ಪ್ರೀತಿಯ ಹೂಗಳು…

ಆಕೆ ಸಮಾಜಕ್ಕೆ ಮಾತ್ರ ಹುಚ್ಚಿ, ಮಗುವಿಗೆ ತಾಯಿ..!

Posted on: March 1, 2010

ಇದೇ ತಾಯಿ-ಮಗುವಿನ ಶಾಶ್ವತ ಆಸ್ತಿ.

ಇದೇ ತಾಯಿ-ಮಗುವಿನ ಶಾಶ್ವತ ಆಸ್ತಿ.

ಬಹುಶಃ ಆಕೆಗೆ ಕನಸುಗಳೇ ಇಲ್ಲವೇನೋ? ಅಥವಾ ಕನಸೆಂಬುದೇ ಆಕೆಗೆ ಕನಸಿರಬಹುದು. ಯಾರ ಪಾಪದ ಕೂಸೋ ಏನೋ, ಎಲ್ಲಾ ತಾಯಂದಿರಂತೆ ಚಂದ್ರನನ್ನು ತೋರಿಸುವುದು ಆಕೆಗೆ ಗೊತ್ತಿರಲಿಕ್ಕಿಲ್ಲ ಅಥವಾ ಮರೆತು ಹೋಗಿರಬಹುದು. ಆದರೆ ತಾನೇ ಆ ಮಗುವಿನ ತಾಯಿ ಮತ್ತು ಅದನ್ನು ಸಲಹಬೇಕಾದವಳು ನಾನೇ ಎಂಬುದರ ಅರಿವಿದೆ. ಮುದ್ದು ಮಾಡುತ್ತಾಳೆ, ತೊಡೆಯ ಮೇಲೆ ಮಲಗಿಸಿ ತನ್ನ ಭಾಷೆಯಲ್ಲೇ ಲಾಲಿ ಹಾಡುತ್ತಾಳೆ, ಯಾರೋ ಕೊಟ್ಟ ಚಿಂದಿ ಬಟ್ಟೆ, ಗೋಣಿ ಚೀಲವನ್ನು ಮರಕ್ಕೆ ತೂಗು ಹಾಕಿ ಜೋ.. ಜೋ… ಮಾಡಿ ಮಲಗಿಸುತ್ತಾಳೆ.

ಹೊರ ಪ್ರಪಂಚಕ್ಕೋ ಆಕೆ ತಲೆಕೆಟ್ಟು ಹೋದ ಮತಿವಿಕಲೆ, ಹುಚ್ಚಿ. ಹಾಗೆಂದು ಆ ಮಗು ಯಾವತ್ತೂ ಅಂದುಕೊಂಡಿರಲಿಕ್ಕಿಲ್ಲ. ಮಗುವಿಗೆ ಹಸಿವಾದಾಗ, ನೋವಾದಾಗ ‘ಅಮ್ಮಾ’ ಎಂದೇ ಅರಚುತ್ತದೆ. ಬಹುಃಶ ಅದನ್ನು ಮಗುವಿಗೆ ಕಲಿಸಿಕೊಟ್ಟದ್ದು ತಾಯಿಯ ಪಾಲಿಗೆ ಇಲ್ಲದ ದೇವರಿರಬಹುದು.

ಗಂಡೋ, ಹೆಣ್ಣೋ — ಸುಮಾರು ಎರಡು ಡಜನ್ ಮಾಸಗಳನ್ನು ಕಳೆದಿರಬಹುದಾದ ಆ ಮಗು ಕನಿಷ್ಠ ಬಣ್ಣ ಮಾಸಿದ ಅಥವಾ ತೇಪೆ ಹಾಕಿದ ಬಟ್ಟೆಯನ್ನು ಹಾಕಿದ್ದನ್ನೂ ನಾನು ನೋಡಿಲ್ಲ. ಆ ಮಗುವಿಗೆ ಪೋಲಿಯೋ ಹನಿ ಬಿಡಿ, ನಳ್ಳಿಯ ನೀರೂ ಗೊತ್ತಿಲ್ಲ. ಚೆನ್ನೈಯ ಸುಡುವ ಬಿಸಿಲು, ಧಗೆಯಲ್ಲಿ ಈ ರೀತಿಯೂ ಬದುಕಲು ಸಾಧ್ಯವೇ ಎಂಬುದನ್ನು ಆ ಮಗು ಬೀದಿಯಲ್ಲಿ ಬಿದ್ದುಕೊಂಡಾಗ ನೋಡಿದರೆ ಯಾರಿಗಾದರೂ ಅನ್ನಿಸದಿರದು.

ಗೋಣಿ ಚೀಲವೇ ತೊಟ್ಟಿಲು

ಗೋಣಿ ಚೀಲವೇ ತೊಟ್ಟಿಲು

ಇವೆಲ್ಲವೂ ನಿಮಿಷಕ್ಕೆ ಸಾವಿರಾರು ಚಕ್ರಗಳು ಉರುಳುವ ಚೆನ್ನೈಯ ಅತ್ಯಂತ ಬ್ಯುಸಿ ಪ್ರದೇಶದ ರಸ್ತೆಯಲ್ಲಿ ಪ್ರತಿ ನಿತ್ಯ ಕಾಣಬಹುದಾದ ದೃಶ್ಯ. ನೀನ್ಯಾರು ಎಂದು ಇದುವರೆಗೆ ಅವಳನ್ನು ನೋಡಿದವರು ಯಾರೂ ಕೇಳಿರಲಿಕ್ಕಿಲ್ಲ. ಹಸಿವಾದಾಗ ಹೊಟೇಲುಗಳ ಮುಂದೆ ನಿಲ್ಲುತ್ತಾಳೆ. ಮತ್ತೆ ತನ್ನ ತಾಣ ಮರದಡಿಯಲ್ಲಿ ಬಂದು ಮಗುವನ್ನು ಕಾಲಿನಲ್ಲಿ ಮಲಗಿಸಿಕೊಂಡು ಆಕಾಶದತ್ತ ದೃಷ್ಟಿ ನೆಟ್ಟು ಯಾರನ್ನೋ ಶಪಿಸುತ್ತಾಳೆ.

ಬಾಯ್ತುಂಬ ಮಾತನಾಡುವ ಎಲ್ಲಾ ಅಗತ್ಯತೆಗಳನ್ನು ಹೊಂದಿರುವ ಆಕೆ ಮಾತೇ ಆಡಲ್ಲ. ಬಾಯ್ತೆರೆಯುವುದು ಯಾರೋ ಅನಾಮಿಕರನ್ನು ಬೈಯಲು ಮಾತ್ರ. ಹಾಗೆಂದು ದಾರಿ ಹೋಕರಿಗೆ ಯಾವುದೇ ತೊಂದರೆ ಮಾಡಿದವಳಲ್ಲ. ಸಾವಿರಾರು ಮಂದಿ ಕಣ್ಣೆದುರು ಓಡಾಡಿದರೂ ಸಹ ತಪ್ಪಿಯೂ ಕೈ ಚಾಚಿ ಹಣ ಕೇಳಿದ್ದನ್ನು ನಾನು ನೋಡಿಲ್ಲ.

ತನಗೊಂದು ಹೆಸರೆಂಬುದು ಇದೆ ಎಂದು ಅವಳಿಗೆ ಗೊತ್ತಿದೆಯೋ ಎಂಬುದು ಹೊರ ಸಮಾಜಕ್ಕೆ ತಿಳಿದಷ್ಟೇ ನನಗೂ ತಿಳಿದಿದೆ. ಆಕೆ ಮಗುವಾಗಿದ್ದಾಗ ಹುಚ್ಚಿಯಾಗಿದ್ದಿರಲಿಕ್ಕಿಲ್ಲ, ಆಕೆಯೂ ಒಂದು ಬಾಲ್ಯ, ಒಂದು ಯೌವನವನ್ನು ಕಳೆದು ಬಂದಿರಬಹುದು ಮತ್ತು ಅಷ್ಟೇ ಮುದ್ದಾಗಿ ಆಕೆಯನ್ನು ಹೆತ್ತವರು ಸಾಕಿರಬಹುದು. ಹಾಗಾಗಿ ಆಕೆಗೊಂದು ಪುಟಗೋಸಿ ಹೆಸರನ್ನೂ ಇಟ್ಟಿರಬಹುದು.

ಅಥವಾ ಹುಟ್ಟಿನಿಂದಲೇ ಮತಿವಿಕಲೆಯಾಗಿದ್ದಳೋ ಏನೋ? ಹೆತ್ತವರಿಗೂ ಬೇಡದ ಕೂಸಾಗಿ ಬೀದಿಗೆ ಬಂದು ಕಂಡಲ್ಲಿ ಉಂಡು, ಸಿಕ್ಕಲ್ಲಿ ಮಲಗಿದ್ದಾಗ ಕೀಚಕರ ಕಣ್ಣಿಗೆ ಬಿದ್ದು ಆಹಾರವಾದಳೋ? ಅಥವಾ ಗಂಡನೆಂಬ ಪ್ರಾಣಿಯಿಂದ ಚಿತ್ರಹಿಂಸೆಗೊಳಗಾಗಿ ಬೀದಿಗೆ ಬಿದ್ದವಳೋ? ಅವಳದೆಂಬ ಮನೆ ಎಲ್ಲೋ ಮರುಭೂಮಿಯಲ್ಲದ ಜಾಗದಲ್ಲಿ ಇರಲೂ ಬಹುದು.

ಇದು ಆಕೆ ಕುಡಿದು ಬಿದ್ದಿರುವುದಲ್ಲ, ಮನೋವಿಕಲತೆ.

ಇದು ಆಕೆ ಕುಡಿದು ಬಿದ್ದಿರುವುದಲ್ಲ, ಮನೋವಿಕಲತೆ.

ಗರ್ಭವತಿ ಎಂದು ತಿಳಿದಂದಿನಿಂದ ಮಗುವಿಗೆ ಒಂದೆರಡು ವರ್ಷವಾಗುವವರೆಗೆ ಒಂದು ಮದುವೆಯಷ್ಟೇ ಹಣವನ್ನು ಸ್ಕೆತಸ್ಕೋಪು ಸಿಕ್ಕಿಸಿಕೊಂಡವರಿಗೆ ಸುರಿಯುವ ನಾವೆಲ್ಲಿ, ಏನೂ ಇಲ್ಲದೆ ಎಲ್ಲೋ ಹೆತ್ತಿರಬಹುದಾದ ನಿಜವಾಗಿಯೂ ನಾಯಿ ಪಾಡಾಗಿರುವ ಆಕೆಯ ಬದುಕೆಲ್ಲಿ?

ಆಕೆಯ ಮಗುವೂ ಬದುಕಿದೆ, ಅದಕ್ಕೂ ಕಣ್ಣಿದೆ, ಹಸಿವಾಗುತ್ತದೆ, ಕೂಗುತ್ತದೆ. ನಮ್ಮ ಪಾಪುವಿಗಿಂತ ಯಾವ ರೀತಿಯಿಂದಲೂ ಅದು ಭಿನ್ನವಲ್ಲ. ಹಾಗೆಂದು ನಮ್ಮ ಪುಟ್ಟ-ಪುಟ್ಟಿಯರಂತೆ ತುತ್ತೂರಿ, ಪುಟ್ಟ ಸೈಕಲ್ಲಿಗಾಗಿ ರಂಪ ಮಾಡಬೇಕೆಂದು ಆ ಮಗುವಿಗೆ ಗೊತ್ತಿಲ್ಲ. ಕತ್ತಲೆನ್ನುವುದು ಹೆದರಿಸುತ್ತದೆ ಮತ್ತು ಹೆದರಬೇಕು ಎಂಬುದೂ ಆ ಮಗುವಿಗೆ ಅರಿವಿಲ್ಲ ಮತ್ತು ಅದನ್ನು ಆ ತಾಯಿ ಮಗುವಿಗೆ ಹೇಳಿ ಕೊಟ್ಟಿರಲಿಕ್ಕಿಲ್ಲ.

ಹೀಗೆ ಬಟಾಬಯಲಿನಂತಿರುವ ಬೀದಿಯಲ್ಲಿರುವ ಈ ಒಂಟಿ ಹೆಂಗಸಿನ ಸುಪರ್ದಿಯನ್ನು ಯಾರೂ ತೆಗೆದುಕೊಂಡಿಲ್ಲ ಯಾಕೆ ಎನ್ನುವ ಪ್ರಶ್ನೆ ನನಗೆ ಕಾಡಿದಾಗಲೆಲ್ಲಾ ಗೆಳೆಯ ನಾಗೇಂದ್ರ ತ್ರಾಸಿ, ರಾಜೇಶ್ ಪಾಟೀಲರ ತಲೆ ತಿಂದಿದ್ದೇನೆ.

ಚೆನ್ನೈಯೆಂಬ ಭಿಕ್ಷುಕರೇ ತುಂಬಿರುವ ನಗರದಲ್ಲಿ ಒಂದೆರಡು ಸುತ್ತು ಹೊಡೆದವರಿಗೆ ಇಂತಹ ಪ್ರಶ್ನೆಗಳಿಗೆ ಉತ್ತರ ಕೊಡಲು ಕಪ್ಪು ಕನ್ನಡಕ ಹಾಕಿಕೊಂಡಿರುವ ಮುಖ್ಯಮಂತ್ರಿ ಕರುಣಾನಿಧಿಯೆದುರು ಹೇಗೆ ಸಾಧ್ಯ?

2 Responses to "ಆಕೆ ಸಮಾಜಕ್ಕೆ ಮಾತ್ರ ಹುಚ್ಚಿ, ಮಗುವಿಗೆ ತಾಯಿ..!"

ನಮಸ್ಕಾರ.

ನಿಮ್ಮ ಮೂರ್ನಾಲ್ಕು ಲೇಖನಗಳನ್ನು ಈಗಷ್ಟೇ ನಿಮ್ಮ ಬ್ಲಾಗಿನಲ್ಲೇ ಓದಿದೆ. ತುಂಬಾ ಚೆನ್ನಾಗಿ ಬರೆಯುತ್ತೀರಿ. ಪ್ರಸ್ತುತ ಲೇಖನವನಂತೂ ಮನಸನ್ನು ಬಹುವಾಗಿ ಕಾಡಿತು. ಮಾನವೀಯತೆಯನ್ನು ಕಾಣಿಸುವ, ನೋವಿಗೆ ಸ್ಪಂದಿಸುವ ನಿಮ್ಮ ಬರವಣಿಗೆ ಸದಾ ಮುಂದುವರಿಯಲಿ.

-ತೇಜಸ್ವಿನಿ ಹೆಗಡೆ.

ನಮ್ಮಲ್ಲೂ ನೋವುಗಳಿವೆ. ಆದರೆ ನಮಗಿಂತಲೂ ಹೆಚ್ಚು ನೋವನ್ನು ಅನುಭವಿಸುವವರು ಎಷ್ಟೋ ಮಂದಿ ಇದ್ದಾರೆ ಎಂಬುದನ್ನು ನಂಬಿದನು ನಾನು ತೇಜಸ್ವಿನಿ ಮೇಡಂ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: