ಪ್ರೀತಿಯ ಹೂಗಳು…

ನಾಳೆಯ ಕನಸುಗಳಿಗಾಗಿ ಇಂದಿನ ತ್ಯಾಗ ಬೇಕೇ?

Posted on: January 4, 2010

ಇಂದಿನ ಚಂದ್ರನನ್ನೇ ನೋಡುವ ಭರವಸೆ ಇಲ್ಲದ ಮೇಲೆ ನಾಳಿನ ಸೂರ್ಯನನ್ನು ನಿರೀಕ್ಷಿಸುವುದು ಎಷ್ಟು ಸರಿ ಎಂದೆಲ್ಲಾ ಚೆನ್ನೈ ಮಹಾನಗರಿಯ ಭೀತಿ ಹುಟ್ಟಿಸುವ ಕರ್ಮಠ ಒಳ ಬೀದಿಗಳಲ್ಲಿ ಸುತ್ತಾಡುತ್ತಿರುವಾಗ ಯೋಚನೆಗೆ ಬರುವುದು ಸಹಜವಿರಬಹುದು. ಆದರೂ ಅದು ವಾಸ್ತವದಿಂದ ಹೆಚ್ಚು ದೂರವಲ್ಲವೇನೋ?

ಮೊದಲಿನಿಂದಲೂ ಕಾಡುತ್ತಿದ್ದ ಇಂತಹ ಜೀವನದ ಕಡೆಗಿನ ಶೂನ್ಯತೆ, ಶಾಶ್ವತವಲ್ಲದ ಪ್ರಾಣದ ಕಡೆಗಿನ ತಾತ್ಸಾರಕ್ಕೆ ಹೆಚ್ಚು ಅರ್ಥ ಕಲ್ಪಿಸಿದ್ದು ವಿಷ್ಣು ಹಠಾತ್ ಸಾವು. ನಿನ್ನೆಯವರೆಗೆ ಕುಣಿಯುತ್ತಿದ್ದವರು ಇಂದಿಲ್ಲ. ಯಾರೂ ಯೋಚನೆ ಮಾಡಿರದ ಸಾವೊಂದು, ಕಚಗುಳಿ ಇಟ್ಟಾಗ ಹಿಂಡುವಂತಹುದೇ ನೋವನ್ನು ಅಳುವಿನಲ್ಲೂ ಹುಟ್ಟಿಸಿಬಿಡುತ್ತದೆ ಎಂಬಷ್ಟಕ್ಕೇ ಮತ್ತೊಬ್ಬರ ಜೀವನವು ಮುಗಿದು ಹೋಗಿರುತ್ತದೆ.

ನಾವು ನಾಳೆಗಳಿಗಾಗಿ ಎಷ್ಟೋ ಕಷ್ಟಪಡುತ್ತೇವೆ. ಮನೆ ಬೇಕು, ನಮ್ಮೊಂದಿಗೆ ಸಾಗುವ ಜೀವವೂ ಬೇಕು, ಒಳ್ಳೇ ಜಾಬ್ ಬೇಕೆಂದು ಬದುಕಿರುವವರೆಗೆ ಮಾತ್ರ ಸಿಗುವ ಸುಖ ನಿದ್ರೆಯನ್ನು ಬಿಡುತ್ತೇವೆ. ಸಂಪಾದನೆಗೋಸ್ಕರ ಹೆಂಡತಿ-ಮಕ್ಕಳು, ಅಪ್ಪ-ಅಮ್ಮ, ಸಹೋದರ-ಸಹೋದರಿಯರ ಪ್ರೀತಿಯಿಂದ ದೂರ ಉಳಿದು ಅದೆಷ್ಟೋ ದಿನಗಳ, ವರ್ಷಗಳ ಜೀವನವನ್ನು ವೃಥಾ ಕಳೆದು ಬಿಡುತ್ತೇವೆ. ಯಾವತ್ತು ಬೇಕಾದರೂ ನಿಂತು ಹೋಗುವ ಈ ಅತಂತ್ರ ಜೀವಕ್ಕೆ ಇದೆಲ್ಲಾ ಬೇಕಾ ಎಂಬ ಯೋಚನೆಗಳೆಲ್ಲ ಇಂಥ ಸಮಯದಲ್ಲಿ ಮುತ್ತಿಕೊಳ್ಳುತ್ತವೆ.

