ಪ್ರೀತಿಯ ಹೂಗಳು…

ಎರಡನೇ ಮನೆ ಖರೀದಿ ಯೋಚನೆ ಇದ್ಯಾ?

Posted on: March 19, 2012

ಮೊದಲನೇ ಮನೆಯೆಂದರೆ ಅದು ಭಾವಗಳ ಗೂಡು. ಯಾವ ದಿಕ್ಕಿನಿಂದ ನೋಡಿದರೂ ಆ ಮನೆಯ ಜತೆ ಮರೆಯಲಾರದ ಬಾಂಧವ್ಯವಿರುತ್ತದೆ. ಅದನ್ನು ತನ್ನದಾಗಿಸಿಕೊಳ್ಳಲು ಸುರಿಸಿದ ಬೆವರು, ಕಳೆದ ನಿದ್ದೆಯಿಲ್ಲದ ರಾತ್ರಿಗಳು, ಕೂಡಿಟ್ಟ ಹಣ ಎಲ್ಲವೂ ನಮ್ಮಲ್ಲಿ ಶಾಶ್ವತ ಸ್ಥಾನ ಪಡೆದಿರುತ್ತವೆ. ಆದರೆ ಎರಡನೇ ಮನೆಯೂ ಇದೇ ಅನುಭವವನ್ನು ನೀಡುವುದೇ?

ಇಲ್ಲ, ಖಂಡಿತಾ ಇಲ್ಲ. ಮೊದಲ ಮನೆಯೆಂದರೆ ಅದರ ಅರ್ಥ, ಅದಕ್ಕೂ ಮೊದಲು ತನ್ನದೆಂಬ ಮನೆ ಇರಲಿಲ್ಲವೆಂದು. ಹಾಗಾಗಿ ಮನೆಯೊಂದರ ಒಡೆಯನಾದ ಖುಷಿ, ರೋಮಾಂಚನ ವಿವರಿಸಿ ಮುಗಿಸಲಾಗದ ಅನುಭವ. ನಿರ್ದಿಗಂತವೆನಿಕೊಂಡಿದ್ದ ಗುರಿಯೊಂದು ಬೆರಳ ತುದಿಗೆ ತಗಲು ಹಾಕಿಕೊಂಡ ಹಗುರ ಭಾವ. ಆದರೆ ಎರಡನೇ ಮನೆ ಖರೀದಿ ಇಷ್ಟೆಲ್ಲ ಖುಷಿಯನ್ನು ನೀಡದು. ಅಲ್ಲಿರುವುದು ಒನ್ ಪ್ಲಸ್ ಒನ್ ಎಂಬಷ್ಟಕ್ಕೇ ಸೀಮಿತವಾಗುವ ಎಕ್ಸ್‌ಟ್ರಾ ಫೀಲಿಂಗ್. ಭಾವನೆಗಳಿಗೆ ಹೆಚ್ಚಿನ ಕೆಲಸ ಕೊಡುವ ಬದಲು, ಲೆಕ್ಕಾಚಾರವೇ ಪ್ರಧಾನವಾಗಿರುತ್ತದೆ.

ಇನ್ನೊಂದು ಮನೆ ಯಾಕೆ ಬೇಕು?

ನಿಮಗೆ ಇನ್ನೊಂದು ಫ್ಲ್ಯಾಟ್ ಬೇಕೆಂಬ ಯೋಚನೆ ಬಂದರೆ, ಆಗ ನಿಮಗೆ ನೀವೇ ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳಿ. ಮೊದಲ ಪ್ರಶ್ನೆ, ನಿಮಗೆ ಎರಡನೇ ಮನೆಯ ಅಗತ್ಯ ಏನಿದೆ ಅನ್ನೋದು. ಇರೋ ಹಣವನ್ನು ಎಲ್ಲಾದರೂ ಹೂಡಿಕೆ ಮಾಡಬೇಕೆಂದು ಎರಡನೇ ಮನೆಯ ಯೋಚನೆ ಮಾಡಿದ್ದೀರಾ ಅಥವಾ ನಿಮಗೆ ಇಬ್ಬರು ಮಕ್ಕಳಿದ್ದಾರೆ, ಹಾಗಾಗಿ ಇನ್ನೊಂದು ಫ್ಲ್ಯಾಟ್ ಇರಲಿ ಎಂಬ ಯೋಚನೆಯೇ? ಇದನ್ನು ಮೊದಲು ಪರಿಹರಿಸಿಕೊಳ್ಳಿ. ಎರಡನೇ ಮನೆ ಖರೀದಿಗೆ ಹೊರಟಿರುವುದು ಹೂಡಿಕೆ ಉದ್ದೇಶದಿಂದ ಎನ್ನುವುದೇ ಆಗಿದ್ದರೆ, ಆಗ ನೀವು ಅದರಿಂದ ಬರಬಹುದಾದ ಅಂದಾಜು ಬಾಡಿಗೆ ಮತ್ತು ಅಡ್ವಾನ್ಸ್ ಮೊತ್ತದ ಲೆಕ್ಕಾಚಾರ ಮಾಡಬೇಕಾಗುತ್ತದೆ. ನಿಮ್ಮ ಗುರಿ ಸ್ಪಷ್ಟವಾಗಿ ಹಣದ ಕಡೆಗೇ ಇರುವುದರಿಂದ, ಅದನ್ನು ಲಘುವಾಗಿ ಪರಿಗಣಿಸಬೇಡಿ.

