ಪ್ರೀತಿಯ ಹೂಗಳು…

Archive for the ‘ಸಾಂದರ್ಭಿಕ’ Category

ಗುಬ್ಬಚ್ಚಿಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಕುತೂಹಲಕ್ಕೆ ಕಾರಣವಾದ ಪಕ್ಷಿಯದು. ಇಷ್ಟ ಬಂದಲ್ಲಿ ಕೂತು ಕಲರವ ಎಬ್ಬಿಸಿ ಪುಟಪುಟನೆ ಜಿಗಿದು, ಅತ್ತಿಂದಿತ್ತ ಹಾರುತ್ತ ಕಣ್ಣುಗಳಿಗೆ ವ್ಯಾಯಾಮ ಕೊಡುವ, ಸೋಮಾರಿ ಮಾನವನಿಗೆ ಬದುಕನ್ನು ಕಲಿಸಿಕೊಡುವ ಹಿಡಿಗಾತ್ರದ ಚಿಲಿಪಿಲಿ ಜೀವಗಳು ಇಂದು ತೀರಾ ಅಪರೂಪವಾಗುತ್ತಿವೆ. ಅದನ್ನು ವಿಶ್ವ ಗುಬ್ಬಚ್ಚಿಗಳ ದಿನವಾದ ಇಂದಾದರೂ (ಮಾರ್ಚ್ 20) ನೆನೆಯೋಣ.

ಮೊದಲೆಲ್ಲ ಬಸ್ಸು-ರೈಲು ನಿಲ್ದಾಣಗಳ ಚಾವಣಿಗಳಡಿಯಲ್ಲಿ, ಅಂಗಡಿಗಳ ಶಟರು ಬಾಗಿಲಿನ ಮೇಲುಗಡೆಯಲ್ಲಿ, ತಾರಸಿ ಕಟ್ಟಡಗಳಲ್ಲಿ ಉಳಿದು ಹೋದ ಜಾಗಗಳಲ್ಲಿ, ಒಡೆದು ಹೋದ ಗೋಡೆಯ ಬಿರುಕಿನಲ್ಲಿ, ಹೆಂಚಿನ ಮನೆಗಳ ಪಕ್ಕಾಸುಗಳಲ್ಲಿ — ಹೀಗೆ ಮನುಷ್ಯನಿಗೆ ಬಳಕೆಯಾಗದ ಸ್ಥಳಗಳು ಗುಬ್ಬಿಗಳಿಗೆ ಮನೆಯಾಗುತ್ತಿದ್ದವು. ಅಲ್ಲೆಲ್ಲ ಅದರ ಕಿಚಿಕಿಚಿ ಕೇಳಿ ಬರುತ್ತಿತ್ತು. ಆದರೆ ಮಾನವನ ಆಧುನಿಕತೆಯ ಲೋಲುಪತೆಗೆ ನಿರುಪದ್ರವಿಗಳ ಸಾಲಿನ ಮೊದಲನೇ ಹಕ್ಕಿ ಪರೋಕ್ಷವಾಗಿ ಬಲಿಯಾಗಿದೆ, ಆಗುತ್ತಿದೆ. ನಮ್ಮ ಕಣ್ಣುಗಳಿಂದ ಆ ಪಕ್ಷಿಯೀಗ ವೇಗವಾಗಿ ಕಣ್ಮರೆಯಾಗುತ್ತಿದೆ.

ಪ್ರಸಕ್ತ ತೀರಾ ಅಪರೂಪವಾಗಿರುವುದು ನಗರ ಪ್ರದೇಶಗಳಲ್ಲಿ. ಅದು ಎಷ್ಟರ ಮಟ್ಟಿಗೆ ಕಡಿಮೆಯಾಗಿದೆಯೆಂದರೆ, ಇಡೀ ದಿನ ತಿರುಗಿದರೂ ಹತ್ತಕ್ಕಿಂತ ಹೆಚ್ಚು ಗುಬ್ಬಿಗಳನ್ನು ಹುಡುಕಲು ಅಸಾಧ್ಯವೆನ್ನುವಷ್ಟು. ಹಾಗೆಂದು ಹಳ್ಳಿ ಪ್ರದೇಶಗಳಲ್ಲಿ ಹೆಚ್ಚಿವೆ ಎಂದರೆ ತಪ್ಪಾದೀತು. ಹಳ್ಳಿಗಳು ಕೂಡ ಇಂದು ಹಳ್ಳಿಗಳಾಗಿ ಉಳಿದಿಲ್ಲವಾದ್ದರಿಂದ, ಗುಬ್ಬಿಗಳಿಗೆ ಸಂಚಕಾರ ತಪ್ಪಿಲ್ಲ.

