Archive for the ‘ವಿಜಯ ಕರ್ನಾಟಕ’ Category
ಆ ಒಂದು ಕ್ಷಣ ಇಲ್ಲದೇ ಇರುತ್ತಿದ್ದರೆ…
Posted March 20, 2012
on:ಜೀವನ ಯಾರೋ ಬರೆದ ಗ್ರಂಥವಲ್ಲ, ಒಪ್ಪ-ಓರಣವಾಗಿ ಜೋಡಿಸಿಟ್ಟ ಲೈಬ್ರೆರಿಯೂ ಅಲ್ಲ. ಯಾವ ಕ್ಷಣದಲ್ಲಿ, ಏನು ಬೇಕಾದರೂ ನಡೆಯಬಹುದು, ನಡೆಯದೇ ಇರಲೂ ಬಹುದು. ನಡೆದರೆ ಅನುಭವ, ನಡೆಯದಿದ್ದರೆ ನಿರ್ವಿಕಾರ.
ಬರೀ ಅದರಿಂದಾಗಿ ಹೀಗೆಲ್ಲಾ ನಡೆಯಿತು. ಆ ಒಂದು ಕ್ಷಣ ನನ್ನ ಬದುಕಲ್ಲಿ ಬರದೇ ಹೋಗಿದ್ದಿದ್ದರೆ..? ಹೀಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ಸಲ ಯೋಚನೆ ಮಾಡಿಯೇ ಇರುತ್ತೀರಿ. ಅಂತಹದ್ದೊಂದು ಆಕಸ್ಮಿಕ, ಆಘಾತಕಾರಿ ಕ್ಷಣ ನಿಮ್ಮನ್ನೂ ಬಾಧಿಸಿರುತ್ತದೆ.
ನಿಮ್ಮ ಪಾಲಿಗೆ ಅದೊಂದು ಕೆಟ್ಟ ಕ್ಷಣ. ಯಾರ ಮೇಲೂ ಆರೋಪ ಹೊರಿಸಲಾಗದ ಸ್ವಯಂಕತಾಪರಾಧಗಳ ಎಫ್‌ಐಆರ್. ಯಾರ ಮೇಲಾದರೂ ಆರೋಪ ಹೊರಿಸೋಣವೆಂದರೆ ಕಣ್ಣೆದುರು ನಿಮ್ಮದೇ ಚಿತ್ರ ಬಂದು ಬಿಡುತ್ತದೆ. ಬೇರೆ ಯಾರೂ ಮಾಡಿರದ ತಪ್ಪಿಗಾಗಿ ನಿಮ್ಮನ್ನೇ ನೀವು ಶಪಿಸಬೇಕಾಗುತ್ತದೆ.
ಯಾಕೆ ಹೀಗೆ? ಇದಕ್ಕೆಲ್ಲ ಏನು ಕಾರಣ? ಅಂತಹದ್ದೊಂದು ನಮ್ಮದಲ್ಲದ ಅನಿರೀಕ್ಷಿತ ಕ್ಷಣ ಬದುಕಿನ ಬಂಡಿಯನ್ನು ಹೀಗೆ ಅಲುಗಾಡಿಸಿದ್ದಾದರೂ ಏತಕ್ಕೆ? ಅದೊಂದು ಕ್ಷಣ ಬರದೇ ಇದ್ದಿದ್ದರೆ, ಆ ಆಕಸ್ಮಿಕವೊಂದು ನಡೆಯದೇ ಇರುತ್ತಿದ್ದರೆ ಇಂದು ಎಷ್ಟು ಚೆನ್ನಾಗಿರುತ್ತಿತ್ತು, ಅಲ್ವೇ? ಹೀಗೆ ಮಂಥಿಸುವಾಗ ಬಗೆಬಗೆಯಲ್ಲಿ ಕಾಡಲು ವಿಷಯಗಳು ಸಿಗುತ್ತವೆ.
ದಾಟಿ ಬಿಟ್ಟರೆ ಸೇಫ್…
ಇಲ್ಲಿ ನಿರ್ದಿಷ್ಟ ವಿಚಾರಗಳನ್ನೇ ಹೇಳಬೇಕಾಗಿಲ್ಲ. ಆದರೆ ಪ್ರತಿಯೊಬ್ಬರೂ ಯಾವುದೋ ಕಾರಣಕ್ಕಾಗಿ ಅನುಭವಿಸಿರುವ ಅಕಾಲಿಕ ವೇದನೆ. ಯಾಕೆ ಹೀಗಾಯ್ತು ಅನ್ನೋದನ್ನು ಯೋಚಿಸುತ್ತಾ ಎಲ್ಲವನ್ನೂ ಮರೆತವರಂತೆ, ಮತ್ತೆ ಮತ್ತೆ ಯೋಚಿಸಿದರೂ ನೆನಪೇ ಆಗದಂತಹ ಸ್ಥಿತಿ.
ಕೆಲವೊಮ್ಮೆ ಕೆಲವರ ಬದುಕಿನಲ್ಲಿ ಇಂತಹ ಆಕಸ್ಮಿಕಗಳೇ ದಿನಚರಿಯಾಗಿ ಬಿಡುತ್ತವೆ. ಆದರೆ ಅವೆಲ್ಲವೂ ಆ ಕ್ಷಣಗಳ ನಂತರದ ರೋದನ. ಅದೊಂದು ಕ್ಷಣದ ಮೊದಲು ಮೊಗ್ಗುಲಾಬಿಯಂತಿದ್ದ ಬದುಕು, ಮರು ಕ್ಷಣವೇ ಅದೇ ಗುಲಾಬಿಯ ಮುಳ್ಳುಗಳಲ್ಲಿ ಸಿಕ್ಕಿ ಹಾಕಿಕೊಂಡಿರುತ್ತದೆ. ಆ ಕ್ಷಣವನ್ನು ಹೇಗೋ ದಾಟಿ ಬಿಟ್ಟಿದ್ದರೆ ನೋವಿನ ಅರಿವೇ ಆಗುತ್ತಿರಲಿಲ್ಲ. ಎಲ್ಲವೂ ಅಷ್ಟು ಸುರಕ್ಷಿತವಾಗಿರುತ್ತಿತ್ತು.
ದುರಂತ ಅಂದ್ರೆ, ಆ ಕ್ಷಣಗಳು ಸುಳಿವೇ ನೀಡದೆ ಬಂದೆರಗುತ್ತವೆ ಅನ್ನೋದು. ಮಗ್ಗುಲಿಗೆ ಬಡಿದು ಯಾವುದೋ ಒಂದು ಭಾಗವನ್ನು ಕಿತ್ತು ತೆಗೆದ ನಂತರವಷ್ಟೇ ನಿಮಗೆ ಅದೇನು ಅನ್ನೋದು ಅರಿವಿಗೆ ಬಂದಿರುತ್ತದೆ. ನೀವಾಗ ಪೂರ್ತಿಯೆಂದರೆ ಪೂರ್ತಿ ಅಸಹಾಯಕರಾಗಿರುತ್ತೀರಿ. ಹಣೆಬರಹವನ್ನು ಹಳಿಯುವುದನ್ನು ಬಿಟ್ಟರೆ ಬೇರೆ ದಾರಿಗಳೂ ನಿಮಗೆ ಉಳಿದಿರುವುದಿಲ್ಲ. ಅದುವರೆಗೂ ಬಾಧಿಸದ ಅಭದ್ರತೆಯ ಭಾವನೆಗಳು, ಇದು ತಮ್ಮ ಸರದಿಯೆಂಬಂತೆ ಕಾಡಲಾರಂಭಿಸುತ್ತವೆ.
ಆತ್ಮೀಯರು ಬೇಕೆನ್ನುವಾಸೆ…
ಅಂತಹ ಕ್ಷಣಗಳನ್ನು ಏಕಾಂಗಿಯಾಗಿ ಅನುಭವಿಸುವುದು ಎಂದರೆ ಸಾವಿನಂಚಿನ ಅನಿರ್ವಚನೀಯ ನೋವಿಗಿಂತಲೂ ಮಿಗಿಲು. ಜಗತ್ತಿನ ತುಂಬೆಲ್ಲ ನನ್ನಷ್ಟು ನೋವುಂಡವರು ಇನ್ಯಾರೂ ಇಲ್ಲ ಎಂಬ ಭಾವನೆಯ ಜನನದ ಕಾಲಘಟ್ಟವೂ ಇದೇ.
ಆ ಸೂತಕದ ಹೊತ್ತಿನಲ್ಲಿ ನಿಮಗೊಬ್ಬ ಆತ್ಮೀಯರೆನಿಸಿಕೊಂಡವರು ನೆನಪಾದರೆ ಬಚಾವ್ ಆದಂತೆ. ಅವರ ನೇವರಿಕೆಯನ್ನು ನೀವು ಬಯಸಿದರೆ ಬದುಕನ್ನು ಗೆಲ್ಲಲು ಹೊರಟಿದ್ದೇನೆ ಎಂದು ಜಗತ್ತಿಗೆ ಸಾರಿಕೊಂಡಂತೆ. ನಿಜಕ್ಕೂ ಆ ವ್ಯಕ್ತಿ ಅಷ್ಟೊಂದು ಆತ್ಮೀಯನಾಗಿದ್ದರೆ ನಿಮ್ಮ ಮನದಲ್ಲಿ ಆವರಿಸಿದ್ದ ಕತ್ತಲೆ ಒಮ್ಮಿಂದೊಮ್ಮೆಲೆ ಸರಿಯಬಹುದು. ಅಷ್ಟಾಗದೇ ಇದ್ದರೂ ಕನಿಷ್ಠ ಬದುಕಿನ ಬಗ್ಗೆ ಒಂದಷ್ಟು ನಿರೀಕ್ಷೆಗಳು ಚಿಗಿತುಕೊಳ್ಳಬಹುದು.
ಮರೆಯಿರಿ, ಮುನ್ನಡೆಯಿರಿ…
ಅದು ಘಟಿಸಲೇಬೇಕಾಗಿತ್ತು, ಘಟಿಸಿದೆ ಎನ್ನುವುದು ಧನಾತ್ಮಕ. ಮುಂದೆ ಮತ್ತೆ ಹೀಗಾಗಬಹುದು ಅನ್ನೋದು ಋಣಾತ್ಮಕ. ಆದರೂ, ಎಚ್ಚರಿಕೆ ವಹಿಸುವುದು ಜಾಣತನ. ನಿಮ್ಮ ಎಚ್ಚರಿಕೆ ಘಟನೆಯನ್ನು ತಡೆಯುತ್ತದೆ ಎಂದೇ ಹೇಳಲಾಗದು. ಆದರೆ ಕನಿಷ್ಠ ನೀವು ಅನಿರೀಕ್ಷಿತತೆಗೆ ತೆರೆದುಕೊಳ್ಳುವುದರಿಂದ ಭಾರೀ ಮಾನಸಿಕ ಆಘಾತ ಅನುಭವಿಸುವುದು ಕಡಿಮೆಯಾಗಬಹುದು.
ತಪ್ಪು ನಿಮ್ಮಿಂದಲೇ ನಡೆದಿರಬಹುದು ಅಥವಾ ಬೇರೆ ಯಾರೇ ಮಾಡಿರಬಹುದು. ಆದರೆ ಅದಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಆ ಕ್ಷಣಗಳಿಗೆ ನಿಮ್ಮದೇ ಕಾರಣಗಳಿರುತ್ತವೆ. ಅದಕ್ಕಾಗಿ ಕೊರಗದಿರಿ, ವಾದವೂ ಬೇಡ; ನಿಮ್ಮಷ್ಟಕ್ಕೆ ನೀವೇ ಪ್ರಾಮಾಣಿಕವಾಗಿ ಒಪ್ಪಿಕೊಳ್ಳಿ. ಅದರ ಖುಷಿಯನ್ನು ಅನುಭವಿಸಿ. ಅದು ಸೋಲಲ್ಲ, ಗೆಲುವಿನ ಆರಂಭ. ಇನ್ನೊಂದು ಸೋಲನ್ನು ಸೋಲಿನ ನಿರೀಕ್ಷೆಯಿಂದಲೇ ಎದುರಿಸಿ ವಾಸ್ತವದಲ್ಲಿ ಗೆಲ್ಲುವ ತಯಾರಿ.
ಹೀಗೂ ಯೋಚಿಸಿ…
* ಘಟಿಸಿ ಹೋದ ಸಂಗತಿಗೆ ವಿಷಾದ ಯಾಕೆ? ಅದು ತಪ್ಪಿರಬಹುದು, ಸರಿಯೇ ಇರಬಹುದು. ಜೀವನದ ಪ್ರತಿ ಪುಟಗಳು ಮತ್ತು ಅನಿರೀಕ್ಷಿತ ತಿರುವುಗಳಿಂದಲೇ ವ್ಯಕ್ತಿಯ ವ್ಯಕ್ತಿತ್ವ ರೂಪುಗೊಂಡಿರುತ್ತದೆ.
* ಜೀವನ ಅನ್ನೋದು ಅನಿರೀಕ್ಷಿತ ತಿರುವುಗಳಿಂದಲೇ ತುಂಬಿರುತ್ತದೆ. ಆದರೆ ನಾವು ಎಲ್ಲಿರಬೇಕೋ, ಅದನ್ನು ತಡೆಯಲು ಆ ತಿರುವುಗಳಿಗೆ ಅವಕಾಶ ನೀಡಬೇಡಿ.
* ಜೀವನವನ್ನು ಪ್ರೀತಿಸುವಲ್ಲಿ ವಿಷಾದವೇ ಬೇಡ. ಗೊಂದಲಗಳಿವೆ ಅನ್ನೋವಾಗ ನಕ್ಕು ಬಿಡಿ. ಕಣ್ಣೀರಲ್ಲೂ ಸುಖವಿರಲಿ. ಆಗೋದೆಲ್ಲ ಒಳ್ಳೇದಕ್ಕೆ ಎಂಬುದನ್ನು ಆಗಾಗ ನೆನಪಿಸಿಕೊಳ್ಳಿ.
* ಎಲ್ಲಾ ಕಥೆಗಳಿಗೂ ಅಂತ್ಯ ಇದ್ದೇ ಇರುತ್ತದೆ. ಆದರೆ ಜೀವನದಲ್ಲಿ ಬರೋ ಪ್ರತಿ ಅಂತ್ಯ ಇನ್ನೊಂದು ಆರಂಭದ ಆರಂಭವಷ್ಟೇ.
* ತಪ್ಪುಗಳಿಂದಲೂ ಒಳ್ಳೆಯದಾಗಬಹುದು. ಯಾಕೆಂದರೆ ತಪ್ಪು ಅನ್ನೋದು ಯಾವತ್ತೂ ಅನಿರೀಕ್ಷಿತ ಸಂಗತಿಯಾಗಿರುತ್ತದೆ.
(ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ)
ಪಕ್ಕದ ಮನೆಯ ಸೌಮ್ಯಾ ಈ ಬಾರಿಯೂ ಡಿಸ್ಟಿಂಕ್ಷನ್. ಆಕೆಯ ತಮ್ಮ ಫಸ್ಟ್ ಕ್ಲಾಸು. ನಾನು ಮೊದಲೇ ವೀಕು. ಈ ಬಾರಿ ಪರೀಕ್ಷೆಯಲ್ಲಿ ಎಲ್ಲಾದರೂ ಪಾಸ್ ಆಗದೇ ಇದ್ದರೆ? ಇಲ್ಲ, ಪಾಸ್ ಆಗಲೇಬೇಕು. ಇಲ್ಲದೇ ಇದ್ದರೆ ಓರಗೆಯವರಿಗೆ ಮುಖ ತೋರಿಸಲು ಸಾಧ್ಯವಿಲ್ಲ. ಮನೆಯಲ್ಲಿ ಅಪ್ಪ ಬೈತಾರೆ. ಅಮ್ಮನೂ ಸುಮ್ಮನಿರುವುದಿಲ್ಲ. ನನ್ನದೇ ತರಗತಿಯವರು ಗೇಲಿ ಮಾಡಬಹುದು. ಇಲ್ಲ, ಆ ಅವಮಾನವನ್ನು ಎದುರಿಸಲಾರೆ. ಫೇಲಾದರೆ ನನ್ನ ಜೀವನವೇ ಮುಗಿದು ಹೋದಂತೆ.
ಇಂತಹ ಯೋಚನೆಯೇ? ಪರೀಕ್ಷೆಯಲ್ಲಿ ಫೇಲಾಗುತ್ತೀರಿ ಅನ್ನೋ ಭಯವೇ? ಬಿಡಿ, ನೀವು ಒಂದು ವೇಳೆ ಫೇಲಾದ್ರೂ ಅದು ಜಸ್ಟ್ ಪರೀಕ್ಷೆ ತಾನೇ? ಅದಕ್ಕೆ ಯಾಕೆ ಅಷ್ಟೊಂದು ಚಿಂತೆ ಮಾಡ್ತೀರಾ? ಒಂದು ಪರೀಕ್ಷೆಯಲ್ಲಿ ಆಗದಿದ್ರೆ ಇನ್ನೊಂದು. ಇನ್ನೊಮ್ಮೆ ಬರೀತಿನಿ, ಪಾಸ್ ಆಗೇ ಆಗ್ತೀನಿ ಅಂದ್ಕೊಳ್ಳಿ. ನೆನಪಿಡಿ, ಯಾವತ್ತೂ ಇಷ್ಟಕ್ಕೇ ಜೀವನ ಮುಗಿದು ಹೋಯ್ತು ಅನ್ನೋ ನಿರ್ಧಾರಕ್ಕೆ ಬರಬೇಡಿ.
ಜೀವನದ ಪರೀಕ್ಷೆ ದೊಡ್ಡದು…
ಒಂದು ವೇಳೆ ನೀವು ಪರೀಕ್ಷೆಯಲ್ಲಿ ಫೇಲಾದರೆ, ಅದು ನಿಮ್ಮ ವೈಫಲ್ಯ ಎಂದು ಯಾಕೆ ಅಂದುಕೊಳ್ಳುತ್ತೀರಿ. ಅದು ನಿಮ್ಮ ಪಾಲಕರು, ಶಿಕ್ಷಕರು ಮತ್ತು ಈ ಸಮಾಜದ ವೈಫಲ್ಯವೂ ಆಗಿರಬಹುದಲ್ಲವೇ? ಅಷ್ಟಕ್ಕೂ ನಿಮ್ಮ ಸೋಲು ಇನ್ನೂ ಆರಂಭವೇ ಆಗಿರುವುದಿಲ್ಲ. ಅದಕ್ಕೂ ಮೊದಲಿನ ತಯಾರಿಲ್ಲಷ್ಟೇ ನೀವಿರುತ್ತೀರಿ. ನೀವಿನ್ನೂ ಸ್ಪರ್ಧೆಯತ್ತ ಮುನ್ನುಗ್ಗುತ್ತಿರುತ್ತೀರಿ. ಆಗಲೇ ಸೋಲೊಪ್ಪಿಕೊಳ್ಳುವುದು ಹೇಗೆ ?
ಫಲಿತಾಂಶವೆಂಬ ಒಂದು ಚಿಕ್ಕ ಪದ, ಮೂರು ಗಂಟೆಗಳ ಕಾಲ ಬರೆಯುವ ಚಿಕ್ಕದೊಂದು ಪರೀಕ್ಷೆ ಇದಿಷ್ಟೇ ಜೀವನವೇ? ಅದಕ್ಕಾಗಿ ಜೀವ ಬಲಿ ಕೊಡೋ ನಿರ್ಧಾರ ಯಾಕೆ? ಹಾಗೆ ಮಾಡಿದರೆ ಮುಂದೆ ಇರೋ ಜೀವನದ ಪರೀಕ್ಷೆಯೇ ನಿಮ್ಮಿಂದ ಮಿಸ್ ಆಗುತ್ತೆ. ಪರೀಕ್ಷೆ ನೆಪದಲ್ಲಿ ಅದನ್ಯಾಕೆ ಮಿಸ್ ಮಾಡಿಕೊಳ್ಳುತ್ತೀರಿ? ಸಾಯುವ ದಾರಿ ನಿಮ್ಮದಲ್ಲ, ನಿಮ್ಮದು ಕಾಯುವ ದಾರಿ. ಮುಂದೆ ಏನೇನೋ ಮಾಡುವ ಸಾಮರ್ಥ್ಯ ನಿಮ್ಮಲ್ಲಿದೆ. ಬರೀ ಪರೀಕ್ಷೆಯೇ ಎಲ್ಲವೂ ಅಲ್ಲ.
ಮರಳಿ ಯತ್ನಿಸಿ…
ಈ ಜಗತ್ತಿನಲ್ಲಿ ಒಂದೇ ಸಲಕ್ಕೆ ಯಾರೂ ಯಶಸ್ಸಿನ ಶಿಖರವನ್ನೇರಿಲ್ಲ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ವಿಜ್ಞಾನಿಯಾಗಿದ್ದೇ ಮನೆ ಮನೆಗೆ ಪೇಪರ್ ಹಾಕಿದ ನಂತರ. ವಾಜಪೇಯಿ, ಧೀರೂಬಾಯಿ ಅಂಬಾನಿ ಕೂಡ ಇದೇ ಹಾದಿಯಲ್ಲಿ ಸಾಗಿ ಗೆದ್ದವರು. ಇವರು ಯಾರೂ ರಾತೋರಾತ್ರಿ ಸಾಧನೆ ಮಾಡಿದವರಲ್ಲ. ಅದೆಷ್ಟೋ ಬಾರಿ ಸೋತವರು, ಅವಮಾನ ಅನುಭವಿಸಿದವರು. ಆದರೂ ಛಲ ಬಿಟ್ಟಿರಲಿಲ್ಲ. ಅವರ ಗುರಿ ಸ್ಪಷ್ಟವಾಗಿತ್ತು.
ಫೇಲಾಗಿದ್ದಕ್ಕೆ ನಿಮ್ಮ ಸ್ನೇಹಿತರು ಅಥವಾ ಬೇರೆ ಇನ್ಯಾರಾದ್ರೂ ಗೇಲಿ ಮಾಡ್ತಾರಾ? ತಲೆ ಕೆಡಿಸಿಕೊಳ್ಳಬೇಡಿ. ಡೋಂಟ್ ಕೇರ್ ಅನ್ನಿ. ಅವರು ನಿಮಗಿಂತ ಗ್ರೇಟ್ ಅಂತ ಆ ಕ್ಷಣಕ್ಕೆ ಅಂದುಕೊಂಡಿರಬಹುದು. ಆದರೆ ಆ ಕ್ಷಣವೇ ಜೀವನದ ಮಹತ್ವದ ಕ್ಷಣವಲ್ಲ. ಅದು ನಿಜವಾದ ಪರೀಕ್ಷೆಯೇ ಅಲ್ಲ. ಯಾವುದೋ ಪರೀಕ್ಷೆಯಲ್ಲಿ ಗೆದ್ದು ಕೈ ತುಂಬಾ ಸಂಬಳ ಪಡೆಯೋದೇ ಜೀವನವಲ್ಲ. ನೆಮ್ಮದಿಯ ಬದುಕಷ್ಟೇ ಬೇಕು ಎಂಬುದನ್ನು ಗಟ್ಟಿ ಮಾಡಿಕೊಳ್ಳಿ.
ಹೆತ್ತವರ ಬಗ್ಗೆ ಯೋಚಿಸಿ…
ಆತ್ಮಹತ್ಯೆ ಯೋಚನೆಯೇನೋ ತಟ್ಟನೆ ಬಂದು ಬಿಡಬಹುದು. ಆದರೆ ಇಷ್ಟು ವರ್ಷ ಸಲಹಿದವರ ಗತಿ? ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರಿಗೆ ಚಿಂತೆ ಇರಬಹುದು. ಹಾಗೆಂದು ಪರೀಕ್ಷೆಯಲ್ಲಿ ಪಾಸ್ ಆಗಿಲ್ಲವೆಂದ ಕೂಡಲೇ ನೀನು ಮಗನೇ ಅಲ್ಲ, ಮಗಳೇ ಅಲ್ಲ ಅಂತ ಯಾರಾದ್ರೂ ಹೇಳ್ತಾರಾ? ಹಾಗೆ ಆತ್ಮಹತ್ಯೆ ಮಾಡ್ಕೊಂಡ್ರೆ, ಮರುದಿನದಿಂದ ಆ ಹೆತ್ತವರು ಸುಖವಾಗಿ ಇರ್ತಾರಾ? ಅವರಿಗೆ ನೀವಿಲ್ಲದೆ ಬದುಕೋ ಸ್ಥೈರ್ಯ ಇರುತ್ತಾ? ಮಕ್ಕಳು ಎಷ್ಟೇ ದೊಡ್ಡವರಾದ್ರೂ, ಹೆತ್ತವರ ಪಾಲಿಗೆ ಕಂದಮ್ಮಗಳೇ. ಅವರೇನು ಮಾಡಿದ್ರೂ ಕ್ಷಮೆ ಇರುತ್ತೆ. ಸಾಯೋದು ಒಂದೇ ಪರಿಹಾರವಲ್ಲ.
ಸಾಧನೆಗೆ ಗುರಿಯಷ್ಟೇ ಸಾಕು…
ನೀವು ಪಾಸ್ ಆಗಿಯೇ ಎಲ್ಲವನ್ನೂ ಸಾಧಿಸಬೇಕಿಲ್ಲ. ಸಾಧನೆಗೆ ಬೇಕಾಗಿರುವುದು ಪರೀಕ್ಷೆಯ ಫಲಿತಾಂಶವಲ್ಲ. ಅಲ್ಲಿ ಬೇಕಾಗಿರುವುದು ಒಂದು ಸ್ಪಷ್ಟ ಗುರಿ. ಏನೋ ಮಾಡಬೇಕೆಂಬ ಛಲ. ಜತೆಗೊಂದಿಷ್ಟು ಆತ್ಮವಿಶ್ವಾಸ. ಎಲ್ಲದಕ್ಕೂ ಪರೀಕ್ಷೆಯೇ ಮಾನದಂಡವಲ್ಲ ಅಂದುಕೊಳ್ಳಿ. ಪರೀಕ್ಷೆಯಲ್ಲಿ ಫೇಲಾದ್ರೂ, ಜೀವನದಲ್ಲಿ ಗೆಲ್ತೀನಿ ಅನ್ನೋ ಗಟ್ಟಿ ನಿರ್ಧಾರವನ್ನು ಮಾಡಿಕೊಳ್ಳಿ. ನಿಮ್ಮನ್ನು ಸೋಲಿಸೋರು ಯಾರಿರ್ತಾರೆ?
ಓದದವರು ದಡ್ಡರಲ್ಲ..
ನಾವಿಂದು ರಾತ್ರಿಯನ್ನು ಹಗಲಿನಂತೆ ಕಳೆಯುತ್ತಿರುವ ಬಲ್ಬ್ ಪತ್ತೆ ಮಾಡಿದ್ದು ಥಾಮಸ್ ಎಡಿಸನ್. ನಂಬಿದ್ರೆ ನಂಬಿ, ಆತ ಶಾಲೆಗೆ ಹೋಗಿಯೇ ಇರಲಿಲ್ಲ. ಮೈಕ್ರೋಸಾಫ್ಟ್ ಎಂಬ ಸಾಫ್ಟ್‌ವೇರ್ ಕಂಪನಿಯ ಸಂಸ್ಥಾಪಕ ಬಿಲ್ ಗೇಟ್ಸ್ ಯಾರಿಗೆ ತಾನೇ ಗೊತ್ತಿಲ್ಲ? ಆದ್ರೆ ಅವನು ಓದಿರೋದು ಹತ್ತನೇ ತರಗತಿ ಮಾತ್ರ! ಅಮೆರಿಕಾದ ಹಣೆಬರಹವನ್ನೇ ಬದಲಿಸಿದ ಅಬ್ರಹಾಂ ಲಿಂಕನ್ ಕಾಲೇಜು ಮೆಟ್ಟಿಲನ್ನೇ ಹತ್ತಿರಲಿಲ್ಲ. ಇನ್ನೊಬ್ಬ ಅಧ್ಯಕ್ಷ ವಿನ್ಸ್ಟನ್ ಚರ್ಚಿಲ್ ಆರನೇ ಕ್ಲಾಸಲ್ಲೇ ಫೇಲಾಗಿದ್ದ. ಡೆಲ್ ಕಂಪನಿಯ ಬಾಸ್ ಮೈಕೆಲ್ ಡೆಲ್ ಪಿಯುಸಿ ಹಂತದಲ್ಲೇ ಕಾಲೇಜಿಗೆ ದೊಡ್ಡ ನಮಸ್ಕಾರ ಹೊಡೆದಿದ್ದ.
ಅಷ್ಟೆಲ್ಲ ಯಾಕೆ, ನಮ್ಮ ವರನಟ ಡಾ. ರಾಜ್‌ಕುಮಾರ್ ಪ್ರೈಮರಿ ವಿದ್ಯಾಭ್ಯಾಸವನ್ನೂ ಮುಗಿಸಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿ ಈಗ ದೊಡ್ಡ ಹೆಸರು ಮಾಡಿರುವ ಪುನೀತ್ ರಾಜ್‌ಕುಮಾರ್, ದರ್ಶನ್ ಓದಿದ್ದೇ ಹತ್ತನೇ ಕ್ಲಾಸು. ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಗಾದಿಗೇರಿರುವ ಅಖಿಲೇಶ್ ಯಾದವ್ ಕೂಡ ಫೇಲಾಗಿ ಪಾಸಾದವರು. ಅವರೆಲ್ಲ ಯಾವುದರಲ್ಲಿ ಕಡಿಮೆ?
(ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ)
ಬ್ಯಾಚುಲರ್ ಮನೆ ನಿರ್ಮಾಣ ಹೇಗೆ?
Posted March 19, 2012
on:ಸಿಂಗಲ್ ಬೆಡ್ ರೂಮ್ ಮನೆ, ಡಬಲ್ ಬೆಡ್ ರೂಮ್ ಮನೆ ಎಂದೆಲ್ಲ ನಿರ್ಮಾಣದ ಹಂತದಲ್ಲಿ ಇಂಜಿನಿಯರುಗಳು ಪ್ರತ್ಯೇಕಗೊಳಿಸುವಾಗ ಒಂದನ್ನು ಮರೆತೇ ಬಿಡುತ್ತಾರೆ. ಅದು ಬ್ಯಾಚುಲರುಗಳ ಮನೆ. ಬ್ಯಾಚುಲರುಗಳಿಗೆ ಬಾಡಿಗೆ ಕೊಡಲೆಂದೇ ಕಟ್ಟಡ ನಿರ್ಮಿಸುವಾಗಲೂ ಈ ಬಗ್ಗೆ ಯಾರೂ ಹೆಚ್ಚು ಗಮನ ಕೊಡೋದೇ ಇಲ್ಲ.