ಅದೇ ಹೊತ್ತಿಗೆ ನಿಮ್ಮ ಉದ್ದೇಶ ಮಕ್ಕಳಿಗೆ ಹಂಚಲು ಎಂಬುದಾಗಿದ್ದರೆ, ಆಗ ಹಣಕಾಸೇತರ ವಿಚಾರಗಳನ್ನು ಗಮನಿಸಬೇಕು. ಕುಟುಂಬ ಹಂಚಿ ಹೋದರೂ ಹತ್ತಿರದಲ್ಲೇ ಮನೆಗಳು ಇರುವಂತೆ ನೋಡಿಕೊಳ್ಳುವುದು, ಇನ್ನೊಂದು ಮನೆಯ ಪರಿಸರ ಹೇಗಿದೆ ಅನ್ನೋದು ಸೇರಿದಂತೆ ಇತರ ಸಂಗತಿಗಳು ಮನೆಯ ಮೌಲ್ಯಕ್ಕಿಂತ ಪ್ರಮುಖವಾಗಿರಲಿ.

ಯಾವುದಕ್ಕೆ ಎಷ್ಟು ಬೇಕು?

ಹಣಕಾಸೇತರ ವಿಚಾರಗಳ ಕುರಿತು ನಿಮ್ಮ ನಿರ್ಧಾರ ಗಟ್ಟಿಯಾದ ಬಳಿಕ ನೀವು ಆರ್ಥಿಕ ಸಂಗತಿಗಳನ್ನು ಗಮನಿಸಬೇಕು. ಫ್ಲ್ಯಾಟ್ ಮೌಲ್ಯದ ಜತೆ, ಅದರ ನಿರ್ವಹಣೆ ವೆಚ್ಚ, ಪಾಲಿಕೆಗೆ ಪಾವತಿಸಬೇಕಾದ ತೆರಿಗೆ ಮತ್ತು ಇತರ ವೆಚ್ಚಗಳನ್ನು ಲೆಕ್ಕಾಚಾರ ಹಾಕಬೇಕು. ಇದರಲ್ಲಿ ವಿದ್ಯುತ್ ಮತ್ತು ನೀರಿನ ಬಿಲ್ ಕೂಡ ಸೇರಿರಲಿ. ಇವೆಲ್ಲದರ ವಾರ್ಷಿಕ ವೆಚ್ಚ ಎಷ್ಟು ಎಂಬುದನ್ನು ಕಂಡುಕೊಂಡರೆ, ಆಗ ನಿಮಗೆ ನಿರ್ದಿಷ್ಟ ವೆಚ್ಚದ ಅಂದಾಜು ಖಚಿತವಾಗುತ್ತದೆ. ಮನೆಯನ್ನು ಬಾಡಿಗೆ ಕೊಡುವುದಿದ್ದರೂ ಆಗ ಅದರಿಂದ ಬರುವ ಆದಾಯ ಮತ್ತು ಹೆಚ್ಚುವರಿ ವೆಚ್ಚಗಳು ಎಷ್ಟು ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಿ.

ಸಾಲದ ಲೆಕ್ಕವೂ ಇರಲಿ

ಎರಡನೇ ಮನೆ ಕೊಳ್ಳುವುದಿದ್ದರೆ, ಗೃಹಸಾಲ ಸೌಲಭ್ಯವೂ ಲಭ್ಯ. ಆದರೆ ಮೊದಲ ಮನೆಗೆ ಅನ್ವಯವಾಗುವ ಗೃಹಸಾಲಕ್ಕೂ, ಎರಡನೇ ಮನೆಯ ಗೃಹಸಾಲಕ್ಕೂ ಅನ್ವಯವಾಗುವ ನಿಯಮಗಳು ಒಂದೇ ರೀತಿಯಿರುವುದಿಲ್ಲ. ಮೊದಲ ಮನೆಗೆ ಶೇ.80ರಿಂದ ಶೇ.90ರಷ್ಟು ಬಂಡವಾಳವನ್ನು ಬ್ಯಾಂಕ್ ನೀಡಿದರೆ, ಎರಡನೇ ಮನೆಗೆ ಶೇ.75ರಷ್ಟು ಸಾಲ ಮಾತ್ರ ಲಭ್ಯ. ಹಾಗಾಗಿ ಮೂಲ ಬಂಡವಾಳದ ಲೆಕ್ಕಾಚಾರ ಮೊದಲೇ ಮಾಡಬೇಕು.