ದೇವರು ನಿರ್ಗತಿಕ ಎಂಬಂತೆ ಹೊತ್ತು ಗೊತ್ತಿಲ್ಲದೆ ಪ್ರಾಣ ಕುಡಿದು ಬಿಡುತ್ತಾನೆ. ಉಳಿದ ಅನುಪಯೋಗಿ ಶರೀರಕ್ಕೊಂದು ಅಂತ್ಯಸಂಸ್ಕಾರ. ಒಂದೆರಡು ದಿನ ಶೋಕ. ಅಲ್ಲಿಗೆ ಆತನ ನೆನಪುಗಳಿಗೂ ಸಮಾಧಿ. ಬದುಕಿರುವವರೆಗೆ ಎಷ್ಟು ಸಂಪಾದನೆ ಮಾಡಿದರೂ, ಹೇಗೆ ಬದುಕಿದ್ದರೂ ಲಾಭವೇನು? ಬದುಕಿರುವಾಗ ಭಾರೀ ಸಂಪಾದನೆ ಮಾಡಿದ್ದ, ಹೆಸರುವಾಸಿಯಾಗಿದ್ದ ಎಂಬ ಬಿರುದು-ಬಾವಳಿಗಳಿಗಿಂತ, ಆತ ಸುಂದರವಾಗಿ ಇದ್ದ ಬದುಕನ್ನು ಆನಂದಿಸಿದ್ದ ಎಂಬುದು ಮೇಲಲ್ಲವೇ?

ಚಿತ್ರಕೃಪೆ: chakpak.com

ಇದ್ದ ಅಲ್ಪಾಯುಷಿ ದಿನಗಳನ್ನು ಸುಂದರವಾಗಿ ಮಾರ್ಪಡಿಸಿಕೊಳ್ಳುವುದನ್ನು ಬಿಟ್ಟು ರಾತ್ರಿ-ಹಗಲು ಪಾಳಿಯಲ್ಲಿ ಎಡೆಬಿಡದೆ ದುಡಿಯುವವರನ್ನು ನೋಡಿದಾಗಲೆಲ್ಲ ಈ ವಾಕ್ಯಗಳು ನನ್ನನ್ನು ಹೆಚ್ಚೇ ಬಾಧಿಸುತ್ತವೆ. ಅದಕ್ಕೊಂದು ಅತ್ಯುತ್ತಮ ದೃಷ್ಟಾಂತವನ್ನೂ ನೀಡುತ್ತೇನೆ.

ನನ್ನೊಬ್ಬ ಆತ್ಮೀಯ ಗೆಳೆಯ ಹಗಲು (ಬೆಳಿಗ್ಗೆ 8.30ರಿಂದ ಸಂಜೆ 5) ಕಂಪನಿಯೊಂದರಲ್ಲಿ, ರಾತ್ರಿ ಹೊತ್ತು (8ರಿಂದ 4ರ ನಸುಕಿನವರೆಗೆ) ಮತ್ತೊಂದು ಕಡೆ ಕೆಲಸಕ್ಕೆ (ಹಾರ್ಡ್ ವರ್ಕ್) ಹೋಗುತ್ತಿದ್ದ. ಕಳೆದ ವರ್ಷವಷ್ಟೇ ಮದುವೆಯಾಗಿ ತನ್ನದಲ್ಲದ ಬಾಡಿಗೆ ಮನೆಯಲ್ಲಿ ಸಂಸಾರವನ್ನೂ ಹೂಡಿದ್ದಾನೆ.

ಆದರೆ ಈಗಲೂ ಎರಡೂ ಕೆಲಸಗಳನ್ನು ಮಾಡುತ್ತಿದ್ದಾನೆ. ಕಾಂಕ್ರೀಟ್ ಗೋಡೆಗಳ ನಡುವೆ ಹಗಲು-ರಾತ್ರಿಯನ್ನು ಒಂಟಿಯಾಗಿ ಕಳೆಯುವ ಹೆಂಡತಿಗೆ ಯಾವುದೋ ಸುಳ್ಳನ್ನು ಲೇಪಿಸಿದ್ದಾನೆ. ಬೋರ್ ಆಗದಿರಲೆಂದು ಟೀವಿಯನ್ನೂ ಗೋಡೆಗೊರಗಿಸಿದ್ದಾನೆ.

ಒಂದನ್ನಾದರೂ ಬಿಟ್ಟು ಬಿಡು ಎಂದು ಎಷ್ಟೇ ಗೋಳು ಹೊಯ್ದುಕೊಂಡರೂ ಆತ ಬಿಡಲೊಪ್ಪ. ರೂಮ್ ಬಾಡಿಗೆ ನೀಡಲು ಕಷ್ಟವಾಗುತ್ತದೆ, ಎಲ್‌ಐಸಿ ಪಾಲಿಸಿ ಕಟ್ಟಬೇಕು ಎಂದೆಲ್ಲಾ ಹಲವು ಕಾರಣಗಳನ್ನು ನನ್ನೆದುರು ರಾಶಿ ಹಾಕುತ್ತಾನೆ. ಅವನದ್ದೆಲ್ಲವೂ ನಾಳೆಯ ಸುಂದರ ಜೀವನದ ಕನಸು.

ನನ್ನ ಪ್ರಶ್ನೆ, ಆತ ಬಿಡುವಿಲ್ಲದ ಕೆಲಸ ಮಾಡಿ ಸಂಪಾದಿಸಿದ ಹಣವನ್ನು ಏನು ಮಾಡಬೇಕಿದೆ? ಮದುವೆಯಾದ ಹೊಸದರಲ್ಲಿ ಸಿಗುವ ಸುಖ-ಸಂತೋಷಗಳನ್ನೆಲ್ಲ ಮಿಸ್ ಮಾಡಿಕೊಂಡಿರುವ ಆತನಿಗೆ ಅದು ಸಂಪಾದನೆ ಮುಗಿದ ಮೇಲೆ ಬೇಕೆಂದರೆ ಸಿಗುವುದೇ? ಆತ ಮಾಡಿದ ಸಂಪಾದನೆಯನ್ನು ಅನುಭವಿಸಲು ಅವಕಾಶ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಆಶಾಭಾವನೆ ಹೊರತುಪಡಿಸಿದ ಖಾತ್ರಿಯೇನಿದೆ?

ಇಂತಹ ಹತ್ತು-ಹಲವು ಪ್ರಕರಣಗಳು ನಿಮ್ಮ ಮುಂದೂ ಇರಬಹುದು ಅಥವಾ ನೀವೂ ಅವರಲ್ಲೊಬ್ಬರಾಗಿರಬಹುದು. ಸಿಹಿ-ತಿಂಡಿಗಳನ್ನು ನೋಡುವಾಗ ನಮಗೆ ಬಾಯಲ್ಲಿ ನಿರೂರುತ್ತದೆ ಎಂಬುದು ಸರಿ. ಅದನ್ನು ತಿಂದಾಗ ತೃಪ್ತಿಯಿಂದ ತೇಗುತ್ತೇವೆ. ಅದರ ಬದಲು ಅವುಗಳನ್ನು ಪುಡಿ ಮಾಡಿ ನೇರವಾಗಿ ಹೊಟ್ಟೆಗೆ ಸೇರಿಸಿದರೆ ಹೇಗಿರುತ್ತದೆ? ನಮ್ಮ ವಾಸ್ತವ ಉದ್ದೇಶವಾದ ಹೊಟ್ಟೆಯೇನೋ ತುಂಬುತ್ತದೆ, ಆದರೆ ನಾಲಗೆಯೆನ್ನುವ ಭಾವ?

ಇಂತಹ ಸಾಕಷ್ಟು ಗೊಂದಲಗಳು ನನ್ನಲ್ಲಿವೆ. ನಾನೂ ನಾಳೆಯ ಕನಸುಗಳ ಸರದಾರ. ಶ್ರೀಮಂತರನ್ನು, ಜನಪ್ರಿಯ ಮಂದಿಯನ್ನು ಕಂಡಾಗ ನನಗೂ ಹಾಗಾಗಬೇಕು ಎಂಬ ಆಸೆ ಮೊಳೆತದ್ದಿದೆ. ಆದರೆ ಖಂಡಿತಾ ಅದಕ್ಕಾಗಿ ದಿನದ 18 ಗಂಟೆಯನ್ನು ವ್ಯಯಿಸಲಾರೆ. ಅಂತಹ ಅದ್ಭುತ ಸಾಮ್ರಾಜ್ಯ ನನಗೆ ಬೇಕೇ ಬೇಕೆಂದು ಅನ್ನಿಸಿಲ್ಲ– ಮುಂದೆಯೂ ಬೇಕೆಂಬ ಭಾವ ಮೂಡದಿರಲಿ.

ಆದರೂ ಅಪ್ಪ-ಅಮ್ಮನ ಜತೆಗಿರುವ ಪ್ರೀತಿಯಿಂದ ನಾನೂ ವಂಚಿತನೆನ್ನುವುದು ವಾಸ್ತವ..!

1 Response to "ನಾಳೆಯ ಕನಸುಗಳಿಗಾಗಿ ಇಂದಿನ ತ್ಯಾಗ ಬೇಕೇ?"

ಹೌದಪ್ಪ ನೀವು ಹೇಳಿದ ಹಾಗೆ ನಾಳೆಗಾಗಿ ಇವತ್ತಿನ ಸಂತೋಷವನ್ನು ಯಾಕೆ ಹಾಳು ಮಾಡ್ಬೇಕು ಅಲ್ವಾ. ನಾಳೆ ಶಾಶ್ವತ ಅಲ್ಲ. ಸೊ ನೀವು ಏನನ್ನೂ ಸೇವ್ ಮಾಡ್ಬೇಡಿ ಆಯ್ತಾ… 🙂 ಚೆನ್ನಾಗಿದೆ ಬರಹ.. ಇನ್ನಷ್ಟು ಲೇಖನಗಳನ್ನು ಹಾಕಿ..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: