ಪ್ರೀತಿಯ ಹೂಗಳು…

Archive for the ‘ವಿಜಯವಾಣಿ’ Category

DSC03074ಚೆಸ್.. ಚೆಸ್.. ಚೆಸ್.. ಬೆಳಗ್ಗೆ ಎದ್ದರೆ ಚೆಸ್, ಮಧ್ಯಾಹ್ನ ಪುರುಸೊತ್ತು ಸಿಕ್ಕರೂ ಚೆಸ್, ರಾತ್ರಿಯೂ ಚೆಸ್.. ಹೀಗೆ ಚೆಸ್ ತಪಸ್ಸು ಮಾಡುತ್ತಾ, ಸಾಧನೆಯ ಶಿಖರವನ್ನೇರುತ್ತಿರುವ ಈ 14ರ ಹುಡುಗನ ಹೆಸರು ಶಾಬ್ದಿಕ್ ವರ್ಮಾ.

ತಲೆ ತಿನ್ನುವ ಚದುರಂಗದಾಟವನ್ನು ಶಾಬ್ದಿಕ್ ನಮ್ಮ-ನಿಮ್ಮಂತೆ ಶಾಲೆಗೆ ಹೋದ ನಂತರ, ಮೀಸೆ ಮೊಳೆತ ಮೇಲೆ ಕಲಿತವನಲ್ಲ; ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಈತ ಮೂರುವರೆ ವರ್ಷದವನ್ನಿದ್ದಾಗಲೇ ಚದುರಂಗದ ಬಿಲ್ಲೆಗಳೊಂದಿಗೆ ಆಟ ಶುರು ಮಾಡಿದ್ದ. ಆರನೇ ವರ್ಷದಲ್ಲಿ ಟೇಬಲ್ ಮುಂದೆ ಕುಳಿತು ಇತರರಿಗೆ ಸವಾಲೆಸೆದಿದ್ದ!

ಅದಾದ ಮೇಲೆ ಶಾಬ್ದಿಕ್ ಹಿಂತಿರುಗಿ ನೋಡಿಲ್ಲ. 2005ರಲ್ಲಿ ಸ್ಟೇಟ್ ಅಂಡರ್ 7 ಹಾಗೂ 2007ರಲ್ಲಿ ಸ್ಟೇಟ್ ಅಂಡರ್ 9ರ ಚಾಂಪಿಯನ್; ಬೆಂಗಳೂರಿನಲ್ಲಿ 2008ರಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪರ ಆಡಿ ಬೆಸ್ಟ್ ನ್ಯಾಷನಲ್ ಪ್ಲೇಯರ್ ಪ್ರಶಸ್ತಿ; ಮೂರು ಸಲ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಸೋಲರಿಯದ ಸರದಾರನಾಗಿದ್ದು; 2011ರಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಮಕ್ಕಳ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯ ತಂಡದ ಪರ ಬೆಳ್ಳಿಪದಕ ಹಾಗೂ ವೈಯಕ್ತಿಕ ವಿಭಾಗದಲ್ಲಿ ಬೋರ್ಡ್ ಮೆಡಲ್; 2012ರಲ್ಲಿ ಇದೇ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ, ಕರ್ನಾಟಕ ಚೆಸ್ ತಂಡದ ನಾಯಕ.

ಒಟ್ಟಾರೆ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಏಳು ಪ್ರಥಮ, ನಾಲ್ಕು ದ್ವಿತೀಯ, ಎರಡು ತೃತೀಯ ಪ್ರಶಸ್ತಿಗಳನ್ನು ಶಾಬ್ದಿಕ್ ಬಗಲಿಗೆ ಹಾಕಿಕೊಂಡಿದ್ದಲ್ಲದೆ, ದೆಹಲಿಯಲ್ಲಿ ನಡೆದ ಏಳು ವರ್ಷದವರೊಳಗಿನ ಏಷ್ಯನ್ ಚಾಂಪಿಯನ್‌ಶಿಪ್, 2008ರಲ್ಲಿ ನಾಗ್ಪುರದಲ್ಲಿ ನಡೆದ 10ರೊಳಗಿನವರ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾನೆ.

ಇನ್ನು ಈ ಚೆಸ್ ಪೋರ ತನಗಿಂತ ಹಿರಿಯರ ಜತೆ ಆಡಿ ಗೆದ್ದಿರುವುದೇ ಹೆಚ್ಚು. ಅದರಲ್ಲೂ ಮಹಾರಾಷ್ಟ್ರದ ಕುಪವಾಡದಲ್ಲಿ ಇಬ್ಬರು ಅಂತಾರಾಷ್ಟ್ರೀಯ ಮಾಸ್ಟರ್‌ಗಳ ಜತೆ ಸೀನಿಯರ್ ಡಿವಿಜನ್ ರ‌್ಯಾಪಿಡ್ ಚೆಸ್ ಆಡಿ, ಮೊದಲ ಹತ್ತರೊಳಗೆ ಸ್ಥಾನ ಪಡೆದು ಭೇಷ್ ಎನಿಸಿಕೊಂಡಿದ್ದು ಹೆಮ್ಮೆ.

ಎಸ್‌ಡಿಎಂ ಹುಡುಗ: ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂಭತ್ತನೇ ತರಗತಿ ಓದುತ್ತಿರುವ ಶಾಬ್ದಿಕ್ ವರ್ಮಾ ಬೆಳ್ತಂಗಡಿಯ ವಕೀಲ ರತ್ನವರ್ಮ ಬುಣ್ಣು ಮತ್ತು ಧರ್ಮಸ್ಥಳದ ವೈದ್ಯೆ ಡಾ.ಮೃಣಾಲಿನಿ ದಂಪತಿಯ ಪುತ್ರ.

ಶಾಬ್ದಿಕ್‌ಗಾಗಿಯೇ ಬದುಕನ್ನು ಮುಡಿಪಾಗಿಟ್ಟಂತೆ ಇಬ್ಬರದ್ದೂ ಪ್ರೋತ್ಸಾಹ. ಮನೆಗೆ ಹೊಕ್ಕಾಗ ಪುಟ್ಟ ವಸ್ತು ಸಂಗ್ರಹಾಲಯವೇನೋ ಎಂಬ ಭಾವನೆ ಯಾರಿಗಾದರೂ ಬರದಿರದು. ಅಷ್ಟೊಂದು ಪ್ರಶಸ್ತಿ-ಪುರಸ್ಕಾರಗಳ ಗುಡ್ಡೆ.

ಡೆರಿಕ್ ಚೆಸ್ ಸ್ಕೂಲ್ ನಲ್ಲಿ ತರಬೇತಿ, ದೊಡ್ಡ ಟೂರ್ನಮೆಂಟ್ ಸಂದರ್ಭದಲ್ಲಿ ಅರವಿಂದ್ ಶಾಸ್ತ್ರಿಯವರ ಮಾರ್ಗದರ್ಶನ ಬಿಟ್ಟರೆ ಹೆತ್ತವರೇ ಶಾಬ್ದಿಕ್‌ಗೆ ಗುರುಗಳು. ಪ್ರೋತ್ಸಾಹದ ಮಾತುಗಳೇ ಸ್ಪೂರ್ತಿ. ಹೀಗೆ ಬೆನ್ನು ತಟ್ಟಿದವರಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪ್ರಮುಖರು.

ವಿಶ್ವಮಾನ್ಯ ಚತುರ: ಶಾಬ್ದಿಕ್ ವರ್ಮಾ ವಿಶ್ವ ಚೆಸ್ ಫೆಡರೇಷನ್‌ನಲ್ಲಿ 1791 ರೇಟಿಂಗ್ ಪಡೆದುಕೊಂಡಿದ್ದಾನೆ. ಈ ರೇಟಿಂಗ್ 2000ಕ್ಕೆ ಬರಬೇಕು ಎನ್ನುವುದು ಶಾಬ್ದಿಕ್ ಬಯಕೆ. ಅದಕ್ಕಾಗಿ ಕಠಿಣ ಶ್ರಮ ವಹಿಸುತ್ತಿದ್ದಾನೆ. ಹೀಗೆ ಆಡುತ್ತಲೇ ದೊಡ್ಡ ಸಾಧನೆ ಮಾಡಬೇಕೆನ್ನುವ ಶಾಬ್ದಿಕ್‌ಗೆ ಗ್ಯಾರಿ ಕ್ಯಾಸ್ಪರೋವ್ ರೋಲ್ ಮಾಡೆಲ್.