ಎರಡನೇ ಫ್ಲ್ಯಾಟ್‌ಗೆ ಕೊಡುವ ಸಾಲಕ್ಕೆ ಬ್ಯಾಂಕುಗಳು ಹೆಚ್ಚು ಬಡ್ಡಿಯನ್ನು ಕೂಡ ವಿಧಿಸಬಹುದು. ಜತೆಗೆ ನಿಮ್ಮ ಟೇಕ್ ಹೋಮ್ ಮಾಸಿಕ ವೇತನದ ಶೇ.50ರಷ್ಟಕ್ಕೆ ಎಲ್ಲಾ ಬ್ಯಾಂಕ್ ಸಾಲದ ಇಎಂಐಗಳು ಸೀಮಿತಗೊಳ್ಳುವುದರಿಂದ, ಎರಡನೇ ಮನೆಗೆ ಸಿಗಬಹುದಾದ ಸಾಲದ ಮೊತ್ತ ಎಷ್ಟು ಎನ್ನುವುದನ್ನು ಕೂಡ ಅಂದಾಜು ಮಾಡಬೇಕು. ಆದರೂ ಸಾಲದ ಮೊತ್ತ ಮತ್ತು ಬಡ್ಡಿ ಕುರಿತು ಬ್ಯಾಂಕುಗಳ ಜತೆ ವ್ಯವಹರಿಸುವಾಗ ಮೊದಲ ಮನೆಯ ಷೇರು ಗಮನದಲ್ಲಿರಲಿ. ಇದು ನಿಮಗೆ ಪ್ಲಸ್ ಪಾಯಿಂಟ್ ಆಗಬಹುದು.

ತೆರಿಗೆ ಮರೆಯದಿರಿ

ಆದಾಯ ತೆರಿಗೆ ವಿಚಾರಕ್ಕೆ ಬಂದಾಗ, ನಿಮ್ಮ ಎರಡನೇ ಫ್ಲ್ಯಾಟ್ ಬಾಡಿಗೆಗೆ ಕೊಡಲ್ಪಟ್ಟಿದೆ ಎಂದೇ ಪರಿಗಣಿಸಲ್ಪಡುತ್ತದೆ. ನೀವು ಆ ಮನೆಯನ್ನು ಬಾಡಿಗೆ ನೀಡದೆ ಇದ್ದರೂ, ನಿಮ್ಮ ಆದಾಯಕ್ಕೆ ಸ್ವಲ್ಪ ಮೊತ್ತವನ್ನು ಅದರಿಂದ ಸೇರಿಸಲಾಗುತ್ತದೆ. ಒಂದು ವೇಳೆ ಬಾಡಿಗೆಗೆ ನೀಡಿದ್ದರೆ, ನಿಜವಾದ ಮೊತ್ತ ಆದಾಯಕ್ಕೆ ಸೇರ್ಪಡೆಯಾಗುತ್ತದೆ. ಉದಾಹರಣೆಗೆ, ಮನೆಯೊಂದರ ಮಾಸಿಕ ಬಾಡಿಗೆ 20,000 ರೂ. ಆಗಿದ್ದರೆ, ವಾರ್ಷಿಕವಾಗಿ 1.68 ಲಕ್ಷ ರೂ.ಗಳಿಗೆ ತೆರಿಗೆ ಬೀಳುತ್ತದೆ.(20,000 12 = 2.40 ಲಕ್ಷಗಳು / ಶೇ.30 ಸ್ಟಾಂಡರ್ಡ್ ಡಿಡಕ್ಷನ್: 72,000 ರೂ./ ತೆರಿಗೆ ಅನ್ವಯವಾಗುವ ಮೊತ್ತ: 1.68 ಲಕ್ಷ ರೂ.)

ತಾಳ್ಮೆಯಿದ್ದರೆ ಲಾಭ ಜಾಸ್ತಿ

ಎರಡನೇ ಫ್ಲ್ಯಾಟ್ ಖರೀದಿಸಲು ಮುಂದಾಗುವಾಗ, ಅದರ ತುರ್ತು ಅಗತ್ಯವಿದೆಯೇ ಎಂಬುದನ್ನು ನಿರ್ಧರಿಸಬೇಕು. ಇಲ್ಲವೆಂದಾದರೆ, ತರಾತುರಿಯಲ್ಲಿ ಮುಗಿಬಿದ್ದು ಕೊಳ್ಳಲು ಹೋಗುವುದು ನಷ್ಟಕ್ಕೆ ಕಾರಣವಾಗಬಹುದು. ಅದರ ಬದಲು ಲೆಕ್ಕಾಚಾರ ಹಾಕಿ, ತಾಳ್ಮೆಯಿಂದ ಯಾವ ಫ್ಲ್ಯಾಟ್ ಆಗಬಹುದು ಎಂಬುದನ್ನು ನಿರ್ಧರಿಸಿದರೆ ಲಾಭ ಜಾಸ್ತಿ, ಜತೆಗೆ ನೆಮ್ಮದಿ ಕೂಡ.

(ವಿಜಯ ಕರ್ನಾಟಕದಲ್ಲಿ ಈ ಲೇಖನ ಪ್ರಕಟವಾಗಿದೆ)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: