ಕಲೆ ಶಿಲೆಯಂತೆ, ಅಳಿವಿಲ್ಲ..!
Posted December 23, 2012
on:ತಂತ್ರಜ್ಞಾನ ಬಳಕೆಯಾದರೂ ಸಾಂಪ್ರದಾಯಿಕ ಕಲೆಗೆ ಧಕ್ಕೆಯಿಲ್ಲ. ಆಧುನಿಕತೆಯ ಭರಾಟೆಯಲ್ಲಿ ನೈಜಕಲೆ ಅಪ್ರಸ್ತುತವೆನಿಸುವ ಪ್ರಸಂಗ ಎಂದೂ ಬರುವುದಿಲ್ಲ. ಅದು ಯಾವತ್ತಿದ್ದರೂ ನವನವೀನ. ಕಾರಣ, ಕುಂಚ ಕೊಡುವ ತೃಪ್ತಿಯನ್ನು ಕಂಪ್ಯೂಟರ್ ಕೊಡದೇ ಇರುವುದು. ಎಷ್ಟೇ ಸುಂದರವಾಗಿ ಚಿತ್ರ ಮೂಡಿಸುವ ತಂತ್ರಜ್ಞಾನವಿದ್ದರೂ, ನೈಜಕಲೆಯಿಂದ ಸಿಗುವ ತೃಪ್ತಿ, ಪಂಚೇಂದ್ರಿಯಗಳಿಗೆ ಆಗುವ ಅನುಭವ ಬೇರೆಲ್ಲೂ ಸಿಗದು. ಸಾಂಪ್ರದಾಯಿಕ ಕಲೆ ಯಾವತ್ತಿದ್ದರೂ ಶಾಶ್ವತ!
ಹೀಗೆ ಹೇಳುವವರು, ಕಲೆಯನ್ನೇ ಉಸಿರಾಡುವ ಪಿ.ಎಲ್. ಸುನಿಲ್ ಅಬ್ರಹಾಂ. ಇವರದ್ದು ವೈಚಾರಿಕ ಮನಸ್ಸು, ಸಾಂಪ್ರದಾಯಿಕ ಕಲ್ಪನೆ, ಸಾಮಾಜಿಕ ಉದ್ದೇಶದ ಕಲಾಸೇವೆ. ಸಂಸ್ಕೃತಿಯನ್ನು ಬಿಂಬಿಸುತ್ತಲೇ ಸಮಾಜದಲ್ಲಿ ಬದಲಾವಣೆ ತರುವ ಪರೋಕ್ಷ ಕೆಲಸ ಇವರಿಂದ ಆಗುತ್ತಿದೆ. ಇವರ ಕಲಾಕೃತಿಗಳನ್ನು ದಿವಿನಾಗಿ ನೋಡಿದ ಮೇಲಂತೂ ಎಲ್ಲ ಸೋಗಿನ ಪೋಷಾಕುಗಳನ್ನು ಕಳಚಿ ಪ್ರಕೃತಿಯ ಮಡಿಲಲ್ಲೇ ಉಳಿದು ಬಿಡೋಣ ಎಂಬ ಭಾವನೆ ಒಳಗೊಳಗೆ ಸ್ಫುರಿಸಿ ಬಿಡುತ್ತದೆ. ಇವರ ಚಿತ್ರಗಳಲ್ಲಿ ಕ್ರಾಂತಿಯ ಆಡಂಬರವಿಲ್ಲ, ಆದರೆ ಸಮಕಾಲೀನ ಚಿತ್ರಣವಿದೆ; ಈ ಸಮಾಜ ಹೇಗಿರಬೇಕೆಂಬ ಮೌನ ಸಂದೇಶವಿದೆ. ಬಣ್ಣಗಳ ನಡುವೆ ಇವರಿಡುವ ಪ್ರತಿ ಚುಕ್ಕಿಗೂ ಕಲಾರಸಿಕ ಒಂದೊಂದು ಅರ್ಥ ಕಲ್ಪಿಸಿಕೊಳ್ಳುವಂತಿರುತ್ತದೆ.
ಮೂಲತಃ ಕೇರಳದ ಕೊಟ್ಟಾಯಂನ ಸುನಿಲ್ ಅಬ್ರಹಾಂ ಆಡುತ್ತಾ ಬೆಳೆದದ್ದು ಶಿವಮೊಗ್ಗೆಯ ಮಂಡಗದ್ದೆಯಲ್ಲಿ. ಅದೇ ಸ್ಫೂರ್ತಿಯೇನೋ, ಕಲಾಕೃತಿಗಳಲ್ಲಿ ಹಚ್ಚ ಹಸುರೇ ಮೇಳೈಸುತ್ತಿದೆ. ಕರಾವಳಿ ಪರಿಸರದ ಸೂಕ್ಷ್ಮಗಳನ್ನು ಅದೆಷ್ಟು ಚೆನ್ನಾಗಿ ಗುರುತಿಸಿ ಚಿತ್ರಿಸಿದ್ದಾರೆಂಬುದನ್ನು ಕಣ್ಣಾರೆ ಕಂಡೇ ಅನುಭವಿಸಬೇಕು. ಇವರ ಕುಂಚದಲ್ಲಿ ಅರಳಿದ ಚಿತ್ರ ನೋಡಿದ ಮೇಲೆ ಸೋಮೇಶ್ವರ ಬೀಚ್ ನೋಡಲೇಬೇಕು ಎಂದೆನಿಸುತ್ತದೆ.
1985ರಲ್ಲಿ ಲಲಿತಕಲೆಯಲ್ಲಿ ಡಿಪ್ಲೊಮಾ ಮುಗಿಸಿದ ಇವರು ನಂತರ ಚಿತ್ರಕಲೆಯನ್ನೇ ವೃತ್ತಿಯಾಗಿ ಸ್ವೀಕರಿಸಿ ಮಂಗಳೂರಿನ ಕರಂಗಲ್ಪಾಡಿಯಲ್ಲಿ ‘ಕಲಾ ವಿಷನ್’ ಸಂಸ್ಥೆ ನಡೆಸುತ್ತಿದ್ದಾರೆ. ಈ ಕಲಾಸಂತೆಯ ಸಂಸ್ಥೆಗೀಗ 10ರ ಸಂಭ್ರಮ. ಇಷ್ಟರಲ್ಲೇ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ಅದರಲ್ಲೂ ನಾಲ್ಕರಿಂದ 80ರ ವಯೋಮಾನದ ಕಲಾಸಕ್ತರಿಗೆ ಗುರುವಾಗಿರುವ ಹೆಮ್ಮೆ ಸುನಿಲ್ ಅವರದ್ದು.
ಇವರ ಪಾಲಿಗೆ ಕಲೆ ಎನ್ನುವುದು ಪ್ರವೃತ್ತಿ ಮತ್ತು ವೃತ್ತಿ ಎರಡೂ ಹೌದು. ಕಲೆಯಲ್ಲಿ ಸಿಗುವ ತೃಪ್ತಿಯನ್ನೇ ಬದುಕು ಎಂದು ನಂಬಿ ಸೋತಿಲ್ಲ. ಕಲೆಯ ಪಾಠ ಹೇಳುತ್ತಲೇ ಅದ್ಭುತ ಕಲ್ಪನೆಗಳನ್ನು ಕಣ್ಣ ಮುಂದೆ ತಂದುಕೊಂಡು ಸರಸರನೆ ಸಿಕ್ಕು ಸಿಕ್ಕೆನಿಸುವ ಗೆರೆಯೆಳೆದು ಬಣ್ಣ ತುಂಬಿ ಸುಂದರ ಕಲಾಕೃತಿಗಳಿಗೆ ಜೀವ ಕೊಟ್ಟಿದ್ದಾರೆ. ತೈಲವರ್ಣ, ಜಲವರ್ಣ, ಅಕ್ರಿಲಿಕ್, ಸೆರಾಮಿಕ್ಸ್, ಮುರಾಲ್ ಪೇಂಟಿಂಗ್, ಉಬ್ಬು ಶಿಲ್ಪ, ಸೆರಾಮಿಕ್ಸ್ ಪೇಂಟಿಂಗ್, ಕೊಲಾಜ್, ಕ್ಯಾರಿಕೇಚರ್ ಹೀಗೆ ಎಲ್ಲದರಲ್ಲೂ ಸುನಿಲ್ ಕೈಯೋಡಿದೆ. ಸಾಕಷ್ಟು ಕಡೆ ಕಲಾ ಪ್ರದರ್ಶನಗಳನ್ನೂ ಏರ್ಪಡಿಸಿದ್ದಾರೆ.
ಹೆಮ್ಮೆ ಸಾಕು, ಪ್ರಶಸ್ತಿ ಬೇಡ:
ಏನೂ ಮಾಡದವರಿಗೆ ಪ್ರಶಸ್ತಿಗಳು ಒಲಿಯುತ್ತವೆ. ಆದರೆ ನಾನು ಪ್ರಶಸ್ತಿಯ ಹಿಂದೆ ಬಿದ್ದಿಲ್ಲ. ಯಾವ ದೊಡ್ಡ ಕಿರೀಟವೂ ಮುಡಿಗೇರಿಲ್ಲ. ಆ ನಿರೀಕ್ಷೆಯೂ ನನಗಿಲ್ಲ ಎನ್ನುವ ಸುನಿಲ್, ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಳ, ಶಕ್ತಿನಗರದಲ್ಲಿರುವ ಕೊಂಕಣಿ ಸಭಾಭವನ ಕಟ್ಟಡಗಳು ಸೇರಿದಂತೆ ಅನೇಕ ಸುಂದರ ಕಟ್ಟಡಗಳ, ಗಾರ್ಡನ್‌ಗಳಿಗೆ ಇಂಜಿನಿಯರುಗಳು ಹಾಕಿದ್ದ ಲೆಕ್ಕಾಚಾರಗಳಿಗೆ ಕಲ್ಪನೆಯ ರೂಪ ಕೊಟ್ಟಿರುವುದನ್ನು, ಕೊಡುತ್ತಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 1992ರಲ್ಲಿ ಆರಂಭವಾದ ಕರಾವಳಿ ಉತ್ಸವದ ಲಾಂಛನ ಸ್ಪರ್ಧೆಯಲ್ಲಿ ಗೆದ್ದಿದ್ದೇನೆ, ಅದೇ ಲಾಂಛನ ಈಗಲೂ ಇದೆ ಎಂದು ಭುಜ ಹಾರಿಸುತ್ತಾರೆ.
ಇನ್ನು ಜಾಗತೀಕರಣದಿಂದ ಕಲೆಗೆ ಲಾಭವಾಗಿದೆ ಎನ್ನುತ್ತಾರೆ ಸುನಿಲ್. ಇತ್ತೀಚಿನ ವರ್ಷಗಳಲ್ಲಿ ಕಲೆಯತ್ತ ಆಕರ್ಷಿತರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ವಿದೇಶಗಳಲ್ಲಿ ಕಲೆಗಿರುವ ಮಹತ್ವವನ್ನು ಕಣ್ಣಾರೆ ಕಂಡವರು, ಇಲ್ಲಿ ಬಂದು ತಾವೂ ಕುಂಚ ಕೈಗೆತ್ತಿಕೊಂಡು ತಮ್ಮ ಕಲ್ಪನೆಯನ್ನು, ಮನಸ್ಸಿನ ಭಾವನೆಗಳನ್ನು ಅಚ್ಚಿಗೆ ಹಾಕುತ್ತಾರೆ. ಹಾಗೆ ನೋಡಿದರೆ, ಕಲೆಗೆ ಭಾರತದಷ್ಟು ಬೇರೆ ಪ್ರಶಸ್ತ ಸ್ಥಳ ಬೇರೊಂದಿಲ್ಲ. ಭಾರತೀಯರಲ್ಲಿ ಕಲೆ ಎನ್ನುವುದು ರಕ್ತಗತವಾಗಿಯೇ ಬಂದಿದೆ ಎಂದು ‘ಕಲಾ ವಿಷನ್’ ವಿದ್ಯಾರ್ಥಿಗಳತ್ತ ಬೊಟ್ಟು ಮಾಡಿ ತೋರಿಸುತ್ತಾರೆ.
ನಾಟಾ ತರಬೇತಿ:
ಸುನಿಲ್ ಅಬ್ರಹಾಂ ಕಲಾದೇವಿಯ ಆರಾಧನೆ ಜತೆಗೆ ಶಿಕ್ಷಣಕ್ಕೆ ಸಂಬಂಧಪಟ್ಟ ತರಬೇತಿಗಳನ್ನೂ ನೀಡುತ್ತಿದ್ದಾರೆ. ರಾಷ್ಟ್ರೀಯ ವಾಸ್ತುಶಿಲ್ಪ ಮಂಡಳಿ ನಡೆಸುವ ನಾಟಾ(ನ್ಯಾಷನಲ್ ಅಪ್ಟಿಟ್ಯುಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್) ಪರೀಕ್ಷೆಗಾಗಿ ಮಂಗಳೂರಿನ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆರು ತಿಂಗಳ ಅವಧಿಯ ತರಬೇತಿ ಇವರ ‘ಕಲಾ ವಿಷನ್’ನಲ್ಲಿ ನಡೆಯುತ್ತಿದೆ.
ಸಿಇಟಿ ಇದ್ದಂತೆ ವಾಸ್ತುಶಿಲ್ಪ ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ನಾಟಾ ಪರೀಕ್ಷೆ ಕಡ್ಡಾಯ. ಆದರೆ ಇದು ಸಿಇಟಿಯಂತೆ ಸಾಮಾನ್ಯ ರೂಪದಲ್ಲಿ ಇರುವುದಿಲ್ಲ. ಭವಿಷ್ಯದ ಇಂಜಿನಿಯರುಗಳು ಕುಂಚದ ಕಲೆ ಕಲಿಯಲೇಬೇಕು. ಹಾಗಾಗಿ ಆರ್ಕಿಟೆಕ್ಚರ್ ಕ್ಷೇತ್ರವನ್ನು ಆರಿಸಿಕೊಳ್ಳುವ ಉದ್ದೇಶ ಹೊಂದಿರುವ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಆರಂಭದಲ್ಲೇ ನಾಟಾಕ್ಕಾಗಿ ತರಬೇತಿ ಪಡೆಯಬೇಕಾಗುತ್ತದೆ. ಈ ನಿಟ್ಟಿನಲ್ಲೂ ಸುನಿಲ್ ಮುಂದಡಿಯಿಟ್ಟಿದ್ದಾರೆ.
(ಈ ಲೇಖನ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)
Leave a Reply