ಚತುರಮತಿಯಿವನು:
ಚೆಸ್‌ನಿಂದ ಬುದ್ಧಿಶಕ್ತಿ, ಏಕಾಗ್ರತೆ, ತಾಳ್ಮೆ ವೃದ್ಧಿಸುತ್ತದೆ ಎಂಬುದಕ್ಕೆ ಶಾಬ್ದಿಕ್ ಉತ್ತಮ ಉದಾಹರಣೆ. ಬೇರೆಡೆ ಪಂದ್ಯಗಳಿಗೆ ಹೋಗುವ ಸಂದರ್ಭದಲ್ಲಿ ತರಗತಿಯಿಂದ ದೂರ ಉಳಿಯುವ ಶಾಬ್ದಿಕ್, ನಂತರ ಇತರ ವಿದ್ಯಾರ್ಥಿಗಳಂತೆ ಪುಸ್ತಕದ ಹುಳುವಾಗಿರುವುದಿಲ್ಲ. ಒಮ್ಮೆ ಪಠ್ಯದ ಮೇಲೆ ಕಣ್ಣಾಡಿಸಿದರೆ ಸಾಕು, ಪರೀಕ್ಷೆಯಲ್ಲಿ ಉತ್ತಮ ಸ್ಕೋರ್ ಮಾಡುತ್ತಾನೆ ಎನ್ನುತ್ತಾರೆ ಶಾಬ್ದಿಕ್ ತಂದೆ ರತ್ನವರ್ಮ ಬುಣ್ಣು. ಇನ್ನು ಟಿವಿ ನೋಡುವುದೇ ಅಪರೂಪ, ಬೇರೆ ಮನರಂಜನೆಯತ್ತ ಆಸಕ್ತಿಯೇ ಇಲ್ಲ ಎನ್ನುವುದು ಶಾಬ್ದಿಕ್ ಪಾಲಿಗೆ ಕೊರತೆಯಲ್ಲ, ವಿಶೇಷ.

ಸಾಧನೆ ಬಯಕೆ:
ಚೆಸ್‌ನಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂಬ ಬಯಕೆಯಿದೆ. ಈಗ ಆಟ-ಪಾಠ ಎರಡನ್ನೂ ಸಮಾನವಾಗಿ ಪರಿಗಣಿಸಿದ್ದೇನೆ. ಹತ್ತನೇ ತರಗತಿಯ ನಂತರ ಯಾವುದಕ್ಕೆ ಪ್ರಥಮ ಆದ್ಯತೆ ಎಂಬುದನ್ನು ನಿರ್ಧರಿಸುತ್ತೇನೆ.
– ಶಾಬ್ದಿಕ್ ವರ್ಮಾ, ಚೆಸ್ ಪ್ರತಿಭೆ

(ಈ ಲೇಖನ ವಿಜಯವಾಣಿಯಲ್ಲಿ ಪ್ರಕಟವಾಗಿದೆ)

ರಾಮಾಯಣದ ಕಥೆಯೇನು ಎಂದು ಯಾರಾದರೂ ಕೇಳಿದರೆ, ಅದನ್ನು ವಿವರಿಸಲು ಗಂಟೆ ಸಾಲದು. ಹೀಗಿರುವಾಗ ಮೂರೇ ನಿಮಿಷದಲ್ಲಿ ರಾಮಾಯಣ ಹೇಳಿ, ನೃತ್ಯ ಪ್ರಸ್ತುತ ಪಡಿಸುವುದು ಹೇಗೆ? ಬೇರೆಯವರಿಗೆ ಅಚ್ಚರಿ, ಆದರೆ ‘ಓಷಿಯನ್ ಕಿಡ್ಸ್’ಗಳಿಗಲ್ಲ. ಇವರದನ್ನು ಮಾಡಿ ತೋರಿಸಿದ್ದಾರೆ!

ಹೌದು, ಇಂತಹ ಅಚ್ಚರಿಗಳಿಂದಲೇ ಇಂದು ಈ ಟ್ರೂಪ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇದು ಮಂಗಳೂರಿನ ಪೋರ-ಪೋರಿಯರದ್ದೇ ತಂಡವಾಗಿರುವುದು ಕರಾವಳಿಗರಿಗೆ ಹೆಮ್ಮೆ.

‘ಓಷಿಯನ್ ಕಿಡ್ಸ್’ ನೃತ್ಯ ತಂಡದ ಸದಸ್ಯರು.

‘ಓಷಿಯನ್ ಕಿಡ್ಸ್’ ನೃತ್ಯ ತಂಡದ ಸದಸ್ಯರು.

ಓಷಿಯನ್ ಕಿಡ್ಸ್ ಈಗೇನೂ ಹುಟ್ಟಿಕೊಂಡಿರುವುದಲ್ಲ. 1989ರಲ್ಲೇ ಆರಂಭವಾಗಿತ್ತು. ಆಗ ಕಡಲ ತಟದಲ್ಲೇ ಅಭ್ಯಾಸ ಮಾಡುತ್ತಿದ್ದುದರಿಂದ, ಟ್ರೂಪ್ ಹೆಸರಿಗೂ ಅದೇ ಸೇರಿಕೊಂಡಿತು. ವಿನೋದ್ ಸಿಕ್ವೇರಾ ಸ್ಥಾಪಿಸಿರುವ ಸಂಸ್ಥೆಯಲ್ಲೀಗ ಪ್ರಾಣೇಶ್ ಬೋಳಾರ್, ಪ್ರಮೋದ್ ಆಳ್ವ, ಪ್ರವೀಣ್ ಕುಮಾರ್ ಆಧಾರ ಸ್ತಂಭಗಳು. ಇಷ್ಟೂ ಮಂದಿಯ ಮಾರ್ಗದರ್ಶನದಲ್ಲಿ 30ಕ್ಕೂ ಹೆಚ್ಚು ವೃತ್ತಿಪರ ಸದಸ್ಯರಿದ್ದಾರೆ. ನೂರಾರು ಮಂದಿ ತರಬೇತಿ ಪಡೆಯುತ್ತಿದ್ದಾರೆ.

ಮಂಗಳೂರು, ಬೆಂಗಳೂರು, ಕುವೈತ್, ದುಬೈ, ಅಬುದಾಬಿ, ಶಾರ್ಜಾ, ಬಹರೈನ್‌ಗಳಲ್ಲಿ ‘ಓಷಿಯನ್ ಕಿಡ್ಸ್’ ಹರಡಿದೆ. ಸಂಸ್ಥೆಯಲ್ಲಿ ಇದುವರೆಗೆ ಒಟ್ಟು 5,000ಕ್ಕೂ ಹೆಚ್ಚು ಮಂದಿ ನೃತ್ಯ ಕಲಿತಿದ್ದಾರೆ. 250ಕ್ಕೂ ಹೆಚ್ಚು ಪ್ರಶಸ್ತಿಗಳು, ಸಾವಿರಕ್ಕೂ ಮಿಕ್ಕಿ ಸ್ಟೇಜ್ ಶೋ ನೀಡಿರುವ ಗರಿಮೆಯಿದೆ.

ವಿಷಯಾಧರಿತ ವಿಶೇಷ:
ಸ್ವಲ್ಪ ಕಷ್ಟಪಟ್ಟರೆ ಯಾರು ಬೇಕಾದರೂ ಕುಣಿಯಬಹುದು, ಅದರಲ್ಲೇನಿದೆ ವಿಶೇಷ ಎಂದು ಮೂಗು ಮುರಿಯುವವರು ತುಂಬಾ ಮಂದಿ ಇರಬಹುದು. ಆದರೆ ಅಂತವರು ‘ಓಷಿಯನ್ ಕಿಡ್ಸ್’ ಪ್ರದರ್ಶನ ನೋಡಿದ ನಂತರ ಅಭಿಪ್ರಾಯ ಬದಲಾಯಿಸಿಕೊಳ್ಳದೇ ಇರಲು ಸಾಧ್ಯವಿಲ್ಲ. ಇದಕ್ಕೆ ಕಾರಣ, ವಿಷಯಾಧರಿತ ವಿಶೇಷ ನೃತ್ಯ.

ಈ ಟ್ರೂಪ್ ನಿರ್ದಿಷ್ಟ ಕಾನ್ಸೆಪ್ಟ್ ಅಡಿಯಲ್ಲಿ ನೃತ್ಯ ಸಂಯೋಜಿಸುತ್ತದೆ. ಪೌರಾಣಿಕ ವಿಚಾರಗಳು, ಸಂಸ್ಕೃತಿ, ಸಾಮಾಜಿಕ ಸಂಗತಿಗಳು, ಜಾಗತಿಕ ತಾಪಮಾನ ಹೀಗೆ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿ, ಆ ಗೆರೆಯಲ್ಲಿ ಪ್ರದರ್ಶನ ಸಾಗುತ್ತದೆ. ಒಂದು ಕಡೆಯಿಂದ ಕಥೆ ಹೇಳಬೇಕು, ಇನ್ನೊಂದು ಕಡೆಯಿಂದ ನೃತ್ಯ ಸಾಗಬೇಕು. ಎರಡೂ ವಿಶಿಷ್ಟವಾಗಿರಬೇಕು. ಆ ಕಲೆಯನ್ನು ನಾವು ಮೈಗೂಡಿಸಿಕೊಂಡಿದ್ದೇವೆ ಎಂಬಂತೆ ತಂಡದ ಸದಸ್ಯರಲ್ಲಿ ಹುರುಪು ಕಾಣುತ್ತಿದೆ. ಅದಕ್ಕೇ ಇರಬೇಕು, ‘ದಿ ಆರ್ಟ್ ಆಫ್ ದಿ ಬಾಡಿ ಲಾಂಗ್ವೇಜ್’ ಎಂಬ ಅಡಿಬರಹವನ್ನು ಕಡಲ ಮಕ್ಕಳು  ತೂಗಿಕೊಂಡಿರುವುದು.

ಇಂಡಿಯಾಸ್ ಗಾಟ್ ಟ್ಯಾಲೆಂಟ್:
ಕಲರ್ಸ್ ಚಾನೆಲ್‌ನಲ್ಲಿ ಪ್ರಸಾರವಾದ ‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ ರಿಯಾಲಿಟಿ ಶೋದಲ್ಲಿ ‘ಓಷಿಯನ್ ಕಿಡ್ಸ್’ ವಿಶ್ವದರ್ಶನವಾಗಿತ್ತು. ನೃತ್ಯ ರೂಪಕ ನೋಡಿದ ಲಕ್ಷೋಪಲಕ್ಷ ಮಂದಿ ಮೂಗಿನ ಮೇಲೆ ಬೆರಳಿಟ್ಟಿದ್ದರು. ನವದುರ್ಗೆಯರು, ರಾಮಾಯಣ, ಶಿವ ತಾಂಡವ ನೃತ್ಯ ರೂಪಕಗಳಿಗೆ ಸ್ವತಃ ಜಡ್ಜ್‌ಗಳೇ ಮೂಕರಾಗಿದ್ದರು. ಅದರಲ್ಲೂ ಕಿರಣ್ ಖೇರ್ ಅಂತೂ ಇವರ ಫ್ಯಾನ್ ಆಗಿಬಿಟ್ಟಿದ್ದರು.

ತಂಡ ಅರ್ಧದಲ್ಲೇ ಹೊರ ಬಿದ್ದಾಗ ಇದೇ ಕಿರಣ್ ಖೇರ್ ವೈಲ್ಡ್ ಕಾರ್ಡ್ ಮೂಲಕ ‘ಓಷಿಯನ್ ಕಿಡ್ಸ್’ಗೆ ಜೀವದಾನ ಕೊಟ್ಟಿದ್ದರು. ಆದರೂ ಕರಾವಳಿ ಪ್ರತಿಭೆಗಳಿಗೆ ಕಿರೀಟ ದಕ್ಕಲಿಲ್ಲ. ಸಿಗುತ್ತಿದ್ದರೆ ದೊಡ್ಡದಾಗಿ ಬೀಗಬಹುದಿತ್ತು. ಆದರೂ ತಲೆ ಎತ್ತಿ ನಡೆಯುವಷ್ಟು ಹೆಮ್ಮೆಯ ಪ್ರದರ್ಶನ ನೀಡಿದ್ದೇವೆ. ಉತ್ತರ ಭಾರತ ಮಾತ್ರವಲ್ಲ, ವಿದೇಶಗಳಿಂದಲೂ ಡ್ಯಾನ್ಸ್‌ಗಾಗಿ ಬೇಡಿಕೆ ಬರುತ್ತಿದೆ ಎಂದು ತಂಡ ಹೇಳಿಕೊಂಡಿದೆ.

ಹಳೆ ಕಲ್ಪನೆಯಲ್ಲಿ ಹೊಸತನ:
ಟಿವಿಯಲ್ಲಿ ಪೌರಾಣಿಕ ಆಧರಿತ ನೃತ್ಯ ಬಂದರೆ ರಿಮೋಟ್ ಒತ್ತಿ ಚಾನೆಲ್ ಬದಲಿಸುವವರೇ ಜಾಸ್ತಿ. ಆದರೆ ಹಾಗಾಗಬಾರದು. ಪುರಾಣಕ್ಕೆ ಧಕ್ಕೆಯಾಗದಂತೆ ಮತ್ತು ಯುವ ಜನಾಂಗ ನೋಡುವಂತಿರಬೇಕು. ಯಾವುದೋ ಒಂದು ಸಂದೇಶ ಅರಿವಿಗೆ ಬರದಂತೆ ತಲುಪಬೇಕು. ಹೀಗೆ ಯೋಚಿಸಿದಾಗ ಹುಟ್ಟಿದ್ದೇ ರಾಮಾಯಣ, ಶಿವತಾಂಡವ.

ಇಲ್ಲಿ ಬಳಸಲಾಗಿರುವ ಕಾನ್ಸೆಪ್ಟ್ ಹೊಸತೇನಲ್ಲ. ಆದರೆ ಅದನ್ನು ಹೊಸ ರೀತಿಯಲ್ಲಿ ಪ್ರೆಸೆಂಟ್ ಮಾಡಲಾಗಿದೆ. ಹಳೆ ಶೈಲಿಯಲ್ಲಿರುವಂತೆಯೇ ಈಗಿನ ಪೀಳಿಗೆಗೆ ಇಷ್ಟವಾಗುವ ರೀತಿಯಲ್ಲಿ ಸಂಯೋಜಿಸಲಾಗಿದೆ. ಶಾಸ್ತ್ರೀಯ ನೃತ್ಯವನ್ನು ಅಳವಡಿಸಲಾಗಿದೆ. ಹಾಗಾಗಿಯೇ ಜನಪ್ರಿಯವಾಯಿತು ಅನ್ನೋದು ಟೀಮ್ ಅಭಿಪ್ರಾಯ.

ಎಲ್ಲದರಲ್ಲೂ ಸೈ:
‘ಓಷಿಯನ್ ಕಿಡ್ಸ್’ ವಿಷಯಾಧರಿತ ನೃತ್ಯಗಳಿಂದ ಮಾತ್ರ ಪ್ರಸಿದ್ಧವಲ್ಲ. ಬಾಲಿವುಡ್ ಶೈಲಿಯಲ್ಲಿ ಹಿಪ್-ಹಾಪ್, ಬಾಂಗ್ರಾ, ವೆಸ್ಟರ್ನ್ ಫ್ರೀಸ್ಟೈಲ್, ಸಾಲ್ಸಾ, ಭಾರತೀಯ ನೃತ್ಯ ಪ್ರಕಾರಗಳಾದ ಭರತ ನಾಟ್ಯ, ಕಥಕ್, ಕೊಂಕಣಿ ಶೈಲಿಯ ಡ್ಯಾನ್ಸ್ ಸೇರಿದಂತೆ ಹಲವು ವಿಭಾಗಗಳಲ್ಲಿ ಪರಿಣತಿ ಹೊಂದಿದೆ. ಈ ಎಲ್ಲಾ ನೃತ್ಯ ಪ್ರಕಾರಗಳಲ್ಲೂ ತರಬೇತಿ ನೀಡಲಾಗುತ್ತಿದೆ.

ಒತ್ತಡ ಹೇರಬಾರದು:
ಡ್ಯಾನ್ಸ್ ಕಲಿಯಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರಬಾರದು. ಮಕ್ಕಳಿಗೆ ಡ್ಯಾನ್ಸ್ ಕಲಿಯಬೇಕು ಎಂಬ ಉತ್ಸಾಹ ಬರಬೇಕು. ಆಗ ಮಾತ್ರ ಅವರು ಆಸಕ್ತಿಯಿಂದ ಕಲಿಯಲು, ಪಳಗಲು ಸಾಧ್ಯ.
– ಪ್ರಮೋದ್ ಆಳ್ವ, ನೃತ್ಯ ನಿರ್ದೇಶಕ

(ಈ ಲೇಖನ ವಿಜಯವಾಣಿಯಲ್ಲಿ ಪ್ರಕಟವಾಗಿದೆ)

ಹುಟ್ಟೂರಿನ ಮೇಲಿನ ಅಭಿಮಾನವೆಂದರೆ ಹಾಗಿರುತ್ತದೆ. ಎಲ್ಲೇ ಎಷ್ಟೇ ದೂರ ಹೋದರೂ, ಮಂಗಳೂರು ಎಂದಾಗ ಒಳಗೊಳಗೆ ಆಗುವ ಸಂಭ್ರಮವೇ ಬೇರೆ. ನನ್ನೂರು, ನಾನು ತಿರುಗಾಡಿದ ರಸ್ತೆಗಳು, ಅದೇ ಹಂಪನಕಟ್ಟೆ ಸಿಗ್ನಲ್, ಸ್ಟೇಟ್ ಬ್ಯಾಂಕಿನ ಮೀನು ಮಾರುಕಟ್ಟೆ, ಲೇಡಿಗೋಷನ್ ಗಲ್ಲಿ, ಸೆಂಟ್ರಲ್ ಮಾರ್ಕೆಟ್, ಪಣಂಬೂರು ಬೀಚ್ ಹೀಗೆ.. ಇಲ್ಲಿದ್ದಾಗ ಇಷ್ಟವಿಲ್ಲದ ಜಾಗಗಳೂ ಎಲ್ಲೋ ಹೋದಾಗ ಕಾಡಲಾರಂಭಿಸುತ್ತವೆ, ಇಷ್ಟವಾಗುತ್ತವೆ.

ಹೆಸರು ಸಂದೀಪ್ ಮಲಾನಿ. ಮುಂಬೈಯಲ್ಲಿ ಹುಟ್ಟಿ ಮಂಗಳೂರಿನಲ್ಲಿ ಆಡಿ ಬೆಳೆದು ಮುಂಬೈ ಸೇರಿಕೊಂಡವರು. ಬಾಲಿವುಡ್, ಕಿರುಚಿತ್ರ ನಿರ್ದೇಶಕನಾಗಿ ದೊಡ್ಡ ಹೆಸರು ಮಾಡಿದ್ದಾರೆ. ಆದರೂ ಕುಡ್ಲದ ಮೋಹ ಬಿಟ್ಟಿಲ್ಲ. ಊರಲ್ಲಿ ಯಾರದೋ ಮದುವೆಯಿದೆ ಎಂದಾಗ, ಅದೇ ಒಂದು ನೆಪವೆಂಬಂತೆ ಮಂಗಳೂರಿಗೆ ಓಡೋಡಿ ಬರುತ್ತಾರೆ. ಎಲ್ಲವನ್ನೂ ಮರೆತು ಕರಾವಳಿಯ ಅಂಗಳದಲ್ಲಿ ಕುಂಟೆಬಿಲ್ಲೆ ಆಡಿ ಮತ್ತೆ ವ್ಯಾಪಾರದ ನಗರಿಗೆ ಮರಳುತ್ತಾರೆ. ಹಾಗೆ ಹೋದವರು ಆಗಾಗ ಅಮ್ಮನಲ್ಲಿ ಹೇಳುವುದು ಇಷ್ಟೇ-ಯಾವುದಾದರೂ ಕಾರ್ಯಕ್ರಮ ಇದ್ದರೆ ಪ್ಲೀಸ್ ಹೇಳಿ.

ಮಲಾನಿ ಹೆತ್ತವರು ಅತ್ತಾವರದಲ್ಲಿ ನೆಲೆಸಿದ್ದಾರೆ. ಇಲ್ಲಿಗೆ ಆಗಾಗ ಬರುವ ಮಲಾನಿ, ಮನಸೋ ಇಚ್ಛೆ ಮಂಗಳೂರು ಸುತ್ತುತ್ತಾರೆ. ಗೆಳೆಯರು, ಪಾರ್ಟಿ ಜತೆಗೆ ಕುಡ್ಲವನ್ನೇ ಅರೆದು ಕುಡಿದು ಬಿಡುತ್ತಾರೆ. ಇವರಿಗಂತೂ ಖುಷಿಯೋ ಖುಷಿ. ಎಷ್ಟಾದರೂ ಇದು ನನ್ನ ಊರಲ್ಲವೇ? ಇದು ನನ್ನದೇ ಭಾಷೆಯಲ್ಲವೇ ಎಂದು ಪ್ರಶ್ನಿಸುತ್ತಾರೆ ಮಲಾನಿ. ಇವರ ಮಾತಿನಲ್ಲಿ ಮಂಗಳೂರಿನ ಟಿಪಿಕಲ್ ಶೈಲಿ ಇನ್ನೂ ಮಾಯವಾಗಿಲ್ಲ ಅನ್ನೋದು ಎದ್ದು ಕಾಣುತ್ತದೆ.

ಸಂದೀಪ್ ಮಲಾನಿ

ಸಂದೀಪ್ ಮಲಾನಿ

ಶ್ರೀದೇವಿ ಅಂದ್ರೆ ಪ್ರಾಣ:
ಮಲಾನಿಗೆ ಅದ್ಯಾಕೋ ಏನೋ ಗೊತ್ತಿಲ್ಲ. ಶ್ರೀದೇವಿ ಬಂದು ಕೇಳಿದರೆ ಪ್ರಾಣ ಕೊಡಲೂ ಸಿದ್ಧ. ಭೇಟಿಗಾಗಿ ತಪಸ್ಸಿನಂತೆ ಕಾದವರಿಗೆ ಕೆಲ ತಿಂಗಳ ಹಿಂದಷ್ಟೇ ಶ್ರೀದೇವಿ ಸಿಕ್ಕಿದ್ದಾರೆ. ಅವರ ಜತೆಗೇ ಕೂತು ‘ಇಂಗ್ಲಿಷ್ ವಿಂಗ್ಲಿಷ್’ ಸಿನಿಮಾ ನೋಡಿರುವ ಮಲಾನಿ ಈಗ ಶ್ರೀದೇವಿ ಬಗ್ಗೆ ಡಾಕ್ಯುಮೆಂಟರಿ ಮಾಡುವ ಸಿದ್ಧತೆಯಲ್ಲಿದ್ದಾರೆ. ಶ್ರೀದೇವಿಯ ಬಾಲ್ಯದಿಂದ ಈಗಿನವರೆಗಿನ ಎಲ್ಲ ಬೆಳವಣಿಗೆಗಳನ್ನು ದಾಖಲಿಸುವ ಯತ್ನ ಇವರದ್ದು.

