ಪ್ರೀತಿಯ ಹೂಗಳು…

ನಿಮಗೂ ಒಂದು ವೈಯಕ್ತಿಕ ಜೀವನವಿದೆ ಎಂಬುದನ್ನು ಮರೆಯದಿರಿ

Posted on: September 15, 2010

ಛೇ! ನನ್ನ ಜೀವನವೇ ವ್ಯರ್ಥವಾಗಿ ಹೋಯಿತು. ಏನೋ ಮಾಡಬೇಕೆಂದಿದ್ದೆ. ಯಾವುದೂ ಸಾಧ್ಯವಾಗಲಿಲ್ಲ. ನನ್ನ ಜತೆಗಿದ್ದವರು ಏನೇನೋ ಆಗಿಬಿಟ್ಟರು. ಅದು ಹಾಗಾಗುತ್ತಿದ್ದರೆ, ಇದು ಹೀಗಾಗುತ್ತಿದ್ದರೆ, ನಾನು ಕೂಡ ಇಂದು ಹೇಗೇಗೋ ಆಗುತ್ತಿದ್ದೆ. ಎಲ್ಲಾ ನನ್ನ ಹಣೆಬರಹ.

ಇಂತಹ ಯೋಚನೆ ಒಂದಲ್ಲ ಒಂದು ಸಲ ಪ್ರತಿಯೊಬ್ಬರಿಗೂ ಬಂದಿರುತ್ತದೆ. ತಮ್ಮ ಜತೆಗಿದ್ದ ಕೆಲವರಲ್ಲಿ ಕೆಲವರು ಅದಮ್ಯ ಸಾಧನೆಗಳನ್ನು ಮಾಡಿದಾಗಲೆಲ್ಲ ಸಾಮಾನ್ಯವಾಗಿ ಹುಟ್ಟಿಕೊಳ್ಳುವ ಪ್ರಶ್ನೆಯಿದು.

ಹಾಗೆ ನೋಡಿದರೆ ಹೆಚ್ಚಿನ ಸಾಧನೆ ಮಾಡಿದವರ ಜತೆಗೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳುವುದೇ ತಪ್ಪು. ಅವರ ಸಾಧನೆಗೆ, ಇಂದು ನಮಗಿಂತ ಎತ್ತರದ ಸ್ಥಾನಕ್ಕೆ ತಲುಪಲು ಸಾಧ್ಯವಾಗಿರುವುದರ ಹಿಂದಿನ ಕಾರಣಗಳು ಮತ್ತು ನಮ್ಮ ವಾಸ್ತವ ಸ್ಥಿತಿಯನ್ನು ತಾಳೆ ಮಾಡಿದಾಗ ನಾವು ಮಾಡಿರುವುದು ಸಾಧನೆಯಲ್ಲ ಎಂದು ಹೇಳುವುದು ನಮ್ಮನ್ನು ಬಿಟ್ಟು ಇನ್ಯಾರು ತಾನೇ ಹೇಳಲು ಸಾಧ್ಯ?

ಅಷ್ಟಕ್ಕೂ ಜತೆಗಾರರೆಲ್ಲ ಮುಂದಿದ್ದಾರೆ ಎಂದು ಹೇಳಲಾಗದು. ಓರಗೆಯ ಕೆಲವರು ಹಲವಾರು ಕಾರಣಗಳಿಂದ ಮುಂದಿದ್ದಾರೆ. ಅಂದರೆ ನಾವು ಹಿಂದಿದ್ದೀವೆಂದು ಅರ್ಥೈಸಿಕೊಳ್ಳಬೇಕಾಗಿಲ್ಲ. ಹಿಂದೆ ತಿರುಗಿ ನೋಡಿದರೆ ನಮ್ಮ ಹಿಂದಿರುವ ಸಾಲು ಮುಂದಿರುವುದಕ್ಕಿಂತ ದೊಡ್ಡದಿದೆ ಎಂಬುದನ್ನೇ ಗಂಭೀರವಾಗಿ ಪರಿಗಣಿಸಿದರೆ?

ನಿಮ್ಮ ಸಾಧನೆಯೇನು ಚಿಕ್ಕದೇ? ನೀವಾದರೂ ಈ ಹಂತಕ್ಕೆ ಸುಖಾಸುಮ್ಮನೆ ಹಾರಿ ಬಂದವರಲ್ಲ. ಯಾರೋ ಮಾಡಿದ ಪುಣ್ಯದಿಂದಲೂ ನೀವು ಈ ಹಂತಕ್ಕೆ ಬಂದವರಲ್ಲ. ಇದರ ಹಿಂದೆ ನಿಮ್ಮದೇ ಕಥೆ-ವ್ಯಥೆಗಳಿವೆ. ಅದೆಷ್ಟೋ ಅಪಮಾನ-ನಿಂದೆಗಳನ್ನು ಸಹಿಸಿಕೊಂಡಿರುತ್ತೀರಿ. ಕೆಲವರಂತೂ ತಪಸ್ಸಿಗಿಂತಲೂ ಗಂಭೀರವಾಗಿ ಸಾಧನೆ ಮಾಡಿದವರಿರುತ್ತಾರೆ.

ಅಷ್ಟೇ ಸಾಕು, ಉಳಿದ ವಿಚಾರ ಬಿಟ್ಟುಬಿಡಿ. ನಿಮ್ಮ ಜೀವನಕ್ಕೆ ಸ್ಫೂರ್ತಿ ತುಂಬಲು ಎರವಲು ವಿಚಾರಗಳೇ ಬೇಕಿಲ್ಲ. ನೀವೀಗ ನಡೆಸುತ್ತಿರುವುದು ದುರ್ಬರ ಜೀವನವಲ್ಲ ಎಂದುಕೊಳ್ಳಿ.

ನಿಮ್ಮ ಸುತ್ತ-ಮುತ್ತ ನಿಮ್ಮಷ್ಟು ಸಾಧನೆ ಮಾಡಿದವರು ತುಂಬಾ ಇರಲಿಕ್ಕಿಲ್ಲ. ನಿಮ್ಮ ಹಿಂದಿರುವವರ ಸ್ಥಿತಿಗಿಂತ ನೀವು ಅದೆಷ್ಟೋ ಪಾಲು ಉತ್ತಮರಿದ್ದೀರಿ. ದಿಗಂತ ದಿಟ್ಟಿಸಬೇಡಿ. ಅದು ಅಪರಿಮಿತ. ಮೇಲೆ ನೋಡಿದಷ್ಟೂ ಸಾಧನೆಗಳು ಬಾಕಿ ಉಳಿದಿರುತ್ತವೆ. ಕೆಳಗೆ ನೋಡಿ. ನೀವು ಸುರಕ್ಷಿತವಾಗಿದ್ದೀರಿ. ಕಮರಿಗಳನ್ನು ದಾಟಿ ಬಂದಿದ್ದೀರಿ.

ಅಲ್ಲೇ ಕೆಳಗೆ ಇನ್ನೂ ಶ್ರಮವಹಿಸುತ್ತಿರುವವರನ್ನು ಗಮನಿಸಿ. ನೀವೂ ಅವಕಾಶದ ಕಾರಣದಿಂದ ಈ ಹಂತಕ್ಕೆ ತಲುಪಿರಬಹುದು. ಕೆಳ ಹಂತದಲ್ಲಿರುವವರಿಗೆ ನಿಮ್ಮಷ್ಟು ಅವಕಾಶಗಳು ಸಿಗದೇ ಇದ್ದಿರಲೂ ಬಹುದು. ಹಾಗೆಂದು ನೀವು ಮೇಲೇರುವ ನಿಮ್ಮ ಆರೋಗ್ಯಕರ ಯತ್ನವನ್ನು ಬಿಡಬೇಕಾಗಿಲ್ಲ. ಬಿಟ್ಟರೆ, ದುಡಿದೂ ದುಡಿದೂ ಯಾರೂ ಸತ್ತಿಲ್ಲ ಎಂಬಂತೆ ದಡ್ಡರಾಗಬಹುದು. ಆದರೆ ಅದಕ್ಕೊಂದು ಮಿತಿಯಿರಲಿ.

ಕೇವಲ ಸಾಧನೆಯೇ ಜೀವನವಾದರೆ, ಆ ಜೀವಕ್ಕೊಂದು ನೆಮ್ಮದಿಯ ಕ್ಷಣ ಎಲ್ಲಿದೆ? ಗುರಿಗಳು ಎದುರಿಗಿರಲಿ — ಆದರೆ ಗುರಿಗಳೇ ಜೀವನವಾಗದಿರಲಿ. ಒಂದು ವೈಯಕ್ತಿಕ ಜೀವನ ಎಂಬುದಿದೆ ಎಂಬುದನ್ನು ಮರೆಸುವ ಸಾಧನೆಯಲ್ಲಿ ಮುಳುಗಿರುವವರ ಜೀವನವೂ ಒಂದು ಜೀವವನವೇ? ಅವರದೂ ಒಂದು ಬದುಕೇ? ಒಂದು ಕ್ಷಣ ಯೋಚಿಸಿ.

ನಾವು ಕಳೆದುಕೊಂಡ ಯಾವ ಕ್ಷಣಗಳೂ ನಮಗೆ ಮರಳಿ ಸಿಗಲಾರವು. ಅದು ಕಾಲೇಜು ಜೀವನವಾಗಿರಬಹುದು ಅಥವಾ ನಂತರದ ಬ್ಯಾಚುಲರ್ ಬದುಕಾಗಿರಬಹುದು. ಅದ್ಧೂರಿಯಾಗಿರಬೇಕು, ಜಗ ಮೆಚ್ಚಿಸಬೇಕೆಂದು ವರದಕ್ಷಿಣೆ ತೆಗೆದುಕೊಂಡೋ, ಸಾಲ-ಸೋಲ ಮಾಡಿಯೋ ಗಟ್ಟಿಮೇಳ ಊದಿಸಿದವರ ಬದುಕಿನ ಮಧುರ ಕ್ಷಣಗಳಿಗೆ ವ್ರತಭಂಗವಾಗುವ ಪರಿಣಾಮಗಳನ್ನು ಆಹ್ವಾನಿಸಿಕೊಂಡವರು ಮಾಡಿಕೊಂಡ ಮದುವೆಗೆ ಸಾರ್ಥಕವೆಂಬುದಿದೆಯೇ? ಇಂತಹ ಹಲವು ವಿಚಾರಗಳನ್ನು ನಾವು ಕ್ಷುಲ್ಲಕ ಎಂದು ಪರಿಗಣಿಸುವುದು ಎಷ್ಟು ಸರಿ?

ಎತ್ತರೆತ್ತರಕ್ಕೆ ಸಾಗುವುದೇ ಜೀವನ, ಶ್ರೀಮಂತಿಕೆಯೇ ಬೇಕೆನ್ನುವ ಹಪಾಹಪಿ, ಸಮಾಜದಲ್ಲಿ ದೊಡ್ಡವರೆನಿಸಿಕೊಳ್ಳಬೇಕೆಂಬ ಚಪಲಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಮನೆ-ಮನಗಳಿಗೆ ಕೊಳ್ಳಿ ಇಡುತ್ತಿರುತ್ತದೆ. ನಮ್ಮ ಬದುಕಿನ ಒಂದೊಂದೇ ಅಂಗಗಳನ್ನು ಅದು ನಮ್ಮೆದುರೇ ಅನುಭವಕ್ಕೆ ಬಾರದಂತೆ ನುಂಗುತ್ತಿರುತ್ತದೆ. ಮಹತ್ವವಾದ ಯಾವುದನ್ನೋ ನಾವು ಆ ಹೊತ್ತಿನಲ್ಲಿ ನಮಗೇ ಗೊತ್ತಾಗದಂತೆ ಕಳೆದುಕೊಳ್ಳುತ್ತಾ ಇರುತ್ತೇವೆ. ಅದು ಯಾವುದು ಎಂಬುದು ಅರ್ಥವಾಗುವ ಹೊತ್ತಿಗೆ ಜೀವನದ ರಸ ನಿಮಿಷಗಳು ನೀರಸವಾಗಿರುತ್ತವೆ.

ಬದುಕು ಕಟ್ಟಿ ಪೂರ್ತಿಗೊಳಿಸಿದ್ದೇವೆ ಎಂಬ ಭಾವ ಯಾರೊಬ್ಬರಿಗೂ ಬರುವುದು ಕ್ರಿಯಾಶೀಲತೆಯ ಚಕ್ರ ಹುದುಗಿದಾಗ ಮಾತ್ರ. ಆದರೆ ಬದುಕೇ ಹೀಗೆ, ಕನಿಷ್ಠ ಇದ್ದ ಹಾಗಾದರೂ ಸಾಗಿದರೆ ಸಾಕೆಂಬ ಭಾವ ಜೀವನದ ಸೆಳೆ ಏನೆಂಬುದನ್ನು ಮನದಟ್ಟು ಮಾಡಿಸಬಹುದು. ಈ ರೀತಿ ಇದ್ದುದರಲ್ಲಿ ತೃಪ್ತವಾಗುವ ಜೀವಕ್ಕೆ ಏಗದೆ ಮೇಲೇರಿ ಹಿಂತಿರುಗಿ ನೋಡದ ಜೀವದ ಭಾವ ಸಾಟಿಯೇ?

ನಾನು ನನ್ನದೆಂಬ ಅಹಂ ತೊರೆದು, ನಮ್ಮದೆಂಬ ಭಾವ ಮುಚ್ಚುಮರೆಯಿಲ್ಲದೆ ಆವಿರ್ಭವಿಸಲಿ. ಗೆಲುವನ್ನೇ ಉಂಡವರು ಸೋಲಿನಲ್ಲಿರುವ ಹಿತವಾದ ಕಹಿಯನ್ನೂ ಅನುಭವಿಸಿ. ಒಂದು ಏಕಾಗ್ರತೆಯಿಲ್ಲದ, ಶಾಂತಿ-ಸುಖ-ನೆಮ್ಮದಿಯಿಲ್ಲದ ಬದುಕನ್ನು ಬದುಕುವ ಹಠಕ್ಕೆ ಬೀಳಲು ಪೈಪೋಟಿ ನಡೆಸಬೇಡಿ.

ನಾವು ಮೇಲೇರಿದಂತೆಲ್ಲ ನಮ್ಮ ಥೈಲಿಯ ಭಾರ ಹೆಚ್ಚಿದಂತೆಲ್ಲ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ ಎಂಬ ವಾಸ್ತವತೆ ಜತೆಗಿರಲಿ. ನಾವು ಸಿರಿವಂತರಾಗುತ್ತಾ ಹೋದಂತೆ ಖಾಸಗಿತನವನ್ನು ಕಳೆದುಕೊಳ್ಳುತ್ತಾ ಹೋಗುತ್ತೇವೆ ಎಂಬ ನಿಜಸ್ಥಿತಿಯನ್ನು ನೆನಪಿಸಿಕೊಳ್ಳಿ. ಬದುಕನ್ನು ಪ್ರೀತಿಯಿಂದ ಸಂಭಾಳಿಸಲು ಬೇಕಾದಷ್ಟು ಇದ್ದರೆ ಸಾಕೆಂಬ ತೃಪ್ತಭಾವ ಕೊಡುವ ಆನಂದವನ್ನು ಅನುಭವಿಸಿ.

ಕೆಲಸದ ಚಿಂತೆ ಮಾಡುವುದನ್ನು ಹೆಂಡತಿಗೆ ಮುತ್ತು ಕೊಡುವಾಗಲಾದರೂ ಬಿಡಿ. ಮಕ್ಕಳೊಂದಿಗೆ ಮಕ್ಕಳಾಗಿರಿ. ಹೆತ್ತವರೊಂದಿಗೆ, ಹಿರಿಯರೊಂದಿಗೆ ವಿಧೇಯರಾಗಿರಿ. ನೀವೇ ಬುದ್ಧಿವಂತರೆಂಬ ನಿಮ್ಮೊಳಗಿನ ಭಾವನೆ ನಿಮ್ಮ ಮಕ್ಕಳೆದುರು ಸುಳ್ಳಾಗುತ್ತಿದೆ ಎಂಬುದನ್ನು ಮನಸಾರೆ ಒಪ್ಪಿಕೊಳ್ಳಿ.

ವೆಚ್ಚಕ್ಕೆ ಹೊನ್ನು, ಬೆಚ್ಚನಾ ಮನೆಯು, ಇಚ್ಛೆಯನರಿತು ನಡೆವ ಸತಿ ಇದ್ದೊಡೆ, ಸ್ವರ್ಗಕ್ಕೆ ಕಿಚ್ಚು ಹಚ್ಚೆ೦ದ ಸರ್ವಜ್ಞ — ಈ ಸಾಲುಗಳನ್ನು ಈಗಿನ ಪರಿಸ್ಥಿತಿಗೆ ಹೊಂದಾಣಿಕೆ ಮಾಡಿಕೊಂಡರೆ ಜೀವನ ಪಾವನವಾಗುವುದರಲ್ಲಿ ಸಂಶಯವಿಲ್ಲ. ಯಾವ ಸಮಯದಲ್ಲಿ ಯಾವ ಕೆಲಸವನ್ನು ಮಾಡಬೇಕು ಎಂದು ನೀವಂದುಕೊಳ್ಳುತ್ತೀರೋ, ಅದನ್ನೇ ಮಾಡಿ. ಯಾರೋ ಹೇರುವ ಒತ್ತಡಗಳಿಗಾಗಿ ಬದುಕಿನ ಬಂಡಿಯನ್ನು ಸವೆಸಬೇಡಿ.

ಓಟಕಿತ್ತ ಓರಗೆಯವರನ್ನು ಮರೆತು ಜತೆಗಿರುವ ಜೀವಗಳನ್ನು ಸಂತಸವಾಗಿಡಿ. ಮುಂದೆ ಹೋದವರ ಜತೆ ಮಾತ್ಸರ್ಯ ಮೆರೆದು ಸಣ್ಣವರಾಗಬೇಡಿ. ಅವರನ್ನು ಮೆಚ್ಚಿ ದೊಡ್ಡವರಾಗಿ. ನಿನ್ನಂತೆ ನಾನಾಗಲಾರೆ, ನಾನಿರುವುದೇ ಹೀಗೆ, ನನ್ನ ಜೀವನವೇ ಹೀಗೆ. ನಾನು ನಿನ್ನಂತಾದರೆ ಏನಿದೆ ವ್ಯತ್ಯಾಸ ಎಂದುಕೊಳ್ಳಿ.

ಪ್ರೀತಿಗೊಂದು ನೀತಿ, ಬಾಳಿಗೊಂದು ಬೇಲಿ, ಗುರಿಗೊಂದು ಗೆರೆ, ಕನಸುಗಳಿಗೊಂದು ಮಿತಿಯಿರಲಿ. ಜೀವನವನ್ನು ಪ್ರೀತಿಸಿ, ಅನುಭವಿಸಿ.

(ಈ ಲೇಖನ ವೆಬ್‌ದುನಿಯಾದಲ್ಲಿ ಪ್ರಕಟವಾಗಿದೆ)

1 Response to "ನಿಮಗೂ ಒಂದು ವೈಯಕ್ತಿಕ ಜೀವನವಿದೆ ಎಂಬುದನ್ನು ಮರೆಯದಿರಿ"

ನೆಮ್ಮದಿಯ ಬದುಕಿಗೆ ಇನ್ನೇನು ಬೇಕು

Leave a comment