ಕಡಲ ಮಕ್ಕಳ ಕಲರವ
Posted December 27, 2012
on:ರಾಮಾಯಣದ ಕಥೆಯೇನು ಎಂದು ಯಾರಾದರೂ ಕೇಳಿದರೆ, ಅದನ್ನು ವಿವರಿಸಲು ಗಂಟೆ ಸಾಲದು. ಹೀಗಿರುವಾಗ ಮೂರೇ ನಿಮಿಷದಲ್ಲಿ ರಾಮಾಯಣ ಹೇಳಿ, ನೃತ್ಯ ಪ್ರಸ್ತುತ ಪಡಿಸುವುದು ಹೇಗೆ? ಬೇರೆಯವರಿಗೆ ಅಚ್ಚರಿ, ಆದರೆ ‘ಓಷಿಯನ್ ಕಿಡ್ಸ್’ಗಳಿಗಲ್ಲ. ಇವರದನ್ನು ಮಾಡಿ ತೋರಿಸಿದ್ದಾರೆ!
ಹೌದು, ಇಂತಹ ಅಚ್ಚರಿಗಳಿಂದಲೇ ಇಂದು ಈ ಟ್ರೂಪ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇದು ಮಂಗಳೂರಿನ ಪೋರ-ಪೋರಿಯರದ್ದೇ ತಂಡವಾಗಿರುವುದು ಕರಾವಳಿಗರಿಗೆ ಹೆಮ್ಮೆ.
ಓಷಿಯನ್ ಕಿಡ್ಸ್ ಈಗೇನೂ ಹುಟ್ಟಿಕೊಂಡಿರುವುದಲ್ಲ. 1989ರಲ್ಲೇ ಆರಂಭವಾಗಿತ್ತು. ಆಗ ಕಡಲ ತಟದಲ್ಲೇ ಅಭ್ಯಾಸ ಮಾಡುತ್ತಿದ್ದುದರಿಂದ, ಟ್ರೂಪ್ ಹೆಸರಿಗೂ ಅದೇ ಸೇರಿಕೊಂಡಿತು. ವಿನೋದ್ ಸಿಕ್ವೇರಾ ಸ್ಥಾಪಿಸಿರುವ ಸಂಸ್ಥೆಯಲ್ಲೀಗ ಪ್ರಾಣೇಶ್ ಬೋಳಾರ್, ಪ್ರಮೋದ್ ಆಳ್ವ, ಪ್ರವೀಣ್ ಕುಮಾರ್ ಆಧಾರ ಸ್ತಂಭಗಳು. ಇಷ್ಟೂ ಮಂದಿಯ ಮಾರ್ಗದರ್ಶನದಲ್ಲಿ 30ಕ್ಕೂ ಹೆಚ್ಚು ವೃತ್ತಿಪರ ಸದಸ್ಯರಿದ್ದಾರೆ. ನೂರಾರು ಮಂದಿ ತರಬೇತಿ ಪಡೆಯುತ್ತಿದ್ದಾರೆ.
ಮಂಗಳೂರು, ಬೆಂಗಳೂರು, ಕುವೈತ್, ದುಬೈ, ಅಬುದಾಬಿ, ಶಾರ್ಜಾ, ಬಹರೈನ್‌ಗಳಲ್ಲಿ ‘ಓಷಿಯನ್ ಕಿಡ್ಸ್’ ಹರಡಿದೆ. ಸಂಸ್ಥೆಯಲ್ಲಿ ಇದುವರೆಗೆ ಒಟ್ಟು 5,000ಕ್ಕೂ ಹೆಚ್ಚು ಮಂದಿ ನೃತ್ಯ ಕಲಿತಿದ್ದಾರೆ. 250ಕ್ಕೂ ಹೆಚ್ಚು ಪ್ರಶಸ್ತಿಗಳು, ಸಾವಿರಕ್ಕೂ ಮಿಕ್ಕಿ ಸ್ಟೇಜ್ ಶೋ ನೀಡಿರುವ ಗರಿಮೆಯಿದೆ.
ವಿಷಯಾಧರಿತ ವಿಶೇಷ:
ಸ್ವಲ್ಪ ಕಷ್ಟಪಟ್ಟರೆ ಯಾರು ಬೇಕಾದರೂ ಕುಣಿಯಬಹುದು, ಅದರಲ್ಲೇನಿದೆ ವಿಶೇಷ ಎಂದು ಮೂಗು ಮುರಿಯುವವರು ತುಂಬಾ ಮಂದಿ ಇರಬಹುದು. ಆದರೆ ಅಂತವರು ‘ಓಷಿಯನ್ ಕಿಡ್ಸ್’ ಪ್ರದರ್ಶನ ನೋಡಿದ ನಂತರ ಅಭಿಪ್ರಾಯ ಬದಲಾಯಿಸಿಕೊಳ್ಳದೇ ಇರಲು ಸಾಧ್ಯವಿಲ್ಲ. ಇದಕ್ಕೆ ಕಾರಣ, ವಿಷಯಾಧರಿತ ವಿಶೇಷ ನೃತ್ಯ.
ಈ ಟ್ರೂಪ್ ನಿರ್ದಿಷ್ಟ ಕಾನ್ಸೆಪ್ಟ್ ಅಡಿಯಲ್ಲಿ ನೃತ್ಯ ಸಂಯೋಜಿಸುತ್ತದೆ. ಪೌರಾಣಿಕ ವಿಚಾರಗಳು, ಸಂಸ್ಕೃತಿ, ಸಾಮಾಜಿಕ ಸಂಗತಿಗಳು, ಜಾಗತಿಕ ತಾಪಮಾನ ಹೀಗೆ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿ, ಆ ಗೆರೆಯಲ್ಲಿ ಪ್ರದರ್ಶನ ಸಾಗುತ್ತದೆ. ಒಂದು ಕಡೆಯಿಂದ ಕಥೆ ಹೇಳಬೇಕು, ಇನ್ನೊಂದು ಕಡೆಯಿಂದ ನೃತ್ಯ ಸಾಗಬೇಕು. ಎರಡೂ ವಿಶಿಷ್ಟವಾಗಿರಬೇಕು. ಆ ಕಲೆಯನ್ನು ನಾವು ಮೈಗೂಡಿಸಿಕೊಂಡಿದ್ದೇವೆ ಎಂಬಂತೆ ತಂಡದ ಸದಸ್ಯರಲ್ಲಿ ಹುರುಪು ಕಾಣುತ್ತಿದೆ. ಅದಕ್ಕೇ ಇರಬೇಕು, ‘ದಿ ಆರ್ಟ್ ಆಫ್ ದಿ ಬಾಡಿ ಲಾಂಗ್ವೇಜ್’ ಎಂಬ ಅಡಿಬರಹವನ್ನು ಕಡಲ ಮಕ್ಕಳು ತೂಗಿಕೊಂಡಿರುವುದು.
ಇಂಡಿಯಾಸ್ ಗಾಟ್ ಟ್ಯಾಲೆಂಟ್:
ಕಲರ್ಸ್ ಚಾನೆಲ್‌ನಲ್ಲಿ ಪ್ರಸಾರವಾದ ‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ ರಿಯಾಲಿಟಿ ಶೋದಲ್ಲಿ ‘ಓಷಿಯನ್ ಕಿಡ್ಸ್’ ವಿಶ್ವದರ್ಶನವಾಗಿತ್ತು. ನೃತ್ಯ ರೂಪಕ ನೋಡಿದ ಲಕ್ಷೋಪಲಕ್ಷ ಮಂದಿ ಮೂಗಿನ ಮೇಲೆ ಬೆರಳಿಟ್ಟಿದ್ದರು. ನವದುರ್ಗೆಯರು, ರಾಮಾಯಣ, ಶಿವ ತಾಂಡವ ನೃತ್ಯ ರೂಪಕಗಳಿಗೆ ಸ್ವತಃ ಜಡ್ಜ್‌ಗಳೇ ಮೂಕರಾಗಿದ್ದರು. ಅದರಲ್ಲೂ ಕಿರಣ್ ಖೇರ್ ಅಂತೂ ಇವರ ಫ್ಯಾನ್ ಆಗಿಬಿಟ್ಟಿದ್ದರು.
ತಂಡ ಅರ್ಧದಲ್ಲೇ ಹೊರ ಬಿದ್ದಾಗ ಇದೇ ಕಿರಣ್ ಖೇರ್ ವೈಲ್ಡ್ ಕಾರ್ಡ್ ಮೂಲಕ ‘ಓಷಿಯನ್ ಕಿಡ್ಸ್’ಗೆ ಜೀವದಾನ ಕೊಟ್ಟಿದ್ದರು. ಆದರೂ ಕರಾವಳಿ ಪ್ರತಿಭೆಗಳಿಗೆ ಕಿರೀಟ ದಕ್ಕಲಿಲ್ಲ. ಸಿಗುತ್ತಿದ್ದರೆ ದೊಡ್ಡದಾಗಿ ಬೀಗಬಹುದಿತ್ತು. ಆದರೂ ತಲೆ ಎತ್ತಿ ನಡೆಯುವಷ್ಟು ಹೆಮ್ಮೆಯ ಪ್ರದರ್ಶನ ನೀಡಿದ್ದೇವೆ. ಉತ್ತರ ಭಾರತ ಮಾತ್ರವಲ್ಲ, ವಿದೇಶಗಳಿಂದಲೂ ಡ್ಯಾನ್ಸ್‌ಗಾಗಿ ಬೇಡಿಕೆ ಬರುತ್ತಿದೆ ಎಂದು ತಂಡ ಹೇಳಿಕೊಂಡಿದೆ.
ಹಳೆ ಕಲ್ಪನೆಯಲ್ಲಿ ಹೊಸತನ:
ಟಿವಿಯಲ್ಲಿ ಪೌರಾಣಿಕ ಆಧರಿತ ನೃತ್ಯ ಬಂದರೆ ರಿಮೋಟ್ ಒತ್ತಿ ಚಾನೆಲ್ ಬದಲಿಸುವವರೇ ಜಾಸ್ತಿ. ಆದರೆ ಹಾಗಾಗಬಾರದು. ಪುರಾಣಕ್ಕೆ ಧಕ್ಕೆಯಾಗದಂತೆ ಮತ್ತು ಯುವ ಜನಾಂಗ ನೋಡುವಂತಿರಬೇಕು. ಯಾವುದೋ ಒಂದು ಸಂದೇಶ ಅರಿವಿಗೆ ಬರದಂತೆ ತಲುಪಬೇಕು. ಹೀಗೆ ಯೋಚಿಸಿದಾಗ ಹುಟ್ಟಿದ್ದೇ ರಾಮಾಯಣ, ಶಿವತಾಂಡವ.
ಇಲ್ಲಿ ಬಳಸಲಾಗಿರುವ ಕಾನ್ಸೆಪ್ಟ್ ಹೊಸತೇನಲ್ಲ. ಆದರೆ ಅದನ್ನು ಹೊಸ ರೀತಿಯಲ್ಲಿ ಪ್ರೆಸೆಂಟ್ ಮಾಡಲಾಗಿದೆ. ಹಳೆ ಶೈಲಿಯಲ್ಲಿರುವಂತೆಯೇ ಈಗಿನ ಪೀಳಿಗೆಗೆ ಇಷ್ಟವಾಗುವ ರೀತಿಯಲ್ಲಿ ಸಂಯೋಜಿಸಲಾಗಿದೆ. ಶಾಸ್ತ್ರೀಯ ನೃತ್ಯವನ್ನು ಅಳವಡಿಸಲಾಗಿದೆ. ಹಾಗಾಗಿಯೇ ಜನಪ್ರಿಯವಾಯಿತು ಅನ್ನೋದು ಟೀಮ್ ಅಭಿಪ್ರಾಯ.
ಎಲ್ಲದರಲ್ಲೂ ಸೈ:
‘ಓಷಿಯನ್ ಕಿಡ್ಸ್’ ವಿಷಯಾಧರಿತ ನೃತ್ಯಗಳಿಂದ ಮಾತ್ರ ಪ್ರಸಿದ್ಧವಲ್ಲ. ಬಾಲಿವುಡ್ ಶೈಲಿಯಲ್ಲಿ ಹಿಪ್-ಹಾಪ್, ಬಾಂಗ್ರಾ, ವೆಸ್ಟರ್ನ್ ಫ್ರೀಸ್ಟೈಲ್, ಸಾಲ್ಸಾ, ಭಾರತೀಯ ನೃತ್ಯ ಪ್ರಕಾರಗಳಾದ ಭರತ ನಾಟ್ಯ, ಕಥಕ್, ಕೊಂಕಣಿ ಶೈಲಿಯ ಡ್ಯಾನ್ಸ್ ಸೇರಿದಂತೆ ಹಲವು ವಿಭಾಗಗಳಲ್ಲಿ ಪರಿಣತಿ ಹೊಂದಿದೆ. ಈ ಎಲ್ಲಾ ನೃತ್ಯ ಪ್ರಕಾರಗಳಲ್ಲೂ ತರಬೇತಿ ನೀಡಲಾಗುತ್ತಿದೆ.
ಒತ್ತಡ ಹೇರಬಾರದು:
ಡ್ಯಾನ್ಸ್ ಕಲಿಯಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರಬಾರದು. ಮಕ್ಕಳಿಗೆ ಡ್ಯಾನ್ಸ್ ಕಲಿಯಬೇಕು ಎಂಬ ಉತ್ಸಾಹ ಬರಬೇಕು. ಆಗ ಮಾತ್ರ ಅವರು ಆಸಕ್ತಿಯಿಂದ ಕಲಿಯಲು, ಪಳಗಲು ಸಾಧ್ಯ.
– ಪ್ರಮೋದ್ ಆಳ್ವ, ನೃತ್ಯ ನಿರ್ದೇಶಕ
(ಈ ಲೇಖನ ವಿಜಯವಾಣಿಯಲ್ಲಿ ಪ್ರಕಟವಾಗಿದೆ)
Leave a Reply