ಮೊದಲೆಲ್ಲ ಸೂರ್ಯನ ಕಿರಣಗಳು ಕಿಟಕಿ ಬಾಗಿಲಿನ ಮೂಲಕ ಮನೆಯೊಳಗೆ ಇಣುಕುವಾಗ ಅದರ ಜತೆಯಲ್ಲಿ ಗುಬ್ಬಿಗಳು ಕೂಡ ಮನೆಯೊಳಗೆ ಬರುತ್ತಿದ್ದವು. ಇದ್ದ-ಬದ್ದ ಅಕ್ಕಿ-ಕಾಳುಗಳನ್ನು ಹೆಕ್ಕುತ್ತಿದ್ದವು. ಊಟ ಮಾಡಿ ಪಾತ್ರೆ ತೊಳೆದಾಗ ಉಳಿದ ಆಹಾರವನ್ನು ಕೂಡ ನೆಚ್ಚುತ್ತಿದ್ದವು. ಎಲ್ಲೋ ಇದ್ದ ಹುಳ-ಹುಪ್ಪಟಿಗಳನ್ನು ಚೆಂಗನೆ ಜಿಗಿದು ತನ್ನ ಮುದ್ದಾದ ಕೊಕ್ಕಿನಲ್ಲಿ ಕುಕ್ಕಿ ತಿನ್ನುತ್ತಿದ್ದವು. ಹೇಗೋ ಹೊಟ್ಟೆ ಹೊರೆಯುತ್ತಿದ್ದವು.

ಮನೆಯೊಳಗೆ, ಮಕ್ಕಳ ಜತೆ ಕಣ್ಣಾಮುಚ್ಚಾಲೆಯಾಡುವಂತೆ ಬಂದು-ಹೋಗುತ್ತಿದ್ದವು. ಮುಟ್ಟಬೇಕೆನ್ನುವಾಗ ಪುರ್ರನೆ ಹಾರಿ ಕಿಟಕಿಯ ರಾಡುಗಳಲ್ಲಿ ಕೂರುತ್ತಿದ್ದವು. ಅಲ್ಲಿಗೂ ಚಿಣ್ಣರು ದಾಂಗುಡಿಯಿಟ್ಟಾಗ ಹೆಚ್ಚೇನೂ ಹೆದರದೆ ಅದಕ್ಕಿಂತ ಮೇಲಿನ ಜಾಗವನ್ನಷ್ಟೇ ಹುಡುಕುತ್ತಿದ್ದವು. ಕಿಚ್‌ಕಿಚ್ ಎನ್ನುತ್ತಾ ಮತ್ತೆ ಬರುತ್ತಿದ್ದವು. ಈಗಿನ ಮಕ್ಕಳಿಗೆ ಗುಬ್ಬಿಯೆಂದರೆ ಟ್ವಿಟ್ಟರ್ ಸಿಂಬಲ್‌ಗಿಂತ ಹೆಚ್ಚೇನೂ ಆಗಿರಲಾರದು.

ವಾಸ್ತವದಲ್ಲಿ ಗುಬ್ಬಚ್ಚಿ ದಟ್ಟ ಕಾಡಿನಲ್ಲಿ ಅಥವಾ ಮಾನವ ರಹಿತ ಪ್ರದೇಶಗಳಲ್ಲಿ ವಾಸಿಸುವ ಪಕ್ಷಿಯೇ ಅಲ್ಲ. ಕಂದು ಬಣ್ಣದಿಂದ ಕಂಗೊಳಿಸುವ, ಅಲ್ಲಲ್ಲಿ ಬಿಳಿ ಮತ್ತು ಕಪ್ಪು ಮಿಶ್ರಿತ ಬಣ್ಣಗಳನ್ನು ಹೊಂದಿರುವ ಸಂಘಜೀವಿ. ಅದಕ್ಕೆ ಜನನಿಬಿಡತೆ ಯಾವತ್ತೂ ತೊಂದರೆ ಅನ್ನಿಸಿದ್ದೂ ಇಲ್ಲ. ಜನರ ನಡುವೆಯಿದ್ದರೂ ತನ್ನ ಬದುಕು ಬೇರೆಯೇ ಎಂಬಂತೆ ಬದುಕುತ್ತಿದ್ದ ಚೆಂದನೆಯ ಹಕ್ಕಿಯದು.

ಕಾಗೆ-ನವಿಲು ಕೊಡುವ ರೀತಿಯ ತೊಂದರೆಗಳ ಕಿರಿಕಿರಿಯೂ ಅವುಗಳ ಮೇಲಿಲ್ಲ. ಆದರೂ ಅವುಗಳ ನಿರ್ಗಮನಕ್ಕೆ ಮಾನವನೇ ಪ್ರಮುಖ ಕಾರಣ. ಅವುಗಳನ್ನು ನಾವು ಓಡಿಸಿಲ್ಲವಾದರೂ, ಅವುಗಳು ಓಡಿ ಹೋಗಿರುವುದರಲ್ಲಿ ನಮ್ಮ ಪಾಲೇ ಗರಿಷ್ಠ. ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಸುತ್ತ ಹಾರುವುದಕ್ಕಿಂತ ಹೆಚ್ಚಾಗಿ ಜಿಗಿಯುತ್ತಿದ್ದ ಹಕ್ಕಿಯೀಗ ಕಣ್ಮರೆಯಾಗಿದೆ. ಪಕ್ಷಿಪ್ರಿಯರಿಗೆ ನಿರಾಸೆಯಾಗಿದೆ.

ಗುಬ್ಬಿಗಳ ಕಣ್ಮರೆಗೆ ಕಾರಣಗಳೇನು?
ಗುಬ್ಬಚ್ಚಿಗಳು ನಗರ ಪ್ರದೇಶವನ್ನು ತ್ವರಿತ ಗತಿಯಲ್ಲಿ ತೊರೆದು ಪಟ್ಟಣಗಳನ್ನು, ಹಳ್ಳಿಗಳನ್ನು ಸೇರಿಕೊಳ್ಳುತ್ತಿವೆ. ನಗರಗಳಲ್ಲಿನ ಹಲವು ಅಂಶಗಳು ಗುಬ್ಬಿಗಳಿಗೆ ಮಾರಕವಾಗುತ್ತಿರುವುದೇ ಈ ಸಾಮೂಹಿಕ ವಲಸೆಗೆ ಕಾರಣ ಎಂದು ಹೇಳಲಾಗುತ್ತಿದೆ. ಅವುಗಳೇನೆಂದು ನೋಡೋಣ.

* ಮೊಬೈಲ್ ಟವರುಗಳ ಪ್ರಬಲ ತರಂಗಾಂತರಗಳು.
* ಕ್ರಿಮಿ-ಕೀಟಗಳ ನಾಶಕ್ಕೆ ಕೀಟನಾಶಕ ಬಳಕೆ.
* ಕಟ್ಟಡಗಳ ನೂತನ ವಿನ್ಯಾಸಗಳಿಗೆ ಹೊಂದಿಕೊಳ್ಳಲು ಅಸಾಧ್ಯವಾಗಿರುವುದು.
* ಕಟ್ಟಡಗಳಲ್ಲಿ ಗಾಜುಗಳನ್ನು ಹೆಚ್ಚು ಬಳಕೆ ಮಾಡುತ್ತಿರುವುದು.
* ಮನೆ-ಅಡುಗೆ ಮನೆಗಳಲ್ಲಿ ಆಗಿರುವ ಬದಲಾವಣೆ, ಶುಚಿತ್ವ ಹೆಚ್ಚಿರುವುದು.
* ಪರಿಸರ ನಾಶ, ನಗರಗಳಲ್ಲಿ ಇದ್ದ ಮರ-ಗಿಡಗಳು ಕೂಡ ಮರೆಯಾಗುತ್ತಿರುವುದು.
* ಗೂಡು ಕಟ್ಟಲು ಬೇಕಾದ ಸರಕುಗಳು ಸಿಗದೇ ಇರುವುದು.
* ಕಾಮೋದ್ರೇಕ ಔಷಧಿ ಹೆಸರಿನಲ್ಲಿ ಕೊಲ್ಲುತ್ತಿರುವುದು.

ಗುಬ್ಬಿಗಳನ್ನು ಉಳಿಸೋದು ಹೇಗೆ?
ನಗರವನ್ನು ಈಗಾಗಲೇ ತೊರೆದಿರುವ ಗುಬ್ಬಚ್ಚಿಗಳನ್ನು ಮರಳಿ ಕರೆಸುವುದು ಸುಲಭದ ಮಾತಲ್ಲ. ಆದರೂ ಸತತ ಶ್ರಮ ವಹಿಸಿದರೆ ನಿಧಾನವಾಗಿ ಅವುಗಳನ್ನು ಮರಳಿಸಬಹುದು. ಅದಕ್ಕೆ ಮಾಡಬೇಕಾಗಿರುವ ಪ್ರಮುಖ ಕೆಲಸವೆಂದರೆ ಮಾನವ ಬದಲಾಗುವುದು, ಗುಬ್ಬಿಗೆ ಬೇಕಾದ ವಾತಾವರಣವನ್ನು ಸೃಷ್ಟಿಸುವುದು. ಅವುಗಳೇನೆಂದು ಸಂಕ್ಷಿಪ್ತವಾಗಿ ನೋಡೋಣ.

* ಗುಬ್ಬಚ್ಚಿ ಗೂಡುಗಳನ್ನು ಮನೆಗಳಲ್ಲಿ, ಮನೆಯೆದುರಿನ ಮರಗಳಲ್ಲಿ ತೂಗು ಹಾಕುವುದು.
* ಮನೆಯ ಎದುರು ಅಥವಾ ತಾರಸಿ ಮೇಲೆ ತೊಟ್ಟಿಯಲ್ಲಿ ನೀರಿಡುವುದು. ಹಾಗೆ ಮಾಡಿದಲ್ಲಿ ಗುಬ್ಬಿಗಳು ಕುಡಿಯಲು ಮತ್ತು ಸ್ನಾನ ಮಾಡಲು ಈ ನೀರನ್ನು ಬಳಸುತ್ತವೆ.
* ಸಣ್ಣ ಪ್ರಮಾಣದಲ್ಲಿ ಸಣ್ಣ ಗಾತ್ರಕ್ಕೆ ಪುಡಿಗೈಯಲ್ಪಟ್ಟ ಅಕ್ಕಿ-ಕಾಳುಗಳನ್ನು ಪ್ಲೇಟುಗಳಲ್ಲಿ ಇಡುವುದು.
* ಮನೆಯೆದುರು ಗಿಡ-ಮರಗಳನ್ನು ಬೆಳೆಸುವುದು.
* ನಗರಗಳಲ್ಲಿ ಅಲ್ಲಲ್ಲಿ ಪಾರ್ಕುಗಳನ್ನು ನಿರ್ಮಿಸುವುದು.

ನಾವು ಮಕ್ಕಳಾಗಿದ್ದಾಗ, ಮನ ನೊಂದ ಸಂದರ್ಭದಲ್ಲಿ, ಮನೆಯೆದುರಿನ ಅಂಗಳದಲ್ಲಿ ಗುಬ್ಬಚ್ಚಿಯ ಆಟವನ್ನು ನೋಡಿ ದುಃಖವನ್ನೆಲ್ಲಾ ಮರೆಯುತ್ತಿದ್ದೆವಲ್ಲ? ಅಳುವ ಮಗುವಿಗೆ ಗುಬ್ಬಚ್ಚಿಯನ್ನು ತೋರಿಸಿ ಅದೆಷ್ಟು ಅಮ್ಮಂದಿರು ಮಕ್ಕಳನ್ನು ಸಂತೈಸಿಲ್ಲ? ಇಂತಹಾ ಗುಬ್ಬಚ್ಚಿ ಅಥವಾ ಗುಬ್ಬಿಯ ಹೆಸರಲ್ಲಿ ಅಂತಾರಾಷ್ಟ್ರೀಯ ದಿನವೇ ಇರುವುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಈ ದಿನವಾದರೂ ಗುಬ್ಬಚ್ಚಿಗಳ ಉಳಿವಿನ ಬಗೆಗೆ ಚಿಂತಿಸೋಣ.

(ಈ ಲೇಖನ ವೆಬ್‌ದುನಿಯಾದಲ್ಲಿ ಪ್ರಕಟವಾಗಿದೆ)