ಸಾಮಾಜಿಕ ಕಳಕಳಿ:
ಮೊದಲ ಚಿತ್ರ ‘ಮಿಸ್ ಕ್ಯಾಲಿಫೋರ್ನಿಯಾ’. ನಂತರ ‘ಎಸ್‌ಎಂಎಸ್ 6260’. ಈಗ ‘ಜಾನ್‌ಲೇವಾ 555’. ಕಿರುಚಿತ್ರಗಳ ಸಾಲಿನಲ್ಲಿ ಜೋ ಜೋ ಲಾಲಿ, ಎಲ್ಲಾ ಓಕೆ ಲೋನ್ ಯಾಕೆ?, ಶಾಯದ್….ಹೀಗೆ ನಿರ್ದೇಶಿಸಿದ ಚಿತ್ರಗಳು ಸಾಮಾಜಿಕ ಕಳಕಳಿಯುಳ್ಳದ್ದು. ಇಷ್ಟೂ ಚಿತ್ರಗಳಲ್ಲಿ ಮಲಾನಿ ಕಮರ್ಷಿಯಲ್ ಆಗಿ ನಗುವಂತಾಗಿದ್ದು ‘ಜಾನ್‌ಲೇವಾ 555’ ಚಿತ್ರದಲ್ಲಿ. ಇದು ಇತ್ತೀಚೆಗಷ್ಟೇ ಮುಂಬೈಯಲ್ಲಿ 50 ದಿನ ಪೂರೈಸಿದೆ. ಕೆಲವು ಚಿತ್ರಗಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿವೆ. ಹಲವಾರು ಪ್ರಶಸ್ತಿಗಳು ಮಲಾನಿ ಮುಡಿಗೇರಿವೆ.

ಆಧುನಿಕತೆ, ಏಡ್ಸ್, ಸಾಲ, ಸಲಿಂಗಕಾಮ ಮುಂತಾದ ವಿಷಯಗಳಲ್ಲಿ ಸಿನಿಮಾ ಮಾಡಿರುವ ಇವರೀಗ ಕ್ಯಾನ್ಸರ್ ಮತ್ತು ಭ್ರೂಣಹತ್ಯೆಯನ್ನು ರೀಲ್‌ಗಿಳಿಸುತ್ತಿದ್ದಾರೆ. ಕನ್ನಡದಲ್ಲೂ ಚಿತ್ರ ನಿರ್ದೇಶಿಸುವ ಮಾತುಕತೆ ನಡೆಯುತ್ತಿದೆ. ಆದರೆ ಅದು ಇನ್ನಷ್ಟೇ ಅಂತಿಮವಾಗಬೇಕಿದೆ ಎನ್ನುತ್ತಾರೆ ಮಲಾನಿ. ಇದರ ನಡುವೆ ‘ಸಿನೆಮಲಾನಿ 100’ ಎಂಬ ಕನಸು ಮಲಾನಿ ಕೈಯಲ್ಲಿ ಅಂತಿಮ ರೂಪ ಪಡೆಯುತ್ತಿದೆ. ಭಾರತೀಯ ಚಿತ್ರರಂಗದ 100 ವರ್ಷಗಳ ಇತಿಹಾಸ ಸಾರುವ ಪ್ರಾಜೆಕ್ಟ್ ಶೀಘ್ರದಲ್ಲೇ ಎಲ್ಲರ ಮುಂದೆ ಬರುವ ನಿರೀಕ್ಷೆಗಳಿವೆ.

ತುಳು ಸಿನಿಮಾದ ಕನಸು:
ಬಂಗಾರ್ ಪಟ್ಲೇರ್, ಸೆಪ್ಟೆಂಬರ್ 8 ಮುಂತಾದ ತುಳು, ಕೊಂಕಣಿ ಚಿತ್ರಗಳಲ್ಲಿ ನಟಿಸಿದ್ದೇನೆ. ನನ್ನ ಭಾಷೆಯಲ್ಲಿ (ತುಳು-ಕೊಂಕಣಿ) ಚಿತ್ರ ನಿರ್ದೇಶಿಸಬೇಕು ಎನ್ನುವುದು ಕನಸು. ಕಥೆ ಸಿದ್ಧವಾಗಿದೆ, ನಿರ್ಮಾಪಕರು ಸಿಗುತ್ತಿಲ್ಲ.

ಮಲಾನಿ ಇಷ್ಟು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ, ಸ್ಟಾರುಗಳ ಚಿತ್ರ ನಿರ್ದೇಶಿಸಿಲ್ಲವಲ್ಲ? ಇದಕ್ಕೆ ಉತ್ತರವೂ ಸಿದ್ಧ. ಹೊಸಬರಿಗೆ ಅವಕಾಶ ಕೊಡಬೇಕು ಎನ್ನುವುದು ನನ್ನ ಉದ್ದೇಶ; ಎಷ್ಟೋ ಮಂದಿ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಯಾರೂ ಚಾನ್ಸ್ ಕೊಟ್ಟಿರುವುದಿಲ್ಲ. ಅಂಥವರನ್ನು ಪ್ರೋತ್ಸಾಹಿಸೋಣ. ಈಗ ನನ್ನ ಹೊಸ ಪ್ರಾಜೆಕ್ಟ್ ‘ಸಿನೆಮಲಾನಿ’ಯಲ್ಲಿ 500ಕ್ಕೂ ಹೆಚ್ಚು ಕಲಾವಿದರಿದ್ದಾರೆ. ಹಾಗೆಂದು ನಾನು ಸ್ಟಾರ್‌ಗಳ ಸಿನಿಮಾ ಮಾಡುವುದಿಲ್ಲ ಎಂದಲ್ಲ. ನೋಡೋಣ ಎನ್ನುತ್ತಾರೆ.

ಬನ್ಸ್, ಗೋಳಿಬಜೆ:
ಮಂಗಳೂರು ನನ್ನ ಪ್ರಾಣ. ಅಲ್ಲಿ ಸಿಗುವ ಊಟ, ತಿಂಡಿ ಬೇರೆಲ್ಲೂ ಸಿಗುವುದಿಲ್ಲ. ಅದರಲ್ಲೂ ಕೋರಿ ರೊಟ್ಟಿ, ಚಿಕನ್ ಸುಕ್ಕಾ, ಮೀನು ಅಂದರೆ ನನಗೆ ತುಂಬಾ ಇಷ್ಟ. ಬನ್ಸ್, ಗೋಳಿಬಜೆಯನ್ನಂತೂ ಮಿಸ್ ಮಾಡೋದೇ ಇಲ್ಲ.
– ಸಂದೀಪ್ ಮಲಾನಿ, ನಿರ್ದೇಶಕ

(ಈ ಲೇಖನ ವಿಜಯವಾಣಿಯಲ್ಲಿ ಪ್ರಕಟವಾಗಿದೆ)

ಸುನಿಲ್ ಅಬ್ರಹಾಂ ಗ್ರಾಮೀಣ ಕನಸು.

ಸುನಿಲ್ ಅಬ್ರಹಾಂ ಗ್ರಾಮೀಣ ಕನಸು.

ತಂತ್ರಜ್ಞಾನ ಬಳಕೆಯಾದರೂ ಸಾಂಪ್ರದಾಯಿಕ ಕಲೆಗೆ ಧಕ್ಕೆಯಿಲ್ಲ. ಆಧುನಿಕತೆಯ ಭರಾಟೆಯಲ್ಲಿ ನೈಜಕಲೆ ಅಪ್ರಸ್ತುತವೆನಿಸುವ ಪ್ರಸಂಗ ಎಂದೂ ಬರುವುದಿಲ್ಲ. ಅದು ಯಾವತ್ತಿದ್ದರೂ ನವನವೀನ. ಕಾರಣ, ಕುಂಚ ಕೊಡುವ ತೃಪ್ತಿಯನ್ನು ಕಂಪ್ಯೂಟರ್ ಕೊಡದೇ ಇರುವುದು. ಎಷ್ಟೇ ಸುಂದರವಾಗಿ ಚಿತ್ರ ಮೂಡಿಸುವ ತಂತ್ರಜ್ಞಾನವಿದ್ದರೂ, ನೈಜಕಲೆಯಿಂದ ಸಿಗುವ ತೃಪ್ತಿ, ಪಂಚೇಂದ್ರಿಯಗಳಿಗೆ ಆಗುವ ಅನುಭವ ಬೇರೆಲ್ಲೂ ಸಿಗದು. ಸಾಂಪ್ರದಾಯಿಕ ಕಲೆ ಯಾವತ್ತಿದ್ದರೂ ಶಾಶ್ವತ!

ಹೀಗೆ ಹೇಳುವವರು, ಕಲೆಯನ್ನೇ ಉಸಿರಾಡುವ ಪಿ.ಎಲ್. ಸುನಿಲ್ ಅಬ್ರಹಾಂ. ಇವರದ್ದು ವೈಚಾರಿಕ ಮನಸ್ಸು, ಸಾಂಪ್ರದಾಯಿಕ ಕಲ್ಪನೆ, ಸಾಮಾಜಿಕ ಉದ್ದೇಶದ ಕಲಾಸೇವೆ. ಸಂಸ್ಕೃತಿಯನ್ನು ಬಿಂಬಿಸುತ್ತಲೇ ಸಮಾಜದಲ್ಲಿ ಬದಲಾವಣೆ ತರುವ ಪರೋಕ್ಷ ಕೆಲಸ ಇವರಿಂದ ಆಗುತ್ತಿದೆ. ಇವರ ಕಲಾಕೃತಿಗಳನ್ನು ದಿವಿನಾಗಿ ನೋಡಿದ ಮೇಲಂತೂ ಎಲ್ಲ ಸೋಗಿನ ಪೋಷಾಕುಗಳನ್ನು ಕಳಚಿ ಪ್ರಕೃತಿಯ ಮಡಿಲಲ್ಲೇ ಉಳಿದು ಬಿಡೋಣ ಎಂಬ ಭಾವನೆ ಒಳಗೊಳಗೆ ಸ್ಫುರಿಸಿ ಬಿಡುತ್ತದೆ. ಇವರ ಚಿತ್ರಗಳಲ್ಲಿ ಕ್ರಾಂತಿಯ ಆಡಂಬರವಿಲ್ಲ, ಆದರೆ ಸಮಕಾಲೀನ ಚಿತ್ರಣವಿದೆ; ಈ ಸಮಾಜ ಹೇಗಿರಬೇಕೆಂಬ ಮೌನ ಸಂದೇಶವಿದೆ. ಬಣ್ಣಗಳ ನಡುವೆ ಇವರಿಡುವ ಪ್ರತಿ ಚುಕ್ಕಿಗೂ ಕಲಾರಸಿಕ ಒಂದೊಂದು ಅರ್ಥ ಕಲ್ಪಿಸಿಕೊಳ್ಳುವಂತಿರುತ್ತದೆ.

ಸುನಿಲ್ ಅಬ್ರಹಾಂ

ಸುನಿಲ್ ಅಬ್ರಹಾಂ

ಮೂಲತಃ ಕೇರಳದ ಕೊಟ್ಟಾಯಂನ ಸುನಿಲ್ ಅಬ್ರಹಾಂ ಆಡುತ್ತಾ ಬೆಳೆದದ್ದು ಶಿವಮೊಗ್ಗೆಯ ಮಂಡಗದ್ದೆಯಲ್ಲಿ. ಅದೇ ಸ್ಫೂರ್ತಿಯೇನೋ, ಕಲಾಕೃತಿಗಳಲ್ಲಿ ಹಚ್ಚ ಹಸುರೇ ಮೇಳೈಸುತ್ತಿದೆ. ಕರಾವಳಿ ಪರಿಸರದ ಸೂಕ್ಷ್ಮಗಳನ್ನು ಅದೆಷ್ಟು ಚೆನ್ನಾಗಿ ಗುರುತಿಸಿ ಚಿತ್ರಿಸಿದ್ದಾರೆಂಬುದನ್ನು ಕಣ್ಣಾರೆ ಕಂಡೇ ಅನುಭವಿಸಬೇಕು. ಇವರ ಕುಂಚದಲ್ಲಿ ಅರಳಿದ ಚಿತ್ರ ನೋಡಿದ ಮೇಲೆ ಸೋಮೇಶ್ವರ ಬೀಚ್ ನೋಡಲೇಬೇಕು ಎಂದೆನಿಸುತ್ತದೆ.

1985ರಲ್ಲಿ ಲಲಿತಕಲೆಯಲ್ಲಿ ಡಿಪ್ಲೊಮಾ ಮುಗಿಸಿದ ಇವರು ನಂತರ ಚಿತ್ರಕಲೆಯನ್ನೇ ವೃತ್ತಿಯಾಗಿ ಸ್ವೀಕರಿಸಿ ಮಂಗಳೂರಿನ ಕರಂಗಲ್ಪಾಡಿಯಲ್ಲಿ ‘ಕಲಾ ವಿಷನ್’ ಸಂಸ್ಥೆ ನಡೆಸುತ್ತಿದ್ದಾರೆ. ಈ ಕಲಾಸಂತೆಯ ಸಂಸ್ಥೆಗೀಗ 10ರ ಸಂಭ್ರಮ. ಇಷ್ಟರಲ್ಲೇ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ಅದರಲ್ಲೂ ನಾಲ್ಕರಿಂದ 80ರ ವಯೋಮಾನದ ಕಲಾಸಕ್ತರಿಗೆ ಗುರುವಾಗಿರುವ ಹೆಮ್ಮೆ ಸುನಿಲ್ ಅವರದ್ದು.

ಇವರ ಪಾಲಿಗೆ ಕಲೆ ಎನ್ನುವುದು ಪ್ರವೃತ್ತಿ ಮತ್ತು ವೃತ್ತಿ ಎರಡೂ ಹೌದು. ಕಲೆಯಲ್ಲಿ ಸಿಗುವ ತೃಪ್ತಿಯನ್ನೇ ಬದುಕು ಎಂದು ನಂಬಿ ಸೋತಿಲ್ಲ. ಕಲೆಯ ಪಾಠ ಹೇಳುತ್ತಲೇ ಅದ್ಭುತ ಕಲ್ಪನೆಗಳನ್ನು ಕಣ್ಣ ಮುಂದೆ ತಂದುಕೊಂಡು ಸರಸರನೆ ಸಿಕ್ಕು ಸಿಕ್ಕೆನಿಸುವ ಗೆರೆಯೆಳೆದು ಬಣ್ಣ ತುಂಬಿ ಸುಂದರ ಕಲಾಕೃತಿಗಳಿಗೆ ಜೀವ ಕೊಟ್ಟಿದ್ದಾರೆ. ತೈಲವರ್ಣ, ಜಲವರ್ಣ, ಅಕ್ರಿಲಿಕ್, ಸೆರಾಮಿಕ್ಸ್, ಮುರಾಲ್ ಪೇಂಟಿಂಗ್, ಉಬ್ಬು ಶಿಲ್ಪ, ಸೆರಾಮಿಕ್ಸ್ ಪೇಂಟಿಂಗ್, ಕೊಲಾಜ್, ಕ್ಯಾರಿಕೇಚರ್ ಹೀಗೆ ಎಲ್ಲದರಲ್ಲೂ ಸುನಿಲ್ ಕೈಯೋಡಿದೆ. ಸಾಕಷ್ಟು ಕಡೆ ಕಲಾ ಪ್ರದರ್ಶನಗಳನ್ನೂ ಏರ್ಪಡಿಸಿದ್ದಾರೆ.

ಹೆಮ್ಮೆ ಸಾಕು, ಪ್ರಶಸ್ತಿ ಬೇಡ:
ಏನೂ ಮಾಡದವರಿಗೆ ಪ್ರಶಸ್ತಿಗಳು ಒಲಿಯುತ್ತವೆ. ಆದರೆ ನಾನು ಪ್ರಶಸ್ತಿಯ ಹಿಂದೆ ಬಿದ್ದಿಲ್ಲ. ಯಾವ ದೊಡ್ಡ ಕಿರೀಟವೂ ಮುಡಿಗೇರಿಲ್ಲ. ಆ ನಿರೀಕ್ಷೆಯೂ ನನಗಿಲ್ಲ ಎನ್ನುವ ಸುನಿಲ್, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಳ, ಶಕ್ತಿನಗರದಲ್ಲಿರುವ ಕೊಂಕಣಿ ಸಭಾಭವನ ಕಟ್ಟಡಗಳು ಸೇರಿದಂತೆ ಅನೇಕ ಸುಂದರ ಕಟ್ಟಡಗಳ, ಗಾರ್ಡನ್‌ಗಳಿಗೆ ಇಂಜಿನಿಯರುಗಳು ಹಾಕಿದ್ದ ಲೆಕ್ಕಾಚಾರಗಳಿಗೆ ಕಲ್ಪನೆಯ ರೂಪ ಕೊಟ್ಟಿರುವುದನ್ನು, ಕೊಡುತ್ತಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 1992ರಲ್ಲಿ ಆರಂಭವಾದ ಕರಾವಳಿ ಉತ್ಸವದ ಲಾಂಛನ ಸ್ಪರ್ಧೆಯಲ್ಲಿ ಗೆದ್ದಿದ್ದೇನೆ, ಅದೇ ಲಾಂಛನ ಈಗಲೂ ಇದೆ ಎಂದು ಭುಜ ಹಾರಿಸುತ್ತಾರೆ.Sunil Abraham art (2)

ಇನ್ನು ಜಾಗತೀಕರಣದಿಂದ ಕಲೆಗೆ ಲಾಭವಾಗಿದೆ ಎನ್ನುತ್ತಾರೆ ಸುನಿಲ್. ಇತ್ತೀಚಿನ ವರ್ಷಗಳಲ್ಲಿ ಕಲೆಯತ್ತ ಆಕರ್ಷಿತರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ವಿದೇಶಗಳಲ್ಲಿ ಕಲೆಗಿರುವ ಮಹತ್ವವನ್ನು ಕಣ್ಣಾರೆ ಕಂಡವರು, ಇಲ್ಲಿ ಬಂದು ತಾವೂ ಕುಂಚ ಕೈಗೆತ್ತಿಕೊಂಡು ತಮ್ಮ ಕಲ್ಪನೆಯನ್ನು, ಮನಸ್ಸಿನ ಭಾವನೆಗಳನ್ನು ಅಚ್ಚಿಗೆ ಹಾಕುತ್ತಾರೆ. ಹಾಗೆ ನೋಡಿದರೆ, ಕಲೆಗೆ ಭಾರತದಷ್ಟು ಬೇರೆ ಪ್ರಶಸ್ತ ಸ್ಥಳ ಬೇರೊಂದಿಲ್ಲ. ಭಾರತೀಯರಲ್ಲಿ ಕಲೆ ಎನ್ನುವುದು ರಕ್ತಗತವಾಗಿಯೇ ಬಂದಿದೆ ಎಂದು ‘ಕಲಾ ವಿಷನ್’ ವಿದ್ಯಾರ್ಥಿಗಳತ್ತ ಬೊಟ್ಟು ಮಾಡಿ ತೋರಿಸುತ್ತಾರೆ.

ನಾಟಾ ತರಬೇತಿ:
ಸುನಿಲ್ ಅಬ್ರಹಾಂ ಕಲಾದೇವಿಯ ಆರಾಧನೆ ಜತೆಗೆ ಶಿಕ್ಷಣಕ್ಕೆ ಸಂಬಂಧಪಟ್ಟ ತರಬೇತಿಗಳನ್ನೂ ನೀಡುತ್ತಿದ್ದಾರೆ. ರಾಷ್ಟ್ರೀಯ ವಾಸ್ತುಶಿಲ್ಪ ಮಂಡಳಿ ನಡೆಸುವ ನಾಟಾ(ನ್ಯಾಷನಲ್ ಅಪ್ಟಿಟ್ಯುಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್) ಪರೀಕ್ಷೆಗಾಗಿ ಮಂಗಳೂರಿನ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆರು ತಿಂಗಳ ಅವಧಿಯ ತರಬೇತಿ ಇವರ ‘ಕಲಾ ವಿಷನ್’ನಲ್ಲಿ ನಡೆಯುತ್ತಿದೆ.

ಸಿಇಟಿ ಇದ್ದಂತೆ ವಾಸ್ತುಶಿಲ್ಪ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ನಾಟಾ ಪರೀಕ್ಷೆ ಕಡ್ಡಾಯ. ಆದರೆ ಇದು ಸಿಇಟಿಯಂತೆ ಸಾಮಾನ್ಯ ರೂಪದಲ್ಲಿ ಇರುವುದಿಲ್ಲ. ಭವಿಷ್ಯದ ಇಂಜಿನಿಯರುಗಳು ಕುಂಚದ ಕಲೆ ಕಲಿಯಲೇಬೇಕು. ಹಾಗಾಗಿ ಆರ್ಕಿಟೆಕ್ಚರ್ ಕ್ಷೇತ್ರವನ್ನು ಆರಿಸಿಕೊಳ್ಳುವ ಉದ್ದೇಶ ಹೊಂದಿರುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಆರಂಭದಲ್ಲೇ ನಾಟಾಕ್ಕಾಗಿ ತರಬೇತಿ ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲೂ ಸುನಿಲ್ ಮುಂದಡಿಯಿಟ್ಟಿದ್ದಾರೆ.

(ಈ ಲೇಖನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)

Temple

ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನ

ಪುರಾತನದ ಕುಕ್ಕುಟಪುರ, ಈಗಿನ ಕೊಕ್ಕಡದಲ್ಲಿ ನೆಲೆಸಿರುವ ಹತ್ತು ಗ್ರಾಮಗಳ ಗ್ರಾಮದೇವತೆ ಶ್ರೀ ವೈದ್ಯನಾಥೇಶ್ವರ ಸಕಲ ರೋಗ ರುಜಿನಗಳಿಗೆ ವೈದ್ಯನೆಂಬುದು ಪ್ರತೀತಿ.

ಕೊಕ್ಕಡ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ದ್ವಾಪರ ಯುಗದ ಉದ್ಭವ ಲಿಂಗದ ದರ್ಶನ ಪಾಂಡವರಿಗೆ ಆಗಿತ್ತು ಎಂಬಲ್ಲಿಂದ, ಸ್ವತಃ ಪಾಂಡವರಿಗೇ ವೈದ್ಯನಾಥೇಶ್ವರ ಔಷಧಿ ಕೊಟ್ಟಿದ್ದ; ಇಲ್ಲಿರುವ ಕಲ್ಯಾಣಿಯನ್ನು ಸ್ವತಃ ಭೀಮನೇ ನಿರ್ಮಿಸಿದ್ದ ಎಂಬ ಐತಿಹ್ಯವಿದೆ.

ಶಿಶಿಲೇಶ್ವರನ ತಲೆಗೆ ಗಾಯವಾಗಿದ್ದಾಗ ಇದೇ ವೈದ್ಯನಾಥೇಶ್ವರ ಮದ್ದು ಕೊಟ್ಟು ಗುಣಪಡಿಸಿದ್ದ. ಆಗ ಉಂಟಾದ ಗೊಂದಲದಲ್ಲಿ ಶಿಶಿಲೇಶ್ವರ ಶಾಪ ಕೊಟ್ಟಿದ್ದರಿಂದಲೇ ಇಂದಿಗೂ ಕ್ಷೇತ್ರದ ಕಲ್ಯಾಣಿಯ ಮೀನುಗಳು ಚಿಕ್ಕದಾಗಿವೆ ಎಂದು ಇಲ್ಲಿನ ಪುರಾಣ ಹೇಳುತ್ತದೆ.

ಕ್ಷೇತ್ರದ ಕೆರೆಯಲ್ಲಿ ಮಿಂದವರ ಕುಷ್ಠರೋಗವೂ ವಾಸಿಯಾಗಿದೆ. ಯಾವುದೇ ಕಾಯಿಲೆಯಿದ್ದರೂ, ತೀರ್ಥ ಚಿಮುಕಿಸಿದಲ್ಲಿ ಗುಣಮುಖವಾಗುತ್ತದೆ. ಜಾನುವಾರುಗಳ ಸಮಸ್ಯೆಗೂ ಇಲ್ಲಿ ಪರಿಹಾರ ಸಿಗುತ್ತದೆ ಎನ್ನುವುದು ಊರ-ಪರವೂರ ಭಕ್ತರ ನಂಬಿಕೆ.

Kalyani

ಭೀಮ ನಿರ್ಮಿಸಿದ ಐತಿಹ್ಯ ಹೊಂದಿರುವ ಕಲ್ಯಾಣಿ.

ಇಲ್ಲಿನ ಧ್ವಜಸ್ತಂಭ ಮತ್ತು ಕೆರೆಯ ನಡುವಿನ ನೀಲಕಂಠ ಲಿಂಗವನ್ನು ನರಸಿಂಹ ದೇವರಾಯನೆಂಬ ರಾಜ ಯುದ್ಧ ಗೆದ್ದಾಗ ಪ್ರತಿಷ್ಠಾಪಿಸಿದ್ದ ಎಂಬುದಕ್ಕೆ ಶಾಸನದ ಸಾಕ್ಷಿಯಿದೆ.

ಗರ್ಭಗುಡಿ ಎಡಭಾಗದಲ್ಲಿ ಗಣಪತಿ, ಬಲಭಾಗದಲ್ಲಿ ಉಳ್ಳಾಲ್ತಿ. ದೇಗುಲದ ಹೊರಗೆ ಎಡಭಾಗದಲ್ಲಿ ವಿಷ್ಣುಮೂರ್ತಿ ಗುಡಿ. ಕಲ್ಯಾಣಿಯ ಪಕ್ಕದಲ್ಲೇ ಅಣ್ಣಪ್ಪನ ಕಟ್ಟೆ. ದೇಗುಲದ ಎದುರಿನಲ್ಲಿ ನಿಜ ಬನದೊಳಗೆ ನಾಗಬನ ವಿಶೇಷ. ರಂಗಪೂಜೆ ಮತ್ತು ಏಕಾದಶರುದ್ರ ಇಲ್ಲಿನ ವಿಶೇಷ ಸೇವೆಗಳು.

ಅಣ್ಣಪ್ಪ ಗುಡಿ:
ಕೈಲಾಸದಿಂದ ವೈದ್ಯನಾಥೇಶ್ವರನ ಜತೆ ಕೊಕ್ಕಡಕ್ಕೆ ಬಂದು ಧರ್ಮಸ್ಥಳಕ್ಕೆ ಮುನಿಸಿಕೊಂಡು ಹೋಗಿದ್ದ ಅಣ್ಣಪ್ಪ, ಮತ್ತೆ ಬರಬೇಕೆಂದರೆ ಕ್ಷೇತ್ರದಲ್ಲಿ ಅನ್ನದಾನ ನಡೆಯಬೇಕು ಎಂದು ಹೇಳಿದ್ದನಂತೆ. ಅದರಂತೆ ಈಗ ಇಲ್ಲಿ ಭೋಜನ ಶಾಲೆ ಮತ್ತು ಅಣ್ಣಪ್ಪ ಗುಡಿ ನಿರ್ಮಾಣವಾಗುತ್ತಿದೆ.

Nandi

ಗರ್ಭಗುಡಿಯ ಎದುರು ಇರುವ ನಂದಿ ಭುಜ.

ನಂದಿ ಭುಜ:
ಭೀಮ ಕೋಪದಿಂದ ಗದೆಯನ್ನು ಬಂಡೆಗೆ ಬಡಿದಾಗ ನಂದಿ ಮೂರು ತುಂಡಾಗಿ ಸಿಡಿದು ಭುಜದ ಭಾಗ ಕೊಕ್ಕಡದಲ್ಲಿ, ಬಾಲದ ಭಾಗ ಶಿಶಿಲದಲ್ಲಿ ಹಾಗೂ ತಲೆಯ ಭಾಗ ರಾಮಕುಂಜದಲ್ಲಿ ಹೋಗಿ ಬಿದ್ದಿತ್ತು. ಇದರ ಕುರುಹು ಎಂಬಂತೆ ನಂದಿಯ ಭುಜದಂತೆ ಕಾಣುವ ಕಲ್ಲು ಗರ್ಭಗುಡಿಯ ಎದುರಲ್ಲೇ ಕಾಣಸಿಗುತ್ತದೆ.

ಡಿ.16ಕ್ಕೆ ಕೋರಿ ಜಾತ್ರೆ:
ಇಲ್ಲಿ ಹರಕೆ ತೀರಿಸಲು ಕೋಣ, ಎತ್ತು, ಹಸು, ಕರುಗಳನ್ನೂ ಕಂಬಳ ಗದ್ದೆಯಲ್ಲಿ ಓಡಿಸುತ್ತಾರೆ. ಅನಾರೋಗ್ಯದ ಸಂದರ್ಭದಲ್ಲಿ ಹರಕೆ ಹೊತ್ತವರು ಕಂಬಳಕ್ಕೆ ಸೊಪ್ಪು ಹಾಕುತ್ತಾರೆ. ಇದೇ ಕೋರಿ ಜಾತ್ರೆ ವಿಶೇಷ. ಈ ವರ್ಷ ಡಿ.16ರಂದು ಕೋರಿ ಜಾತ್ರೆ. ವಾರ್ಷಿಕ ಜಾತ್ರೆ ಪ್ರತಿವರ್ಷ ಮೇ 2ರಿಂದ 9ರವರೆಗೆ ವಿಜೃಂಭಣೆಯಿಂದ ನಡೆಯುತ್ತದೆ.

ಪರ್ಜನ್ಯ ಜಪ:
ಬರಗಾಲದ ಸಂದರ್ಭದಲ್ಲಿ ಮಧ್ವಾಚಾರ್ಯರು ಕೊಕ್ಕಡಕ್ಕೆ ಬಂದಿದ್ದಾಗ, ಪರ್ಜನ್ಯ ಜಪ ಮಾಡಿದ್ದರು. ಆಗ ಮಳೆಯಾಗಿತ್ತು ಎಂಬ ಪ್ರತೀತಿಯಿದೆ. ಇಲ್ಲಿ ಪರ್ಜನ್ಯ ಜಪ ಮಾಡಿದರೆ ಈಗಲೂ ಮಳೆಯಾಗುತ್ತದೆ.
– ಸತ್ಯನಾರಾಯಣ ಭಟ್, ಆಡಳಿತ ಮೊಕ್ತೇಸರರು

ಭಕ್ತರ ನಂಬಿಕೆ
ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಸಿಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಕ್ಷೇತ್ರ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಿದೆ. ನಿತ್ಯ ಅನ್ನ ಸಂತರ್ಪಣೆಯ ಸಂಕಲ್ಪ ಮಾಡಿದ್ದೇವೆ.
– ಹರೀಶ್ ಭಟ್, ಭಕ್ತರು

(ಈ ಲೇಖನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)