ಈ ನನ್ನ ನಿರ್ಲಜ್ಜ ವೈಧವ್ಯದಲ್ಲಿ ನಿನ್ನನ್ನು ಏನೆಂದು ಕರೆಯಲಿ?
Posted February 11, 2010
on:ಕರುಣೆ ತೋರಿಸುವವನೂ ಕಳೆದು ಹೋಗಿದ್ದಾನೆ. ನಿನಗೆ ಕೊಟ್ಟಿಲ್ಲ ಅಂದುಕೊಂಡಿದ್ದ ಮನಸ್ಸನ್ನು ಮತ್ತು ಪ್ರೀತಿಯನ್ನು ಪರಭಾರೆ ಮಾಡಲಾಗದೆ ಒದ್ದಾಡುತ್ತಿದ್ದಾಗಲೆಲ್ಲ ದೇಹದ ಮೇಲೆ ಹಸಿವಿಲ್ಲದೆ ದಿನರಾತ್ರಿ ಸವಾರಿ ಮಾಡಿ ಸೇಡು ತೀರಿಸಿಕೊಳ್ಳುವ ವಿಫಲಯತ್ನ ನಡೆಸುತ್ತಿದ್ದವನಿಗೆ, ನಿನ್ನ ಪ್ರೀತಿಯಷ್ಟು ನನಗೆ ನೋವು ಕೊಡಲು ಕೊನೆಗೂ ಸಾಧ್ಯವಾಗದೆ ವಿಷಾದದಿಂದ ನಿರ್ಗಮಿಸಿದ್ದಾನೆ.
ಈ ನಿರ್ಲಜ್ಜ ವೈಧವ್ಯದಲ್ಲಿ ನಿನ್ನನ್ನು ಏನೆಂದು ಕರೆಯಲಿ? ಹೃದಯದ ಮೇಲಿದ್ದ ಪ್ರೇಮದ ನೆರಿಗೆಗಳನ್ನು ಪ್ರೀತಿಯಿಂದಲೇ ನಿವಾರಿಸಿದ್ದ ನೀನು ಮತ್ತೆ ಗೆಳೆಯನಾಗಿ ನನ್ನೊಳಗೆ ಇಳಿಯುವ ನಿರೀಕ್ಷೆ ಕ್ಷೀಣಿಸುತ್ತಿರುವ ಉಸಿರಿನ ರಭಸಕ್ಕೂ ದೂರಕ್ಕೆ ಹಾರಿ ಹೋಗುತ್ತಿದೆ. ಇಲ್ಲ, ನೀನು ನನ್ನಿಂದ ಇಳಿದು ಹೋಗೇ ಇಲ್ಲ, ಹೋದದ್ದು ನಾನು ಮಾತ್ರ ಎಂದು ಮತ್ತೊಮ್ಮೆ ಹೇಳು, ಮಗದೊಮ್ಮೆ ಹೇಳು, ಹೇಳುತ್ತಲೇ ಇರು. ಅದೆಷ್ಟೇ ದೂರದಲ್ಲಿದ್ದರೂ ನಾನು ಕಿವಿಯಾಗಲು ಸಿದ್ಧಳಿದ್ದೇನೆ.
ಮತ್ತೊಂದು ತಪ್ಪನ್ನು ಮಾಡಿಯಾದರೂ ನನ್ನ ದಿಕ್ಕು ತಪ್ಪಿರುವ ಬಾಳ ದೋಣಿಯನ್ನು ಸರಿಪಡಿಸುವ ಹುಚ್ಚು ಹಂಬಲದ ಬೇಡಿಕೆಯಿದು. ನಿನ್ನನ್ನೇ ನಂಬಿದವಳಿಗೆ ಮಾನಸಿಕ ಸವತಿಯಾಗುವಷ್ಟು ಕನಸುಗಳಿವು. ಪ್ಲೀಸ್, ಇಲ್ಲವೆನ್ನಬೇಡ.
ನಾನೇನು ಮಾಡಲಿ ಗೆಳೆಯ, ಮಾತು-ಮಾತಿಗೆ ಕರುಣೆಯ ಮಾತುಗಳು ಬಾಡಿ ಹೋಗಿರುವ ನನಗೆ ಮಂಜುಗಡ್ಡೆಯಂತೆ ಭಾರವಾಗುತ್ತಿದೆ. ತಪ್ಪು ನನ್ನದೇ ಎನ್ನುವ ಭಾವ ನನಗೆ ಮುಳ್ಳಾಗುತ್ತಿದೆ. ಅವನ ಯಾವುದಕ್ಕೂ ನಾನು ಕಾರಣಳಲ್ಲ. ನಿನ್ನನ್ನು ಮರೆತ ಬಳಿಕ ಮತ್ತೆ ನೆನಪಿಸಿದ ಒಂದು ತಪ್ಪು ಆತ ಮಾಡಿದ್ದು ಬಿಟ್ಟರೆ ಮಾಡಿದ ಕೊನೆಯ ತಪ್ಪು ನನ್ನನ್ನಗಲಿ ನಿನ್ನನ್ನೇ ನೆನಪಿಸಿಕೊಳ್ಳುವ ಅನಿವಾರ್ಯತೆಗೆ ತಳ್ಳಿ ಬಾರದ ಲೋಕಕ್ಕೆ ಹೊರಟು ಹೋಗಿದ್ದು ಮಾತ್ರ.
ಹೇಳು, ನಾನೇನು ಮಾಡಲಿ? ನಿನ್ನದಲ್ಲದ ಮಗುವಿನ ಬೆನ್ನು ತಟ್ಟುವಾಗಲೂ ನಿನ್ನದೇ ನೆನಪುಗಳು ಬಾಧಿಸುತ್ತಿವೆ. ನೀನು ಬೇಕು ಮತ್ತು ನೀನೇ ಬೇಕು ಎಂಬ ಕೊಳೆತ ಆಸೆಗಳು ನನ್ನಲ್ಲಿ ನಡುರಾತ್ರಿಯಲ್ಲೂ ಯಾರಿಗೂ ಅಂಜದೆ ಸುವಾಸನೆ ತರಿಸುತ್ತಿವೆ. ತಪ್ಪು-ಒಪ್ಪುಗಳ ಹಂಗು ನಡುನೀರು ದಾಟಿರುವ ನಿನಗೆ ಬೇಕಿಲ್ಲ ಎಂದು ನಾವಂದು ಲೋಕವನ್ನು ಮರೆತು ರೋಮಾಂಚನಗೊಂಡಿದ್ದ ಮಧುರ ಕ್ಷಣಗಳನ್ನು ಮನಸ್ಸಿಗೆ ಮರಳಿಸುತ್ತಾ ಸಮರ್ಥನೆ ನೀಡುತ್ತಿವೆ.
ಅದೇ ಋತು ನನ್ನ ಕೊನೆಯ ಸಂಭ್ರಮದ ಕುಣಿತವಾಗುತ್ತದೆ ಎಂಬುದನ್ನು ನಾನು ಊಹಿಸದೆ ನಿನ್ನ ಪ್ರೀತಿಯ ಬದುಕಿಗೆ ಕೊನೆಯ ಮೊಳೆ ಹೊಡೆದ ನನಗೆ ನನ್ನವರು ಎನ್ನಲು ಪೂರ್ತಿಯಾಗಿ ನನ್ನದಲ್ಲದ ಕರುಳ ಕುಡಿ ಬಿಟ್ಟರೆ ಕೆದಕುವಾಗ ಸಿಗುವವನು ಮತ್ತೆ ನೀನೊಬ್ಬನೇ. ಅಂತಹ ಒಂದು ಅನಿವಾರ್ಯತೆಯನ್ನು ನನಗೆ ಸೃಷ್ಟಿಸಿದ ದೇವರ ಜತೆ ನಿನ್ನ ಕೊಡುಗೆಯೂ ಇದೆ ಎಂದು ಹೇಳದೆ ನನಗೆ ವಿಧಿಯಿಲ್ಲ.
ಹದಿಹರೆಯ ಮರೆತಿದ್ದ ನನ್ನಲ್ಲಿ ಪ್ರೀತಿಯ ಅಮಲನ್ನು ಉಕ್ಕಿಸಿ ಹರಿಸಿದವನು, ಮಟ್ಟಸ ಮಧ್ಯಾಹ್ನದ ಕೊನೆಯ ದಿನ ಶನಿವಾರ ಖಾಲಿಯಾಗಿದ್ದ ಕಚೇರಿಯ ಗೋಡೆ ಹಿಡಿದು ಹೊರಟು ಹೋಗುತ್ತಿದ್ದವಳ ಹಿಂದೆ ಬಂದು ನಿಶ್ಫಲ ಪ್ರೇಮವನ್ನು ಮೊತ್ತ ಮೊದಲ ಬಾರಿ ಅರುಹಿ, ನನ್ನ ಬದುಕಿನ ಹಾಳೆಗೆ ಬಣ್ಣ ಕೊಟ್ಟ ನಿಧಾನವಿಷ ನೀನು. ಅಂದು ನಿನ್ನೊಳಗಿಂದ ನನ್ನನ್ನು ಸೇರಿದ ಪ್ರೀತಿ ಈಗಲೂ ಏಳೂವರೆ ವರ್ಷಗಳ ನಂತರವೂ ನನ್ನನ್ನು ಚೂರು-ಚೂರು ಮಾಡುತ್ತಿದೆ– ನಿನ್ನನ್ನು ಕೇಳದೆ.
ಬಿಡು ಗೆಳೆಯ, ಹೇಳು. ನಿನ್ನ ಬಾಳಲ್ಲಿ ಬೆಳದಿಂಗಳಿಲ್ಲದ, ಒಂದು ಶುಭ್ರವಾದ ಮತ್ತು ಅಷ್ಟೇ ಕಲ್ಮಶವಾದ ಕತ್ತಲಿದೆಯಾ? ಅಂತಹ ಒಂದು ನೀರವ ಮತ್ತು ನೀರಸವಾದ ಕಗ್ಗತ್ತಲೆಯಲ್ಲಿ ನನ್ನ ಒಡೆದು ಹೋದ ಕನ್ನಡಿಯೆದುರು ಬೆಳಕು ಚೆಲ್ಲಿ ಮತ್ತೆ ನನ್ನನ್ನು ನೋಡಬಲ್ಲೆಯಾ?
ಇದು ತಪ್ಪೆಂದು ನನ್ನಲ್ಲಿರುವಷ್ಟೇ ಗೊಂದಲಗಳು ನಿನ್ನಲ್ಲಿವೆ. ನಿನ್ನನ್ನು ನಾನು ಮರೆತಷ್ಟು ನೀನು ನನ್ನನ್ನು ಮರೆತಿಲ್ಲ ಎಂಬಷ್ಟು ನೀನು ನನಗೆ ಗೊತ್ತು. ಆ ದಿನಗಳ ಬಳಿಕ ನೀನು ಸುಡುವ ಬೇಸಗೆಯಲ್ಲಿ ಬತ್ತಿ ಹೋಗಿದ್ದ ನೇತ್ರಾವತಿ ದಡದಲ್ಲಿ ನಿಂತು ಗುಪ್ತಗಾಮಿನಿಯನ್ನು ನಿರೀಕ್ಷಿಸುತ್ತಿರುವಷ್ಟು ಭರವಸೆಗಳನ್ನು ನೆಟ್ಟಿದ್ದವನು ನೀನು ಎಂದು ಯಾರೋ ಹೇಳಿದ್ದು ಅಂದು ಪ್ರಿಯವಾಗಿರದಿದ್ದರೂ, ಇಂದು ಬೇಕೆನಿಸುತ್ತಿದೆ.
ಇವೆಲ್ಲ ಸೇರುಸೇರು ಸುಳ್ಳು, ಮೋಸಗಳನ್ನು ಕಾಣುವ ಈ ಪ್ರೀತಿಯೇ ಬಗೆಗಳು ಎಂದು ಸಮರ್ಥಿಸಿಕೊಳ್ಳುತ್ತಿದ್ದೇನೆ. ಹಾಳು ಪ್ರೀತಿಯೆನ್ನುವುದು ಮರೆತಷ್ಟು ನೆನಪಿಸುವ ಪರೀಕ್ಷೆಗೂ ಸಿಗದ ಫಲಿತಾಂಶವಾಗಿರದಿದ್ದರೆ ಸವಕಲಾಗಿ ಹೋಗಿರುವ, ಎಲ್ಲವನ್ನೂ ಕಳೆದುಕೊಂಡಿರುವ ನನ್ನಂತಹ ನನಗೆ ಪ್ರೀತಿಯೆಂಬುದು ಮತ್ತೆ ಒಂದು ಅಪಭ್ರಂಶ ಸಾರೋಟಿನಲ್ಲಿ ಸಾಗುವ ಮುರುಕು ಆಸೆ ಎಂಬುದನ್ನು ಮರೆತು ಚಿಗಿತು ಕುಳಿತಿದೆಯೆಂದರೆ. ಅದರಲ್ಲೂ ತಾಳ ತಪ್ಪಿಲ್ಲವೆಂದು ಭ್ರಮಿಸಿರುವ ನಿನ್ನ ಮತ್ತು ನಿನ್ನನ್ನು ನಂಬಿದವಳ ರಥದ ಮುಂದೆ ತುಂಬಿದಷ್ಟು ಇಂಗುವ ಗುಂಡಿಯನ್ನು ನಾನು ತೋಡಲು ಮುಂದಾಗಿದ್ದೇನೆ ಎಂದರೆ?
ನೀನು ಏನಾದರೂ ಕರೆದುಕೋ, ಆದರೆ ನನಗಿದು ಪ್ರೀತಿಯೇ ಮತ್ತು ನೀನಲ್ಲದ ಮತ್ತೊಬ್ಬರಿಂದ ಅದಕ್ಕೆ ಪರಿಹಾರ ಸಿಗದು ಎಂಬುದು ನನಗೆ ತಿಳಿದು ಹೋದ ನಂತರ ಹಲವು ಮಳೆಗಾಲಗಳು ನನ್ನ ಮನದ ಕೊಚ್ಚೆಯನ್ನು ನಿನ್ನ ಮೋಸದೊಂದಿಗೆ ಕೊಚ್ಚಿಕೊಂಡು ಹೋಗಿವೆ.
ಗಂಡನಲ್ಲದ, ಗೆಳೆಯನನ್ನು ದಾಟಿದ, ಅಕ್ರಮವಲ್ಲದ ಮತ್ತು ಹೆಸರಿಡಲಾಗದ ಸಂಬಂಧದ ನಿರೀಕ್ಷೆಯಲ್ಲಿ ಅದೇ ನೀನು ಆಡುತ್ತಿದ್ದ ಜಡೆಯಿದ್ದ, ಈಗ ಕುರುಚಲಾಗಿರುವ ಕೂದಲಿಗೆ ಚೌರಿ ಸೇರಿಸಿ ಹೆರಳು ಹಾಕುವ ಯತ್ನದಲ್ಲಿದ್ದೇನೆ, ಪ್ಲೀಸ್.. ನಿರಾಸೆ ಮಾಡಬೇಡ.
ಪ್ರೀತಿ ಮುಗಿಯುವ ಮೊದಲು ನಿನ್ನವಳಾಗಲು ಕಾಯುತ್ತಿರುವ,
– ಭುವನಾ
(ಈ ಲೇಖನ ‘ವೆಬ್‌ದುನಿಯಾ’ ವ್ಯಾಲೆಂಟೈನ್ಸ್ ಡೇ ವಿಶೇಷ ಪುಟದಲ್ಲಿ ಪ್ರಕಟವಾಗಿದೆ)
February 19, 2010 at 12:15 PM
Yakistu Vishaada?