ಚದುರಂಗ ಚತುರ ಶಾಬ್ದಿಕ್
Posted January 10, 2013
on:ಚೆಸ್.. ಚೆಸ್.. ಚೆಸ್.. ಬೆಳಗ್ಗೆ ಎದ್ದರೆ ಚೆಸ್, ಮಧ್ಯಾಹ್ನ ಪುರುಸೊತ್ತು ಸಿಕ್ಕರೂ ಚೆಸ್, ರಾತ್ರಿಯೂ ಚೆಸ್.. ಹೀಗೆ ಚೆಸ್ ತಪಸ್ಸು ಮಾಡುತ್ತಾ, ಸಾಧನೆಯ ಶಿಖರವನ್ನೇರುತ್ತಿರುವ ಈ 14ರ ಹುಡುಗನ ಹೆಸರು ಶಾಬ್ದಿಕ್ ವರ್ಮಾ.
ತಲೆ ತಿನ್ನುವ ಚದುರಂಗದಾಟವನ್ನು ಶಾಬ್ದಿಕ್ ನಮ್ಮ-ನಿಮ್ಮಂತೆ ಶಾಲೆಗೆ ಹೋದ ನಂತರ, ಮೀಸೆ ಮೊಳೆತ ಮೇಲೆ ಕಲಿತವನಲ್ಲ; ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಈತ ಮೂರುವರೆ ವರ್ಷದವನ್ನಿದ್ದಾಗಲೇ ಚದುರಂಗದ ಬಿಲ್ಲೆಗಳೊಂದಿಗೆ ಆಟ ಶುರು ಮಾಡಿದ್ದ. ಆರನೇ ವರ್ಷದಲ್ಲಿ ಟೇಬಲ್ ಮುಂದೆ ಕುಳಿತು ಇತರರಿಗೆ ಸವಾಲೆಸೆದಿದ್ದ!
ಅದಾದ ಮೇಲೆ ಶಾಬ್ದಿಕ್ ಹಿಂತಿರುಗಿ ನೋಡಿಲ್ಲ. 2005ರಲ್ಲಿ ಸ್ಟೇಟ್ ಅಂಡರ್ 7 ಹಾಗೂ 2007ರಲ್ಲಿ ಸ್ಟೇಟ್ ಅಂಡರ್ 9ರ ಚಾಂಪಿಯನ್; ಬೆಂಗಳೂರಿನಲ್ಲಿ 2008ರಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪರ ಆಡಿ ಬೆಸ್ಟ್ ನ್ಯಾಷನಲ್ ಪ್ಲೇಯರ್ ಪ್ರಶಸ್ತಿ; ಮೂರು ಸಲ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಸೋಲರಿಯದ ಸರದಾರನಾಗಿದ್ದು; 2011ರಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಮಕ್ಕಳ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯ ತಂಡದ ಪರ ಬೆಳ್ಳಿಪದಕ ಹಾಗೂ ವೈಯಕ್ತಿಕ ವಿಭಾಗದಲ್ಲಿ ಬೋರ್ಡ್ ಮೆಡಲ್; 2012ರಲ್ಲಿ ಇದೇ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ, ಕರ್ನಾಟಕ ಚೆಸ್ ತಂಡದ ನಾಯಕ.
ಒಟ್ಟಾರೆ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಏಳು ಪ್ರಥಮ, ನಾಲ್ಕು ದ್ವಿತೀಯ, ಎರಡು ತೃತೀಯ ಪ್ರಶಸ್ತಿಗಳನ್ನು ಶಾಬ್ದಿಕ್ ಬಗಲಿಗೆ ಹಾಕಿಕೊಂಡಿದ್ದಲ್ಲದೆ, ದೆಹಲಿಯಲ್ಲಿ ನಡೆದ ಏಳು ವರ್ಷದವರೊಳಗಿನ ಏಷ್ಯನ್ ಚಾಂಪಿಯನ್‌ಶಿಪ್, 2008ರಲ್ಲಿ ನಾಗ್ಪುರದಲ್ಲಿ ನಡೆದ 10ರೊಳಗಿನವರ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾನೆ.
ಇನ್ನು ಈ ಚೆಸ್ ಪೋರ ತನಗಿಂತ ಹಿರಿಯರ ಜತೆ ಆಡಿ ಗೆದ್ದಿರುವುದೇ ಹೆಚ್ಚು. ಅದರಲ್ಲೂ ಮಹಾರಾಷ್ಟ್ರದ ಕುಪವಾಡದಲ್ಲಿ ಇಬ್ಬರು ಅಂತಾರಾಷ್ಟ್ರೀಯ ಮಾಸ್ಟರ್‌ಗಳ ಜತೆ ಸೀನಿಯರ್ ಡಿವಿಜನ್ ರ‌್ಯಾಪಿಡ್ ಚೆಸ್ ಆಡಿ, ಮೊದಲ ಹತ್ತರೊಳಗೆ ಸ್ಥಾನ ಪಡೆದು ಭೇಷ್ ಎನಿಸಿಕೊಂಡಿದ್ದು ಹೆಮ್ಮೆ.
ಎಸ್‌ಡಿಎಂ ಹುಡುಗ: ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂಭತ್ತನೇ ತರಗತಿ ಓದುತ್ತಿರುವ ಶಾಬ್ದಿಕ್ ವರ್ಮಾ ಬೆಳ್ತಂಗಡಿಯ ವಕೀಲ ರತ್ನವರ್ಮ ಬುಣ್ಣು ಮತ್ತು ಧರ್ಮಸ್ಥಳದ ವೈದ್ಯೆ ಡಾ.ಮೃಣಾಲಿನಿ ದಂಪತಿಯ ಪುತ್ರ.
ಶಾಬ್ದಿಕ್‌ಗಾಗಿಯೇ ಬದುಕನ್ನು ಮುಡಿಪಾಗಿಟ್ಟಂತೆ ಇಬ್ಬರದ್ದೂ ಪ್ರೋತ್ಸಾಹ. ಮನೆಗೆ ಹೊಕ್ಕಾಗ ಪುಟ್ಟ ವಸ್ತು ಸಂಗ್ರಹಾಲಯವೇನೋ ಎಂಬ ಭಾವನೆ ಯಾರಿಗಾದರೂ ಬರದಿರದು. ಅಷ್ಟೊಂದು ಪ್ರಶಸ್ತಿ-ಪುರಸ್ಕಾರಗಳ ಗುಡ್ಡೆ.
ಡೆರಿಕ್ ಚೆಸ್ ಸ್ಕೂಲ್ ನಲ್ಲಿ ತರಬೇತಿ, ದೊಡ್ಡ ಟೂರ್ನಮೆಂಟ್ ಸಂದರ್ಭದಲ್ಲಿ ಅರವಿಂದ್ ಶಾಸ್ತ್ರಿಯವರ ಮಾರ್ಗದರ್ಶನ ಬಿಟ್ಟರೆ ಹೆತ್ತವರೇ ಶಾಬ್ದಿಕ್‌ಗೆ ಗುರುಗಳು. ಪ್ರೋತ್ಸಾಹದ ಮಾತುಗಳೇ ಸ್ಪೂರ್ತಿ. ಹೀಗೆ ಬೆನ್ನು ತಟ್ಟಿದವರಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪ್ರಮುಖರು.
ವಿಶ್ವಮಾನ್ಯ ಚತುರ: ಶಾಬ್ದಿಕ್ ವರ್ಮಾ ವಿಶ್ವ ಚೆಸ್ ಫೆಡರೇಷನ್‌ನಲ್ಲಿ 1791 ರೇಟಿಂಗ್ ಪಡೆದುಕೊಂಡಿದ್ದಾನೆ. ಈ ರೇಟಿಂಗ್ 2000ಕ್ಕೆ ಬರಬೇಕು ಎನ್ನುವುದು ಶಾಬ್ದಿಕ್ ಬಯಕೆ. ಅದಕ್ಕಾಗಿ ಕಠಿಣ ಶ್ರಮ ವಹಿಸುತ್ತಿದ್ದಾನೆ. ಹೀಗೆ ಆಡುತ್ತಲೇ ದೊಡ್ಡ ಸಾಧನೆ ಮಾಡಬೇಕೆನ್ನುವ ಶಾಬ್ದಿಕ್‌ಗೆ ಗ್ಯಾರಿ ಕ್ಯಾಸ್ಪರೋವ್ ರೋಲ್ ಮಾಡೆಲ್.
ಚತುರಮತಿಯಿವನು:
ಚೆಸ್‌ನಿಂದ ಬುದ್ಧಿಶಕ್ತಿ, ಏಕಾಗ್ರತೆ, ತಾಳ್ಮೆ ವೃದ್ಧಿಸುತ್ತದೆ ಎಂಬುದಕ್ಕೆ ಶಾಬ್ದಿಕ್ ಉತ್ತಮ ಉದಾಹರಣೆ. ಬೇರೆಡೆ ಪಂದ್ಯಗಳಿಗೆ ಹೋಗುವ ಸಂದರ್ಭದಲ್ಲಿ ತರಗತಿಯಿಂದ ದೂರ ಉಳಿಯುವ ಶಾಬ್ದಿಕ್, ನಂತರ ಇತರ ವಿದ್ಯಾರ್ಥಿಗಳಂತೆ ಪುಸ್ತಕದ ಹುಳುವಾಗಿರುವುದಿಲ್ಲ. ಒಮ್ಮೆ ಪಠ್ಯದ ಮೇಲೆ ಕಣ್ಣಾಡಿಸಿದರೆ ಸಾಕು, ಪರೀಕ್ಷೆಯಲ್ಲಿ ಉತ್ತಮ ಸ್ಕೋರ್ ಮಾಡುತ್ತಾನೆ ಎನ್ನುತ್ತಾರೆ ಶಾಬ್ದಿಕ್ ತಂದೆ ರತ್ನವರ್ಮ ಬುಣ್ಣು. ಇನ್ನು ಟಿವಿ ನೋಡುವುದೇ ಅಪರೂಪ, ಬೇರೆ ಮನರಂಜನೆಯತ್ತ ಆಸಕ್ತಿಯೇ ಇಲ್ಲ ಎನ್ನುವುದು ಶಾಬ್ದಿಕ್ ಪಾಲಿಗೆ ಕೊರತೆಯಲ್ಲ, ವಿಶೇಷ.
ಸಾಧನೆ ಬಯಕೆ:
ಚೆಸ್‌ನಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂಬ ಬಯಕೆಯಿದೆ. ಈಗ ಆಟ-ಪಾಠ ಎರಡನ್ನೂ ಸಮಾನವಾಗಿ ಪರಿಗಣಿಸಿದ್ದೇನೆ. ಹತ್ತನೇ ತರಗತಿಯ ನಂತರ ಯಾವುದಕ್ಕೆ ಪ್ರಥಮ ಆದ್ಯತೆ ಎಂಬುದನ್ನು ನಿರ್ಧರಿಸುತ್ತೇನೆ.
– ಶಾಬ್ದಿಕ್ ವರ್ಮಾ, ಚೆಸ್ ಪ್ರತಿಭೆ
(ಈ ಲೇಖನ ವಿಜಯವಾಣಿಯಲ್ಲಿ ಪ್ರಕಟವಾಗಿದೆ)
Leave a Reply