ಬ್ಯಾಚುಲರುಗಳಿಗೆ ಮನೆ ಕಟ್ಟುವಾಗ ಒಂದಷ್ಟು ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡರೆ ಚೆನ್ನಾಗಿರುತ್ತದೆ. ಐಟಿಗಳೇ ಇರಲಿ, ಯಾರೇ ಆಗಿರಲಿ; ಬ್ಯಾಚುಲರುಗಳೆಂದರೆ ಸೋಮಾರಿಗಳು, ಯಾವುದನ್ನೂ ಒಪ್ಪ ಓರಣವಾಗಿ ಇಡಲು ಮುಹೂರ್ತ ನೋಡುವವರು, ಅವರ ಚೇಷ್ಟೆಗಳೇ ಬೇರೆ, ಜೀವನವನ್ನು ಅನುಭವಿಸುವ ರೀತಿಯೇ ವಿಚಿತ್ರ, ವೈಫು ಇಲ್ಲದ ಅವರ ಲೈಫು ಇನ್ನೂ ಒಂದು ನಿರ್ದಿಷ್ಟ ದಿಕ್ಕಿನತ್ತ ಹೋಗಿರುವುದಿಲ್ಲ. ಈ ಅಂಶಗಳಿಗೆ ಗಟ್ಟಿಯಾಗಿ ಅಂಟಿಕೊಂಡರೆ ಆಗ ಅವರಿಗಾಗಿ ಕಟ್ಟುವ ಮನೆ ಹೇಗಿರಬೇಕು ಎಂಬ ಸ್ಪಷ್ಟ ಚಿತ್ರವೊಂದು ಕಣ್ಣ ಮುಂದೆ ಬರಬಹುದು.
ಸಿಕ್ಕಾಪಟ್ಟೆ ರೂಮು ಬೇಡ
ಬ್ಯಾಚುಲರುಗಳಿಗಾಗಿ ಎಂದೇ ಕಟ್ಟುವ ಮನೆಗಳಲ್ಲಿ ಹೆಚ್ಚುವರಿ ಕೊಠಡಿಗಳು ಬೇಕಾಗಿಲ್ಲ. ಸರಳವಾಗಿದೆ, ಎಲ್ಲವೂ ಸುಲಭ ಎಂಬಂತಿದ್ದರೆ ಸಾಕು. ಹೊರಗೊಂದು ಹಾಲ್, ಒಂದು ಓಪನ್ ಕಿಚನ್, ಒಂದು ಡೈನಿಂಗ್, ಇನ್ನೊಂದೆರಡು ಟಾಯ್ಲೆಟ್-ಬಾತ್ ರೂಮುಗಳು. ಮಲಗಲು ಸ್ವಲ್ಪ ದೊಡ್ಡದೆನಿಸುವ ಬೆಡ್ ರೂಮು. ಇಷ್ಟಿದ್ದರೆ ಸಾಕು. ಹುಡುಗರು ಯಾವತ್ತೂ ಮಿತಿಗಿಂತ ಹೆಚ್ಚು ಪ್ರೈವೆಸಿಗೆ ಒಗ್ಗಿಕೊಳ್ಳದ ಕ್ಯಾಟಗರಿಯವರು ಅನ್ನೋದನ್ನು ನೆನಪಿಡಿ.
ಬಟಾಬಯಲಾದರೂ ಓಕೆ
ಬ್ಯಾಚುಲರುಗಳ ಫ್ಲ್ಯಾಟ್ ಅಥವಾ ಮನೆ ರಸ್ತೆ ಬದಿಯಲ್ಲೇ ಇರಲಿ. ಅವರಿಗೆ ಶಬ್ಧ ಮಾಲಿನ್ಯ ಅಷ್ಟೇನೂ ಸಮಸ್ಯೆಯೆನಿಸದು. ಬದಲಿಗೆ ಅವರಿಂದಲೇ ಇಂತಹ ಸಮಸ್ಯೆಗೆ ತುತ್ತಾಗುವವರೇ ಜಾಸ್ತಿ. ಇದನ್ನೂ ಗಮನದಲ್ಲಿಟ್ಟುಕೊಳ್ಳಿ. ಇನ್ನು ಇಡೀ ಮನೆ ಎಲ್ಲೋ ಒಳಗೆ, ಯಾರಿಗೂ ಕಾಣದಂತಿರಬೇಕು ಎಂದಂತೂ ಹುಡುಗ್ರು ಬಯಸೋರೇ ಅಲ್ಲ. ಹೊರಗೊಂದು ವರಾಂಡವಿದ್ದರಂತೂ ಅವರ ವೀಕೆಂಡ್ ಖುಷಿಗೆ ಪಾರವೇ ಇರದು. ಹಾಗಿದ್ದರೆ ಬಾಡಿಗೆ ಎಷ್ಟೇ ಆದರೂ, ಆ ಬಗ್ಗೆ ಚಿಂತೆ ಮಾಡೋದಿಲ್ಲ.
ಕ್ಲೀನ್ ಮಾಡೋರಲ್ಲ…
ತಿಂದ ತಟ್ಟೆಯನ್ನೇ ತೊಳೆಯಲು ಹಿಂದೆ ಮುಂದೆ ನೋಡುವ ಬ್ಯಾಚುಲರುಗಳು ಕ್ಲೀನಿಂಗ್ ವಿಚಾರದಲ್ಲಿ ಜಗ ಜುಗ್ಗರು. ವಾರಕ್ಕೊಮ್ಮೆ ನೆಲ ಒರೆಸೋದೇ ಕಷ್ಟ. ಹಾಗಿರುವಾಗ ಅವರ ಮನಸ್ಥಿತಿಗೆ ಹೊಂದುವಂತಹ ಮನೆ ಕಟ್ಟುವುದೇ ಉತ್ತಮ. ಅಪರೂಪಕ್ಕೆ ಕ್ಲೀನ್ ಮಾಡಿದರೂ ಓಕೆ ಎನ್ನುವ ರೀತಿಯಲ್ಲಿರಲಿ ಒಳ ವಿನ್ಯಾಸ. ಅದಕ್ಕೆ ತಕ್ಕ ಮ್ಯಾಟ್‌ಗಳನ್ನೂ ಬಳಸಿ. ಅಲ್ಲಲ್ಲಿ ವಾಷ್ ಬೇಸಿನ್ ಇದ್ದರೆ ಉತ್ತಮ.
ಇಂಟೀರಿಯರ್ ಮರೆತು ಬಿಡಿ…
ಮನೆಯಲ್ಲಿ ಚಂದದ ಪೇಂಟಿಂಗ್ ಇದ್ದರೆ ಚೆನ್ನಾಗಿತ್ತು ಅಂತ ಖಂಡಿತಾ ಬ್ಯಾಚುಲರುಗಳು ಯೋಚಿಸೋದಿಲ್ಲ. ಈ ಖಾಲಿ ಜಾಗದಲ್ಲಿ ಸನ್ನಿ ಲಿಯೋನ್ ದೊಡ್ಡ ಪೋಸ್ಟರ್ ಹಾಕಿದ್ರೆ ಚೆನ್ನಾಗಿರುತ್ತೆ, ಇಲ್ಲಿ ಇಷ್ಟದ ಬಾಡಿ ಬಿಲ್ಡರ್ ಫೋಟೋ ಇರಲಿ, ಇನ್ನೊಂದು ಗೋಡೆಯಲ್ಲಿ ರಕ್ಕಸ ಬೈಕ್ ಡುಕಾಟಿ ಚಿತ್ರ ಅಂಟಿಸೋಣ ಅಂತಾನೇ ಯೋಚಿಸಿರ್ತಾರೆ. ಅದೆಷ್ಟೇ ಚಂದದ ಗೋಡೆಯಿದ್ರೂ, ಅಲ್ಲಿ ಇಂತಹ ಪೋಸ್ಟರುಗಳು ಬೀಳೋದನ್ನು ತಪ್ಪಿಸಲು ಸಾಧ್ಯವಾಗೋದಿಲ್ಲ. ಹಾಗಾಗಿ ಇಂಟೀರಿಯರ್ ಡಿಸೈನ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಗೋಡೆಗಳು ಖಾಲಿಯಾಗಿರಲಿ. ಸಾಧ್ಯವಾದರೆ ಪೋಸ್ಟರುಗಳನ್ನು ಹಾಕಲು ಸುಲಭವಾಗುವ ವ್ಯವಸ್ಥೆ ಮಾಡಿ. ಹೀಗೆ ಮಾಡುವುದರಿಂದ ಬ್ಯಾಚುಲರುಗಳಿಂದ ಗೋಡೆ ಹಾಳಾಗುವುದನ್ನೂ ತಪ್ಪಿಸಬಹುದು. ಕಿಟಕಿಗಳಿಗೆ ಪರದೆ ಹಾಕುವಾಗಲೂ ಬಿಳಿ ಬಣ್ಣ ಅಥವಾ ಸುಲಭವಾಗಿ ಕೊಳೆಯಾಗುವ ಬಣ್ಣವನ್ನು ಅವಾಯ್ಡ್ ಮಾಡಿ.
ದೊಡ್ಡ ಕನ್ನಡಿಯಿರಲಿ…
ಹುಡುಗಿಯರನ್ನು ಹುಡುಗರು ರೇಗಿಸುವ ಪಟ್ಟಿಯಲ್ಲಿ ಕನ್ನಡಿಯದ್ದೂ ಪ್ರಮುಖ ಸ್ಥಾನ. ಆದರೆ ಹುಡುಗರೇನೂ ಈ ವಿಚಾರದಲ್ಲಿ ಕಮ್ಮಿಯಿಲ್ಲ. ಯಾರೂ ಇಲ್ಲವೆಂದರೆ ಅವರು ಗಂಟೆಗಟ್ಟಲೆ ಕನ್ನಡಿ ಮುಂದೆ ಕಳೆಯಬಲ್ಲರು. ಹಾಗಾಗಿ ಹಾಲ್‌ನಲ್ಲೋ, ಬೆಡ್ ರೂಮಿನಲ್ಲೋ ದೊಡ್ಡದೊಂದು ಕನ್ನಡಿಯಿರಲಿ. ಜಿಮ್‌ಗೆ ಹೋಗಿ ಬಂದವರು ಪ್ರತಿ ಬಾರಿ ಮುಂದೆ ನಿಂತು ಅಡಿಯಿಂದ ಮುಡಿಯವರೆಗೆ ನೋಡಿ ಹೆಮ್ಮೆಯಿಂದ ಬೀಗುವಂತಿರಲಿ ಆ ಕನ್ನಡಿ.
ಫರ್ನೀಚರ್ ಹೀಗಿರಲಿ…
ಬ್ಯಾಚುಲರ್ಸ್ ಅಂದ ಮೇಲೆ ಗೆಳೆಯರ ದಂಡು ಜೋರಾಗಿಯೇ ಇರುತ್ತದೆ. ಹಾಗಾಗಿ ಒಂದಷ್ಟು ಹೆಚ್ಚುವರಿ ಕುರ್ಚಿಗಳು ಮನೆಯಲ್ಲಿದ್ದರೆ ಉತ್ತಮ. ನೆನಪಿಡಿ, ಇವರಿಗೆ ಬಣ್ಣದ ಮೋಹ ಜಾಸ್ತಿ. ಲೈಟ್ ಕಲರ್ ಅಥವಾ ಶುಭ್ರ ಬಿಳಿ ಬಣ್ಣಕ್ಕಿಂತ ಯಾವುದಾದರೂ ಡಾರ್ಕ್ ಕಲರ್ ಆರಿಸಿ. ಅದೇನೇ ಸರ್ಕಸ್ ಮಾಡಿದರೂ ಮುರಿದು ಹೋಗದ ಫರ್ನೀಚರ್ಸ್ ಇದ್ದರೆ ಮಾಲೀಕರು ಬಚಾವ್ ಆದಂತೆ. ಖರೀದಿ ಸಂದರ್ಭದಲ್ಲಿ ಬಾಳಿಕೆಯತ್ತಲೂ ಗಮನ ಕೊಡಿ.
ಟಿವಿ, ಹೋಮ್ ಥಿಯೇಟರ್…
ಎಲ್ಲೋ ದೂರದಿಂದ ಬಂದ ಬ್ಯಾಚುಲರ್ಸ್‌ಗೆ ಎಲ್ಲವನ್ನೂ ಮಾಲೀಕರೇ ಒದಗಿಸಬೇಕಾಗುತ್ತದೆ. ಆಗೆಲ್ಲ ನಿಮ್ಮ ಪಟ್ಟಿಯಲ್ಲಿ ದೊಡ್ಡದಾದ ಟಿವಿ, ಹೋಮ್ ಥಿಯೇಟರ್ ಕಡ್ಡಾಯವಾಗಿರಲಿ. ಅದೂ ಹಾಲ್‌ನಲ್ಲಿ ಎಲ್ಲರಿಗೂ ಅನುಕೂಲವಾಗುವಂತಿದ್ದರೆ ಚೆನ್ನಾಗಿರುತ್ತದೆ. ಇನ್ನು ಮೊಬೈಲ್, ಲ್ಯಾಪ್‌ಟಾಪ್ ಚಾರ್ಜ್‌ಗೆಂದು ಅಲ್ಲಲ್ಲಿ ಸಾಕೆಟ್‌ಗಳಿದ್ದರೆ ಉತ್ತಮ. ಬ್ಯಾಚುಲರುಗಳ ಗ್ಯಾಜೆಟ್ಸ್‌ಗಳ ವಿಶ್ರಾಂತಿಗೊಂದು ಭದ್ರ ನೆಲೆಯನ್ನೂ ಕಲ್ಪಿಸಿದರೆ, ಎಲ್ಲೆಂದರಲ್ಲಿ ದಿಕ್ಕು ದೆಸೆಯಿಲ್ಲದೆ ಬಿದ್ದಿರುವುದು ತಪ್ಪುತ್ತದೆ.
ಅಡುಗೆ ಮಾಡ್ತಾರಾದ್ರೆ…
ಈಗೀಗ ಬ್ಯಾಚುಲರುಗಳೂ ಸೆಲ್ಫ್ ಕುಕ್‌ಗಳಾಗುತ್ತಿದ್ದಾರೆ. ಅವರಿಗೆ ಬೇಕಾದ ವ್ಯವಸ್ಥೆಗಳನ್ನು ನೀವೇ ಮಾಡುವಿರಾದರೆ, ಹುಡುಗರ ಸ್ವಭಾವವನ್ನೂ ಅರಿತುಕೊಳ್ಳಿ. ಅವರಿಗೆ ತಾಳ್ಮೆ ಕಡಿಮೆ. ಎಲ್ಲವೂ ತಕ್ಷಣಕ್ಕೆ ಮುಗಿದು ಬಿಡಬೇಕು ಅನ್ನೋದ್ರಲ್ಲಿ ನಂಬಿಕೆ ಜಾಸ್ತಿ. ಹಾಗಾಗಿ ಮೈಕ್ರೋವೇವ್ ಒವೆನ್, ಟೋಸ್ಟರ್, ರೈಸ್ ಕುಕ್ಕರ್ ಮುಂತಾದ ಶಾರ್ಟ್ ಕಟ್ ಸಾಮಗ್ರಿಗಳಿರಲಿ. ಇಷ್ಟೆಲ್ಲ ಅನುಕೂಲಗಳನ್ನು ನೀವು ಮಾಡಿಕೊಡುತ್ತಿರುವುದು ಇನ್ನೂ ಲೈಫಲ್ಲಿ ಸೆಟ್ಲ್ ಆಗಿರದ ಕ್ಯಾಟಗರಿಯ ಬ್ಯಾಚುಲರ್ಸ್‌ಗಳಿಗೆ ಅನ್ನೋದನ್ನು ಮರೆಯಬೇಡಿ.
(ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ)
ಎರಡನೇ ಮನೆ ಖರೀದಿ ಯೋಚನೆ ಇದ್ಯಾ?
Posted March 19, 2012
on:ಮೊದಲನೇ ಮನೆಯೆಂದರೆ ಅದು ಭಾವಗಳ ಗೂಡು. ಯಾವ ದಿಕ್ಕಿನಿಂದ ನೋಡಿದರೂ ಆ ಮನೆಯ ಜತೆ ಮರೆಯಲಾರದ ಬಾಂಧವ್ಯವಿರುತ್ತದೆ. ಅದನ್ನು ತನ್ನದಾಗಿಸಿಕೊಳ್ಳಲು ಸುರಿಸಿದ ಬೆವರು, ಕಳೆದ ನಿದ್ದೆಯಿಲ್ಲದ ರಾತ್ರಿಗಳು, ಕೂಡಿಟ್ಟ ಹಣ ಎಲ್ಲವೂ ನಮ್ಮಲ್ಲಿ ಶಾಶ್ವತ ಸ್ಥಾನ ಪಡೆದಿರುತ್ತವೆ. ಆದರೆ ಎರಡನೇ ಮನೆಯೂ ಇದೇ ಅನುಭವವನ್ನು ನೀಡುವುದೇ?
ಇಲ್ಲ, ಖಂಡಿತಾ ಇಲ್ಲ. ಮೊದಲ ಮನೆಯೆಂದರೆ ಅದರ ಅರ್ಥ, ಅದಕ್ಕೂ ಮೊದಲು ತನ್ನದೆಂಬ ಮನೆ ಇರಲಿಲ್ಲವೆಂದು. ಹಾಗಾಗಿ ಮನೆಯೊಂದರ ಒಡೆಯನಾದ ಖುಷಿ, ರೋಮಾಂಚನ ವಿವರಿಸಿ ಮುಗಿಸಲಾಗದ ಅನುಭವ. ನಿರ್ದಿಗಂತವೆನಿಕೊಂಡಿದ್ದ ಗುರಿಯೊಂದು ಬೆರಳ ತುದಿಗೆ ತಗಲು ಹಾಕಿಕೊಂಡ ಹಗುರ ಭಾವ. ಆದರೆ ಎರಡನೇ ಮನೆ ಖರೀದಿ ಇಷ್ಟೆಲ್ಲ ಖುಷಿಯನ್ನು ನೀಡದು. ಅಲ್ಲಿರುವುದು ಒನ್ ಪ್ಲಸ್ ಒನ್ ಎಂಬಷ್ಟಕ್ಕೇ ಸೀಮಿತವಾಗುವ ಎಕ್ಸ್‌ಟ್ರಾ ಫೀಲಿಂಗ್. ಭಾವನೆಗಳಿಗೆ ಹೆಚ್ಚಿನ ಕೆಲಸ ಕೊಡುವ ಬದಲು, ಲೆಕ್ಕಾಚಾರವೇ ಪ್ರಧಾನವಾಗಿರುತ್ತದೆ.
ಇನ್ನೊಂದು ಮನೆ ಯಾಕೆ ಬೇಕು?
ನಿಮಗೆ ಇನ್ನೊಂದು ಫ್ಲ್ಯಾಟ್ ಬೇಕೆಂಬ ಯೋಚನೆ ಬಂದರೆ, ಆಗ ನಿಮಗೆ ನೀವೇ ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳಿ. ಮೊದಲ ಪ್ರಶ್ನೆ, ನಿಮಗೆ ಎರಡನೇ ಮನೆಯ ಅಗತ್ಯ ಏನಿದೆ ಅನ್ನೋದು. ಇರೋ ಹಣವನ್ನು ಎಲ್ಲಾದರೂ ಹೂಡಿಕೆ ಮಾಡಬೇಕೆಂದು ಎರಡನೇ ಮನೆಯ ಯೋಚನೆ ಮಾಡಿದ್ದೀರಾ ಅಥವಾ ನಿಮಗೆ ಇಬ್ಬರು ಮಕ್ಕಳಿದ್ದಾರೆ, ಹಾಗಾಗಿ ಇನ್ನೊಂದು ಫ್ಲ್ಯಾಟ್ ಇರಲಿ ಎಂಬ ಯೋಚನೆಯೇ? ಇದನ್ನು ಮೊದಲು ಪರಿಹರಿಸಿಕೊಳ್ಳಿ. ಎರಡನೇ ಮನೆ ಖರೀದಿಗೆ ಹೊರಟಿರುವುದು ಹೂಡಿಕೆ ಉದ್ದೇಶದಿಂದ ಎನ್ನುವುದೇ ಆಗಿದ್ದರೆ, ಆಗ ನೀವು ಅದರಿಂದ ಬರಬಹುದಾದ ಅಂದಾಜು ಬಾಡಿಗೆ ಮತ್ತು ಅಡ್ವಾನ್ಸ್ ಮೊತ್ತದ ಲೆಕ್ಕಾಚಾರ ಮಾಡಬೇಕಾಗುತ್ತದೆ. ನಿಮ್ಮ ಗುರಿ ಸ್ಪಷ್ಟವಾಗಿ ಹಣದ ಕಡೆಗೇ ಇರುವುದರಿಂದ, ಅದನ್ನು ಲಘುವಾಗಿ ಪರಿಗಣಿಸಬೇಡಿ.
ಅದೇ ಹೊತ್ತಿಗೆ ನಿಮ್ಮ ಉದ್ದೇಶ ಮಕ್ಕಳಿಗೆ ಹಂಚಲು ಎಂಬುದಾಗಿದ್ದರೆ, ಆಗ ಹಣಕಾಸೇತರ ವಿಚಾರಗಳನ್ನು ಗಮನಿಸಬೇಕು. ಕುಟುಂಬ ಹಂಚಿ ಹೋದರೂ ಹತ್ತಿರದಲ್ಲೇ ಮನೆಗಳು ಇರುವಂತೆ ನೋಡಿಕೊಳ್ಳುವುದು, ಇನ್ನೊಂದು ಮನೆಯ ಪರಿಸರ ಹೇಗಿದೆ ಅನ್ನೋದು ಸೇರಿದಂತೆ ಇತರ ಸಂಗತಿಗಳು ಮನೆಯ ಮೌಲ್ಯಕ್ಕಿಂತ ಪ್ರಮುಖವಾಗಿರಲಿ.
ಯಾವುದಕ್ಕೆ ಎಷ್ಟು ಬೇಕು?
ಹಣಕಾಸೇತರ ವಿಚಾರಗಳ ಕುರಿತು ನಿಮ್ಮ ನಿರ್ಧಾರ ಗಟ್ಟಿಯಾದ ಬಳಿಕ ನೀವು ಆರ್ಥಿಕ ಸಂಗತಿಗಳನ್ನು ಗಮನಿಸಬೇಕು. ಫ್ಲ್ಯಾಟ್ ಮೌಲ್ಯದ ಜತೆ, ಅದರ ನಿರ್ವಹಣೆ ವೆಚ್ಚ, ಪಾಲಿಕೆಗೆ ಪಾವತಿಸಬೇಕಾದ ತೆರಿಗೆ ಮತ್ತು ಇತರ ವೆಚ್ಚಗಳನ್ನು ಲೆಕ್ಕಾಚಾರ ಹಾಕಬೇಕು. ಇದರಲ್ಲಿ ವಿದ್ಯುತ್ ಮತ್ತು ನೀರಿನ ಬಿಲ್ ಕೂಡ ಸೇರಿರಲಿ. ಇವೆಲ್ಲದರ ವಾರ್ಷಿಕ ವೆಚ್ಚ ಎಷ್ಟು ಎಂಬುದನ್ನು ಕಂಡುಕೊಂಡರೆ, ಆಗ ನಿಮಗೆ ನಿರ್ದಿಷ್ಟ ವೆಚ್ಚದ ಅಂದಾಜು ಖಚಿತವಾಗುತ್ತದೆ. ಮನೆಯನ್ನು ಬಾಡಿಗೆ ಕೊಡುವುದಿದ್ದರೂ ಆಗ ಅದರಿಂದ ಬರುವ ಆದಾಯ ಮತ್ತು ಹೆಚ್ಚುವರಿ ವೆಚ್ಚಗಳು ಎಷ್ಟು ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಿ.
ಸಾಲದ ಲೆಕ್ಕವೂ ಇರಲಿ
ಎರಡನೇ ಮನೆ ಕೊಳ್ಳುವುದಿದ್ದರೆ, ಗೃಹಸಾಲ ಸೌಲಭ್ಯವೂ ಲಭ್ಯ. ಆದರೆ ಮೊದಲ ಮನೆಗೆ ಅನ್ವಯವಾಗುವ ಗೃಹಸಾಲಕ್ಕೂ, ಎರಡನೇ ಮನೆಯ ಗೃಹಸಾಲಕ್ಕೂ ಅನ್ವಯವಾಗುವ ನಿಯಮಗಳು ಒಂದೇ ರೀತಿಯಿರುವುದಿಲ್ಲ. ಮೊದಲ ಮನೆಗೆ ಶೇ.80ರಿಂದ ಶೇ.90ರಷ್ಟು ಬಂಡವಾಳವನ್ನು ಬ್ಯಾಂಕ್ ನೀಡಿದರೆ, ಎರಡನೇ ಮನೆಗೆ ಶೇ.75ರಷ್ಟು ಸಾಲ ಮಾತ್ರ ಲಭ್ಯ. ಹಾಗಾಗಿ ಮೂಲ ಬಂಡವಾಳದ ಲೆಕ್ಕಾಚಾರ ಮೊದಲೇ ಮಾಡಬೇಕು.
ಎರಡನೇ ಫ್ಲ್ಯಾಟ್‌ಗೆ ಕೊಡುವ ಸಾಲಕ್ಕೆ ಬ್ಯಾಂಕುಗಳು ಹೆಚ್ಚು ಬಡ್ಡಿಯನ್ನು ಕೂಡ ವಿಧಿಸಬಹುದು. ಜತೆಗೆ ನಿಮ್ಮ ಟೇಕ್ ಹೋಮ್ ಮಾಸಿಕ ವೇತನದ ಶೇ.50ರಷ್ಟಕ್ಕೆ ಎಲ್ಲಾ ಬ್ಯಾಂಕ್ ಸಾಲದ ಇಎಂಐಗಳು ಸೀಮಿತಗೊಳ್ಳುವುದರಿಂದ, ಎರಡನೇ ಮನೆಗೆ ಸಿಗಬಹುದಾದ ಸಾಲದ ಮೊತ್ತ ಎಷ್ಟು ಎನ್ನುವುದನ್ನು ಕೂಡ ಅಂದಾಜು ಮಾಡಬೇಕು. ಆದರೂ ಸಾಲದ ಮೊತ್ತ ಮತ್ತು ಬಡ್ಡಿ ಕುರಿತು ಬ್ಯಾಂಕುಗಳ ಜತೆ ವ್ಯವಹರಿಸುವಾಗ ಮೊದಲ ಮನೆಯ ಷೇರು ಗಮನದಲ್ಲಿರಲಿ. ಇದು ನಿಮಗೆ ಪ್ಲಸ್ ಪಾಯಿಂಟ್ ಆಗಬಹುದು.
ತೆರಿಗೆ ಮರೆಯದಿರಿ
ಆದಾಯ ತೆರಿಗೆ ವಿಚಾರಕ್ಕೆ ಬಂದಾಗ, ನಿಮ್ಮ ಎರಡನೇ ಫ್ಲ್ಯಾಟ್ ಬಾಡಿಗೆಗೆ ಕೊಡಲ್ಪಟ್ಟಿದೆ ಎಂದೇ ಪರಿಗಣಿಸಲ್ಪಡುತ್ತದೆ. ನೀವು ಆ ಮನೆಯನ್ನು ಬಾಡಿಗೆ ನೀಡದೆ ಇದ್ದರೂ, ನಿಮ್ಮ ಆದಾಯಕ್ಕೆ ಸ್ವಲ್ಪ ಮೊತ್ತವನ್ನು ಅದರಿಂದ ಸೇರಿಸಲಾಗುತ್ತದೆ. ಒಂದು ವೇಳೆ ಬಾಡಿಗೆಗೆ ನೀಡಿದ್ದರೆ, ನಿಜವಾದ ಮೊತ್ತ ಆದಾಯಕ್ಕೆ ಸೇರ್ಪಡೆಯಾಗುತ್ತದೆ. ಉದಾಹರಣೆಗೆ, ಮನೆಯೊಂದರ ಮಾಸಿಕ ಬಾಡಿಗೆ 20,000 ರೂ. ಆಗಿದ್ದರೆ, ವಾರ್ಷಿಕವಾಗಿ 1.68 ಲಕ್ಷ ರೂ.ಗಳಿಗೆ ತೆರಿಗೆ ಬೀಳುತ್ತದೆ.(20,000 12 = 2.40 ಲಕ್ಷಗಳು / ಶೇ.30 ಸ್ಟಾಂಡರ್ಡ್ ಡಿಡಕ್ಷನ್: 72,000 ರೂ./ ತೆರಿಗೆ ಅನ್ವಯವಾಗುವ ಮೊತ್ತ: 1.68 ಲಕ್ಷ ರೂ.)
ತಾಳ್ಮೆಯಿದ್ದರೆ ಲಾಭ ಜಾಸ್ತಿ
ಎರಡನೇ ಫ್ಲ್ಯಾಟ್ ಖರೀದಿಸಲು ಮುಂದಾಗುವಾಗ, ಅದರ ತುರ್ತು ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸಬೇಕು. ಇಲ್ಲವೆಂದಾದರೆ, ತರಾತುರಿಯಲ್ಲಿ ಮುಗಿಬಿದ್ದು ಕೊಳ್ಳಲು ಹೋಗುವುದು ನಷ್ಟಕ್ಕೆ ಕಾರಣವಾಗಬಹುದು. ಅದರ ಬದಲು ಲೆಕ್ಕಾಚಾರ ಹಾಕಿ, ತಾಳ್ಮೆಯಿಂದ ಯಾವ ಫ್ಲ್ಯಾಟ್ ಆಗಬಹುದು ಎಂಬುದನ್ನು ನಿರ್ಧರಿಸಿದರೆ ಲಾಭ ಜಾಸ್ತಿ, ಜತೆಗೆ ನೆಮ್ಮದಿ ಕೂಡ.
(ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ)