ ಕಡೆಗಿದೆಯೆಂದು ಹೇಳಲು ನಿಂತಾಗಲೆಲ್ಲಾ ಕಾಲಿನಡಿಯ ಕಸವೂ ಪತರಗುಡುತ್ತಿತ್ತು.. ನಿತ್ರಾಣ ಎದುರಾಗುತ್ತಿತ್ತು. ನೀನಂದುಕೊಂಡದ್ದೆಲ್ಲ ನಡೆಯಬಾರದೆಂದು ನಾನಂದು ಕೊಂಡಿರಲಿಲ್ಲ. ತುಟಿಯಂಚಿನಿಂದ ಹೊರಟ ಮಾತುಗಳಿಗೆ ನಾನ್ಯಾವತ್ತೂ ಬೆರಳಿಟ್ಟವಳಲ್ಲ. ಈಗ ಎಲ್ಲವೂ ಕಣ್ಣೆದುರುಗಿಗೆ ಬರುತ್ತಿದೆ. ಕಾಲ ಮೀರಿ ಹೋಗಿದೆ. ನಡಿಗೆಯ ನೋಡುವವರಿಲ್ಲ, ಮುನಿಸಿಗೆ ಸ್ಪಂದಿಸುವವರಿಲ್ಲ.. ನಾನೇ ಎಲ್ಲ..
ನಾವಂದು ಹೋಗಿದ್ದ ಪಿಕ್‌ನಿಕ್ ದಿನ ಮಾತೇ ಆಡದೆ ಮಡಿಲಲ್ಲಿ ಮಲಗಿದ್ದ ನಿನ್ನ ನೆನಪಾಗುತ್ತಿದೆ ಕಣೋ.. ಮನೆಯಲ್ಲಿ ಸುಳ್ಳು ಹೇಳಿ ತಂಗಿ ಕೈಲಿ ಬೈಸಿಕೊಂಡದ್ದು ಊಹುಂ ಮರೆಯಲಾಗದು.. ಮೊನ್ನೆ ಅವನ ಜತೆ ಮರಳುಗಾಡಿನಲ್ಲಿ ಜೋಡಿಯೊಂದನ್ನು ಕಂಡು ನಿನ್ನದೂ ನೆನಪಾಯಿತು. ಛೆ.. ಹಾಳು ಎಂದುಕೊಂಡೆ.. ಆತ ಪಕ್ಕದಲ್ಲೇ ಇದ್ದ, ಸಾಕ್ಷಿಗೆ ಕರುಳ ಬಳ್ಳಿ ಬೇರೆ… ನಾನು ಪಾಪಿ ಎಂದುಕೊಂಡೆ.
ಅದು ನನ್ನದೆಂದು ಮೊದ ಮೊದಲಿಗೆ ಅನ್ನಿಸುತ್ತಲೇ ಇರಲಿಲ್ಲ. ಈಗೀಗ ನಿನ್ನನ್ನು ಆ ಮಗುವಿನಲ್ಲೇ ಕಾಣುತ್ತಿದ್ದೇನೆ. ಮನಸ್ಸು ಮೃದುವಾಗುತ್ತಿದೆ.. ಹಾಳು ಪ್ರೀತಿ ಮರೆಯಲಾಗುತ್ತಿಲ್ಲ. ಯಾಕಾದರೂ ನನ್ನನ್ನು ಪ್ರೀತಿಸಿದೆಯೋ ಅನ್ನಿಸುತ್ತಿದೆ.. ನಿಜ ಹೇಳು ನೀನು ಸುಖವಾಗಿದ್ದೀಯಾ..
ಆ ದಿನ ಹತ್ತಿರ ಬರುತ್ತಿದ್ದಂತೆ ನೀ ಕೊಟ್ಟ ಶುಭಾಶಯ ಪತ್ರಗಳನ್ನಿಟ್ಟಿದ್ದ ಪುಸ್ತಕವನ್ನು ಬಿಡಿಸದೆ ಬೆಂಕಿಗೆ ಹಾಕಿದವಳು ನಾನು.. ಇದೀಗ ಬೇಯುತ್ತಿದ್ದೇನೆ. ಮುರಿದ ಮನಸುಗಳ ನಡುವೆ ರಾತ್ರಿಗಳನ್ನು ಬೋರಲಾಗಿ ಕಳೆಯುತ್ತಿದ್ದೇನೆ. ನನಗಿದು ಹೊಸತಲ್ಲ.. ನಿನಗೂ ಮರೆತಿರಲಿಕ್ಕಿಲ್ಲ. ಮಧ್ಯರಾತ್ರಿಯಲ್ಲೂ ನಾವಾಡಿದ ಮಾತುಗಳನ್ನು ಗೋಡೆಗಳೂ ಕೇಳಿಸಿಕೊಂಡಿವೆ ಗೆಳೆಯ.. ಬೆಳಿಗ್ಗೆಯಿಂದ ಸಂಜೆಯವರೆಗೂ ಒಟ್ಟಿಗಿದ್ದರೂ ಮಾತುಗಳಿಗೆ ಬರವಿರದ ದಿನಗಳವು.. ಅವಳ ಸಂಗಡ ಮಾತು ಹೆಚ್ಚಿದಾಗ ಕೋಪ ಮಾಡಿಕೊಂಡವಳು ನಾನು. ಪಾಪಿ.. ಅವಳ ದಾರಿಗೂ ಅಡ್ಡ ಬಂದೆ..! ಹೊಸ ಚೂಡಿಯ ಗುರುತು ಹಿಡಿಯದ ನಿನ್ನ ಮೇಲೆ ಕೋಪಿಸಿಕೊಂಡಿದ್ದೆ… ಆಗ ಬಡವಿ… ಹೃದಯ ಶ್ರೀಮಂತೆ. ಈಗ ಬಡವಿಯಲ್ಲ. ಬಣ್ಣದ ಸೀರೆಗಳಿವೆ, ಹೊಂದುವ ಮನಸ್ಸುಗಳಿಲ್ಲ. ಅಂದು ನನ್ನ ಪಕ್ಕ ನೀನಿರದಿದ್ದರೆ ಕಳೆದು ಹೊಗುತ್ತೀಯ ಎಂದು ಭಯವಾಗುತ್ತಿತ್ತು. ಅಂಥಾ ಭಯ ಈಗ ನನಗಿಲ್ಲ. ಕಳೆದುಕೊಳ್ಳಲು ಏನೂ ಉಳಿದಿಲ್ಲ. ಜೀವದಲ್ಲಿ ಅಂದಿನ ಸೆಳೆಯಿಲ್ಲ.. ಬೇಕೆಂದು ಅನಿಸುತ್ತಲೂ ಇಲ್ಲ.. ನನ್ನನ್ನೇ ಹುಡುಕುತ್ತಿದ್ದೇನೆ, ಮುಗಿದು ಹೋದ ದಾರಿಯಲ್ಲಿ. ಕತ್ತಲಾಗಿದೆ ಗೆಳೆಯ. ಕೈ ಹಿಡಿದು ನಡೆಸುವವರು ಮುಂದೆ ಹೋಗಿದ್ದಾರೆ. ಹಿಂದೆ ಹೋಗುವಷ್ಟು ಧೈರ್ಯ ನನಗಿಲ್ಲ..
ಹಗಲು ರಾತ್ರಿಯೆಲ್ಲಾ ನಾನು ಕೊರಡಾಗಿದ್ದೇನೆ. ಆತನ ಆಕ್ರಮಣಗಳಿಗೆ ಸ್ಪಂದಿಸಲು ನನಗಾಗುತ್ತಿಲ್ಲ. ಕಣ್ಣುಗಳು ಬತ್ತಿ ಹೋಗಿವೆ.. ನಿನ್ನನ್ನು ದೂರಲಾರೆ. ಹಳಸಲು ನಾನು.. ಮಾತು ಕೇಳದೆ ಹಂಚಿ ಹರುಕಾಗಿದ್ದೇನೆ.. ಹೊಸತನದ ಕನಸು ಹುಟ್ಟಿಸುವವರು ಕಾಣೆಯಾಗಿದ್ದಾರೆ. ಬಚ್ಚಿಟ್ಟದ್ದೆಲ್ಲ ರಹಸ್ಯಗಳಲ್ಲ, ಮುಚ್ಚಿಡುವುದಕ್ಕೇನೂ ಇನ್ನು ಉಳಿದಿಲ್ಲ. ಉಳಿಗಾಲವಿಲ್ಲ ನನಗೆ. ಎಲ್ಲಿ ಹೋಗಲಿ, ಮುಂದಿನ ದಿನಗಳು ಮಾಯವಾಗಿಲ್ಲ.. ಗೊತ್ತು.. ಕೈಗೆಟಕುತ್ತಿಲ್ಲ !
ನನಗೆ ಪ್ರೀತಿಯೆಂಬುದು ಈಗೀಗ ಮರೆತೇ ಹೋಗಿದೆ. ಬರೇ ನೀನು ಮಾತ್ರ ನೆನಪಾಗುತ್ತೀಯ… ನೀನಾಡಿದ್ದ ಮಾತುಗಳಿಂದು ಎಲ್ಲವೂ ಮುಗಿದು ಹೋದ ಮೇಲೆ ನೆನಪಾಗುತ್ತಿವೆ. ಕಾಡಿ ಬೇಡಿ ಪಡೆದಿದ್ದ ಪ್ರೀತಿಯನ್ನು ಹಂಚಿ ಹರುಕು ಮಾಡಿಬಿಟ್ಟೆ ಗೆಳೆಯಾ.. ನನ್ನನ್ನು ಸಾಧ್ಯವಾದರೆ ಕ್ಷಮಿಸು.. ಮರೆತು ಹೋಗುವ ಜಾಯಮಾನ ನಿನ್ನದಲ್ಲವೆಂದು ನನಗ್ಗೊತ್ತು. ಮತ್ತೆ ಮುಂದಿನ ವರ್ಷ ಹೊಸ ರೂಪದಲ್ಲಿ ಬರುತ್ತೇನೆ. ಕಾಡದಿರಲು ನನ್ನಿಂದ ಸಾಧ್ಯವಿಲ್ಲ..
ಇಂತೀ ನಿನ್ನ ಪ್ರೀತಿಯ…
-ಭುವನಾ